ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಯೋಹಾನ 15:1-27

15  “ನಾನೇ ನಿಜವಾದ ದ್ರಾಕ್ಷಿಯ ಬಳ್ಳಿ; ನನ್ನ ತಂದೆ ವ್ಯವಸಾಯಗಾರನು.  ನನ್ನಲ್ಲಿದ್ದುಕೊಂಡು ಫಲವನ್ನು ಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ ಮತ್ತು ಫಲವನ್ನು ಕೊಡುವ ಪ್ರತಿಯೊಂದು ಕೊಂಬೆಯು ಇನ್ನೂ ಹೆಚ್ಚು ಫಲವನ್ನು ಕೊಡುವಂತೆ ಅದನ್ನು ಹಸನುಗೊಳಿಸುತ್ತಾನೆ.  ನಾನು ನಿಮಗೆ ಆಡಿದ ಮಾತುಗಳಿಂದಾಗಿ ನೀವು ಈಗಾಗಲೇ ಶುದ್ಧರಾಗಿದ್ದೀರಿ.  ನನ್ನೊಂದಿಗೆ ಐಕ್ಯರಾಗಿ ಉಳಿಯಿರಿ ಮತ್ತು ನಾನು ನಿಮ್ಮೊಂದಿಗೆ ಐಕ್ಯನಾಗಿ ಉಳಿಯುತ್ತೇನೆ. ಕೊಂಬೆಯು ದ್ರಾಕ್ಷಿಯ ಬಳ್ಳಿಯಲ್ಲಿ ಉಳಿಯದಿದ್ದರೆ ತನ್ನಷ್ಟಕ್ಕೆ ತಾನೇ ಫಲಕೊಡಲಾರದೆ ಇರುವ ಪ್ರಕಾರವೇ ನೀವು ನನ್ನೊಂದಿಗೆ ಐಕ್ಯವಾಗಿ ಉಳಿಯದಿದ್ದರೆ ಫಲಕೊಡಲಾರಿರಿ.  ನಾನೇ ದ್ರಾಕ್ಷಿಯ ಬಳ್ಳಿ, ನೀವು ಕೊಂಬೆಗಳು. ಒಬ್ಬನು ನನ್ನೊಂದಿಗೂ ನಾನು ಅವನೊಂದಿಗೂ ಐಕ್ಯವಾಗಿರುವುದಾದರೆ ಅವನು ಬಹಳ ಫಲವನ್ನು ಕೊಡುವನು; ಏಕೆಂದರೆ ನನ್ನ ಹೊರತು ನೀವು ಏನನ್ನೂ ಮಾಡಲಾರಿರಿ.  ಒಬ್ಬನು ನನ್ನೊಂದಿಗೆ ಐಕ್ಯವಾಗಿ ಉಳಿಯದಿದ್ದರೆ ಅವನು ಒಂದು ಕೊಂಬೆಯಂತೆ ಹೊರಗೆ ಎಸೆಯಲ್ಪಟ್ಟು ಒಣಗಿಹೋಗುತ್ತಾನೆ; ಜನರು ಆ ಕೊಂಬೆಗಳನ್ನು ಒಟ್ಟುಗೂಡಿಸಿ ಬೆಂಕಿಗೆ ಹಾಕುತ್ತಾರೆ ಮತ್ತು ಅವು ಸುಟ್ಟುಹೋಗುತ್ತವೆ.  ನೀವು ನನ್ನೊಂದಿಗೆ ಐಕ್ಯರಾಗಿ ಉಳಿಯುವುದಾದರೆ ಮತ್ತು ನನ್ನ ಮಾತುಗಳು ನಿಮ್ಮಲ್ಲಿ ನೆಲೆಗೊಂಡಿರುವುದಾದರೆ ನೀವು ಬಯಸುವ ಯಾವುದನ್ನೇ ಬೇಡಿಕೊಂಡರೂ ಅದು ನಿಮಗೆ ದೊರೆಯುವುದು.  ನೀವು ಬಹಳ ಫಲವನ್ನು ಕೊಡುತ್ತಾ ನನ್ನ ಶಿಷ್ಯರೆಂಬುದನ್ನು ರುಜುಪಡಿಸುತ್ತಾ ಇರುವಲ್ಲಿ, ನನ್ನ ತಂದೆಯು ಮಹಿಮೆಗೊಳಿಸಲ್ಪಡುತ್ತಾನೆ.  ತಂದೆಯು ನನ್ನನ್ನು ಪ್ರೀತಿಸಿರುವಂತೆಯೇ ಮತ್ತು ನಾನು ನಿಮ್ಮನ್ನು ಪ್ರೀತಿಸಿರುವಂತೆಯೇ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ. 