ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಯೋಹಾನ 8:12-59

8  ಆದರೆ ಯೇಸು ಆಲೀವ್‌ ಗುಡ್ಡಕ್ಕೆ ಹೋದನು. ಬೆಳಗ್ಗೆ ಅವನು ಪುನಃ ದೇವಾಲಯಕ್ಕೆ ಬಂದನು ಮತ್ತು ಎಲ್ಲ ಜನರು ಅವನ ಬಳಿಗೆ ಬರಲಾರಂಭಿಸಿದರು; ಅವನು ಕುಳಿತುಕೊಂಡು ಅವರಿಗೆ ಬೋಧಿಸತೊಡಗಿದನು. ಆಗ ಶಾಸ್ತ್ರಿಗಳೂ ಫರಿಸಾಯರೂ ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಒಬ್ಬ ಸ್ತ್ರೀಯನ್ನು ತಂದು ಅವರ ಮಧ್ಯೆ ನಿಲ್ಲಿಸಿದ ಬಳಿಕ ಅವನಿಗೆ, “ಬೋಧಕನೇ ಈ ಸ್ತ್ರೀಯು ವ್ಯಭಿಚಾರ ಮಾಡುತ್ತಿರುವಾಗಲೇ ಸಿಕ್ಕಿಬಿದ್ದಳು. ಇಂಥ ಸ್ತ್ರೀಯರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯು ಧರ್ಮಶಾಸ್ತ್ರದಲ್ಲಿ ನಮಗೆ ಅಪ್ಪಣೆಕೊಟ್ಟಿದ್ದಾನೆ. ಆದರೆ ನೀನು ಏನು ಹೇಳುತ್ತೀ?” ಎಂದು ಕೇಳಿದರು. ಅವನ ಮೇಲೆ ಅಪವಾದ ಹೊರಿಸಲು ಏನಾದರೂ ಕಾರಣ ಸಿಕ್ಕೀತೆಂದು ಭಾವಿಸುತ್ತಾ ಅವನನ್ನು ಪರೀಕ್ಷಿಸಲಿಕ್ಕಾಗಿಯೇ ಅವರು ಇದನ್ನು ಕೇಳಿದರು. ಆದರೆ ಯೇಸು ಬಗ್ಗಿಕೊಂಡು ತನ್ನ ಬೆರಳಿನಿಂದ ನೆಲದ ಮೇಲೆ ಬರೆಯಲಾರಂಭಿಸಿದನು. ಆದರೆ ಅವರು ಅವನನ್ನು ಬಿಡದೆ ಕೇಳುತ್ತಲೇ ಇದ್ದಾಗ ಅವನು ನೆಟ್ಟಗಾಗಿ ಅವರಿಗೆ, “ನಿಮ್ಮಲ್ಲಿ ಪಾಪವಿಲ್ಲದವನು ಅವಳ ಮೇಲೆ ಮೊದಲು ಕಲ್ಲೆಸೆಯಲಿ” ಎಂದು ಹೇಳಿ ಪುನಃ ಬಗ್ಗಿಕೊಂಡು ನೆಲದ ಮೇಲೆ ಬರೆಯುವುದನ್ನು ಮುಂದುವರಿಸಿದನು. ಆದರೆ ಇದನ್ನು ಕೇಳಿಸಿಕೊಂಡು ಹಿರೀಪುರುಷರಿಂದ ಆರಂಭಿಸಿ ಒಬ್ಬೊಬ್ಬರಾಗಿ ಹೊರಗೆ ಹೋಗತೊಡಗಿದರು; ಅವನೊಬ್ಬನೇ ಉಳಿದನು ಮತ್ತು ಅವರ ಮಧ್ಯೆ ನಿಂತಿದ್ದ ಸ್ತ್ರೀಯು ಅಲ್ಲೇ ಇದ್ದಳು. 10 ಯೇಸು ನೆಟ್ಟಗಾಗುತ್ತಾ ಅವಳಿಗೆ, “ಸ್ತ್ರೀಯೇ, ಅವರೆಲ್ಲಿ? ಯಾವನೂ ನಿನಗೆ ಶಿಕ್ಷೆಯನ್ನು ವಿಧಿಸಲಿಲ್ಲವೆ?” ಎಂದು ಕೇಳಿದನು. 11 ಅದಕ್ಕೆ ಅವಳು, “ಯಾವನೂ ಶಿಕ್ಷೆ ವಿಧಿಸಲಿಲ್ಲ ಸ್ವಾಮಿ” ಎಂದಳು. ಆಗ ಯೇಸು, “ನಾನು ಸಹ ನಿನಗೆ ಶಿಕ್ಷೆ ವಿಧಿಸುವುದಿಲ್ಲ. ನಿನ್ನ ದಾರಿಹಿಡಿದು ಹೋಗು, ಇನ್ನು ಮುಂದೆ ಎಂದೂ ಪಾಪಮಾಡುವುದನ್ನು ಮುಂದುವರಿಸಬೇಡ” ಎಂದನು.  12 ಆದುದರಿಂದ ಯೇಸು ಪುನಃ ಜನರೊಂದಿಗೆ ಮಾತಾಡುತ್ತಾ, “ನಾನು ಲೋಕಕ್ಕೆ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಖಂಡಿತವಾಗಿಯೂ ಕತ್ತಲೆಯಲ್ಲಿ ನಡೆಯದೆ ಜೀವದ ಬೆಳಕನ್ನು ಹೊಂದಿರುವನು” ಎಂದು ಹೇಳಿದನು. 13  ಆಗ ಫರಿಸಾಯರು ಅವನಿಗೆ, “ನಿನ್ನ ವಿಷಯದಲ್ಲಿ ನೀನೇ ಸಾಕ್ಷಿಹೇಳಿಕೊಳ್ಳುತ್ತಿದ್ದೀ; ನಿನ್ನ ಸಾಕ್ಷಿಯು ನಿಜವಲ್ಲ” ಎಂದರು. 14  ಅದಕ್ಕೆ ಉತ್ತರವಾಗಿ ಯೇಸು ಅವರಿಗೆ, “ನನ್ನ ವಿಷಯದಲ್ಲಿ ನಾನೇ ಸಾಕ್ಷಿಹೇಳಿಕೊಳ್ಳುವುದಾದರೂ ನಾನು ಎಲ್ಲಿಂದ ಬಂದಿದ್ದೇನೆ ಮತ್ತು ಎಲ್ಲಿಗೆ ಹೋಗುತ್ತೇನೆ ಎಂಬುದನ್ನು ತಿಳಿದಿರುವುದರಿಂದ ನನ್ನ ಸಾಕ್ಷಿ ನಿಜವಾಗಿದೆ. ಆದರೆ ನಾನು ಎಲ್ಲಿಂದ ಬಂದಿದ್ದೇನೆ ಮತ್ತು ಎಲ್ಲಿಗೆ ಹೋಗುತ್ತೇನೆ ಎಂಬುದು ನಿಮಗೆ ತಿಳಿದಿಲ್ಲ. 15  ನೀವು ಹೊರತೋರಿಕೆಗನುಸಾರ ತೀರ್ಪುಮಾಡುತ್ತೀರಿ; ನಾನು ಯಾವ ಮನುಷ್ಯನಿಗೂ ತೀರ್ಪುಮಾಡುವುದೇ ಇಲ್ಲ. 16  ನಾನು ಒಂದುವೇಳೆ ತೀರ್ಪುಮಾಡುವುದಾದರೂ ನನ್ನ ತೀರ್ಪು ಸತ್ಯವಾದದ್ದಾಗಿದೆ; ಏಕೆಂದರೆ ನಾನು ಒಂಟಿಯಾಗಿಲ್ಲ, ನನ್ನನ್ನು ಕಳುಹಿಸಿದ ತಂದೆಯು ನನ್ನೊಂದಿಗಿದ್ದಾನೆ. 17  ಮಾತ್ರವಲ್ಲದೆ, ‘ಇಬ್ಬರ ಸಾಕ್ಷಿ ನಿಜವಾಗುತ್ತದೆ’ ಎಂದು ನಿಮ್ಮ ಧರ್ಮಶಾಸ್ತ್ರದಲ್ಲೇ ಬರೆಯಲಾಗಿದೆ. 18  ನನ್ನ ಕುರಿತು ಸಾಕ್ಷಿಹೇಳುವವರಲ್ಲಿ ನಾನು ಒಬ್ಬನು ಮತ್ತು ನನ್ನನ್ನು ಕಳುಹಿಸಿದ ತಂದೆಯು ನನ್ನ ಕುರಿತು ಸಾಕ್ಷಿಹೇಳುತ್ತಾನೆ” ಎಂದನು. 