ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರೋಮನ್ನರಿಗೆ 11:1-36

11  ಹಾಗಾದರೆ ದೇವರು ತನ್ನ ಜನರನ್ನು ತ್ಯಜಿಸಿಬಿಟ್ಟನೊ? ಎಂದು ನಾನು ಕೇಳುತ್ತೇನೆ. ಹಾಗೆಂದೂ ಆಗದಿರಲಿ! ನಾನು ಸಹ ಒಬ್ಬ ಇಸ್ರಾಯೇಲ್ಯನೂ ಅಬ್ರಹಾಮನ ಸಂತತಿಯವನೂ ಬೆನ್ಯಾಮೀನನ ಕುಲದವನೂ ಆಗಿದ್ದೇನೆ.  ದೇವರು ತಾನು ಮೊದಲು ಅಂಗೀಕರಿಸಿದ್ದ ತನ್ನ ಜನರನ್ನು ತ್ಯಜಿಸಲಿಲ್ಲ. ಎಲೀಯನು ಇಸ್ರಾಯೇಲ್ಯರ ವಿರುದ್ಧ ದೇವರನ್ನು ಬೇಡಿಕೊಂಡ ವಿಷಯದಲ್ಲಿ ಶಾಸ್ತ್ರಗ್ರಂಥವು ಏನು ಹೇಳುತ್ತದೆ ಎಂಬುದು ನಿಮಗೆ ತಿಳಿಯದೊ?  ಅವನು ಅವರ ಕುರಿತು, “ಯೆಹೋವನೇ ಅವರು ನಿನ್ನ ಪ್ರವಾದಿಗಳನ್ನು ಕೊಂದಿದ್ದಾರೆ, ನಿನ್ನ ಯಜ್ಞವೇದಿಗಳನ್ನು ಕೆಡವಿಹಾಕಿದ್ದಾರೆ; ನಾನೊಬ್ಬನೇ ಉಳಿಸಲ್ಪಟ್ಟಿದ್ದೇನೆ, ಅವರು ನನ್ನ ಪ್ರಾಣವನ್ನೂ ತೆಗೆಯಬೇಕೆಂದಿದ್ದಾರೆ” ಎಂದು ಹೇಳಿದನು.  ಆದರೂ ದೇವರು ಅವನಿಗೆ ಏನು ಹೇಳಿದನು? “ಬಾಳನ ವಿಗ್ರಹಕ್ಕೆ ಮೊಣಕಾಲೂರದೇ ಇರುವಂಥ ಏಳು ಸಾವಿರ ಮಂದಿಯನ್ನು ನನಗಾಗಿ ಉಳಿಸಿಕೊಂಡಿದ್ದೇನೆ” ಎಂದೇ.  ಹಾಗೆಯೇ ಈ ಕಾಲದಲ್ಲಿಯೂ ದೇವರ ಅಪಾತ್ರ ದಯೆಯಿಂದಾದ ಆಯ್ಕೆಗನುಸಾರ ಒಂದು ಜನಶೇಷವು ಉಳಿಸಲ್ಪಟ್ಟಿದೆ.  ಈಗ ಈ ಆಯ್ಕೆಯು ಅಪಾತ್ರ ದಯೆಯಿಂದಾಗಿರುವಲ್ಲಿ ಅದು ಇನ್ನೆಂದಿಗೂ ಕ್ರಿಯೆಗಳ ನಿಮಿತ್ತವಾಗಿರುವುದಿಲ್ಲ; ಇಲ್ಲವಾದರೆ ಅಪಾತ್ರ ದಯೆಯು ಇನ್ನೆಂದಿಗೂ ಅಪಾತ್ರ ದಯೆಯಾಗಿ ಇರುವುದಿಲ್ಲ.  