ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಯೋಹಾನ 6:1-71

6  ಇವುಗಳಾದ ಮೇಲೆ ಯೇಸು ಗಲಿಲಾಯ ಅಥವಾ ತಿಬೇರಿಯ ಸಮುದ್ರದ ಆಚೆಗೆ ಹೋದನು.  ಅವನು ಅಸ್ವಸ್ಥರಲ್ಲಿ ನಡಿಸುತ್ತಿದ್ದ ಸೂಚಕಕಾರ್ಯಗಳನ್ನು ನೋಡುತ್ತಿದ್ದುದರಿಂದ ಜನರ ದೊಡ್ಡ ಗುಂಪು ಅವನನ್ನು ಹಿಂಬಾಲಿಸುತ್ತಿತ್ತು.  ಆದುದರಿಂದ ಯೇಸು ಒಂದು ಬೆಟ್ಟವನ್ನು ಹತ್ತಿ ಅಲ್ಲಿ ತನ್ನ ಶಿಷ್ಯರೊಂದಿಗೆ ಕುಳಿತುಕೊಂಡಿದ್ದನು.  ಆಗ ಯೆಹೂದ್ಯರ ಹಬ್ಬವಾದ ಪಸ್ಕವು ಹತ್ತಿರವಾಗಿತ್ತು.  ಯೇಸು ಕಣ್ಣೆತ್ತಿ ತನ್ನ ಬಳಿಗೆ ಬರುತ್ತಿರುವ ಜನರ ದೊಡ್ಡ ಗುಂಪನ್ನು ನೋಡಿ ಫಿಲಿಪ್ಪನಿಗೆ, “ಈ ಜನರು ಊಟಮಾಡುವಂತೆ ನಾವು ಎಲ್ಲಿಂದ ರೊಟ್ಟಿಗಳನ್ನು ಕೊಂಡುಕೊಳ್ಳೋಣ?” ಎಂದು ಕೇಳಿದನು.  ಫಿಲಿಪ್ಪನನ್ನು ಪರೀಕ್ಷಿಸಲಿಕ್ಕಾಗಿಯೇ ಅವನು ಇದನ್ನು ಕೇಳಿದ್ದನು, ಏಕೆಂದರೆ ತಾನೇನು ಮಾಡಲಿದ್ದೇನೆ ಎಂಬುದು ಯೇಸುವಿಗೆ ತಿಳಿದಿತ್ತು.  ಫಿಲಿಪ್ಪನು ಅವನಿಗೆ, “ಇವರಲ್ಲಿ ಪ್ರತಿಯೊಬ್ಬನು ಸ್ವಲ್ಪ ತಿನ್ನುವುದಾದರೂ ಇನ್ನೂರು ದಿನಾರುಗಳಷ್ಟು* ಬೆಲೆಯ ರೊಟ್ಟಿಗಳೂ ಸಾಲವು” ಎಂದು ಉತ್ತರಿಸಿದನು.  ಆಗ ಶಿಷ್ಯರಲ್ಲಿ ಒಬ್ಬನಾದ ಸೀಮೋನ ಪೇತ್ರನ ಸಹೋದರನಾದ ಅಂದ್ರೆಯನು ಅವನಿಗೆ,  “ಇಲ್ಲಿ ಒಬ್ಬ ಚಿಕ್ಕ ಹುಡುಗನ ಬಳಿ ಐದು ಜವೆಗೋದಿಯ ರೊಟ್ಟಿಗಳೂ ಎರಡು ಚಿಕ್ಕ ಮೀನುಗಳೂ ಇವೆ. ಆದರೆ ಈ ಜನಸಮೂಹಕ್ಕೆ ಇವು ಸಾಕಾಗುತ್ತವೊ?” ಎಂದನು. 10  ಆಗ ಯೇಸು, “ಜನರನ್ನು ಊಟಕ್ಕೆ ಕೂರಿಸಿರಿ” ಎಂದು ಹೇಳಿದನು. ಆ ಸ್ಥಳದಲ್ಲಿ ಬಹಳ ಹುಲ್ಲಿದ್ದ ಕಾರಣ ಜನರು ಅಲ್ಲಿ ಕುಳಿತುಕೊಂಡರು. ಅವರಲ್ಲಿ ಗಂಡಸರು ಸುಮಾರು ಐದು ಸಾವಿರ ಮಂದಿಯಿದ್ದರು. 11  ಯೇಸು ರೊಟ್ಟಿಗಳನ್ನು ತೆಗೆದುಕೊಂಡು ಕೃತಜ್ಞತೆ ಸಲ್ಲಿಸಿ ಕುಳಿತುಕೊಂಡಿದ್ದವರಿಗೆ ಹಂಚಿಕೊಟ್ಟನು; ಅಂತೆಯೇ ಅವರು ಬಯಸಿದಷ್ಟು ಚಿಕ್ಕ ಮೀನುಗಳನ್ನೂ ಅವರಿಗೆ ಹಂಚಿಕೊಟ್ಟನು. 12  ಅವರಿಗೆ ತೃಪ್ತಿಯಾದ ಮೇಲೆ ಅವನು ತನ್ನ ಶಿಷ್ಯರಿಗೆ, “ಯಾವುದೂ ವ್ಯರ್ಥವಾಗದಂತೆ ಉಳಿದಿರುವ ತುಂಡುಗಳನ್ನು ಒಟ್ಟುಗೂಡಿಸಿರಿ” ಎಂದು ಹೇಳಿದನು. 13  ಅವರು ಅವುಗಳನ್ನು ಒಟ್ಟುಗೂಡಿಸಿದರು; ಆ ಐದು ಜವೆಗೋದಿಯ ರೊಟ್ಟಿಗಳಲ್ಲಿ ಜನರು ತಿಂದು ಮಿಕ್ಕ ತುಂಡುಗಳನ್ನು ಒಟ್ಟುಗೂಡಿಸಲಾಗಿ ಹನ್ನೆರಡು ಬುಟ್ಟಿಗಳು ತುಂಬಿದವು. 14  ಅವನು ಮಾಡಿದ ಸೂಚಕಕಾರ್ಯಗಳನ್ನು ನೋಡಿದ ಜನರು, “ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿಯು ನಿಶ್ಚಯವಾಗಿಯೂ ಇವನೇ” ಎಂದು ಹೇಳಲಾರಂಭಿಸಿದರು. 15  ಜನರು ಬಂದು ತನ್ನನ್ನು ಹಿಡಿದು ಅರಸನನ್ನಾಗಿ ಮಾಡಬೇಕೆಂದಿದ್ದಾರೆ ಎಂಬುದನ್ನು ತಿಳಿದವನಾಗಿ ಯೇಸು ಪುನಃ ತಾನೊಬ್ಬನೇ ಬೆಟ್ಟಕ್ಕೆ ಹೊರಟುಹೋದನು. 16  ಸಂಜೆಯಾದಾಗ ಅವನ ಶಿಷ್ಯರು ಸಮುದ್ರದ ಬಳಿಗೆ ಹೋಗಿ 17  ದೋಣಿಯನ್ನು ಹತ್ತಿ ಸಮುದ್ರದಾಚೆಗಿನ ಕಪೆರ್ನೌಮಿಗೆ ಹೋದರು. ಅಷ್ಟರಲ್ಲಾಗಲೇ ಕತ್ತಲಾಗಿತ್ತು ಮತ್ತು ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ. 18  ಇದಲ್ಲದೆ ರಭಸವಾದ ಗಾಳಿ ಬೀಸುತ್ತಿದ್ದ ಕಾರಣ ಸಮುದ್ರವು ಅಲ್ಲೋಲಕಲ್ಲೋಲವಾಗತೊಡಗಿತ್ತು. 19  ಶಿಷ್ಯರು ಹುಟ್ಟುಹಾಕುತ್ತಾ ಸುಮಾರು ಮೂರು ಅಥವಾ ನಾಲ್ಕು ಮೈಲಿ ದೂರ ಬಂದಿದ್ದಾಗ, ಯೇಸು ಸಮುದ್ರದ ಮೇಲೆ ನಡೆಯುತ್ತಾ ದೋಣಿಯ ಬಳಿಗೆ ಬರುತ್ತಿರುವುದನ್ನು ಕಂಡು ಭಯಭೀತರಾದರು. 