19  ಆದುದರಿಂದ ಅವರು ಅವನಿಗೆ, “ನಿನ್ನ ತಂದೆ ಎಲ್ಲಿದ್ದಾನೆ?” ಎಂದು ಕೇಳಿದರು. ಅದಕ್ಕೆ ಯೇಸು, “ನೀವು ನನ್ನನ್ನಾಗಲಿ ನನ್ನ ತಂದೆಯನ್ನಾಗಲಿ ತಿಳಿದಿಲ್ಲ. ನೀವು ನನ್ನನ್ನು ತಿಳಿದಿರುತ್ತಿದ್ದರೆ ನನ್ನ ತಂದೆಯನ್ನೂ ತಿಳಿದಿರುತ್ತಿದ್ದಿರಿ” ಎಂದು ಉತ್ತರಕೊಟ್ಟನು. 20  ಅವನು ದೇವಾಲಯದಲ್ಲಿ ಕಾಣಿಕೆ ಪೆಟ್ಟಿಗೆಗಳಿರುವ ಸ್ಥಳದಲ್ಲಿ ಬೋಧಿಸುತ್ತಿರುವಾಗ ಈ ಮಾತುಗಳನ್ನು ಹೇಳಿದನು. ಆದರೆ ಅವನ ಗಳಿಗೆಯು ಇನ್ನೂ ಬಂದಿರಲಿಲ್ಲವಾದ್ದರಿಂದ ಯಾವನೂ ಅವನ ಮೇಲೆ ಕೈಹಾಕಲಿಲ್ಲ. 21  ಅವನು ಪುನಃ ಅವರಿಗೆ, “ನಾನು ಹೋಗುತ್ತೇನೆ ಮತ್ತು ನೀವು ನನಗಾಗಿ ಹುಡುಕುವಿರಿ; ಆದರೂ ನೀವು ನಿಮ್ಮ ಪಾಪದಲ್ಲೇ ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ” ಎಂದು ಹೇಳಿದನು. 22  ಆಗ ಯೆಹೂದ್ಯರು, “ ‘ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ಹೇಳುತ್ತಿದ್ದಾನಲ್ಲಾ? ಇವನು ತನ್ನನ್ನು ಕೊಂದುಕೊಳ್ಳಲಿಕ್ಕಿದ್ದಾನೊ?” ಎಂದು ಹೇಳಲಾರಂಭಿಸಿದರು. 23  ಆದುದರಿಂದ ಅವನು ಮುಂದುವರಿಸುತ್ತಾ ಅವರಿಗೆ, “ನೀವು ಕೆಳಗಿನವರು, ನಾನು ಮೇಲಿನವನು. ನೀವು ಈ ಲೋಕದವರು, ನಾನು ಈ ಲೋಕದವನಲ್ಲ. 24  ಆದುದರಿಂದಲೇ ನೀವು ನಿಮ್ಮ ಪಾಪಗಳಲ್ಲೇ ಸಾಯುವಿರಿ ಎಂದು ನಾನು ನಿಮಗೆ ಹೇಳಿದೆ. ನಾನೇ ಅವನು ಎಂದು ನೀವು ನಂಬದಿದ್ದರೆ ನೀವು ನಿಮ್ಮ ಪಾಪಗಳಲ್ಲೇ ಸಾಯುವಿರಿ” ಎಂದು ಹೇಳಿದನು. 25  ಆಗ ಅವರು ಅವನಿಗೆ, “ನೀನು ಯಾರು?” ಎಂದು ಕೇಳಲಾರಂಭಿಸಿದರು. ಯೇಸು ಅವರಿಗೆ, “ನಾನು ನಿಮ್ಮೊಂದಿಗೆ ಮಾತಾಡುವುದಾದರೂ ಏತಕ್ಕೆ? 