ಹಾಗಾದರೆ ಏನು ಹೇಳೋಣ? ಯಾವುದಕ್ಕಾಗಿ ಇಸ್ರಾಯೇಲ್ಯರು ಅತ್ಯಾಸಕ್ತಿಯಿಂದ ಹುಡುಕುತ್ತಿದ್ದಾರೋ ಅದು ಅವರಿಗೆ ದೊರಕಲಿಲ್ಲ, ಆದರೆ ಯಾರು ಆಯ್ಕೆ​ಮಾಡಲ್ಪಟ್ಟರೋ ಅವರಿಗೆ ದೊರಕಿತು. ಉಳಿದವರ ಭಾವಸಂವೇದನೆಗಳು ಮೊಂಡುಮಾಡಲ್ಪಟ್ಟವು.  “ಈ ದಿನದ ವರೆಗೂ ಅವರಿಗೆ ಕಣ್ಣಿದ್ದೂ ಕಾಣದಂತೆ ಕಿವಿಗಳಿದ್ದೂ ಕೇಳಿಸಿಕೊಳ್ಳದಂತೆ ದೇವರು ಅವರಿಗೆ ಗಾಢವಾದ ನಿದ್ರಾಭಾವವನ್ನು ಕೊಟ್ಟಿದ್ದಾನೆ” ಎಂದು ಬರೆದಿರುವಂತೆ ಇದಾಯಿತು.  ಇದಲ್ಲದೆ ದಾವೀದನು, “ಅವರ ಯಜ್ಞವೇದಿಯು ಅವರಿಗೆ ಉರ್ಲೂ ಬೋನೂ ಎಡವುವ ಕಲ್ಲೂ ಶಿಕ್ಷೆಯೂ ಆಗಲಿ; 10  ಅವರ ಕಣ್ಣುಗಳು ಕಾಣದಂತೆ ಮೊಬ್ಬಾಗಲಿ ಮತ್ತು ಅವರ ಬೆನ್ನು ಯಾವಾಗಲೂ ಬಗ್ಗಿಕೊಂಡಿರಲಿ” ಎಂದು ಹೇಳುತ್ತಾನೆ. 11  ಅವರು ಸಂಪೂರ್ಣವಾಗಿ ಬಿದ್ದುಹೋಗುವಂತೆ ಎಡವಿದರೊ? ಎಂದು ನಾನು ಕೇಳುತ್ತೇನೆ. ಹಾಗೆಂದೂ ಆಗದಿರಲಿ! ಆದರೆ ಅವರಲ್ಲಿ ಅಸೂಯೆ ಹುಟ್ಟುವಂತೆ ಅವರ ತಪ್ಪುಹೆಜ್ಜೆಯ ನಿಮಿತ್ತ ಅನ್ಯಜನಾಂಗಗಳ ಜನರಿಗೆ ರಕ್ಷಣೆಯಾಯಿತು. 12  ಅವರ ತಪ್ಪುಹೆಜ್ಜೆಯು ಲೋಕಕ್ಕೆ ಐಶ್ವರ್ಯವಾಗಿರುವುದಾದರೆ ಮತ್ತು ಅವರ ಇಳಿಮೆಯು ಅನ್ಯಜನಾಂಗಗಳ ಜನರಿಗೆ ಐಶ್ವರ್ಯವಾಗಿರುವುದಾದರೆ, ಅವರ ಪೂರ್ಣ ಸಂಖ್ಯೆಯು ಇನ್ನೆಷ್ಟು ಹೆಚ್ಚು ಐಶ್ವರ್ಯಕ್ಕೆ ಕಾರಣವಾಗಿರುವುದು! 13  ಈಗ ನಾನು ಅನ್ಯಜನಾಂಗಗಳ ಜನರಾದ ನಿಮ್ಮೊಂದಿಗೆ ಮಾತಾಡುತ್ತೇನೆ. ವಾಸ್ತವದಲ್ಲಿ ನಾನು ಅನ್ಯಜನಾಂಗಗಳವರಿಗೆ ಅಪೊಸ್ತಲನಾಗಿರುವುದರಿಂದ ನಾನು ನನ್ನ ಶುಶ್ರೂಷೆಯನ್ನು ಮಹಿಮೆಪಡಿಸುತ್ತೇನೆ. 