ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಯೋಹಾನ 17:1-26

17  ಯೇಸು ಇದನ್ನೆಲ್ಲ ಹೇಳಿದ ಮೇಲೆ ಆಕಾಶದ ಕಡೆಗೆ ಕಣ್ಣೆತ್ತಿ, “ತಂದೆಯೇ, ಗಳಿಗೆಯು ಬಂದಿದೆ; ನಿನ್ನ ಮಗನು ನಿನ್ನನ್ನು ಮಹಿಮೆಪಡಿಸಸಾಧ್ಯವಾಗುವಂತೆ ನಿನ್ನ ಮಗನನ್ನು ಮಹಿಮೆಪಡಿಸು.  ನೀನು ಅವನಿಗೆ ಯಾರಾರನ್ನು ಕೊಟ್ಟಿದ್ದೀಯೋ ಅವರೆಲ್ಲರಿಗೂ ಅವನು ನಿತ್ಯಜೀವವನ್ನು ಕೊಡಲಾಗುವಂತೆ ಅವನಿಗೆ ಎಲ್ಲ ಜನರ ಮೇಲೆ ಅಧಿಕಾರವನ್ನು ಕೊಟ್ಟಿದ್ದೀ.  ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.  ನೀನು ನನಗೆ ಮಾಡಲು ಕೊಟ್ಟಿರುವ ಕೆಲಸವನ್ನು ಪೂರೈಸುವ ಮೂಲಕ ನಾನು ಈ ಭೂಮಿಯಲ್ಲಿ ನಿನ್ನನ್ನು ಮಹಿಮೆಪಡಿಸಿದ್ದೇನೆ.  ಆದುದರಿಂದ ಈಗ ತಂದೆಯೇ, ಲೋಕವು ಉಂಟಾಗುವುದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದ ನನ್ನನ್ನು ನಿನ್ನ ಬಳಿಯಲ್ಲಿ ಮಹಿಮೆಪಡಿಸು.  “ಲೋಕದೊಳಗಿಂದ ನೀನು ನನಗೆ ಕೊಟ್ಟ ಮನುಷ್ಯರಿಗೆ ನಾನು ನಿನ್ನ ಹೆಸರನ್ನು ತಿಳಿಯಪಡಿಸಿದ್ದೇನೆ. ಇವರು ನಿನ್ನವರಾಗಿದ್ದರು; ನೀನು ಇವರನ್ನು ನನಗೆ ಕೊಟ್ಟಿ; ಇವರು ನಿನ್ನ ವಾಕ್ಯವನ್ನು ಕೈಕೊಂಡು ನಡೆದಿದ್ದಾರೆ.  ನೀನು ನನಗೆ ಕೊಟ್ಟಿರುವುದೆಲ್ಲವೂ ನಿನ್ನ ಬಳಿಯಿಂದ ಬಂದದ್ದಾಗಿದೆ ಎಂಬುದನ್ನು ಈಗ ಇವರು ತಿಳಿದುಕೊಂಡಿದ್ದಾರೆ;  ಏಕೆಂದರೆ ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ ಮತ್ತು ಇವರು ಅವುಗಳನ್ನು ಅಂಗೀಕರಿಸಿ ನಾನು ನಿನ್ನ ಪ್ರತಿನಿಧಿಯಾಗಿ ಬಂದಿದ್ದೇನೆ ಎಂಬುದನ್ನು ನಿಶ್ಚಯವಾಗಿ ತಿಳಿದಿದ್ದಾರೆ; ಮತ್ತು ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂಬುದನ್ನು ಇವರು ನಂಬಿದ್ದಾರೆ.  