26  ನಿಮ್ಮ ಕುರಿತು ಮಾತಾಡುವುದಕ್ಕೆ ಮತ್ತು ನ್ಯಾಯತೀರ್ಪನ್ನು ನೀಡುವುದಕ್ಕೆ ನನ್ನಲ್ಲಿ ಎಷ್ಟೋ ವಿಷಯಗಳಿವೆ. ವಾಸ್ತವದಲ್ಲಿ ನನ್ನನ್ನು ಕಳುಹಿಸಿದಾತನು ಸತ್ಯವಂತನು ಮತ್ತು ಆತನಿಂದ ಕೇಳಿಸಿಕೊಂಡ ವಿಷಯಗಳನ್ನೇ ನಾನು ಲೋಕದಲ್ಲಿ ಮಾತಾಡುತ್ತಿದ್ದೇನೆ” ಎಂದು ಹೇಳಿದನು. 27  ಅವನು ತಂದೆಯ ಕುರಿತು ತಮ್ಮೊಂದಿಗೆ ಮಾತಾಡುತ್ತಿದ್ದಾನೆ ಎಂಬುದನ್ನು ಅವರು ಗ್ರಹಿಸಲಿಲ್ಲ. 28  ಆದುದರಿಂದ ಯೇಸು, “ನೀವು ಮನುಷ್ಯಕುಮಾರನನ್ನು ಮೇಲಕ್ಕೇರಿಸಿದ ಬಳಿಕ ನಾನೇ ಅವನೆಂದೂ ನನ್ನ ಸ್ವಪ್ರೇರಣೆಯಿಂದ ನಾನು ಏನೂ ಮಾಡದೆ ತಂದೆಯು ಕಲಿಸಿಕೊಟ್ಟಂತೆಯೇ ಈ ಎಲ್ಲ ವಿಷಯಗಳನ್ನು ಮಾತಾಡುತ್ತೇನೆಂದೂ ನೀವು ತಿಳಿದುಕೊಳ್ಳುವಿರಿ. 29  ನನ್ನನ್ನು ಕಳುಹಿಸಿದಾತನು ನನ್ನೊಂದಿಗಿದ್ದಾನೆ. ನಾನು ಆತನಿಗೆ ಮೆಚ್ಚಿಕೆಯಾಗಿರುವುದನ್ನೇ ಯಾವಾಗಲೂ ಮಾಡುವುದರಿಂದ ಆತನು ನನ್ನನ್ನು ತೊರೆಯಲಿಲ್ಲ” ಎಂದು ಹೇಳಿದನು. 30  ಅವನು ಈ ವಿಷಯಗಳನ್ನು ಮಾತಾಡುತ್ತಿದ್ದಾಗ ಅನೇಕರು ಅವನಲ್ಲಿ ನಂಬಿಕೆಯಿಟ್ಟರು. 31  ಮತ್ತು ಯೇಸು ತನ್ನಲ್ಲಿ ನಂಬಿಕೆಯಿಟ್ಟಿದ್ದ ಯೆಹೂದ್ಯರಿಗೆ, “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿರುವುದಾದರೆ ನಿಜವಾಗಿಯೂ ನನ್ನ ಶಿಷ್ಯರಾಗಿರುವಿರಿ; 32  ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವುದು” ಎಂದನು. 33  ಉಳಿದವರು ಅವನಿಗೆ, “ನಾವು ಅಬ್ರಹಾಮನ ವಂಶದವರು; ನಾವು ಯಾರಿಗೂ ಎಂದೂ ದಾಸರಾಗಿರಲಿಲ್ಲ. ಹಾಗಿರುವಾಗ ‘ನೀವು ಬಿಡುಗಡೆ ಹೊಂದುವಿರಿ’ ಎಂದು ನೀನು ಹೇಳುವುದು ಹೇಗೆ?” ಎಂದು ಕೇಳಿದರು. 34  ಯೇಸು ಅವರಿಗೆ, “ಪಾಪಮಾಡುವ ಪ್ರತಿಯೊಬ್ಬನು ಪಾಪಕ್ಕೆ ದಾಸನಾಗಿದ್ದಾನೆ ಎಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ. 35  ಇದಲ್ಲದೆ, ದಾಸನು ಸದಾಕಾಲ ಮನೆಯಲ್ಲಿ ಉಳಿಯುವುದಿಲ್ಲ; ಮಗನು ಸದಾಕಾಲ ಉಳಿಯುತ್ತಾನೆ. 