ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಕ 7:1-37

7  ತರುವಾಯ ಯೆರೂಸಲೇಮಿನಿಂದ ಬಂದಿದ್ದ ಫರಿಸಾಯರು ಮತ್ತು ಶಾಸ್ತ್ರಿಗಳಲ್ಲಿ ಕೆಲವರು ಅವನ ಬಳಿ ಕೂಡಿ​ಬಂದರು.  ಆಗ ಯೇಸುವಿನ ಶಿಷ್ಯರಲ್ಲಿ ಕೆಲವರು ಆಚಾರ ಪದ್ಧತಿಯ ಪ್ರಕಾರ ಕೈತೊಳೆದುಕೊಳ್ಳದೆ ಕೊಳಕಾದ ಕೈಗಳಿಂದ ಊಟಮಾಡುವುದನ್ನು ನೋಡಿದರು​—⁠  ಏಕೆಂದರೆ ಫರಿಸಾಯರು ಮತ್ತು ಎಲ್ಲ ಯೆಹೂದ್ಯರು ತಮ್ಮ ಕೈಗಳನ್ನು ಮೊಣಕೈ ವರೆಗೆ ತೊಳೆಯದೆ ಊಟಮಾಡುತ್ತಿರಲಿಲ್ಲ. ಅವರು ಪೂರ್ವಿಕರ ಸಂಪ್ರದಾಯವನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು  ಮತ್ತು ಅವರು ಪೇಟೆಗೆ ಹೋಗಿ ಬಂದೊಡನೆ ನೀರನ್ನು ಪ್ರೋಕ್ಷಿಸಿಕೊಳ್ಳುವ ಮೂಲಕ ತಮ್ಮನ್ನು ಶುದ್ಧೀಕರಿಸಿಕೊಳ್ಳದೆ ಊಟ​ಮಾಡುತ್ತಿರಲಿಲ್ಲ; ಮಾತ್ರವಲ್ಲ ಬಟ್ಟಲುಗಳು, ಹೂಜಿಗಳು ಮತ್ತು ತಾಮ್ರದ ಪಾತ್ರೆಗಳನ್ನು ನೀರಿನಲ್ಲಿ ಮುಳುಗಿಸಿ ತೆಗೆಯುವುದು ಮುಂತಾದ ಅನೇಕ ಸಂಪ್ರದಾಯಗಳನ್ನು ಅವರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು;​—⁠  ಆದುದರಿಂದ ಈ ಫರಿಸಾಯರು ