ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೋಹಾನ 4:1-54

4  ಯೇಸು ಯೋಹಾನನಿಗಿಂತ ಹೆಚ್ಚು ಶಿಷ್ಯರನ್ನು ಮಾಡಿಕೊಳ್ಳುತ್ತಾ ಅವರಿಗೆ ದೀಕ್ಷಾಸ್ನಾನ ಮಾಡಿಸುತ್ತಾ ಇದ್ದಾನೆಂಬ ವಿಷಯವನ್ನು ಫರಿಸಾಯರು ಕೇಳಿಸಿಕೊಂಡಿದ್ದಾರೆ ಎಂದು ಕರ್ತನಿಗೆ ತಿಳಿದುಬಂದಾಗ —⁠  ವಾಸ್ತವದಲ್ಲಿ, ಯೇಸು ತಾನೇ ದೀಕ್ಷಾಸ್ನಾನ ಮಾಡಿಸುತ್ತಿರಲಿಲ್ಲ, ಅವನ ಶಿಷ್ಯರು ಮಾಡಿಸುತ್ತಿದ್ದರು —⁠  ಅವನು ಯೂದಾಯವನ್ನು ಬಿಟ್ಟು ಪುನಃ ಗಲಿಲಾಯಕ್ಕೆ ಹೋದನು.  ಆದರೆ ಅವನು ಸಮಾರ್ಯವನ್ನು ಹಾದುಹೋಗಬೇಕಾಗಿತ್ತು.  ಆದುದರಿಂದ ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟಿದ್ದ ಹೊಲದ ಸಮೀಪದಲ್ಲಿದ್ದ ಸಿಖರ್‌ ಎಂಬ ಸಮಾರ್ಯದ ಪಟ್ಟಣಕ್ಕೆ ಅವನು ಬಂದನು.  ಅಲ್ಲಿ ಯಾಕೋಬನ ಬಾವಿ ಇತ್ತು. ಪ್ರಯಾಣದಿಂದ ದಣಿದಿದ್ದ ಯೇಸು ಆ ಬಾವಿಯ ಬಳಿ ಹಾಗೆಯೇ ಕುಳಿತುಕೊಂಡಿದ್ದನು. ಆಗ ಮಧ್ಯಾಹ್ನ ಸುಮಾರು ಹನ್ನೆರಡು ಗಂಟೆಯಾಗಿತ್ತು.  ಸಮಾರ್ಯದವಳಾದ ಒಬ್ಬ ಸ್ತ್ರೀ ನೀರನ್ನು ಸೇದಲಿಕ್ಕಾಗಿ ಬಂದಳು. ಯೇಸು ಅವಳಿಗೆ, “ನನಗೆ ಕುಡಿಯಲು ನೀರು ಕೊಡು” ಎಂದು ಕೇಳಿದನು.  (ಅವನ ಶಿಷ್ಯರು ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳಲು ಪಟ್ಟಣದೊಳಗೆ ಹೋಗಿದ್ದರು.)  ಆಗ ಸಮಾರ್ಯದ ಸ್ತ್ರೀಯು ಅವನಿಗೆ, “ನೀನು ಒಬ್ಬ ಯೆಹೂದ್ಯನಾಗಿರುವುದಾದರೂ ಸಮಾರ್ಯದ ಸ್ತ್ರೀಯಾಗಿರುವ ನನ್ನಿಂದ ಕುಡಿಯುವುದಕ್ಕೆ ನೀರನ್ನು ಕೇಳುವುದು ಹೇಗೆ?” ಎಂದು ಹೇಳಿದಳು. (ಏಕೆಂದರೆ ಯೆಹೂದ್ಯರಿಗೆ ಸಮಾರ್ಯದವರೊಂದಿಗೆ ಯಾವುದೇ ಹೊಕ್ಕುಬಳಕೆ ಇರಲಿಲ್ಲ.) 10  ಅದಕ್ಕೆ ಉತ್ತರವಾಗಿ ಯೇಸು ಅವಳಿಗೆ, “ದೇವರ ಉಚಿತ ವರವೇನೆಂಬುದೂ ‘ನನಗೆ ಕುಡಿಯಲು ನೀರು ಕೊಡು’ ಎಂದು ನಿನಗೆ ಹೇಳಿದವನು ಯಾರೆಂಬುದೂ ನಿನಗೆ ತಿಳಿದಿರುತ್ತಿದ್ದಲ್ಲಿ ನೀನು ಅವನನ್ನು ಕೇಳಿಕೊಳ್ಳುತ್ತಿದ್ದಿ ಮತ್ತು ಅವನು ನಿನಗೆ ಜೀವದಾಯಕ ನೀರನ್ನು ಕೊಡುತ್ತಿದ್ದನು” ಎಂದನು. 11  ಅದಕ್ಕೆ ಅವಳು ಅವನಿಗೆ, “ಸ್ವಾಮಿ, ನೀರನ್ನು ಸೇದಲು ನಿನ್ನ ಬಳಿ ಒಂದು ಕೊಡವೂ ಇಲ್ಲ ಮತ್ತು ಬಾವಿಯು ಆಳವಾಗಿದೆ. ಹೀಗಿರುವಾಗ, ಈ ಜೀವದಾಯಕ ನೀರು ನಿನ್ನಲ್ಲಿರುವುದು ಯಾವ ಮೂಲದಿಂದ? 12  ನಮ್ಮ ಪೂರ್ವಜನಾದ ಯಾಕೋಬನಿಗಿಂತ ನೀನು ದೊಡ್ಡವನಲ್ಲವಲ್ಲ. ಅವನೇ ನಮಗೆ ಈ ಬಾವಿಯನ್ನು ಕೊಟ್ಟನು ಮತ್ತು ಸ್ವತಃ ಅವನೂ ಅವನ ಮಕ್ಕಳೂ ಅವನ ದನಕುರಿಗಳೂ ಇದರದ್ದೇ ನೀರನ್ನು ಕುಡಿದರು” ಎಂದಳು. 13  ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವಳಿಗೆ, “ಈ ನೀರನ್ನು ಕುಡಿಯುವ ಪ್ರತಿಯೊಬ್ಬನಿಗೆ ಪುನಃ ಬಾಯಾರಿಕೆಯಾಗುವುದು. 14  ನಾನು ಕೊಡುವ ನೀರನ್ನು ಕುಡಿಯುವ ಯಾವನಿಗೂ ಎಂದಿಗೂ ಬಾಯಾರಿಕೆಯಾಗುವುದಿಲ್ಲ; ನಾನು ಅವನಿಗೆ ಕೊಡುವ ನೀರು ಅವನಲ್ಲಿ ನಿತ್ಯಜೀವವನ್ನು ಕೊಡಲಿಕ್ಕಾಗಿ ಗುಳುಗುಳಿಸುವ ನೀರಿನ ಬುಗ್ಗೆಯಾಗುವುದು” ಎಂದು ಹೇಳಿದನು. 15  ಆ ಸ್ತ್ರೀಯು ಅವನಿಗೆ, “ಸ್ವಾಮಿ, ಆ ನೀರನ್ನು ನನಗೆ ಕೊಡು; ಆಗ ನನಗೆ ಬಾಯಾರಿಕೆಯಾಗುವುದೂ ಇಲ್ಲ, ನೀರನ್ನು ಸೇದುವುದಕ್ಕಾಗಿ ನಾನು ಈ ಸ್ಥಳಕ್ಕೆ ಬರುತ್ತಿರಬೇಕಾಗುವುದೂ ಇಲ್ಲ” ಎಂದಳು. 16  ಅವನು ಅವಳಿಗೆ, “ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಇಲ್ಲಿಗೆ ಬಾ” ಎಂದನು. 17  ಅದಕ್ಕೆ ಆ ಸ್ತ್ರೀಯು, “ನನಗೆ ಗಂಡನಿಲ್ಲ” ಎಂದಳು. ಯೇಸು ಅವಳಿಗೆ, “‘ನನಗೆ ಗಂಡನಿಲ್ಲ’ ಎಂದು ನೀನು ಸರಿಯಾಗಿಯೇ ಹೇಳಿದಿ. 