36  ಆದುದರಿಂದ ಮಗನು ನಿಮ್ಮನ್ನು ಬಿಡುಗಡೆಮಾಡಿದರೆ ನಿಮಗೆ ನಿಜವಾಗಿಯೂ ಬಿಡುಗಡೆಯಾಗುವುದು. 37  ನೀವು ಅಬ್ರಹಾಮನ ವಂಶದವರೆಂಬುದು ನನಗೆ ಗೊತ್ತು; ಆದರೆ ನೀವು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೀರಿ, ಏಕೆಂದರೆ ನನ್ನ ಮಾತು ನಿಮ್ಮ ಮೇಲೆ ಯಾವುದೇ ಪ್ರಭಾವವನ್ನು ಬೀರುವುದಿಲ್ಲ. 38  ನನ್ನ ತಂದೆಯ ಬಳಿಯಲ್ಲಿ ನಾನು ಏನನ್ನು ನೋಡಿದ್ದೇನೋ ಅದನ್ನು ಮಾತಾಡುತ್ತೇನೆ; ಆದುದರಿಂದ ನೀವು ನಿಮ್ಮ ತಂದೆಯಿಂದ ಕೇಳಿಸಿಕೊಂಡದ್ದನ್ನು ಮಾಡಿರಿ” ಎಂದು ಹೇಳಿದನು. 39  ಅದಕ್ಕೆ ಅವರು ಅವನಿಗೆ, “ನಮ್ಮ ತಂದೆ ಅಬ್ರಹಾಮನೇ” ಎಂದರು. ಆಗ ಯೇಸು ಅವರಿಗೆ, “ನೀವು ಅಬ್ರಹಾಮನ ಮಕ್ಕಳಾಗಿದ್ದರೆ ಅಬ್ರಹಾಮನು ಮಾಡಿದ ಕಾರ್ಯಗಳನ್ನು ಮಾಡಿರಿ. 40  ಆದರೆ ದೇವರಿಂದ ಕೇಳಿಸಿಕೊಂಡ ಸತ್ಯವನ್ನು ನಿಮಗೆ ಹೇಳಿರುವ ಮನುಷ್ಯನಾದ ನನ್ನನ್ನು ಈಗ ನೀವು ಕೊಲ್ಲಲು ಪ್ರಯತ್ನಿಸುತ್ತಿದ್ದೀರಿ. ಅಬ್ರಹಾಮನು ಹೀಗೆ ಮಾಡಲಿಲ್ಲ. 41  ನೀವು ನಿಮ್ಮ ತಂದೆಯ ಕೃತ್ಯಗಳನ್ನು ಮಾಡುತ್ತಿದ್ದೀರಿ” ಎಂದಾಗ ಅವರು ಅವನಿಗೆ, “ನಾವು ಹಾದರದಿಂದ ಹುಟ್ಟಿಲ್ಲ; ನಮಗೆ ಒಬ್ಬನೇ ತಂದೆಯಿದ್ದಾನೆ, ಆತನು ದೇವರೇ” ಎಂದರು. 42  ಯೇಸು ಅವರಿಗೆ, “ದೇವರು ನಿಮ್ಮ ತಂದೆಯಾಗಿದ್ದರೆ ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ; ಏಕೆಂದರೆ ನಾನು ದೇವರ ಬಳಿಯಿಂದ ಹೊರಟುಬಂದು ಇಲ್ಲಿದ್ದೇನೆ. ನಾನು ಸ್ವಪ್ರೇರಣೆಯಿಂದ ಬರಲಿಲ್ಲ, ಆತನು ನನ್ನನ್ನು ಕಳುಹಿಸಿದನು. 43  ನಾನು ಮಾತಾಡುತ್ತಿರುವುದು ನಿಮಗೆ ಏಕೆ ತಿಳಿಯುತ್ತಿಲ್ಲ? ನೀವು ನನ್ನ ಮಾತಿಗೆ ಕಿವಿಗೊಡಲಾರದೆ ಇರುವುದೇ ಕಾರಣ. 44  ನೀವು ನಿಮ್ಮ ತಂದೆಯಾದ ಪಿಶಾಚನಿಂದ ಹುಟ್ಟಿದವರಾಗಿದ್ದೀರಿ ಮತ್ತು ನಿಮ್ಮ ತಂದೆಯ ಇಚ್ಛೆಗಳನ್ನೇ ಮಾಡಬೇಕೆಂದಿದ್ದೀರಿ. ಅವನು ಆರಂಭದಿಂದಲೇ ಒಬ್ಬ ನರಹಂತಕನಾಗಿದ್ದು ಸತ್ಯದಲ್ಲಿ ನೆಲೆನಿಲ್ಲಲಿಲ್ಲ; ಯಾಕೆಂದರೆ ಸತ್ಯವು ಅವನಲ್ಲಿ ಇಲ್ಲ. ಅವನು ಸುಳ್ಳಾಡುವಾಗ ತನ್ನ ಸ್ವಭಾವಕ್ಕೆ ಅನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ತಂದೆಯೂ ಆಗಿದ್ದಾನೆ. 45  ನಾನು ಸತ್ಯವನ್ನು ಆಡುತ್ತೇನೆ, ಆದರೆ ನೀವು ನನ್ನನ್ನು ನಂಬುವುದಿಲ್ಲ. 46  ನಿಮ್ಮಲ್ಲಿ ಯಾರು ನನ್ನನ್ನು ತಪ್ಪಿತಸ್ಥನೆಂದು ರುಜುಪಡಿಸುವಿರಿ? ನಾನು ಸತ್ಯವನ್ನೇ ಮಾತಾಡುವುದಾದರೂ ನೀವು ನನ್ನಲ್ಲಿ ಏಕೆ ನಂಬಿಕೆಯಿಡುವುದಿಲ್ಲ? 47  ದೇವರಿಗೆ ಸೇರಿದವನು ದೇವರ ಮಾತುಗಳಿಗೆ ಕಿವಿಗೊಡುತ್ತಾನೆ. ನೀವು ದೇವರಿಗೆ ಸೇರಿದವರಲ್ಲದ ಕಾರಣ ಕಿವಿಗೊಡುವುದಿಲ್ಲ” ಎಂದು ಹೇಳಿದನು. 48  ಅದಕ್ಕೆ ಯೆಹೂದ್ಯರು ಅವನಿಗೆ, “ನೀನೊಬ್ಬ ಸಮಾರ್ಯದವನೂ ದೆವ್ವಹಿಡಿದವನೂ ಆಗಿದ್ದೀ ಎಂದು ನಾವು ಸರಿಯಾಗಿಯೇ ಹೇಳಿದೆವಲ್ಲವೆ?” ಎಂದರು. 49  ಆಗ ಯೇಸು, “ನನಗೆ ದೆವ್ವಹಿಡಿದಿಲ್ಲ, ನಾನು ನನ್ನ ತಂದೆಯನ್ನು ಗೌರವಿಸುತ್ತೇನೆ ಮತ್ತು ನೀವು ನನ್ನನ್ನು ಅಗೌರವಿಸುತ್ತೀರಿ. 50  ನನಗೆ ಮಹಿಮೆ ಸಿಗಬೇಕೆಂದು ನಾನು ಬಯಸುವುದಿಲ್ಲ; ಆದರೆ ಅದನ್ನು ಬಯಸುವಾತನು ಮತ್ತು ನ್ಯಾಯತೀರಿಸುವಾತನು ಒಬ್ಬನಿದ್ದಾನೆ. 51  ಯಾವನಾದರೂ ನನ್ನ ಮಾತುಗಳನ್ನು ಕೈಕೊಂಡು ನಡೆಯುವುದಾದರೆ ಅವನು ಮರಣವನ್ನು ಎಂದಿಗೂ ಕಾಣುವುದೇ ಇಲ್ಲ ಎಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ” ಅಂದನು. 