ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಯೋಹಾನ 1:1-51

1  ಆದಿಯಲ್ಲಿ ವಾಕ್ಯ ಎಂಬವನಿದ್ದನು; ಆ ವಾಕ್ಯವೆಂಬವನು ದೇವರೊಂದಿಗಿದ್ದನು; ಆ ವಾಕ್ಯವೆಂಬವನು ಒಬ್ಬ ದೇವನಾಗಿದ್ದನು.*  ಇವನು ಆದಿಯಲ್ಲಿ ದೇವರೊಂದಿಗಿದ್ದನು.  ಸಮಸ್ತವೂ ಅವನ ಮೂಲಕವೇ ಅಸ್ತಿತ್ವಕ್ಕೆ ಬಂತು, ಅವನಿಲ್ಲದೆ ಒಂದಾದರೂ ಅಸ್ತಿತ್ವಕ್ಕೆ ಬರಲಿಲ್ಲ. ಅವನ ಮೂಲಕ ಅಸ್ತಿತ್ವಕ್ಕೆ  ಬಂದಿರುವಂಥದ್ದು ಜೀವವಾಗಿತ್ತು, ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು.  ಮತ್ತು ಆ ಬೆಳಕು ಕತ್ತಲೆಯಲ್ಲಿ ಪ್ರಕಾಶಿಸುತ್ತಿದೆ, ಆದರೆ ಕತ್ತಲೆಯು ಅದನ್ನು ಅಡಗಿಸಿಲ್ಲ.  ದೇವರ ಪ್ರತಿನಿಧಿಯಾಗಿ ಕಳುಹಿಸಲ್ಪಟ್ಟ ಒಬ್ಬ ಮನುಷ್ಯನು ಬಂದನು; ಅವನ ಹೆಸರು ಯೋಹಾನ ಎಂದಾಗಿತ್ತು.  ಈ ಮನುಷ್ಯನು ಸಾಕ್ಷಿಗಾಗಿ ಬಂದನು, ತನ್ನ ಮೂಲಕ ಎಲ್ಲ ರೀತಿಯ ಜನರು ನಂಬುವವರಾಗುವಂತೆ ಆ ಬೆಳಕಿನ ಕುರಿತು ಸಾಕ್ಷಿಕೊಡಲು ಬಂದನು.  ಅವನೇ ಆ ಬೆಳಕಾಗಿರಲಿಲ್ಲ, ಆದರೆ ಅವನು ಆ ಬೆಳಕಿನ ಕುರಿತು ಸಾಕ್ಷಿಕೊಡುವುದಕ್ಕಾಗಿ ಕಳುಹಿಸಲ್ಪಟ್ಟವನಾಗಿದ್ದನು.  ಎಲ್ಲ ರೀತಿಯ ಜನರಿಗೆ ಬೆಳಕನ್ನು ಕೊಡುವ ನಿಜವಾದ ಬೆಳಕು ಲೋಕಕ್ಕೆ ಬರಲಿಕ್ಕಿತ್ತು. 10  ಅವನು ಲೋಕದಲ್ಲಿದ್ದನು ಮತ್ತು ಲೋಕವು ಅವನ ಮೂಲಕ ಅಸ್ತಿತ್ವಕ್ಕೆ ಬಂತು, ಆದರೂ ಲೋಕವು ಅವನನ್ನು ತಿಳಿದುಕೊಳ್ಳಲಿಲ್ಲ. 11  ಅವನು ತನ್ನ ಸ್ವಂತ ಊರಿಗೆ ಬಂದನು, ಆದರೆ ಅವನ ಸ್ವಂತ ಜನರೇ ಅವನನ್ನು ಸೇರಿಸಿಕೊಳ್ಳಲಿಲ್ಲ. 12  ಆದರೆ ಯಾರೆಲ್ಲ ಅವನನ್ನು ಅಂಗೀಕರಿಸಿದರೋ ಅವರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ಅವನು ನೀಡಿದನು; ಏಕೆಂದರೆ ಅವರು ಅವನ ಹೆಸರಿನಲ್ಲಿ ನಂಬಿಕೆಯನ್ನಿಡುತ್ತಿದ್ದರು. 