18  ಏಕೆಂದರೆ ನಿನಗೆ ಐದು ಮಂದಿ ಗಂಡಂದಿರಿದ್ದರು ಮತ್ತು ಈಗ ನಿನ್ನೊಂದಿಗಿರುವವನು ನಿನ್ನ ಗಂಡನಲ್ಲ. ನೀನು ಸತ್ಯವನ್ನೇ ಹೇಳಿದ್ದೀ” ಎಂದನು. 19  ಅದಕ್ಕೆ ಆ ಸ್ತ್ರೀಯು, “ಸ್ವಾಮಿ, ನೀನೊಬ್ಬ ಪ್ರವಾದಿಯೆಂದು ನಾನು ಗ್ರಹಿಸುತ್ತೇನೆ. 20  ನಮ್ಮ ಪೂರ್ವಜರು ಈ ಬೆಟ್ಟದಲ್ಲಿ ದೇವರನ್ನು ಆರಾಧಿಸುತ್ತಿದ್ದರು; ಆದರೆ ಜನರು ಆರಾಧನೆಮಾಡಬೇಕಾದ ಸ್ಥಳವು ಯೆರೂಸಲೇಮಿನಲ್ಲಿದೆ ಎಂದು ನೀವು ಹೇಳುತ್ತೀರಿ” ಎಂದಳು. 21  ಯೇಸು ಅವಳಿಗೆ, “ಸ್ತ್ರೀಯೇ ನನ್ನನ್ನು ನಂಬು; ನೀವು ತಂದೆಯನ್ನು ಈ ಬೆಟ್ಟದಲ್ಲಾಗಲಿ ಯೆರೂಸಲೇಮಿನಲ್ಲಾಗಲಿ ಆರಾಧಿಸದೆ ಇರುವ ಕಾಲ ಬರಲಿದೆ. 22  ನಿಮಗೆ ತಿಳಿಯದೆ ಇರುವುದನ್ನು ನೀವು ಆರಾಧಿಸುತ್ತೀರಿ; ನಮಗೆ ತಿಳಿದಿರುವುದನ್ನು ನಾವು ಆರಾಧಿಸುತ್ತೇವೆ, ಏಕೆಂದರೆ ರಕ್ಷಣೆಯು ಯೆಹೂದ್ಯರಿಂದ ಉದ್ಭವಿಸುತ್ತದೆ. 23  ಆದರೂ ಸತ್ಯಾರಾಧಕರು ತಂದೆಯನ್ನು ಪವಿತ್ರಾತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ, ಅದು ಈಗಲೇ ಬಂದಿದೆ; ಏಕೆಂದರೆ ತಂದೆಯು ತನ್ನನ್ನು ಆರಾಧಿಸಲು ಇಂಥವರನ್ನೇ ಹುಡುಕುತ್ತಿದ್ದಾನೆ. 24  ದೇವರು ಆತ್ಮಜೀವಿಯಾಗಿದ್ದಾನೆ ಮತ್ತು ಆತನನ್ನು ಆರಾಧಿಸುವವರು ಪವಿತ್ರಾತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು” ಎಂದನು. 25  ಆ ಸ್ತ್ರೀಯು ಅವನಿಗೆ, “ಕ್ರಿಸ್ತನೆಂದು ಕರೆಯಲ್ಪಡುವ ಮೆಸ್ಸೀಯನು ಬರಲಿದ್ದಾನೆಂಬುದು ನನಗೆ ತಿಳಿದಿದೆ. ಅವನು ಬಂದಾಗ ಎಲ್ಲ ವಿಷಯಗಳನ್ನು ನಮಗೆ ಬಹಿರಂಗವಾಗಿ ಪ್ರಕಟಿಸುವನು” ಎಂದು ಹೇಳಿದಳು. 26  ಯೇಸು ಅವಳಿಗೆ, “ನಿನ್ನೊಂದಿಗೆ ಮಾತಾಡುತ್ತಿರುವ ನಾನೇ ಅವನು” ಎಂದನು. 