ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಯಾಕೋಬ 1:1-27

1  ದೇವರ ಮತ್ತು ಕರ್ತನಾದ ಯೇಸು ಕ್ರಿಸ್ತನ ದಾಸನಾಗಿರುವ ಯಾಕೋಬನು ಚೆದರಿಹೋಗಿರುವ ಹನ್ನೆರಡು ಕುಲಗಳವರಿಗೆ ಬರೆಯುವುದೇನೆಂದರೆ, ವಂದನೆಗಳು!  ನನ್ನ ಸಹೋದರರೇ, ನೀವು ನಾನಾವಿಧವಾದ ಪರೀಕ್ಷೆಗಳನ್ನು ಎದುರಿಸುವಾಗ  ನಿಮ್ಮ ನಂಬಿಕೆಯ ಪರೀಕ್ಷಿತ ಗುಣಮಟ್ಟವು ತಾಳ್ಮೆಯನ್ನು ಉಂಟುಮಾಡುತ್ತದೆಂದು ತಿಳಿದವರಾಗಿದ್ದು ಅವೆಲ್ಲವುಗಳನ್ನು ಆನಂದಕರವಾದದ್ದಾಗಿ ಪರಿಗಣಿಸಿರಿ.  ತಾಳ್ಮೆಯು ತನ್ನ ಕೆಲಸವನ್ನು ಸಂಪೂರ್ಣಗೊಳಿಸಲಿ; ಆಗ ನೀವು ಯಾವುದೇ ವಿಷಯದಲ್ಲಿ ಕೊರತೆಯುಳ್ಳವರಾಗಿರದೆ ಎಲ್ಲ ವಿಧಗಳಲ್ಲಿ ಸಂಪೂರ್ಣರೂ ಸ್ವಸ್ಥರೂ ಆಗಿರುವಿರಿ.  ನಿಮ್ಮಲ್ಲಿ ಯಾವನಿಗಾದರೂ ವಿವೇಕದ ಕೊರತೆಯಿರುವಲ್ಲಿ ಅವನು ದೇವರನ್ನು ಕೇಳಿಕೊಳ್ಳುತ್ತಾ ಇರಲಿ, ಆಗ ಅದು ಅವನಿಗೆ ಕೊಡಲ್ಪಡುವುದು; ಏಕೆಂದರೆ ದೇವರು ಎಲ್ಲರಿಗೆ ಉದಾರವಾಗಿಯೂ ಹಂಗಿಸದೆಯೂ ಕೊಡುವವನಾಗಿದ್ದಾನೆ.  ಆದರೆ ಅವನು ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಂದ ಕೇಳಿಕೊಳ್ಳುತ್ತಾ ಇರಲಿ, ಏಕೆಂದರೆ ಸಂದೇಹಪಡುವವನು ಗಾಳಿಯಿಂದ ಬಡಿಯಲ್ಪಟ್ಟು ಅತ್ತಿತ್ತ ಹೊಯ್ದಾಡಲ್ಪಡುವ ಸಮುದ್ರದ ಅಲೆಗೆ ಸಮಾನನಾಗಿದ್ದಾನೆ.  ವಾಸ್ತವದಲ್ಲಿ ಆ ಮನುಷ್ಯನು ತನಗೆ ಯೆಹೋವನಿಂದ ಏನಾದರೂ ಸಿಗುತ್ತದೆ ಎಂದು ನೆನಸದಿರಲಿ;  ಏಕೆಂದರೆ ಅವನು ಅಸ್ಥಿರ ಮನಸ್ಸಿನವನೂ ತನ್ನ ಎಲ್ಲ ಮಾರ್ಗಗಳಲ್ಲಿ ಚಂಚಲನೂ ಆಗಿದ್ದಾನೆ.  ಆದರೆ ದೀನಸ್ಥಿತಿಯಲ್ಲಿರುವ ಸಹೋದರನು ತಾನು ಉತ್ತಮಸ್ಥಿತಿಗೆ ಬಂದೆನೆಂದು ಉಲ್ಲಾಸಿಸಲಿ 10  ಮತ್ತು ಐಶ್ವರ್ಯವಂತನು ತಾನು ಹೀನಸ್ಥಿತಿಗೆ ಬಂದೆನೆಂದು ಉಲ್ಲಾಸಿಸಲಿ; ಏಕೆಂದರೆ ಸಸ್ಯಗಳ ಹೂವಿನಂತೆ ಐಶ್ವರ್ಯವಂತನು ಗತಿಸಿಹೋಗುವನು. 