ನಾನು ಇವರಿಗೋಸ್ಕರ ಕೇಳಿಕೊಳ್ಳುತ್ತೇನೆ; ನಾನು ಲೋಕಕ್ಕೋಸ್ಕರ ಕೇಳಿಕೊಳ್ಳುವುದಿಲ್ಲ, ಬದಲಿಗೆ ನೀನು ನನಗೆ ಕೊಟ್ಟಿರುವವರಿಗೋಸ್ಕರ ಕೇಳಿಕೊಳ್ಳುತ್ತೇನೆ; ಏಕೆಂದರೆ ಇವರು ನಿನ್ನವರಾಗಿದ್ದಾರೆ 10  ಮತ್ತು ನನ್ನದೆಲ್ಲವೂ ನಿನ್ನದು, ನಿನ್ನದೆಲ್ಲವೂ ನನ್ನದು; ನಾನು ಇವರ ನಡುವೆ ಮಹಿಮೆಪಡಿಸಲ್ಪಟ್ಟಿದ್ದೇನೆ. 11  “ಇದಲ್ಲದೆ ಇನ್ನು ಮೇಲೆ ನಾನು ಲೋಕದಲ್ಲಿ ಇರುವುದಿಲ್ಲ, ಆದರೆ ಇವರು ಲೋಕದಲ್ಲಿ ಇರುತ್ತಾರೆ; ನಾನು ನಿನ್ನ ಬಳಿಗೆ ಬರುತ್ತಿದ್ದೇನೆ. ಪವಿತ್ರನಾದ ತಂದೆಯೇ, ನೀನು ನನಗೆ ಕೊಟ್ಟಿರುವ ನಿನ್ನ ಸ್ವಂತ ಹೆಸರಿನ ನಿಮಿತ್ತವಾಗಿ ಇವರನ್ನು ಕಾಯಿ; ಹೀಗೆ ನಾವು ಒಂದಾಗಿರುವ ಪ್ರಕಾರ ಇವರೂ ಒಂದಾಗಿರುವಂತಾಗುವುದು. 12  ನಾನು ಇವರೊಂದಿಗಿದ್ದಾಗ ನೀನು ನನಗೆ ಕೊಟ್ಟಿರುವ ನಿನ್ನ ಸ್ವಂತ ಹೆಸರಿಗೋಸ್ಕರ ಇವರನ್ನು ಕಾಯುತ್ತಿದ್ದೆ; ನಾನು ಇವರನ್ನು ಕಾಪಾಡಿದ್ದೇನೆ ಮತ್ತು ಶಾಸ್ತ್ರವಚನವು ನೆರವೇರುವಂತೆ ನಾಶನದ ಪುತ್ರನೇ ಹೊರತು ಇವರಲ್ಲಿ ಒಬ್ಬನೂ ನಾಶವಾಗಲಿಲ್ಲ. 13  ಆದರೆ ಈಗ ನಾನು ನಿನ್ನ ಬಳಿಗೆ ಬರುತ್ತಿದ್ದೇನೆ; ಇವರಲ್ಲಿ ನನ್ನ ಸಂತೋಷವು ಸಂಪೂರ್ಣವಾಗಿರುವಂತೆ ನಾನು ಲೋಕದಲ್ಲಿ ಈ ಮಾತುಗಳನ್ನು ಹೇಳುತ್ತಿದ್ದೇನೆ. 14  ನಾನು ಇವರಿಗೆ ನಿನ್ನ ವಾಕ್ಯವನ್ನು ಕೊಟ್ಟಿದ್ದೇನೆ, ಆದರೆ ನಾನು ಲೋಕದ ಭಾಗವಾಗಿಲ್ಲದ ಪ್ರಕಾರ ಇವರೂ ಲೋಕದ ಭಾಗವಾಗಿಲ್ಲದ ಕಾರಣ ಲೋಕವು ಇವರನ್ನು ದ್ವೇಷಿಸಿದೆ. 15  “ಇವರನ್ನು ಲೋಕದಿಂದ ತೆಗೆದುಬಿಡುವಂತೆ ನಾನು ಕೇಳಿಕೊಳ್ಳದೆ ಕೆಡುಕನಿಂದ ಕಾಪಾಡುವಂತೆ ಕೇಳಿಕೊಳ್ಳುತ್ತೇನೆ. 16  ನಾನು ಲೋಕದ ಭಾಗವಾಗಿಲ್ಲದ ಪ್ರಕಾರ ಇವರೂ ಲೋಕದ ಭಾಗವಾಗಿಲ್ಲ. 17  ಇವರನ್ನು ಸತ್ಯದ ಮೂಲಕ ಪವಿತ್ರೀಕರಿಸು; ನಿನ್ನ ವಾಕ್ಯವೇ ಸತ್ಯವು. 18  ನೀನು ನನ್ನನ್ನು ಲೋಕಕ್ಕೆ ಕಳುಹಿಸಿದಂತೆಯೇ ನಾನು ಸಹ ಇವರನ್ನು ಲೋಕಕ್ಕೆ ಕಳುಹಿಸಿದೆನು. 19  ಸತ್ಯದ ಮೂಲಕ ಇವರು ಸಹ ಪವಿತ್ರೀಕರಿಸಲ್ಪಡುವಂತೆ ಇವರ ಪರವಾಗಿ ನಾನು ನನ್ನನ್ನೇ ಪವಿತ್ರೀಕರಿಸಿಕೊಳ್ಳುತ್ತಿದ್ದೇನೆ. 