14  ಹೀಗೆ ನಾನು ನನ್ನ ಸ್ವಜನ​ರಲ್ಲಿ ಅಸೂಯೆಯನ್ನು ಉಂಟುಮಾಡಿ ಅವರಲ್ಲಿ ಕೆಲವರನ್ನಾದರೂ ರಕ್ಷಿಸುವಂತಾಗ​ಬಹುದು. 15  ಅವರನ್ನು ತಳ್ಳಿಬಿಡುವುದರಿಂದ ಲೋಕವು ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬರುವುದಾದರೆ ಅವರನ್ನು ಸೇರಿಸಿಕೊಳ್ಳುವುದರಿಂದ ಅವರನ್ನು ಮರಣದಿಂದ ಜೀವಕ್ಕೆ ನಡೆಸಿದಂತಾಗುವುದಿಲ್ಲವೆ? 16  ಮಾತ್ರವಲ್ಲದೆ ಕಣಕ​ದಿಂದ ಪ್ರಥಮ ಫಲವಾಗಿ ತೆಗೆಯಲ್ಪಟ್ಟ ಭಾಗವು ಪವಿತ್ರವಾಗಿರುವುದಾದರೆ ಕಣಕವೆಲ್ಲ ಪವಿತ್ರವಾಗಿದೆ; ಬೇರು ಪವಿತ್ರವಾಗಿರುವಲ್ಲಿ ಕೊಂಬೆಗಳೂ ಪವಿತ್ರವಾಗಿವೆ. 17  ಆದರೆ ಕೊಂಬೆಗಳಲ್ಲಿ ಕೆಲವು ಮುರಿದುಹಾಕಲ್ಪಟ್ಟು ಅವುಗಳ ಮಧ್ಯೆ ಕಾಡು ಆಲೀವ್‌ ಮರದ ಕೊಂಬೆಯಾಗಿರುವ ನಿನ್ನನ್ನು ಕಸಿಕಟ್ಟಿದರೆ ಮತ್ತು ನೀನು ಆ ಆಲೀವ್‌ ಮರದ ರಸವತ್ತಾದ ಬೇರಿನಲ್ಲಿ ಪಾಲುಹೊಂದಿದರೆ, 18  ಆ ಕೊಂಬೆಗಳಿಗಿಂತ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ. ನೀನು ಅವುಗಳಿಗಿಂತ ನಿನ್ನನ್ನು ಹೆಚ್ಚಿಸಿಕೊಳ್ಳುವುದಾದರೆ, ನೀನು ಬೇರನ್ನು ಹೊತ್ತುಕೊಂಡಿಲ್ಲ ಬದಲಾಗಿ ಬೇರು ನಿನ್ನನ್ನು ಹೊತ್ತು​ಕೊಂಡಿದೆ ಎಂಬುದು ನಿನಗೆ ನೆನಪಿರಲಿ. 19  ಆದರೆ “ನಾನು ಕಸಿಕಟ್ಟಲ್ಪಡುವಂತೆ ಕೊಂಬೆಗಳು ಮುರಿದು​ಹಾಕಲ್ಪಟ್ಟವು” ಎಂದು ನೀನು ಹೇಳುವಿ. 20  ಅವರು ಅಪನಂಬಿಕೆಯಿಂದಾಗಿ ಮುರಿದುಹಾಕಲ್ಪಟ್ಟರಾದರೆ ನೀನು ನಂಬಿಕೆಯಿಂದಲೇ ನಿಂತಿದ್ದೀ. ಗರ್ವದ ವಿಚಾರಗಳನ್ನು ಬಿಟ್ಟುಬಿಡು, ಭಯದಿಂದಿರು. 