ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೋಹಾನ 10:1-42

10  “ನಿಮಗೆ ನಿಜನಿಜವಾಗಿ ಹೇಳು​ತ್ತೇನೆ, ಕುರಿಹಟ್ಟಿಯೊಳಗೆ ಬಾಗಿಲಿನಿಂದ ಬಾರದೆ ಬೇರೊಂದು ಸ್ಥಳದಿಂದ ಹತ್ತಿಬರುವವನು ಕಳ್ಳನೂ ಸುಲಿಗೆ​ಮಾಡುವವನೂ ಆಗಿದ್ದಾನೆ.  ಆದರೆ ಬಾಗಿಲಿನಿಂದ ಒಳಗೆ ಬರುವವನು ಆ ಕುರಿಗಳ ಕುರುಬನಾಗಿದ್ದಾನೆ.  ಬಾಗಿಲು ಕಾಯುವವನು ಇವನಿಗೆ ಬಾಗಿಲನ್ನು ತೆರೆಯುತ್ತಾನೆ ಮತ್ತು ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ; ಅವನು ತನ್ನ ಸ್ವಂತ ಕುರಿಗಳನ್ನು ಹೆಸರೆತ್ತಿ ಕರೆಯುತ್ತಾನೆ ಮತ್ತು ಅವುಗಳನ್ನು ಹೊರಗೆ ನಡಿಸಿಕೊಂಡು ಹೋಗುತ್ತಾನೆ.  ಅವನು ತನ್ನ ಎಲ್ಲ ಕುರಿಗಳನ್ನು ಹೊರಗೆ ತಂದ ಬಳಿಕ ತಾನು ಅವುಗಳ ಮುಂದೆ ಹೋಗುತ್ತಾನೆ ಮತ್ತು ಕುರಿಗಳಿಗೆ ಅವನ ಸ್ವರವು ತಿಳಿದಿರುವುದರಿಂದ ಅವು ಅವನ ಹಿಂದೆ ಹೋಗುತ್ತವೆ.  ಅವು ಎಂದೂ ಒಬ್ಬ ಅಪರಿಚಿತನ ಹಿಂದೆ ಹೋಗದೆ ಅವನಿಂದ ದೂರ ಓಡಿಹೋಗುತ್ತವೆ; ಏಕೆಂದರೆ ಅವುಗಳಿಗೆ ಅಪರಿಚಿತರ ಸ್ವರವು ತಿಳಿದಿರುವುದಿಲ್ಲ” ಎಂದು ಹೇಳಿದನು.  ಯೇಸು ಅವರಿಗೆ ಈ ಉಪಮೆಯನ್ನು ಹೇಳಿದನು; ಆದರೆ ಅವನು ಹೇಳುತ್ತಿದ್ದ ವಿಷಯಗಳ ಅರ್ಥವೇನೆಂದು ಅವರು ಗ್ರಹಿಸಲಿಲ್ಲ.  ಆದುದರಿಂದ ಯೇಸು ಪುನಃ ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರಿಗಳಿಗೆ ನಾನೇ ಬಾಗಿಲಾಗಿದ್ದೇನೆ.  ನನ್ನ ಹೆಸರನ್ನು ಹೇಳಿಕೊಂಡು ಬಂದವರೆಲ್ಲರು ಕಳ್ಳರೂ ಸುಲಿಗೆಮಾಡುವವರೂ ಆಗಿದ್ದಾರೆ; ಆದರೆ ಕುರಿಗಳು ಅವರಿಗೆ ಕಿವಿಗೊಟ್ಟಿರುವುದಿಲ್ಲ.  ನಾನೇ ಬಾಗಿಲಾಗಿದ್ದೇನೆ; ನನ್ನ ಮುಖಾಂತರ ಒಳಗೆ ಪ್ರವೇಶಿಸುವವನು ರಕ್ಷಿಸಲ್ಪಟ್ಟು ಒಳಗೆ ಹೋಗುವನು ಮತ್ತು ಹೊರಗೆ ಬರುವನು ಹಾಗೂ ಮೇವನ್ನು ಕಂಡುಕೊಳ್ಳುವನು. 10  ಕಳ್ಳನು ಕದ್ದುಕೊಳ್ಳುವುದಕ್ಕೂ ಕೊಲ್ಲುವುದಕ್ಕೂ ನಾಶಮಾಡುವುದಕ್ಕೂ ಬರುತ್ತಾನೆಯೇ ಹೊರತು ಬೇರೆ ಯಾವುದಕ್ಕೂ ಬರುವುದಿಲ್ಲ. ನಾನಾದರೋ ಅವು ಜೀವವನ್ನು ಪಡೆಯುವಂತೆ ಮತ್ತು ಬಹುಕಾಲ ಬದುಕುವಂತೆ ಬಂದಿದ್ದೇನೆ. 11  ನಾನೇ ಒಳ್ಳೆಯ ಕುರುಬನು; ಒಳ್ಳೆಯ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಒಪ್ಪಿಸಿಕೊಡುತ್ತಾನೆ. 12  ಆದರೆ ಕುರುಬನಲ್ಲದ ಮತ್ತು ಕುರಿಗಳ ಒಡೆಯನಾಗಿರದ ಕೂಲಿಯಾಳು ತೋಳ ಬರುವುದನ್ನು ಕಂಡು ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ​—⁠ಮತ್ತು ತೋಳವು ಅವುಗಳನ್ನು ಹಿಡಿದು ಹಿಂಡನ್ನು ಚೆಲ್ಲಾಪಿಲ್ಲಿಮಾಡಿಬಿಡುತ್ತದೆ​—⁠ 13  ಏಕೆಂದರೆ ಅವನು ಒಬ್ಬ ಕೂಲಿಯಾಳು ಮತ್ತು ಅವನಿಗೆ ಕುರಿಗಳ ಬಗ್ಗೆ ಚಿಂತೆಯಿಲ್ಲ. 14  ನಾನೇ ಒಳ್ಳೆಯ ಕುರುಬನು; ತಂದೆಯು ನನ್ನನ್ನು ತಿಳಿದಿದ್ದು ನಾನು ತಂದೆಯನ್ನು ತಿಳಿದಿರುವಂತೆಯೇ 15  ನಾನು ನನ್ನ ಕುರಿಗಳನ್ನು ತಿಳಿದಿದ್ದೇನೆ ಮತ್ತು ನನ್ನ ಕುರಿಗಳು ನನ್ನನ್ನು ತಿಳಿದಿವೆ; ನಾನು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಒಪ್ಪಿಸಿಕೊಡುತ್ತೇನೆ. 16  “ಇದಲ್ಲದೆ ಈ ಹಟ್ಟಿಗೆ ಸೇರದಿರುವ ಬೇರೆ ಕುರಿಗಳೂ ನನಗಿವೆ; ಅವುಗಳನ್ನೂ ನಾನು ತರಬೇಕು, ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಅವು ಒಂದೇ ಹಿಂಡಾಗು​ವವು, ಒಬ್ಬನೇ ಕುರುಬನಿರುವನು. 17  ನಾನು ನನ್ನ ಪ್ರಾಣವನ್ನು ಪುನಃ ಪಡೆದುಕೊಳ್ಳುವಂತೆ ಅದನ್ನು ಒಪ್ಪಿಸಿಕೊಡುವುದರಿಂದ ತಂದೆಯು ನನ್ನನ್ನು ಪ್ರೀತಿಸುತ್ತಾನೆ. 18  ನನ್ನ ಪ್ರಾಣವನ್ನು ಯಾವ ​ಮಾನವನೂ ನನ್ನಿಂದ ತೆಗೆದುಕೊಂಡಿಲ್ಲ, ಅದನ್ನು ಸ್ವಪ್ರೇರಣೆಯಿಂದ ಒಪ್ಪಿಸಿಕೊಡುತ್ತೇನೆ. ಅದನ್ನು ಒಪ್ಪಿಸಿಕೊಡಲು ನನಗೆ ಅಧಿಕಾರವಿದೆ ಮತ್ತು ಅದನ್ನು ಪುನಃ ಪಡೆದುಕೊಳ್ಳಲೂ ನನಗೆ ಅಧಿಕಾರವಿದೆ. ಈ ಆಜ್ಞೆಯನ್ನು ನಾನು ನನ್ನ ತಂದೆಯಿಂದ ಪಡೆದುಕೊಂಡಿದ್ದೇನೆ” ಎಂದು ಹೇಳಿದನು. 19  ಈ ಮಾತುಗಳ ನಿಮಿತ್ತವಾಗಿ ಪುನಃ ಯೆಹೂದ್ಯರ ಮಧ್ಯೆ ವಿಭಾಗ ಉಂಟಾಯಿತು. 20  ಅವರಲ್ಲಿ ಅನೇಕರು, “ಅವನಿಗೆ ದೆವ್ವಹಿಡಿದಿದೆ ಮತ್ತು ಹುಚ್ಚುಹಿಡಿದಿದೆ. ನೀವು ಯಾಕೆ ಅವನಿಗೆ ಕಿವಿಗೊಡುತ್ತೀರಿ?” ಎಂದು ಹೇಳುತ್ತಿದ್ದರು. 21  ಇತರರು, “ಇವು ದೆವ್ವಹಿಡಿದಿರುವ ಒಬ್ಬ ಮನುಷ್ಯನ ಮಾತುಗಳಲ್ಲ. ಒಂದು ದೆವ್ವವು ಕುರುಡರ ಕಣ್ಣುಗಳನ್ನು ತೆರೆಯಲಾರದು, ಅಲ್ಲವೆ?” ಎನ್ನುತ್ತಿದ್ದರು. 22  ಆ ಸಮಯದಲ್ಲಿ ಯೆರೂಸ​ಲೇಮಿನಲ್ಲಿ ದೇವಾಲಯದ ಪ್ರತಿಷ್ಠಾಪನೆಯ ಹಬ್ಬವು ನಡೆಯಿತು. ಅದು ಚಳಿಗಾಲವಾಗಿತ್ತು 23  ಮತ್ತು ಯೇಸು ದೇವಾಲಯದಲ್ಲಿ ಸೊಲೊಮೋನನ ಕಂಬ​ಸಾಲುಗಳ ಮಧ್ಯೆ ನಡೆಯುತ್ತಾ ಇದ್ದನು. 24  ಆಗ ಯೆಹೂದ್ಯರು ಅವನನ್ನು ಸುತ್ತು​ವರಿದು ಅವನಿಗೆ, “ಇನ್ನೆಷ್ಟು ಸಮಯ ನೀನು ನಮ್ಮನ್ನು ಅನಿಶ್ಚಿತ ಸ್ಥಿತಿಯಲ್ಲಿರಿಸುವಿ? ನೀನು ಕ್ರಿಸ್ತನಾಗಿರುವುದಾದರೆ ನಮಗೆ ನೇರವಾಗಿ ಹೇಳು” ಎಂದು ಹೇಳತೊಡಗಿದರು. 25  ಯೇಸು ಅವರಿಗೆ, “ನಾನು ನಿಮಗೆ ಹೇಳಿದೆ, ಆದರೆ ನೀವು ಇನ್ನೂ ನಂಬುತ್ತಿಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುತ್ತಿರುವ ಕ್ರಿಯೆಗಳೇ ನನ್ನ ಕುರಿತು ಸಾಕ್ಷಿಹೇಳುತ್ತವೆ. 26  ಆದರೆ ನೀವು ನನ್ನ ಕುರಿಗಳಲ್ಲದೇ ಇರುವ ಕಾರಣ ನಂಬುತ್ತಿಲ್ಲ. 27  ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ತಿಳಿದಿದ್ದೇನೆ ಮತ್ತು ಅವು ನನ್ನ ಹಿಂದೆ ಬರುತ್ತವೆ. 28  ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ; ಅವು ಎಂದೂ ನಾಶವಾಗುವುದಿಲ್ಲ; ಯಾವನೂ ಅವುಗಳನ್ನು ನನ್ನ ಕೈಯಿಂದ ಕಸಿದುಕೊಳ್ಳುವುದಿಲ್ಲ. 29  ನನ್ನ ತಂದೆಯು ನನಗೆ ಕೊಟ್ಟಿರುವಂಥದ್ದು ಬೇರೆಲ್ಲವುಗಳಿಗಿಂತ ದೊಡ್ಡದು ಮತ್ತು ಯಾವನೂ ಅದನ್ನು ತಂದೆಯ ಕೈಯಿಂದ ಕಸಿದುಕೊಳ್ಳಲಾರನು. 30  ನಾನೂ ತಂದೆಯೂ ಒಂದಾಗಿದ್ದೇವೆ”* ಎಂದು ಉತ್ತರಿಸಿದನು. 31  ಯೆಹೂದ್ಯರು ಅವನಿಗೆ ಕಲ್ಲೆಸೆಯಲಿಕ್ಕಾಗಿ ಪುನಃ ಕಲ್ಲುಗಳನ್ನು ಎತ್ತಿಕೊಂಡರು. 32  ಆಗ ಯೇಸು ಅವರಿಗೆ, “ತಂದೆಯ ಕಡೆಯಿಂದ ನಾನು ನಿಮಗೆ ಅನೇಕ ಒಳ್ಳೆಯ ಕ್ರಿಯೆಗಳನ್ನು ತೋರಿಸಿದೆನು. ಇವುಗಳಲ್ಲಿ ಯಾವ ಕ್ರಿಯೆಗೋಸ್ಕರ ನೀವು ನನ್ನ ಮೇಲೆ ಕಲ್ಲೆಸೆಯುತ್ತೀರಿ?” ಎಂದು ಕೇಳಿದನು. 33  ಯೆಹೂದ್ಯರು ಅವನಿಗೆ, “ಒಳ್ಳೆಯ ಕ್ರಿಯೆಗಾಗಿ ಅಲ್ಲ, ದೇವ​ದೂಷಣೆ ಮಾಡಿದ್ದಕ್ಕಾಗಿಯೂ ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ಒಬ್ಬ ದೇವರನ್ನಾಗಿ ಮಾಡಿಕೊಂಡದ್ದಕ್ಕಾಗಿಯೂ ನಿನಗೆ ಕಲ್ಲೆಸೆಯುತ್ತೇವೆ” ಎಂದು ಉತ್ತರಕೊಟ್ಟರು. 34  ಯೇಸು ಅವರಿಗೆ, “ನಿಮ್ಮ ಧರ್ಮಶಾಸ್ತ್ರದಲ್ಲಿ ‘ “ನೀವು ದೇವತೆಗಳೇ” ಎಂದು ನಾನು ಹೇಳಿದೆ’ ಎಂದು ಬರೆದಿದೆಯಲ್ಲವೆ? 35  ಶಾಸ್ತ್ರಗ್ರಂಥವು ಸುಳ್ಳಾಗಲು ಸಾಧ್ಯವಿಲ್ಲವಲ್ಲಾ; ಯಾರ ವಿರುದ್ಧವಾಗಿ ದೇವರ ವಾಕ್ಯವು ಬಂತೋ ಅವರನ್ನೇ ಆತನು ‘ದೇವತೆಗಳು’ ಎಂದು ಕರೆದಿರುವುದಾದರೆ 36  ತಂದೆಯು ಪವಿತ್ರೀಕರಿಸಿ ಈ ಲೋಕಕ್ಕೆ ಕಳುಹಿಸಿಕೊಟ್ಟವನಾದ ನಾನು ದೇವರ ಮಗನೆಂದು ಹೇಳಿದ್ದಕ್ಕಾಗಿ ನನಗೆ ನೀವು ‘ದೇವ​ದೂಷಣೆ ಮಾಡುತ್ತೀ’ ಎಂದು ಹೇಳುತ್ತೀರೊ? 37  ನಾನು ನನ್ನ ತಂದೆಯ ಕ್ರಿಯೆಗಳನ್ನು ಮಾಡುವುದಿಲ್ಲವಾದರೆ ನನ್ನನ್ನು ನಂಬಬೇಡಿ. 38  ಆದರೆ ನಾನು ಅವುಗಳನ್ನು ಮಾಡುತ್ತಿರುವಲ್ಲಿ ನೀವು ನನ್ನನ್ನು ನಂಬದಿದ್ದರೂ ಆ ಕ್ರಿಯೆಗಳನ್ನು ನಂಬಿರಿ; ಹೀಗೆ ತಂದೆಯು ನನ್ನೊಂದಿಗೂ ನಾನು ತಂದೆಯೊಂದಿಗೂ ಐಕ್ಯದಿಂದಿದ್ದೇವೆ ಎಂಬುದನ್ನು ನೀವು ತಿಳಿದುಕೊಳ್ಳುವಿರಿ ಮತ್ತು ತಿಳಿದುಕೊಳ್ಳುತ್ತಾ ಮುಂದುವರಿಯುವಿರಿ” ಎಂದು ಹೇಳಿದನು. 39  ಆದುದರಿಂದ ಅವರು ಪುನಃ ಅವನನ್ನು ಹಿಡಿಯಲು ಪ್ರಯತ್ನಿಸಿದರು; ಆದರೆ ಅವನು ಅವರಿಂದ ತಪ್ಪಿಸಿಕೊಂಡನು. 40  ಹೀಗೆ ಅವನು ಪುನಃ ಯೋರ್ದನ್‌ ನದಿಯನ್ನು ದಾಟಿ ಆರಂಭದಲ್ಲಿ ಯೋಹಾನನು ದೀಕ್ಷಾಸ್ನಾನ ಮಾಡಿಸುತ್ತಿದ್ದ ಸ್ಥಳಕ್ಕೆ ಹೋಗಿ ಅಲ್ಲೇ ಉಳಿದನು. 41  ಆಗ ಅನೇಕರು ಅವನ ಬಳಿಗೆ ಬಂದು, “ಯೋಹಾನನು ಒಂದೇ ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ, ಆದರೆ ಈ ಮನುಷ್ಯನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲ ನಿಜವಾಗಿತ್ತು” ಎಂದು ಹೇಳುತ್ತಿದ್ದರು. 42  ಮತ್ತು ಅಲ್ಲಿ ಅನೇಕರು ಅವನಲ್ಲಿ ನಂಬಿಕೆಯಿಟ್ಟರು.

ಪಾದಟಿಪ್ಪಣಿ

ಯೋಹಾ 10:30 ಅಥವಾ, “ಐಕ್ಯಭಾವದಿಂದಿದ್ದೇವೆ.”