52  ಅದಕ್ಕೆ ಯೆಹೂದ್ಯರು ಅವನಿಗೆ, “ನಿನಗೆ ದೆವ್ವಹಿಡಿದಿದೆ ಎಂದು ಈಗ ನಮಗೆ ನಿಶ್ಚಯವಾಗಿ ತಿಳಿಯಿತು. ಅಬ್ರಹಾಮನು ಸತ್ತನು, ಪ್ರವಾದಿಗಳೂ ಸತ್ತರು; ಆದರೆ ‘ಯಾವನಾದರೂ ನನ್ನ ಮಾತುಗಳನ್ನು ಕೈಕೊಂಡು ನಡೆಯುವುದಾದರೆ ಅವನು ಮರಣವನ್ನು ಅನುಭವಿಸುವುದೇ ಇಲ್ಲ’ ಎಂದು ನೀನು ಹೇಳುತ್ತೀ. 53  ಮೃತಪಟ್ಟಿರುವ ನಮ್ಮ ತಂದೆಯಾದ ಅಬ್ರಹಾಮನಿಗಿಂತ ನೀನು ದೊಡ್ಡವನೊ? ಇದಲ್ಲದೆ ಪ್ರವಾದಿಗಳೂ ಸತ್ತರು. ಹಾಗಾದರೆ ನೀನು ಯಾರೆಂದು ಹೇಳಿಕೊಳ್ಳುತ್ತೀ?” ಎಂದು ಕೇಳಿದರು. 54  ಆಗ ಯೇಸು, “ನನ್ನನ್ನು ನಾನೇ ಮಹಿಮೆಪಡಿಸಿಕೊಂಡರೆ ನನ್ನ ಮಹಿಮೆ ಏನೂ ಅಲ್ಲ. ನನ್ನನ್ನು ಮಹಿಮೆಪಡಿಸುವವನು ನನ್ನ ತಂದೆಯೇ. ಆತನನ್ನು ನೀವು ನಿಮ್ಮ ದೇವರೆಂದು ಹೇಳಿಕೊಳ್ಳುತ್ತೀರಾದರೂ 55  ನೀವು ಆತನನ್ನು ತಿಳಿಯದೇ ಇದ್ದೀರಿ. ಆದರೆ ನಾನು ಆತನನ್ನು ತಿಳಿದಿದ್ದೇನೆ. ಒಂದುವೇಳೆ ನಾನು ಆತನನ್ನು ತಿಳಿದಿಲ್ಲ ಎಂದು ಹೇಳುವುದಾದರೆ ನಾನೂ ನಿಮ್ಮಂತೆಯೇ ಒಬ್ಬ ಸುಳ್ಳುಗಾರನಾಗುತ್ತೇನೆ. ನಾನು ಆತನನ್ನು ತಿಳಿದಿದ್ದೇನೆ ಮತ್ತು ಆತನ ಮಾತುಗಳನ್ನು ಕೈಕೊಂಡು ನಡೆಯುತ್ತಿದ್ದೇನೆ. 56  ನಿಮ್ಮ ತಂದೆಯಾದ ಅಬ್ರಹಾಮನು ನನ್ನ ದಿನವನ್ನು ನೋಡುವ ಪ್ರತೀಕ್ಷೆಯಲ್ಲಿ ಬಹಳ ಆನಂದಿಸಿದನು ಮತ್ತು ಅದನ್ನು ಕಂಡು ಉಲ್ಲಾಸಪಟ್ಟನು” ಎಂದು ಹೇಳಿದನು. 57  ಅದಕ್ಕೆ ಯೆಹೂದ್ಯರು ಅವನಿಗೆ, “ನಿನಗೆ ಇನ್ನೂ ಐವತ್ತು ವರ್ಷವಾಗಿಲ್ಲ, ಹಾಗಿದ್ದರೂ ಅಬ್ರಹಾಮನನ್ನು ನೋಡಿದ್ದೀಯಾ?” ಎಂದು ಕೇಳಿದರು. 58  ಯೇಸು ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಅಬ್ರಹಾಮನು ಅಸ್ತಿತ್ವಕ್ಕೆ ಬರುವುದಕ್ಕಿಂತ ಮುಂಚಿನಿಂದಲೇ ನಾನು ಇದ್ದೆನು” ಎಂದು ಹೇಳಿದನು. 59  ಆಗ ಅವರು ಅವನ ಮೇಲೆ ಎಸೆಯಲಿಕ್ಕಾಗಿ ಕಲ್ಲುಗಳನ್ನು ಎತ್ತಿಕೊಂಡಾಗ ಯೇಸು ಅಡಗಿಕೊಂಡು ದೇವಾಲಯದಿಂದ ಹೊರಟುಹೋದನು.

ಪಾದಟಿಪ್ಪಣಿ