21  ದೇವರು ಹುಟ್ಟುಕೊಂಬೆಗಳನ್ನೇ ಉಳಿಸದಿದ್ದ ಮೇಲೆ ನಿನ್ನನ್ನು ಉಳಿಸುವನೊ? 22  ಆದುದರಿಂದ ದೇವರ ದಯೆಯನ್ನೂ ಕಾಠಿಣ್ಯವನ್ನೂ ನೋಡು. ಬಿದ್ದವರ ಕಡೆಗೆ ಕಾಠಿಣ್ಯವಿದೆ; ನೀನು ದೇವರ ದಯೆಯಲ್ಲಿ ಉಳಿಯುವುದಾದರೆ ನಿನಗೆ ಆತನ ದಯೆ ದೊರಕುವುದು. ಇಲ್ಲವಾದರೆ ನೀನು ಸಹ ಕಡಿದುಹಾಕಲ್ಪಡುವಿ. 23  ಅವರು ಸಹ ತಮ್ಮ ಅಪನಂಬಿಗಸ್ತಿಕೆಯಲ್ಲಿಯೇ ಉಳಿಯದಿದ್ದರೆ ಪುನಃ ಕಸಿಕಟ್ಟಲ್ಪಡುವರು; ಏಕೆಂದರೆ ದೇವರು ಅವರನ್ನು ಪುನಃ ಕಸಿಕಟ್ಟಲು ಶಕ್ತನಾಗಿದ್ದಾನೆ. 24  ನೀನು ಸ್ವಾಭಾವಿಕವಾದ ಕಾಡು ಆಲೀವ್‌ ಮರದಿಂದ ಕಡಿಯಲ್ಪಟ್ಟು ತೋಟದ ಆಲೀವ್‌ ಮರಕ್ಕೆ ಅಸ್ವಾಭಾವಿಕವಾಗಿ ಕಸಿಕಟ್ಟಲ್ಪಟ್ಟಿರುವಲ್ಲಿ, ಸ್ವಾಭಾವಿಕವಾಗಿರುವ ಇವು ತಮ್ಮ ಸ್ವಂತ ಆಲೀವ್‌ ಮರಕ್ಕೆ ಕಸಿಕಟ್ಟಲ್ಪಡುವುದು ಎಷ್ಟೋ ಹೆಚ್ಚು ಸುಲಭವಾಗಿದೆ! 25  ಸಹೋದರರೇ, ನಿಮ್ಮ ದೃಷ್ಟಿಯಲ್ಲಿ ನೀವೇ ವಿವೇಕಿಗಳೆಂದು ಎಣಿಸಿಕೊಳ್ಳದಂತೆ ಈ ಪವಿತ್ರ ರಹಸ್ಯದ ಬಗ್ಗೆ ನೀವು ಅಜ್ಞಾನಿ​ಗಳಾಗಿರಬಾರದೆಂಬುದು ನನ್ನ ಬಯಕೆ: ಅನ್ಯಜನಾಂಗಗಳವರ ಪೂರ್ಣ ಸಂಖ್ಯೆಯು ಒಳಗೆ ಬರುವ ವರೆಗೆ ಇಸ್ರಾಯೇಲ್ಯರಲ್ಲಿ ಒಂದು ಪಾಲು ಜನರು ಮೊಂಡರಾಗಿದ್ದರು. 26  ಹೀಗೆ ಇಸ್ರಾಯೇಲ್ಯರೆಲ್ಲರು ರಕ್ಷಿಸಲ್ಪಡುವರು. “ವಿಮೋಚಕನು ಚೀಯೋನಿನಿಂದ ಹೊರಟುಬರುವನು ಮತ್ತು ಯಾಕೋಬನಿಂದ ಭಕ್ತಿಹೀನತೆಯ ಆಚಾರಗಳನ್ನು ತೆಗೆದುಹಾಕುವನು. 