13  ಅವರು ರಕ್ತದಿಂದಲೋ ಶಾರೀರಿಕ ಇಚ್ಛೆಯಿಂದಲೋ ಪುರುಷನ ಇಚ್ಛೆಯಿಂದಲೋ ಹುಟ್ಟಿದವರಾಗಿರದೆ, ದೇವರಿಂದ ಹುಟ್ಟಿದವರಾಗಿದ್ದರು. 14  ಹೀಗೆ ವಾಕ್ಯವೆಂಬವನು ಮನುಷ್ಯನಾಗಿ ನಮ್ಮ ಮಧ್ಯೆ ವಾಸಿಸಿದನು; ನಾವು ಅವನ ಮಹಿಮೆಯನ್ನು ಕಂಡೆವು, ಅದು ತಂದೆಯಿಂದ ಏಕೈಕಜಾತ ಪುತ್ರನಿಗೆ ಸೇರತಕ್ಕ ಮಹಿಮೆಯಾಗಿತ್ತು; ಅವನು ಅಪಾತ್ರ ದಯೆಯಿಂದಲೂ* ಸತ್ಯದಿಂದಲೂ ತುಂಬಿದವನಾಗಿದ್ದನು. 15  (ಯೋಹಾನನು ಅವನ ಕುರಿತು ಸಾಕ್ಷಿಕೊಟ್ಟನು. “ನನ್ನ ಹಿಂದೆ ಬರುವವನು ನನಗಿಂತ ಮುಂಚೆಯೇ ಅಸ್ತಿತ್ವದಲ್ಲಿದ್ದ ಕಾರಣ ನನಗಿಂತಲೂ ಮುಂದಿನವನಾದನು” ಎಂದು ಕೂಗಿ ಹೇಳಿದವನು ಇವನೇ ಆಗಿದ್ದನು.) 16  ಅವನ ಪೂರ್ಣತೆಯಿಂದಲೇ ನಾವೆಲ್ಲರೂ ಅಪಾತ್ರ ದಯೆಯ ಮೇಲೆ ಅಪಾತ್ರ ದಯೆಯನ್ನೂ ಹೊಂದಿದೆವು. 17  ಮೋಶೆಯ ಮೂಲಕ ಧರ್ಮಶಾಸ್ತ್ರವು ಕೊಡಲ್ಪಟ್ಟಿತು, ಯೇಸು ಕ್ರಿಸ್ತನ ಮೂಲಕ ಅಪಾತ್ರ ದಯೆಯೂ ಸತ್ಯವೂ ಬಂದವು. 18  ಯಾವ ಮನುಷ್ಯನೂ ಎಂದಿಗೂ ದೇವರನ್ನು ಕಂಡಿಲ್ಲ; ತಂದೆಯೊಂದಿಗೆ ಆಪ್ತ ಸ್ಥಾನದಲ್ಲಿರುವ* ಏಕೈಕಜಾತ ದೇವನೇ ಆತನ ಕುರಿತು ವಿವರಿಸಿದ್ದಾನೆ. 19  ಯೆಹೂದ್ಯರು ಯೆರೂಸಲೇಮಿನಿಂದ ಯಾಜಕರನ್ನೂ ಲೇವಿಯರನ್ನೂ ಯೋಹಾನನ ಬಳಿಗೆ ಕಳುಹಿಸಿ, “ನೀನು ಯಾರು?” ಎಂದು ಕೇಳಿಸಿದಾಗ ಅವನು ಕೊಟ್ಟ ಸಾಕ್ಷಿ ಇದೇ ಆಗಿತ್ತು. 20  ಅವನು ನಿವೇದನೆಮಾಡಿ, ಅಲ್ಲಗಳೆಯದೆ, “ನಾನು ಕ್ರಿಸ್ತನಲ್ಲ” ಎಂದು ಒಪ್ಪಿಕೊಂಡನು. 