10  ನಾನು ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ಉಳಿದಿರುವ ಪ್ರಕಾರವೇ ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ಉಳಿಯುವಿರಿ. 11  “ನನ್ನ ಆನಂದವು ನಿಮ್ಮಲ್ಲಿ ಇರುವಂತೆಯೂ ನಿಮ್ಮ ಆನಂದವು ಪೂರ್ಣಗೊಳ್ಳುವಂತೆಯೂ ಈ ವಿಷಯಗಳನ್ನು ನಾನು ನಿಮಗೆ ತಿಳಿಸಿದ್ದೇನೆ. 12  ನಾನು ನಿಮ್ಮನ್ನು ಪ್ರೀತಿಸಿದ ಪ್ರಕಾರವೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದು ನನ್ನ ಆಜ್ಞೆಯಾಗಿದೆ. 13  ಒಬ್ಬನು ತನ್ನ ಸ್ನೇಹಿತರಿಗೋಸ್ಕರ ತನ್ನ ಪ್ರಾಣವನ್ನೇ ಒಪ್ಪಿಸಿಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾರಲ್ಲಿಯೂ ಇಲ್ಲ. 14  ನಾನು ಆಜ್ಞಾಪಿಸುತ್ತಿರುವುದನ್ನು ನೀವು ಮಾಡುವುದಾದರೆ ನೀವು ನನ್ನ ಸ್ನೇಹಿತರು. 15  ನಾನು ಇನ್ನೆಂದೂ ನಿಮ್ಮನ್ನು ಆಳುಗಳೆಂದು ಕರೆಯುವುದಿಲ್ಲ, ಏಕೆಂದರೆ ಯಜಮಾನನು ಏನು ಮಾಡುತ್ತಾನೋ ಅದು ಆಳಿಗೆ ತಿಳಿದಿರುವುದಿಲ್ಲ. ಆದರೆ ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ, ಏಕೆಂದರೆ ತಂದೆಯಿಂದ ನಾನು ಕೇಳಿಸಿಕೊಂಡಿರುವ ಎಲ್ಲ ವಿಷಯಗಳನ್ನು ನಿಮಗೆ ತಿಳಿಯಪಡಿಸಿದ್ದೇನೆ. 16  ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ, ನಾನು ನಿಮ್ಮನ್ನು ಆರಿಸಿಕೊಂಡಿದ್ದೇನೆ; ನೀವು ಹೊರಟುಹೋಗಿ ಫಲವನ್ನು ಕೊಡುತ್ತಾ ಇರಬೇಕೆಂದೂ ನಿಮ್ಮ ಫಲವು ಉಳಿಯಬೇಕೆಂದೂ ನಾನು ನಿಮ್ಮನ್ನು ನೇಮಿಸಿದ್ದೇನೆ. ನೀವು ನನ್ನ ಹೆಸರಿನಲ್ಲಿ ತಂದೆಯ ಬಳಿ ಏನನ್ನೇ ಬೇಡಿಕೊಂಡರೂ ಆತನು ಅದನ್ನು ನಿಮಗೆ ಕೊಡುವನು. 17  “ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ನಾನು ಈ ವಿಷಯಗಳನ್ನು ನಿಮಗೆ ಆಜ್ಞಾಪಿಸುತ್ತೇನೆ. 18  ಲೋಕವು ನಿಮ್ಮನ್ನು ದ್ವೇಷಿಸುವುದಾದರೆ ಅದು ನಿಮ್ಮನ್ನು ದ್ವೇಷಿಸುವುದಕ್ಕಿಂತ ಮುಂಚೆ ನನ್ನನ್ನು ದ್ವೇಷಿಸಿದೆ ಎಂಬುದು ನಿಮಗೆ ಗೊತ್ತಿದೆ. 