20  ಆದರೆ ಅವನು, “ನಾನೇ; ಭಯಪಡಬೇಡಿರಿ” ಎಂದು ಅವರಿಗೆ ಹೇಳಿದನು. 21  ಆಗ ಅವರು ಅವನನ್ನು ದೋಣಿಗೆ ಹತ್ತಿಸಿಕೊಳ್ಳಲು ಸಮ್ಮತಿಸಿದರು ಮತ್ತು ಅಷ್ಟರಲ್ಲಿ ದೋಣಿಯು ನೇರವಾಗಿ ಅವರು ಹೋಗಲು ಪ್ರಯತ್ನಿಸುತ್ತಿದ್ದ ಊರನ್ನು ತಲಪಿತ್ತು. 22  ಮರುದಿನ ಸಮುದ್ರದ ಆಚೇಕಡೆಯಲ್ಲಿ ನಿಂತಿದ್ದ ಜನರು ಅಲ್ಲಿ ಒಂದು ಚಿಕ್ಕ ದೋಣಿಯಲ್ಲದೆ ಬೇರೆ ಯಾವುದೇ ದೋಣಿಯಿಲ್ಲದಿರುವುದನ್ನು ನೋಡಿದರು; ಯೇಸು ತನ್ನ ಶಿಷ್ಯರೊಂದಿಗೆ ಆ ದೋಣಿಯನ್ನು ಹತ್ತದೆ ಅವನ ಶಿಷ್ಯರು ಮಾತ್ರ ಹೊರಟುಹೋದದ್ದೂ ಅವರಿಗೆ ತಿಳಿದಿತ್ತು; 23  ಕರ್ತನು ಕೃತಜ್ಞತೆ ಸಲ್ಲಿಸಿದ ಬಳಿಕ ಅವರು ರೊಟ್ಟಿಯನ್ನು ತಿಂದಿದ್ದ ಸ್ಥಳದ ಬಳಿಗೆ ತಿಬೇರಿಯದಿಂದ ದೋಣಿಗಳು ಬಂದವು. 24  ಆದುದರಿಂದ ಯೇಸುವಾಗಲಿ ಅವನ ಶಿಷ್ಯರಾಗಲಿ ಅಲ್ಲಿ ಇಲ್ಲದಿರುವುದನ್ನು ಕಂಡ ಜನರ ಗುಂಪು ತಮ್ಮ ಚಿಕ್ಕ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಹೋಯಿತು. 25  ಅವನನ್ನು ಸಮುದ್ರದ ಆಚೇಕಡೆಯಲ್ಲಿ ಕಂಡುಕೊಂಡಾಗ ಅವರು ಅವನಿಗೆ, “ರಬ್ಬೀ, ನೀನು ಇಲ್ಲಿಗೆ ಯಾವಾಗ ಬಂದಿ?” ಎಂದು ಕೇಳಿದರು. 26  ಯೇಸು ಅವರಿಗೆ, “ನೀವು ನನ್ನನ್ನು ಹುಡುಕುತ್ತಿರುವುದು ನಾನು ಮಾಡಿದ ಸೂಚಕಕಾರ್ಯಗಳನ್ನು ನೋಡಿದ್ದರಿಂದಲ್ಲ, ರೊಟ್ಟಿಯನ್ನು ತಿಂದು ತೃಪ್ತಿಹೊಂದಿದ್ದರಿಂದಲೇ ಎಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ. 27  ನಶಿಸಿಹೋಗುವ ಆಹಾರಕ್ಕಾಗಿ ಅಲ್ಲ, ನಿತ್ಯಜೀವಕ್ಕಾಗಿ ಉಳಿಯುವಂಥ ಆಹಾರಕ್ಕಾಗಿ ದುಡಿಯಿರಿ; ಅದನ್ನು ಮನುಷ್ಯಕುಮಾರನು ನಿಮಗೆ ಕೊಡುವನು; ಅವನ ಮೇಲೆ ತಂದೆಯಾದ ದೇವರು ಸಹ ತನ್ನ ಅಂಗೀಕಾರದ ಮುದ್ರೆಯೊತ್ತಿದ್ದಾನೆ” ಎಂದು ಉತ್ತರಿಸಿದನು. 