21  ಆಗ ಅವರು ಅವನಿಗೆ, “ಹಾಗಾದರೆ ನೀನು ಯಾರು? ನೀನು ಎಲೀಯನೊ?” ಎಂದು ಕೇಳಿದರು. ಅದಕ್ಕೆ ಅವನು, “ಅಲ್ಲ” ಎಂದು ಹೇಳಿದನು. “ನೀನು ಪ್ರವಾದಿಯೊ?” ಎಂದು ಕೇಳಿದಾಗ ಅವನು “ಅಲ್ಲ” ಎಂದು ಉತ್ತರಿಸಿದನು. 22  ಆದುದರಿಂದ ಅವರು ಅವನಿಗೆ, “ನಮ್ಮನ್ನು ಕಳುಹಿಸಿದವರಿಗೆ ನೀನು ಯಾರು ಎಂದು ನಾವು ಉತ್ತರಕೊಡಬೇಕು. ನಿನ್ನ ಬಗ್ಗೆ ನೀನು ಏನು ಹೇಳುತ್ತೀ?” ಎಂದರು. 23  ಅದಕ್ಕೆ ಅವನು, “ಪ್ರವಾದಿಯಾದ ಯೆಶಾಯನು ನುಡಿದಂತೆ, ‘ಯೆಹೋವನ ಮಾರ್ಗವನ್ನು ನೆಟ್ಟಗೆಮಾಡಿರಿ’ ಎಂದು ಅರಣ್ಯದಲ್ಲಿ ಕೂಗುವವನ ಧ್ವನಿಯೇ ನಾನು” ಎಂದು ಹೇಳಿದನು. 24  ಅವನ ಬಳಿಗೆ ಕಳುಹಿಸಲ್ಪಟ್ಟಿದ್ದವರು ಫರಿಸಾಯರ ಕಡೆಯವರಾಗಿದ್ದರು. 25  ಆದುದರಿಂದ ಅವರು ಅವನಿಗೆ, “ನೀನು ಕ್ರಿಸ್ತನಾಗಲಿ ಎಲೀಯನಾಗಲಿ ಪ್ರವಾದಿಯಾಗಲಿ ಅಲ್ಲದಿರುವಾಗ ದೀಕ್ಷಾಸ್ನಾನ ಏಕೆ ಮಾಡಿಸುತ್ತೀ?” ಎಂದು ಪ್ರಶ್ನಿಸಿದರು. 26  ಯೋಹಾನನು ಉತ್ತರವಾಗಿ ಅವರಿಗೆ, “ನಾನು ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ. ನೀವು ಅರಿಯದೆ ಇರುವಂಥ ಒಬ್ಬನು ನಿಮ್ಮ ಮಧ್ಯದಲ್ಲಿ ನಿಂತಿದ್ದಾನೆ; 27  ಅವನು ನನ್ನ ಹಿಂದೆ ಬರುವವನು, ಆದರೆ ಅವನ ಕೆರಗಳ ಪಟ್ಟಿಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ” ಎಂದನು. 28  ಇದೆಲ್ಲ ಯೋಹಾನನು ದೀಕ್ಷಾಸ್ನಾನ ಮಾಡಿಸುತ್ತಿದ್ದ ಯೋರ್ದನ್‌ ನದಿಯ ಆಚೇಕಡೆಯಿರುವ ಬೇಥಾನ್ಯದಲ್ಲಿ ಸಂಭವಿಸಿತು. 29  ಮರುದಿನ ಯೇಸು ತನ್ನ ಕಡೆಗೆ ಬರುತ್ತಿರುವುದನ್ನು ಅವನು ಕಂಡು, “ನೋಡಿ, ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ! 30  ನನ್ನ ಹಿಂದೆ ಬರುವವನು ನನಗಿಂತ ಮುಂಚೆಯೇ ಅಸ್ತಿತ್ವದಲ್ಲಿದ್ದ ಕಾರಣ ನನಗಿಂತಲೂ ಮುಂದಿನವನಾದನು ಎಂದು ನಾನು ಯಾರ ಕುರಿತು ಹೇಳಿದೆನೋ ಅವನೇ ಇವನು. 31  ನನಗೂ ಅವನ ಕುರಿತು ತಿಳಿದಿರಲಿಲ್ಲ, ಆದರೆ ಅವನನ್ನು ಇಸ್ರಾಯೇಲ್ಯರಿಗೆ ಪ್ರಕಟಪಡಿಸುವ ಕಾರಣದಿಂದಲೇ ನಾನು ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾ ಬಂದೆ” ಎಂದನು. 32  ಇದಲ್ಲದೆ ಯೋಹಾನನು ಸಾಕ್ಷಿಕೊಡುತ್ತಾ, “ಪವಿತ್ರಾತ್ಮವು* ಆಕಾಶದಿಂದ ಪಾರಿವಾಳದ ರೂಪದಲ್ಲಿ ಇಳಿದುಬರುವುದನ್ನು ನಾನು ನೋಡಿದೆನು ಮತ್ತು ಅದು ಅವನ ಮೇಲೆ ನೆಲೆಗೊಂಡಿತು. 33  ನನಗೂ ಅವನ ಕುರಿತು ತಿಳಿದಿರಲಿಲ್ಲ, ಆದರೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುವಂತೆ ನನ್ನನ್ನು ಕಳುಹಿಸಿದಾತನೇ ನನಗೆ, ‘ಯಾವನ ಮೇಲೆ ಪವಿತ್ರಾತ್ಮವು ಇಳಿದುಬಂದು ನೆಲೆಗೊಳ್ಳುವುದನ್ನು ನೀನು ನೋಡುತ್ತೀಯೋ ಅವನೇ ಪವಿತ್ರಾತ್ಮದಲ್ಲಿ ದೀಕ್ಷಾಸ್ನಾನ ಮಾಡಿಸುವವನು’ ಎಂದು ಹೇಳಿದನು. 34  ನಾನು ಅದನ್ನು ನೋಡಿದ್ದೇನೆ ಮತ್ತು ಇವನೇ ದೇವರ ಮಗನು ಎಂದು ಸಾಕ್ಷಿಕೊಟ್ಟಿದ್ದೇನೆ” ಎಂದನು. 35  ಮರುದಿನ ಪುನಃ ಯೋಹಾನನು ತನ್ನ ಶಿಷ್ಯರಲ್ಲಿ ಇಬ್ಬರೊಂದಿಗೆ ನಿಂತುಕೊಂಡಿದ್ದಾಗ 36  ಅಲ್ಲಿ ನಡೆದಾಡುತ್ತಿದ್ದ ಯೇಸುವನ್ನು ಕಂಡು ಅವನು, “ನೋಡಿ, ದೇವರ ಕುರಿಮರಿ!” ಎಂದು ಹೇಳಿದನು. 37  ಅವನು ಮಾತಾಡಿದ್ದನ್ನು ಕೇಳಿಸಿಕೊಂಡ ಇಬ್ಬರು ಶಿಷ್ಯರು ಯೇಸುವನ್ನು ಹಿಂಬಾಲಿಸಿದರು. 38  ಆಗ ಯೇಸು ಹಿಂದೆ ತಿರುಗಿ ತನ್ನನ್ನು ಹಿಂಬಾಲಿಸುತ್ತಿದ್ದ ಅವರನ್ನು ನೋಡಿ ಅವರಿಗೆ, “ನೀವು ಏನು ಹುಡುಕುತ್ತಿದ್ದೀರಿ?” ಎಂದು ಕೇಳಿದನು. ಅದಕ್ಕೆ ಅವರು ಅವನಿಗೆ, “ರಬ್ಬೀ (ಭಾಷಾಂತರಿಸಿದಾಗ ಇದರ ಅರ್ಥ ಬೋಧಕ ಎಂದಾಗಿದೆ) ನೀನು ಎಲ್ಲಿ ತಂಗಿದ್ದೀ?” ಎಂದು ಕೇಳಿದರು. 39  ಅವನು ಅವರಿಗೆ, “ಬಂದು ನೋಡಿ” ಎಂದನು. ಅಂತೆಯೇ ಅವರು ಹೋಗಿ ಅವನು ತಂಗಿದ್ದ ಸ್ಥಳವನ್ನು ಕಂಡು ಆ ದಿನ ಅವನೊಂದಿಗೆ ತಂಗಿದರು; ಆಗ ಸಮಯ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು. 40  ಯೋಹಾನನು ಹೇಳಿದ ಮಾತುಗಳನ್ನು ಕೇಳಿಸಿಕೊಂಡು ಯೇಸುವನ್ನು ಹಿಂಬಾಲಿಸಿದ ಆ ಇಬ್ಬರಲ್ಲಿ ಸೀಮೋನ ಪೇತ್ರನ ಸಹೋದರನಾದ ಅಂದ್ರೆಯನು ಒಬ್ಬನಾಗಿದ್ದನು. 41  ಅವನು ಮೊದಲಾಗಿ ತನ್ನ ಸ್ವಂತ ಸಹೋದರನಾದ ಸೀಮೋನನನ್ನು ಕಂಡು ಅವನಿಗೆ, “ನಮಗೆ ಮೆಸ್ಸೀಯನು (ಭಾಷಾಂತರಿಸಿದಾಗ ಇದರ ಅರ್ಥ ಕ್ರಿಸ್ತ ಎಂದಾಗಿದೆ) ಸಿಕ್ಕಿದ್ದಾನೆ” ಎಂದು ಹೇಳಿ 42  ಅವನನ್ನು ಯೇಸುವಿನ ಬಳಿಗೆ ಕರೆದೊಯ್ದನು. ಯೇಸು ಅವನನ್ನು ನೋಡಿದಾಗ, “ನೀನು ಯೋಹಾನನ ಮಗನಾದ ಸೀಮೋನನು; ನೀನು ಕೇಫನೆಂದು (ಇದನ್ನು ಪೇತ್ರ ಎಂದು ಭಾಷಾಂತರಿಸಲಾಗುತ್ತದೆ) ಕರೆಯಲ್ಪಡುವಿ” ಎಂದನು. 43  ಮರುದಿನ ಯೇಸು ಗಲಿಲಾಯಕ್ಕೆ ಹೋಗಲು ಬಯಸಿದನು ಮತ್ತು ಫಿಲಿಪ್ಪನನ್ನು ಕಂಡಾಗ ಅವನಿಗೆ, “ನನ್ನ ಹಿಂಬಾಲಕನಾಗು” ಎಂದನು. 44  ಈ ಫಿಲಿಪ್ಪನು ಅಂದ್ರೆಯ ಮತ್ತು ಪೇತ್ರರ ಊರಾದ ಬೇತ್ಸಾಯಿದದವನಾಗಿದ್ದನು. 45  ಫಿಲಿಪ್ಪನು ನತಾನಯೇಲನನ್ನು ಕಂಡುಕೊಂಡು ಅವನಿಗೆ, “ಯಾರ ಕುರಿತು ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನೋ ಮತ್ತು ಪ್ರವಾದಿಗಳು ಬರೆದರೋ ಅವನು ನಮಗೆ ಸಿಕ್ಕಿದ್ದಾನೆ; ಅವನು ನಜರೇತಿನ ಯೋಸೇಫನ ಮಗನಾದ ಯೇಸುವೇ” ಎಂದನು. 46  ಆದರೆ ನತಾನಯೇಲನು ಅವನಿಗೆ, “ನಜರೇತಿನಿಂದ ಏನಾದರೂ ಒಳ್ಳೆಯದು ಬರಸಾಧ್ಯವಿದೆಯೊ?” ಎಂದಾಗ ಫಿಲಿಪ್ಪನು ಅವನಿಗೆ, “ಬಂದು ನೋಡು” ಎಂದು ಹೇಳಿದನು. 47  ನತಾನಯೇಲನು ತನ್ನ ಬಳಿಗೆ ಬರುತ್ತಿರುವುದನ್ನು ಕಂಡು ಯೇಸು ಅವನ ಕುರಿತು, “ನೋಡಿ, ಇವನು ನಿಶ್ಚಯವಾಗಿಯೂ ಒಬ್ಬ ಇಸ್ರಾಯೇಲ್ಯನು; ಇವನಲ್ಲಿ ಯಾವ ವಂಚನೆಯೂ ಇಲ್ಲ” ಎಂದನು. 48  ಆಗ ನತಾನಯೇಲನು ಅವನಿಗೆ, “ನಿನಗೆ ನನ್ನ ಪರಿಚಯವಿರುವುದು ಹೇಗೆ?” ಎಂದು ಕೇಳಿದಾಗ ಯೇಸು ಅವನಿಗೆ, “ನೀನು ಅಂಜೂರದ ಮರದ ಕೆಳಗಿದ್ದಾಗ ಫಿಲಿಪ್ಪನು ಬಂದು ನಿನ್ನನ್ನು ಕರೆಯುವ ಮುಂಚೆಯೇ ನಾನು ನಿನ್ನನ್ನು ನೋಡಿದೆ” ಎಂದು ಉತ್ತರಿಸಿದನು. 49  ಆಗ ನತಾನಯೇಲನು ಅವನಿಗೆ “ರಬ್ಬೀ, ನೀನು ನಿಶ್ಚಯವಾಗಿಯೂ ದೇವರ ಮಗನು, ಇಸ್ರಾಯೇಲ್ಯರ ಅರಸನು” ಎಂದು ಹೇಳಿದನು. 50  ಅದಕ್ಕೆ ಯೇಸು ಅವನಿಗೆ, “ನಿನ್ನನ್ನು ಅಂಜೂರದ ಮರದ ಕೆಳಗೆ ನೋಡಿದೆನೆಂದು ನಾನು ಹೇಳಿದ್ದರಿಂದಲೇ ನೀನು ನಂಬುತ್ತೀಯೊ? ನೀನು ಇವುಗಳಿಗಿಂತ ಹೆಚ್ಚು ಮಹತ್ತಾದ ಸಂಗತಿಗಳನ್ನು ನೋಡುವಿ” ಎಂದು ಹೇಳಿದನು. 51  ಇದಲ್ಲದೆ ಅವನು, “ಸ್ವರ್ಗವು ತೆರೆಯಲ್ಪಟ್ಟಿರುವುದನ್ನೂ ದೇವದೂತರು ಮನುಷ್ಯಕುಮಾರನ ಬಳಿಗೆ ಇಳಿದುಬರುತ್ತಾ ಏರಿಹೋಗುತ್ತಾ ಇರುವುದನ್ನೂ ನೀವು ಕಾಣುವಿರಿ ಎಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ” ಎಂದನು.

ಪಾದಟಿಪ್ಪಣಿ

ಯೋಹಾ 1:1 ಅಂದರೆ “ದೇವಸದೃಶನು, ದಿವ್ಯನು.”
ಯೋಹಾ 1:14 ಅಥವಾ, “ಅಪಾರ ದಯೆಯಿಂದಲೂ.”
ಯೋಹಾ 1:18 ಅಕ್ಷರಾರ್ಥವಾಗಿ, “ಎದೆಯ ಸ್ಥಾನದಲ್ಲಿರುವ.”
ಯೋಹಾ 1:32 ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7ನ್ನು ನೋಡಿ.