27  ಅಷ್ಟರಲ್ಲಿ ಅವನ ಶಿಷ್ಯರು ಬಂದರು ಮತ್ತು ಅವನು ಒಬ್ಬ ಸ್ತ್ರೀಯೊಂದಿಗೆ ಮಾತಾಡುತ್ತಿರುವುದನ್ನು ನೋಡಿ ಆಶ್ಚರ್ಯಪಟ್ಟರು. ಆದರೆ ಅವರಲ್ಲಿ ಯಾರೂ, “ನಿನಗೆ ಏನು ಬೇಕು?” ಎಂದಾಗಲಿ “ನೀನು ಏಕೆ ಅವಳೊಂದಿಗೆ ಮಾತಾಡುತ್ತೀ?” ಎಂದಾಗಲಿ ಕೇಳಲಿಲ್ಲ. 28  ಆ ಸ್ತ್ರೀಯು ತನ್ನ ನೀರಿನ ಕೊಡವನ್ನು ಅಲ್ಲೇ ಬಿಟ್ಟು ಪಟ್ಟಣದೊಳಗೆ ಹೋಗಿ ಜನರಿಗೆ, 29  “ಬನ್ನಿರಿ, ನಾನು ಮಾಡಿದ ಎಲ್ಲ ವಿಷಯಗಳನ್ನು ನನಗೆ ಹೇಳಿದಂಥ ಒಬ್ಬ ಮನುಷ್ಯನನ್ನು ನೋಡಿ. ಒಂದುವೇಳೆ ಅವನೇ ಕ್ರಿಸ್ತನಾಗಿರಬಹುದೊ?” ಎಂದು ಹೇಳಿದಳು. 30  ಅವರು ಅವನ ಬಳಿ ಬರಲಿಕ್ಕಾಗಿ ಪಟ್ಟಣದಿಂದ ಹೊರಟರು. 31  ಅಷ್ಟರೊಳಗೆ ಶಿಷ್ಯರು ಯೇಸುವಿಗೆ “ರಬ್ಬೀ, ಊಟಮಾಡು” ಎಂದು ಬೇಡಿಕೊಂಡರು. 32  ಆದರೆ ಅವನು ಅವರಿಗೆ, “ನಿಮಗೆ ತಿಳಿಯದಂಥ ಆಹಾರವು ನನ್ನ ಬಳಿಯಿದೆ” ಎಂದನು. 33  ಆಗ ಶಿಷ್ಯರು, “ಯಾರಾದರು ಅವನಿಗೆ ತಿನ್ನಲು ಏನಾದರೂ ತಂದುಕೊಟ್ಟರೊ?” ಎಂದು ಪರಸ್ಪರ ಮಾತಾಡಿಕೊಳ್ಳತೊಡಗಿದರು. 34  ಅದಕ್ಕೆ ಯೇಸು ಅವರಿಗೆ, “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರವಾಗಿದೆ. 35  ಕೊಯ್ಲಿನ ಕಾಲ ಬರಲು ಇನ್ನೂ ನಾಲ್ಕು ತಿಂಗಳುಗಳಿವೆ ಎಂದು ನೀವು ಹೇಳುತ್ತೀರಲ್ಲವೆ? ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಅವು ಕೊಯ್ಲಿಗೆ ಸಿದ್ಧವಾಗಿವೆ ಎಂದು ನಾನು ನಿಮಗೆ ಹೇಳುತ್ತೇನೆ. ಈಗಾಗಲೇ 36  ಕೊಯ್ಯುವವನಿಗೆ ಕೂಲಿ ಸಿಗುತ್ತಿದೆ ಮತ್ತು ಅವನು ನಿತ್ಯಜೀವಕ್ಕಾಗಿ ಫಲವನ್ನು ಒಟ್ಟುಗೂಡಿಸುತ್ತಿದ್ದಾನೆ; ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಿಗೆ ಸಂತೋಷಿಸುವಂತಾಗುವುದು. 