28  ಅದಕ್ಕೆ ಅವರು ಅವನಿಗೆ, “ನಾವು ದೇವರ ಕೆಲಸಗಳನ್ನು ನಡಿಸಲು ಏನು ಮಾಡಬೇಕು?” ಎಂದು ಕೇಳಿದರು. 29  ಅದಕ್ಕೆ ಯೇಸು ಅವರಿಗೆ, “ನೀವು ದೇವರಿಂದ ಕಳುಹಿಸಲ್ಪಟ್ಟವನ ಮೇಲೆ ನಂಬಿಕೆಯಿಡುವುದೇ ಆತನ ಕೆಲಸವಾಗಿದೆ” ಎಂದು ಉತ್ತರಿಸಿದನು. 30  ಆಗ ಅವರು ಅವನಿಗೆ, “ಹಾಗಾದರೆ ನಾವು ನೋಡಿ ನಿನ್ನನ್ನು ನಂಬುವಂತೆ ನೀನು ನಮಗಾಗಿ ಯಾವ ಸೂಚಕಕಾರ್ಯವನ್ನು ಮಾಡುತ್ತೀ? ನೀನು ಯಾವ ಕೆಲಸವನ್ನು ಮಾಡುತ್ತೀ? 31  ‘ಆತನು ಅವರಿಗೆ ತಿನ್ನುವುದಕ್ಕೆ ಸ್ವರ್ಗದಿಂದ ರೊಟ್ಟಿಯನ್ನು ಕೊಟ್ಟನು’ ಎಂದು ಬರೆದಿರುವ ಪ್ರಕಾರ ನಮ್ಮ ಪೂರ್ವಜರು ಅರಣ್ಯದಲ್ಲಿ ಮನ್ನಾ ತಿಂದರು” ಎಂದು ಹೇಳಿದರು. 32  ಆಗ ಯೇಸು ಅವರಿಗೆ, “ಮೋಶೆಯು ನಿಮಗೆ ಸ್ವರ್ಗದಿಂದ ರೊಟ್ಟಿಯನ್ನು ಕೊಡಲಿಲ್ಲ, ಆದರೆ ನನ್ನ ತಂದೆಯು ನಿಮಗೆ ಸ್ವರ್ಗದಿಂದ ನಿಜವಾದ ರೊಟ್ಟಿಯನ್ನು ಕೊಡುತ್ತಾನೆ ಎಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ. 33  ಸ್ವರ್ಗದಿಂದ ಇಳಿದುಬಂದು ಲೋಕಕ್ಕೆ ಜೀವವನ್ನು ಕೊಡುವವನೇ ದೇವರು ಕೊಡುವ ರೊಟ್ಟಿಯಾಗಿದ್ದಾನೆ” ಎಂದನು. 34  ಆಗ ಅವರು ಅವನಿಗೆ, “ಸ್ವಾಮಿ, ನಮಗೆ ಆ ರೊಟ್ಟಿಯನ್ನು ಯಾವಾಗಲೂ ಕೊಡು” ಎಂದು ಹೇಳಿದರು. 35  ಯೇಸು ಅವರಿಗೆ, “ನಾನೇ ಜೀವದ ರೊಟ್ಟಿಯಾಗಿದ್ದೇನೆ. ನನ್ನ ಬಳಿಗೆ ಬರುವವನಿಗೆ ಹಸಿವೆಯಾಗುವುದೇ ಇಲ್ಲ ಮತ್ತು ನನ್ನಲ್ಲಿ ನಂಬಿಕೆಯಿಡುವವನಿಗೆ ಎಂದಿಗೂ ಬಾಯಾರಿಕೆಯಾಗುವುದೇ ಇಲ್ಲ. 36  ಆದರೆ ನೀವು ನನ್ನನ್ನು ನೋಡಿದರೂ ನಂಬುವುದಿಲ್ಲ ಎಂದು ನಾನು ನಿಮಗೆ ಹೇಳಿದ್ದೇನೆ. 