20  “ನಾನು ಇವರಿಗಾಗಿ ಮಾತ್ರವಲ್ಲದೆ ಇವರ ಮಾತುಗಳನ್ನು ಕೇಳಿ ನನ್ನಲ್ಲಿ ನಂಬಿಕೆಯನ್ನಿಡುವವರಿಗೋಸ್ಕರವೂ ಕೇಳಿಕೊಳ್ಳುತ್ತೇನೆ; 21  ತಂದೆಯೇ, ನೀನೇ ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂಬುದನ್ನು ಲೋಕವು ನಂಬುವುದಕ್ಕಾಗಿ ಇವರೆಲ್ಲರೂ ಒಂದಾಗಿರಬೇಕೆಂದೂ ನೀನು ನನ್ನೊಂದಿಗೆ ಮತ್ತು ನಾನು ನಿನ್ನೊಂದಿಗೆ ಐಕ್ಯವಾಗಿರುವಂತೆ ಇವರು ಸಹ ನಮ್ಮೊಂದಿಗೆ ಐಕ್ಯವಾಗಿರಬೇಕೆಂದೂ ಕೇಳಿಕೊಳ್ಳುತ್ತೇನೆ. 22  ಮಾತ್ರವಲ್ಲದೆ ನಾವು ಒಂದಾಗಿರುವಂತೆ ಇವರೂ ಒಂದಾಗಿರಲಿಕ್ಕಾಗಿ ನೀನು ನನಗೆ ಕೊಟ್ಟಿರುವ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ. 23  ನಾನು ಇವರಲ್ಲಿಯೂ ನೀನು ನನ್ನಲ್ಲಿಯೂ ಐಕ್ಯವಾಗಿರುವಂತೆ ಇವರೂ ಐಕ್ಯದಲ್ಲಿ ಪರಿಪೂರ್ಣರಾಗಿರಲಿ. ಹೀಗೆ ನೀನು ನನ್ನನ್ನು ಕಳುಹಿಸಿದ್ದೀ ಎಂದೂ ನೀನು ನನ್ನನ್ನು ಪ್ರೀತಿಸುವಂತೆಯೇ ಇವರನ್ನೂ ಪ್ರೀತಿಸುತ್ತೀ ಎಂದೂ ಲೋಕವು ತಿಳಿದುಕೊಳ್ಳುವುದು. 24  ತಂದೆಯೇ, ನೀನು ನನಗೆ ಯಾರನ್ನು ಕೊಟ್ಟಿದ್ದೀಯೋ ಅವರು ನಾನಿರುವಲ್ಲಿಯೇ ನನ್ನೊಂದಿಗೆ ಇದ್ದುಕೊಂಡು, ಲೋಕಾದಿಗಿಂತ ಮುಂಚೆ ನೀನು ನನ್ನನ್ನು ಪ್ರೀತಿಸಿ ನನಗೆ ಕೊಟ್ಟಿರುವ ನನ್ನ ಮಹಿಮೆಯನ್ನು ಇವರು ನೋಡುವಂತೆ ಬಯಸುತ್ತೇನೆ. 25  ನೀತಿವಂತನಾದ ತಂದೆಯೇ, ಲೋಕವು ನಿನ್ನನ್ನು ತಿಳಿದುಕೊಂಡಿರುವುದಿಲ್ಲ; ಆದರೆ ನಾನು ನಿನ್ನನ್ನು ತಿಳಿದುಕೊಂಡಿದ್ದೇನೆ ಮತ್ತು ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂಬುದನ್ನು ಇವರು ತಿಳಿದುಕೊಂಡಿದ್ದಾರೆ. 26  ನೀನು ನನಗೆ ತೋರಿಸಿದ ಪ್ರೀತಿಯು ಇವರಲ್ಲಿ ಇರಬೇಕೆಂದೂ ನಾನು ಇವರಲ್ಲಿ ಐಕ್ಯವಾಗಿರಬೇಕೆಂದೂ ನಾನು ಇವರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದ್ದೇನೆ ಮತ್ತು ಇನ್ನೂ ತಿಳಿಯಪಡಿಸುವೆನು” ಎಂದು ಹೇಳಿದನು.

ಪಾದಟಿಪ್ಪಣಿ