37  ಈ ವಿಷಯದಲ್ಲಿ, ಬಿತ್ತುವವನು ಒಬ್ಬನು ಕೊಯ್ಯುವವನು ಇನ್ನೊಬ್ಬನು ಎಂಬ ಗಾದೆಯು ನಿಜವಾಗಿದೆ. 38  ನೀವು ಯಾವುದಕ್ಕಾಗಿ ಶ್ರಮಿಸಲಿಲ್ಲವೊ ಅದನ್ನು ಕೊಯ್ಯಲು ನಾನು ನಿಮ್ಮನ್ನು ಕಳುಹಿಸಿದೆನು. ಬೇರೆಯವರು ಶ್ರಮಿಸಿದ್ದಾರೆ ಮತ್ತು ನೀವು ಅವರ ಶ್ರಮದ ಪ್ರಯೋಜನದಲ್ಲಿ ಸೇರಿದ್ದೀರಿ” ಎಂದನು. 39  “ನಾನು ಮಾಡಿದ ಎಲ್ಲ ವಿಷಯಗಳನ್ನು ಅವನು ನನಗೆ ಹೇಳಿದನು” ಎಂದು ಸಾಕ್ಷಿಕೊಟ್ಟ ಆ ಸ್ತ್ರೀಯ ಮಾತಿನ ನಿಮಿತ್ತ ಆ ಪಟ್ಟಣದ ಸಮಾರ್ಯದವರಲ್ಲಿ ಅನೇಕರು ಅವನಲ್ಲಿ ನಂಬಿಕೆಯಿಟ್ಟರು. 40  ಆದುದರಿಂದ ಸಮಾರ್ಯದವರು ಅವನ ಬಳಿಗೆ ಬಂದು ತಮ್ಮೊಂದಿಗೆ ಉಳುಕೊಳ್ಳುವಂತೆ ಅವನನ್ನು ಕೇಳಿಕೊಂಡಾಗ ಅವನು ಎರಡು ದಿವಸ ಅಲ್ಲಿ ಉಳಿದನು. 41  ಇದರಿಂದಾಗಿ ಇನ್ನೂ ಅನೇಕರು ಅವನು ಹೇಳಿದ್ದನ್ನು ನಂಬಿದರು 42  ಮತ್ತು ಅವರು ಆ ಸ್ತ್ರೀಗೆ, “ನಾವು ಇನ್ನು ಮುಂದೆ ನಂಬುವುದು ನಿನ್ನ ಮಾತಿನ ನಿಮಿತ್ತವಲ್ಲ; ನಾವೇ ಕಿವಿಯಾರೆ ಕೇಳಿಸಿಕೊಂಡಿದ್ದೇವೆ ಮತ್ತು ಈ ಮನುಷ್ಯನು ಖಂಡಿತವಾಗಿಯೂ ಲೋಕದ ರಕ್ಷಕನು ಎಂಬುದು ನಮಗೆ ತಿಳಿದಿದೆ” ಎಂದು ಹೇಳತೊಡಗಿದರು. 43  ಎರಡು ದಿವಸಗಳ ಬಳಿಕ ಅವನು ಅಲ್ಲಿಂದ ಗಲಿಲಾಯಕ್ಕೆ ಹೊರಟುಹೋದನು. 44  ಆದರೆ ಒಬ್ಬ ಪ್ರವಾದಿಗೆ ಅವನ ಸ್ವದೇಶದಲ್ಲಿ ಮರ್ಯಾದೆ ಸಿಗುವುದಿಲ್ಲ ಎಂದು ಸ್ವತಃ ಯೇಸುವೇ ಸಾಕ್ಷಿಹೇಳಿದನು. 45  ಆದುದರಿಂದ, ಅವನು ಗಲಿಲಾಯಕ್ಕೆ ಬಂದಾಗ ಗಲಿಲಾಯದವರು ಅವನನ್ನು ಬರಮಾಡಿಕೊಂಡರು, ಏಕೆಂದರೆ ಅವರು ಸಹ ಹಬ್ಬಕ್ಕೆ ಹೋಗಿದ್ದರಿಂದ ಹಬ್ಬದ ಸಮಯದಲ್ಲಿ ಅವನು ಯೆರೂಸಲೇಮಿನಲ್ಲಿ ಮಾಡಿದ್ದೆಲ್ಲವನ್ನು ನೋಡಿದ್ದರು. 46  ಹೀಗಿರಲಾಗಿ, ಅವನು ನೀರನ್ನು ದ್ರಾಕ್ಷಾಮದ್ಯವಾಗಿ ಮಾಡಿದ್ದ ಗಲಿಲಾಯದ ಕಾನಾ ಊರಿಗೆ ಪುನಃ ಬಂದನು. ಅಲ್ಲಿ ಅರಸನ ಅನುಚರನೊಬ್ಬನಿದ್ದನು ಮತ್ತು ಅವನ ಮಗನು ಕಪೆರ್ನೌಮಿನಲ್ಲಿ ಅಸ್ವಸ್ಥನಾಗಿದ್ದನು. 