37  ತಂದೆಯು ನನಗೆ ಕೊಡುವ ಪ್ರತಿಯೊಬ್ಬರು ನನ್ನ ಬಳಿಗೆ ಬರುತ್ತಾರೆ ಮತ್ತು ನನ್ನ ಬಳಿಗೆ ಬರುವವರನ್ನು ನಾನು ತಳ್ಳಿಬಿಡುವುದೇ ಇಲ್ಲ; 38  ಏಕೆಂದರೆ ನಾನು ನನ್ನ ಚಿತ್ತವನ್ನು ಮಾಡಲಿಕ್ಕಾಗಿ ಅಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಲಿಕ್ಕಾಗಿಯೇ ಸ್ವರ್ಗದಿಂದ ಇಳಿದುಬಂದಿದ್ದೇನೆ. 39  ನನ್ನನ್ನು ಕಳುಹಿಸಿದಾತನು ನನಗೆ ಕೊಟ್ಟಿರುವವರಲ್ಲಿ ಯಾರನ್ನೂ ನಾನು ಕಳೆದುಕೊಳ್ಳದೆ ಎಲ್ಲರನ್ನೂ ಕಡೇ ದಿನದಲ್ಲಿ ಪುನರುತ್ಥಾನಗೊಳಿಸಬೇಕು ಎಂಬುದೇ ಆತನ ಚಿತ್ತವಾಗಿದೆ. 40  ಮಗನನ್ನು ನೋಡಿ ಅವನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ನಿತ್ಯಜೀವವನ್ನು ಪಡೆಯಬೇಕು ಎಂಬುದೇ ನನ್ನ ತಂದೆಯ ಚಿತ್ತವಾಗಿದೆ ಮತ್ತು ನಾನು ಅವನನ್ನು ಕಡೇ ದಿನದಲ್ಲಿ ಪುನರುತ್ಥಾನಗೊಳಿಸುವೆನು” ಎಂದನು. 41  “ಸ್ವರ್ಗದಿಂದ ಇಳಿದುಬಂದಿರುವ ರೊಟ್ಟಿಯು ನಾನೇ” ಎಂದು ಅವನು ಹೇಳಿದ್ದರಿಂದ ಯೆಹೂದ್ಯರು ಅವನ ವಿರುದ್ಧ ಗುಣುಗುಟ್ಟತೊಡಗಿದರು; 42  ಮತ್ತು “ಇವನು ಯೋಸೇಫನ ಮಗನಾದ ಯೇಸುವಲ್ಲವೆ? ಇವನ ತಂದೆತಾಯಿಗಳ ಪರಿಚಯ ನಮಗಿದೆಯಲ್ಲವೆ? ಹಾಗಾದರೆ, ‘ನಾನು ಸ್ವರ್ಗದಿಂದ ಇಳಿದುಬಂದಿದ್ದೇನೆ’ ಎಂದು ಈಗ ಇವನು ಹೇಳುವುದಾದರೂ ಹೇಗೆ?” ಎಂದರು. 43  ಅದಕ್ಕೆ ಯೇಸು ಅವರಿಗೆ, “ನಿಮ್ಮನಿಮ್ಮೊಳಗೆ ಗುಣುಗುಟ್ಟುವುದನ್ನು ನಿಲ್ಲಿಸಿರಿ. 44  ನನ್ನನ್ನು ಕಳುಹಿಸಿದ ತಂದೆಯು ಸೆಳೆದ ಹೊರತು ಯಾರೊಬ್ಬನೂ ನನ್ನ ಬಳಿಗೆ ಬರಲಾರನು; ಮತ್ತು ನಾನು ಅವನನ್ನು ಕಡೇ ದಿನದಲ್ಲಿ ಪುನರುತ್ಥಾನಗೊಳಿಸುವೆನು. 