11  ಸೂರ್ಯನು ತನ್ನ ಉರಿಯುವ ಶಾಖದೊಂದಿಗೆ ಉದಯಿಸಿ ಸಸ್ಯವನ್ನು ಬಾಡಿಸಲು ಅದರ ಹೂವು ಉದುರಿ ಅದರ ಹೊರಗಿನ ಸೌಂದರ್ಯವು ನಾಶವಾಗುತ್ತದೆ. ಹೀಗೆಯೇ ಐಶ್ವರ್ಯವಂತನು ತನ್ನ ಜೀವನ ಮಾರ್ಗಗಳಲ್ಲಿ ಬಾಡಿಹೋಗುವನು. 12  ಪರೀಕ್ಷೆಗಳನ್ನು ತಾಳಿಕೊಳ್ಳುತ್ತಾ ಇರುವ ಮನುಷ್ಯನು ಸಂತೋಷಿತನು, ಏಕೆಂದರೆ ಅವನು ದೇವರಿಂದ ಅಂಗೀಕೃತನಾದಾಗ ಯೆಹೋವನು ತನ್ನನ್ನು ಪ್ರೀತಿಸುತ್ತಾ ಮುಂದುವರಿಯುವವರಿಗೆ ವಾಗ್ದಾನಮಾಡಿದ ಜೀವದ ಕಿರೀಟವನ್ನು ಹೊಂದುವನು. 13  ಪರೀಕ್ಷೆಗೆ ಒಳಪಡುವಾಗ, “ನಾನು ದೇವರಿಂದ ಪರೀಕ್ಷಿಸಲ್ಪಡುತ್ತಿದ್ದೇನೆ” ಎಂದು ಯಾವನೂ ಹೇಳದಿರಲಿ. ಏಕೆಂದರೆ ಕೆಟ್ಟ ಸಂಗತಿಗಳಿಂದ ದೇವರನ್ನು ಪರೀಕ್ಷಿಸಲು ಸಾಧ್ಯವೂ ಇಲ್ಲ, ಆತನು ತಾನೇ ಯಾರನ್ನೂ ಪರೀಕ್ಷಿಸುವುದೂ ಇಲ್ಲ. 14  ಆದರೆ ಪ್ರತಿಯೊಬ್ಬನು ತನ್ನ ಸ್ವಂತ ಆಶೆಯಿಂದ ಸೆಳೆಯಲ್ಪಟ್ಟು ಮರುಳುಗೊಳಿಸಲ್ಪಟ್ಟವನಾಗಿ ಪರೀಕ್ಷಿಸಲ್ಪಡುತ್ತಾನೆ. 15  ಬಳಿಕ ಆಶೆಯು ಬಸುರಾದಾಗ ಪಾಪವನ್ನು ಹೆರುತ್ತದೆ; ಅಂತೆಯೇ ಪಾಪವು ಮಾಡಿ ಮುಗಿಸಲ್ಪಟ್ಟಾಗ ಮರಣವನ್ನು ಉಂಟುಮಾಡುತ್ತದೆ. 16  ನನ್ನ ಪ್ರಿಯ ಸಹೋದರರೇ ಮೋಸಹೋಗಬೇಡಿರಿ. 17  ಪ್ರತಿಯೊಂದು ಒಳ್ಳೆಯ ದಾನವೂ ಪ್ರತಿಯೊಂದು ಪರಿಪೂರ್ಣ ವರವೂ ಮೇಲಣಿಂದ ಬರುತ್ತದೆ; ಏಕೆಂದರೆ ಅದು ದಿವ್ಯ ಬೆಳಕುಗಳ ತಂದೆಯಾಗಿರುವಾತನಿಂದ ಇಳಿದುಬರುತ್ತದೆ ಮತ್ತು ಆತನಲ್ಲಿ ನೆರಳಿನ ಓಲಿನಷ್ಟೂ ವ್ಯತ್ಯಾಸ ಸೂಚನೆ ಇಲ್ಲ. 18  ಆತನು ತನ್ನ ಚಿತ್ತಕ್ಕನುಸಾರ ಸತ್ಯದ ವಾಕ್ಯದಿಂದ ನಮ್ಮನ್ನು ಹುಟ್ಟಿಸಿರಲಾಗಿ ನಾವು ಆತನ ಸೃಷ್ಟಿಜೀವಿಗಳಲ್ಲಿ ಒಂದು ರೀತಿಯ ಪ್ರಥಮ ಫಲದಂತಾದೆವು. 19  ನನ್ನ ಪ್ರಿಯ ಸಹೋದರರೇ ಇದನ್ನು ತಿಳಿಯಿರಿ. ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ ಆಗಿರಬೇಕು; 20  ಏಕೆಂದರೆ ಮನುಷ್ಯನ ಕೋಪವು ದೇವರ ನೀತಿಯನ್ನು ಸಾಧಿಸುವುದಿಲ್ಲ. 21  ಆದುದರಿಂದ ಎಲ್ಲ ಕಶ್ಮಲತೆಯನ್ನು ಮತ್ತು ಅಧಿಕವಾದ ಕೆಟ್ಟತನವನ್ನು ತೆಗೆದುಹಾಕಿ ನಿಮ್ಮ ಪ್ರಾಣಗಳನ್ನು ರಕ್ಷಿಸಲು ಶಕ್ತವಾಗಿರುವ ವಾಕ್ಯದ ನೆಡುವಿಕೆಯನ್ನು ಸೌಮ್ಯಭಾವದಿಂದ ಸ್ವೀಕರಿಸಿರಿ. 22  ಆದರೂ, ವಾಕ್ಯವನ್ನು ಕೇಳಿಸಿಕೊಳ್ಳುವವರು ಮಾತ್ರವೇ ಆಗಿದ್ದು ಸುಳ್ಳಾದ ತರ್ಕಗಳಿಂದ ನಿಮ್ಮನ್ನು ಮೋಸಗೊಳಿಸಿಕೊಳ್ಳದೆ ವಾಕ್ಯದ ಪ್ರಕಾರ ಮಾಡುವವರಾಗಿರಿ. 23  ಯಾವನಾದರೂ ವಾಕ್ಯವನ್ನು ಕೇಳುವವನಾಗಿದ್ದು ಅದರ ಪ್ರಕಾರ ಮಾಡದಿದ್ದರೆ ಅಂಥವನು ಕನ್ನಡಿಯಲ್ಲಿ ತನ್ನ ಹುಟ್ಟುಮುಖವನ್ನು ನೋಡಿಕೊಳ್ಳುವ ಮನುಷ್ಯನಂತಿದ್ದಾನೆ. 24  ಅವನು ತನ್ನನ್ನು ನೋಡಿಕೊಂಡು ಅಲ್ಲಿಂದ ಹೋಗಿ ತಾನು ಹೇಗಿದ್ದೇನೆ ಎಂಬುದನ್ನು ಆ ಕೂಡಲೆ ಮರೆತುಬಿಡುತ್ತಾನೆ. 25  ಆದರೆ ವಿಮೋಚನೆಗೆ ಸೇರಿರುವ ಪರಿಪೂರ್ಣ ನಿಯಮದೊಳಕ್ಕೆ ಇಣಿಕಿ ನೋಡಿ, ಅದರಲ್ಲಿ ಪಟ್ಟುಹಿಡಿಯುವವನು ವಾಕ್ಯವನ್ನು ಕೇಳಿಸಿಕೊಂಡು ಮರೆತುಹೋಗುವವನಾಗಿರದೆ ಅದರ ಪ್ರಕಾರ ಮಾಡುವವನಾಗಿರುವುದರಿಂದ ಅದನ್ನು ಮಾಡುವುದರಲ್ಲಿ ಸಂತೋಷಿತನಾಗಿರುವನು. 26  ತಾನು ಔಪಚಾರಿಕವಾದ ಆರಾಧಕನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಸ್ವಂತ ಹೃದಯವನ್ನು ಮೋಸಗೊಳಿಸಿಕೊಳ್ಳುತ್ತಾ ಇರುವುದಾದರೆ ಅಂಥವನ ಆರಾಧನಾ ರೀತಿಯು ವ್ಯರ್ಥವಾದದ್ದಾಗಿದೆ. 27  ಸಂಕಟದಲ್ಲಿರುವ ಅನಾಥರನ್ನೂ ವಿಧವೆಯರನ್ನೂ ಪರಾಮರಿಸುವುದು ಮತ್ತು ಲೋಕದ ದೋಷವು ಹತ್ತದಂತೆ ನೋಡಿಕೊಳ್ಳುವುದೇ ನಮ್ಮ ದೇವರೂ ತಂದೆಯೂ ಆಗಿರುವಾತನ ದೃಷ್ಟಿಯಲ್ಲಿ ಶುದ್ಧವೂ ಕಳಂಕರಹಿತವೂ ಆಗಿರುವ ಆರಾಧನಾ ರೀತಿಯಾಗಿದೆ.

ಪಾದಟಿಪ್ಪಣಿ