27  ನಾನು ಅವರ ಪಾಪಗಳನ್ನು ತೆಗೆದುಹಾಕುವಾಗ ಅವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಇದೇ ಆಗಿದೆ” ಎಂದು ಬರೆದಿರುವಂತೆ ಇದು ಆಗುವುದು. 28  ನಿಜ, ಸುವಾರ್ತೆಯ ಸಂಬಂಧದಲ್ಲಿ ಅವರು ನಿಮ್ಮ ಸಲುವಾಗಿ ವೈರಿಗಳಾಗಿದ್ದಾರೆ; ಆದರೆ ದೇವರ ಆಯ್ಕೆಯ ಸಂಬಂಧದಲ್ಲಿ ಅವರು ತಮ್ಮ ಪೂರ್ವಜರ ಸಲುವಾಗಿ ಪ್ರಿಯರಾಗಿದ್ದಾರೆ. 29  ದೇವರು ವರಗಳನ್ನು ನೀಡಿದ್ದಕ್ಕೂ ಜನರನ್ನು ಕರೆದದ್ದಕ್ಕೂ ವಿಷಾದಿಸುವವನಲ್ಲ. 30  ನೀವು ಒಮ್ಮೆ ದೇವರಿಗೆ ಅವಿಧೇಯರಾಗಿದ್ದರೂ ಈಗ ಅವರ ಅವಿಧೇಯತೆಯ ಕಾರಣ ಕರುಣಿಸಲ್ಪಟ್ಟಿದ್ದೀರಿ. 31  ಹಾಗೆಯೇ ಅವರು ಈಗ ಅವಿಧೇಯರಾಗಿದ್ದರೂ ನಿಮಗೆ ಕರುಣೆ ತೋರಿಸಲ್ಪಟ್ಟಂತೆಯೇ ಅವರಿಗೂ ಕರುಣೆಯು ತೋರಿಸಲ್ಪಡಬಹುದು. 32  ದೇವರು ಅವರೆಲ್ಲರಿಗೂ ಕರುಣೆಯನ್ನು ತೋರಿಸಸಾಧ್ಯವಾಗುವಂತೆ ಅವರನ್ನು ಒಟ್ಟಾಗಿ ಅವಿಧೇಯತೆಯಲ್ಲಿ ಕಟ್ಟಿಹಾಕಿದ್ದಾನೆ. 33  ಆಹಾ! ದೇವರ ಐಶ್ವರ್ಯವೂ ವಿವೇಕವೂ ಜ್ಞಾನವೂ ಎಷ್ಟೋ ಅಗಾಧ! ಆತನ ನ್ಯಾಯತೀರ್ಪುಗಳು ಎಷ್ಟೋ ಅಗಮ್ಯ ಮತ್ತು ಆತನ ಮಾರ್ಗಗಳನ್ನು ಕಂಡುಹಿಡಿಯುವುದು ಎಷ್ಟೋ ಅಸಾಧ್ಯ! 34  “ಯೆಹೋವನ ಮನಸ್ಸನ್ನು ತಿಳಿದಿರುವವರು ಯಾರು ಅಥವಾ ಆತನಿಗೆ ಸಲಹೆಗಾರನಾಗಿರುವವನು ಯಾರು?” 35  ಇಲ್ಲವೆ “ತನಗೆ ಹಿಂದೆ ಸಲ್ಲಿಸಬೇಕಾಗುವಂತೆ ಆತನಿಗೆ ಮೊದಲಾಗಿ ಕೊಟ್ಟಿರುವವನು ಯಾರು?” 36  ಏಕೆಂದರೆ ಸಮಸ್ತವೂ ಆತನಿಂದಲೇ, ಆತನ ಮೂಲಕವಾಗಿಯೇ ಮತ್ತು ಆತನಿಗಾಗಿಯೇ ಇವೆ. ಆತನಿಗೆ ನಿತ್ಯಕ್ಕೂ ಮಹಿಮೆಯು ಸಲ್ಲಿಸಲ್ಪಡಲಿ. ಆಮೆನ್‌.

ಪಾದಟಿಪ್ಪಣಿ