45  ‘ಅವರೆಲ್ಲರು ಯೆಹೋವನಿಂದ ಶಿಕ್ಷಿತರಾಗಿರುವರು’ ಎಂಬುದಾಗಿ ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ತಂದೆಯಿಂದ ಕೇಳಿ ಕಲಿತಿರುವ ಪ್ರತಿಯೊಬ್ಬನು ನನ್ನ ಬಳಿಗೆ ಬರುತ್ತಾನೆ. 46  ದೇವರಿಂದ ಬಂದವನೇ ಹೊರತು ಬೇರೆ ಯಾವನೂ ತಂದೆಯನ್ನು ನೋಡಿಲ್ಲ; ದೇವರಿಂದ ಬಂದವನೊಬ್ಬನೇ ತಂದೆಯನ್ನು ನೋಡಿದ್ದಾನೆ. 47  ನಂಬುವವನಿಗೆ ನಿತ್ಯಜೀವ ಉಂಟು ಎಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ. 48  “ನಾನೇ ಜೀವದ ರೊಟ್ಟಿಯಾಗಿದ್ದೇನೆ. 49  ನಿಮ್ಮ ಪೂರ್ವಜರು ಅರಣ್ಯದಲ್ಲಿ ಮನ್ನಾ ತಿಂದರಾದರೂ ಅವರು ಸತ್ತರು. 50  ಇದು ಸ್ವರ್ಗದಿಂದ ಇಳಿದುಬರುವ ರೊಟ್ಟಿಯಾಗಿರುವುದರಿಂದ ಇದನ್ನು ಯಾವನಾದರೂ ತಿನ್ನಬಹುದು ಮತ್ತು ತಿಂದವನು ಸಾಯುವುದಿಲ್ಲ. 51  ಸ್ವರ್ಗದಿಂದ ಇಳಿದುಬಂದಿರುವ ಜೀವವುಳ್ಳ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾಕಾಲ ಬದುಕುವನು; ವಾಸ್ತವದಲ್ಲಿ ಲೋಕದ ಜೀವಕ್ಕಾಗಿ ನಾನು ಕೊಡಲಿರುವ ರೊಟ್ಟಿಯು ನನ್ನ ಮಾಂಸವೇ ಆಗಿದೆ” ಎಂದು ಹೇಳಿದನು. 52  ಆಗ ಯೆಹೂದ್ಯರು, “ಈ ಮನುಷ್ಯನು ತನ್ನ ಮಾಂಸವನ್ನು ನಮಗೆ ತಿನ್ನಲು ಹೇಗೆ ಕೊಡಬಲ್ಲನು?” ಎಂದು ತಮ್ಮತಮ್ಮೊಳಗೆ ವಾದಮಾಡಿಕೊಳ್ಳಲಾರಂಭಿಸಿದರು. 53  ಅದಕ್ಕೆ ಯೇಸು ಅವರಿಗೆ, “ನೀವು ಮನುಷ್ಯಕುಮಾರನ ಮಾಂಸವನ್ನು ತಿಂದು ಅವನ ರಕ್ತವನ್ನು ಕುಡಿದ ಹೊರತು ನಿಮ್ಮಲ್ಲಿ ಜೀವವಿರುವುದಿಲ್ಲ ಎಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ. 