47  ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದಿರುವುದನ್ನು ಆ ಮನುಷ್ಯನು ಕೇಳಿಸಿಕೊಂಡಾಗ ಅವನು ಯೇಸುವಿನ ಬಳಿಗೆ ಹೋಗಿ ತನ್ನ ಮಗನನ್ನು ಗುಣಪಡಿಸುವಂತೆ ಕೇಳಿಕೊಂಡನು; ಏಕೆಂದರೆ ಅವನು ಸಾಯುವ ಸ್ಥಿತಿಯಲ್ಲಿದ್ದನು. 48  ಆದರೆ ಯೇಸು ಅವನಿಗೆ, “ನೀವು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನೋಡಿದ ಹೊರತು ನಂಬುವುದೇ ಇಲ್ಲ” ಎಂದು ಹೇಳಿದನು. 49  ಅರಸನ ಅನುಚರನು ಅವನಿಗೆ, “ಕರ್ತನೇ, ನನ್ನ ಮಗನು ಸಾಯುವುದಕ್ಕೆ ಮುಂಚೆ ನೀನು ಬರಬೇಕು” ಎಂದನು. 50  ಯೇಸು ಅವನಿಗೆ, “ನೀನು ಹೋಗು, ನಿನ್ನ ಮಗನು ಬದುಕುತ್ತಾನೆ” ಎಂದು ಹೇಳಿದನು. ಆ ಮನುಷ್ಯನು ಯೇಸು ತನಗೆ ನುಡಿದ ಮಾತನ್ನು ನಂಬಿ ಹೊರಟುಹೋದನು. 51  ಆದರೆ ಅವನು ಹೋಗುತ್ತಿರುವಾಗಲೇ ಅವನ ಆಳುಗಳು ಅವನನ್ನು ಸಂಧಿಸಿ ಅವನ ಮಗನು ಬದುಕಿಕೊಂಡಿರುವುದಾಗಿ ತಿಳಿಸಿದರು. 52  ಎಷ್ಟು ಹೊತ್ತಿಗೆ ಅವನ ಆರೋಗ್ಯವು ಉತ್ತಮಗೊಂಡಿತೆಂದು ಅವನು ಅವರನ್ನು ವಿಚಾರಿಸಿದಾಗ ಅವರು, “ನಿನ್ನೆ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಜ್ವರವು ಅವನನ್ನು ಬಿಟ್ಟಿತು” ಎಂದರು. 53  ಆದುದರಿಂದ, “ನಿನ್ನ ಮಗನು ಬದುಕುತ್ತಾನೆ” ಎಂದು ಯೇಸು ತನಗೆ ಹೇಳಿದ ಅದೇ ಗಳಿಗೆಯಲ್ಲಿ ಅವನು ವಾಸಿಯಾದನೆಂದು ತಂದೆಗೆ ತಿಳಿದುಬಂದದರಿಂದ ಅವನೂ ಅವನ ಮನೆಯವರೆಲ್ಲರೂ ಯೇಸುವಿನಲ್ಲಿ ನಂಬಿಕೆಯಿಟ್ಟರು. 54  ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಮೇಲೆ ಅವನು ಮಾಡಿದ ಎರಡನೆಯ ಸೂಚಕಕಾರ್ಯ ಇದಾಗಿತ್ತು.

ಪಾದಟಿಪ್ಪಣಿ