19  ನೀವು ಲೋಕದ ಭಾಗವಾಗಿರುತ್ತಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಪ್ರೀತಿಸುತ್ತಿತ್ತು. ಆದರೆ ನೀವು ಲೋಕದ ಭಾಗವಾಗಿರದ ಕಾರಣ ಮತ್ತು ನಾನು ನಿಮ್ಮನ್ನು ಈ ಲೋಕದಿಂದ ಆರಿಸಿಕೊಂಡಿರುವ ಕಾರಣ ಲೋಕವು ನಿಮ್ಮನ್ನು ದ್ವೇಷಿಸುತ್ತದೆ. 20  ಒಬ್ಬ ಆಳು ತನ್ನ ಯಜಮಾನನಿಗಿಂತ ದೊಡ್ಡವನಲ್ಲ ಎಂದು ನಾನು ನಿಮಗೆ ಹೇಳಿದ ಮಾತನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿರುವಲ್ಲಿ ನಿಮ್ಮನ್ನೂ ಹಿಂಸೆಪಡಿಸುವರು; ಅವರು ನನ್ನ ಮಾತುಗಳನ್ನು ಕೈಕೊಂಡು ನಡೆದಿರುವಲ್ಲಿ ನಿಮ್ಮ ಮಾತುಗಳನ್ನೂ ಕೈಕೊಂಡು ನಡೆಯುವರು. 21  ಆದರೆ ಅವರು ನನ್ನನ್ನು ಕಳುಹಿಸಿಕೊಟ್ಟಾತನನ್ನು ತಿಳಿಯದ ಕಾರಣ ನನ್ನ ಹೆಸರಿನ ನಿಮಿತ್ತ ನಿಮ್ಮ ವಿರುದ್ಧ ಇವುಗಳನ್ನೆಲ್ಲ ಮಾಡುವರು. 22  ನಾನು ಬಂದು ಅವರೊಂದಿಗೆ ಮಾತಾಡದೇ ಇರುತ್ತಿದ್ದಲ್ಲಿ ಅವರಲ್ಲಿ ಯಾವುದೇ ಪಾಪವಿರುತ್ತಿರಲಿಲ್ಲ; ಆದರೆ ಈಗ ತಮ್ಮ ಪಾಪಕ್ಕೆ ಅವರು ಯಾವುದೇ ನೆವವನ್ನು ಕೊಡಲಾರರು. 23  ನನ್ನನ್ನು ದ್ವೇಷಿಸುವವನು ನನ್ನ ತಂದೆಯನ್ನೂ ದ್ವೇಷಿಸುವವನಾಗಿದ್ದಾನೆ. 24  ಬೇರೆ ಯಾರೂ ಮಾಡದ ಕಾರ್ಯಗಳನ್ನು ನಾನು ಅವರ ಮಧ್ಯೆ ನಡಿಸದಿರುತ್ತಿದ್ದರೆ ಅವರಲ್ಲಿ ಯಾವುದೇ ಪಾಪವಿರುತ್ತಿರಲಿಲ್ಲ; ಈಗ ಅವರು ನನ್ನ ಕಾರ್ಯಗಳನ್ನು ನೋಡಿದ್ದಾರೆ, ಆದರೂ ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸಿದ್ದಾರೆ. 25  ಹೀಗೆ ‘ಯಾವುದೇ ಕಾರಣವಿಲ್ಲದೆ ಅವರು ನನ್ನನ್ನು ದ್ವೇಷಿಸಿದರು’ ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನೆರವೇರುವಂತೆ ಇದೆಲ್ಲವೂ ಆಯಿತು. 26  ನಾನು ತಂದೆಯಿಂದ ನಿಮಗೆ ಕಳುಹಿಸುವ ಸಹಾಯಕ,* ಅಂದರೆ ತಂದೆಯಿಂದ ಹೊರಡುವ ಸತ್ಯದ ಪವಿತ್ರಾತ್ಮ ಬಂದಾಗ ಅವನು* ನನ್ನ ಕುರಿತು ಸಾಕ್ಷಿಹೇಳುವನು; 27  ನೀವು ಆರಂಭದಿಂದಲೂ ನನ್ನ ಸಂಗಡ ಇದ್ದುದರಿಂದ ನೀವೂ ಸಾಕ್ಷಿನೀಡಬೇಕು.

ಪಾದಟಿಪ್ಪಣಿ

ಯೋಹಾ 15:26 14:16ರ ಪಾದಟಿಪ್ಪಣಿಯನ್ನು ನೋಡಿ.
ಯೋಹಾ 15:26 14:16ರ ಪಾದಟಿಪ್ಪಣಿಯನ್ನು ನೋಡಿ.