54  ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನಿಗೆ ನಿತ್ಯಜೀವ ಉಂಟು ಮತ್ತು ನಾನು ಅವನನ್ನು ಕಡೇ ದಿನದಲ್ಲಿ ಪುನರುತ್ಥಾನಗೊಳಿಸುವೆನು; 55  ಏಕೆಂದರೆ ನನ್ನ ಮಾಂಸವೇ ನಿಜವಾದ ಆಹಾರ ಮತ್ತು ನನ್ನ ರಕ್ತವೇ ನಿಜವಾದ ಪಾನ. 56  ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನೊಂದಿಗೆ ಐಕ್ಯದಿಂದಿರುವನು ಮತ್ತು ನಾನು ಅವನೊಂದಿಗೆ ಐಕ್ಯದಿಂದಿರುವೆನು. 57  ಜೀವಸ್ವರೂಪನಾಗಿರುವ ತಂದೆಯು ನನ್ನನ್ನು ಕಳುಹಿಸಿದ್ದಾನೆ ಮತ್ತು ತಂದೆಯ ನಿಮಿತ್ತವಾಗಿ ನಾನು ಜೀವಿಸುತ್ತಿರುವಂತೆಯೇ ನನ್ನನ್ನು ತಿನ್ನುವವನು ಸಹ ನನ್ನ ನಿಮಿತ್ತ ಜೀವಿಸುವನು. 58  ಇದು ಸ್ವರ್ಗದಿಂದ ಇಳಿದುಬಂದಿರುವ ರೊಟ್ಟಿಯಾಗಿದೆ. ನಿಮ್ಮ ಪೂರ್ವಜರು ತಿಂದರಾದರೂ ಸತ್ತುಹೋದರು, ಆದರೆ ಇದು ಹಾಗಲ್ಲ. ಈ ರೊಟ್ಟಿಯನ್ನು ತಿನ್ನುವವನು ಸದಾಕಾಲ ಜೀವಿಸುವನು” ಎಂದನು. 59  ಅವನು ಕಪೆರ್ನೌಮಿನ ಸಾರ್ವಜನಿಕ ಸಭೆಯಲ್ಲಿ ಬೋಧಿಸುತ್ತಿರುವಾಗ ಈ ವಿಷಯಗಳನ್ನು ಹೇಳಿದನು. 60  ಆದುದರಿಂದ ಅವನ ಶಿಷ್ಯರಲ್ಲಿ ಅನೇಕರು ಇದನ್ನು ಕೇಳಿ, “ಇದು ಅಸಹನೀಯವಾದ ಮಾತು; ಇದನ್ನು ಯಾರು ತಾನೇ ಕೇಳಿಸಿಕೊಳ್ಳುವರು?” ಎಂದು ಹೇಳಿದರು. 61  ಶಿಷ್ಯರು ಈ ವಿಷಯದ ಕುರಿತು ಗುಣುಗುಟ್ಟುತ್ತಿದ್ದಾರೆ ಎಂಬುದನ್ನು ಯೇಸು ತನ್ನಲ್ಲೇ ತಿಳಿದವನಾಗಿ ಅವರಿಗೆ, “ಇದು ನಿಮ್ಮನ್ನು ಎಡವಿಸುತ್ತದೊ? 62  ಹಾಗಾದರೆ ಮನುಷ್ಯಕುಮಾರನು ಮೊದಲು ಎಲ್ಲಿದ್ದನೋ ಅಲ್ಲಿಗೆ ಏರಿಹೋಗುವುದನ್ನು ನೀವು ನೋಡುವುದಾದರೆ ಆಗೇನು? 63  ಜೀವವನ್ನು ಕೊಡುವಂಥದ್ದು ಪವಿತ್ರಾತ್ಮವಾಗಿದೆ; ಮಾಂಸವು ಯಾವ ಪ್ರಯೋಜನಕ್ಕೂ ಬಾರದು. ನಾನು ನಿಮಗೆ ಹೇಳಿದ ಮಾತುಗಳು ಪವಿತ್ರಾತ್ಮದಿಂದ ಬಂದವುಗಳಾಗಿದ್ದು ಜೀವವನ್ನು ಕೊಡುತ್ತವೆ. 64  ಆದರೆ ನಿಮ್ಮಲ್ಲಿ ಕೆಲವರು ನಂಬದವರಾಗಿದ್ದಾರೆ” ಎಂದು ಹೇಳಿದನು. ಏಕೆಂದರೆ ನಂಬದವರು ಯಾರು ಮತ್ತು ತನಗೆ ನಂಬಿಕೆ ದ್ರೋಹಮಾಡುವವನು ಯಾರು ಎಂಬುದು ಆರಂಭದಿಂದಲೇ ಯೇಸುವಿಗೆ ತಿಳಿದಿತ್ತು. 65  ಆದುದರಿಂದ ಅವನು, “ತಂದೆಯ ಅನುಗ್ರಹವನ್ನು ಹೊಂದದೇ ಇರುವ ಯಾವನೂ ನನ್ನ ಬಳಿಗೆ ಬರಲಾರನು ಎಂದು ಈ ಕಾರಣದಿಂದಲೇ ನಾನು ನಿಮಗೆ ಹೇಳಿದ್ದೇನೆ” ಎಂದನು. 66  ಈ ಕಾರಣದಿಂದ ಅವನ ಶಿಷ್ಯರಲ್ಲಿ ಅನೇಕರು ತಾವು ಬಿಟ್ಟುಬಂದಿದ್ದ ಕಾರ್ಯಗಳಿಗೆ ಹಿಂದಿರುಗಿ ಅವನೊಂದಿಗೆ ಸಂಚಾರಮಾಡುವುದನ್ನು ನಿಲ್ಲಿಸಿದರು. 67  ಆದುದರಿಂದ ಹನ್ನೆರಡು ಮಂದಿ ಶಿಷ್ಯರಿಗೆ ಯೇಸು, “ನೀವು ಸಹ ಹೋಗಲು ಬಯಸುವುದಿಲ್ಲ, ಅಲ್ಲವೆ?” ಎಂದು ಕೇಳಿದನು. 68  ಅದಕ್ಕೆ ಸೀಮೋನ ಪೇತ್ರನು ಅವನಿಗೆ, “ಕರ್ತನೇ, ನಾವು ಯಾರ ಬಳಿಗೆ ಹೋಗುವುದು? ನಿತ್ಯಜೀವದ ಮಾತುಗಳು ನಿನ್ನಲ್ಲಿವೆ; 69  ನೀನು ದೇವರ ಪವಿತ್ರನು ಎಂಬುದನ್ನು ನಾವು ನಂಬಿದ್ದೇವೆ ಮತ್ತು ತಿಳಿದುಕೊಂಡಿದ್ದೇವೆ” ಎಂದನು. 70  ಆಗ ಯೇಸು ಅವರಿಗೆ, “ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿಕೊಂಡೆನಲ್ಲವೆ? ಆದರೂ ನಿಮ್ಮಲ್ಲಿ ಒಬ್ಬನು ಮಿಥ್ಯಾಪವಾದಿಯಾಗಿದ್ದಾನೆ” ಎಂದು ಹೇಳಿದನು. 71  ವಾಸ್ತವದಲ್ಲಿ ಅವನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಕುರಿತು ಹೀಗೆ ಹೇಳಿದನು; ಏಕೆಂದರೆ ಅವನು ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದರೂ ಅವನನ್ನು ದ್ರೋಹದಿಂದ ಹಿಡಿದುಕೊಡಲಿದ್ದನು.

ಪಾದಟಿಪ್ಪಣಿ

ಯೋಹಾ 6:7 ಮತ್ತಾ 18:24ರ ಪಾದಟಿಪ್ಪಣಿಯನ್ನು ನೋಡಿ.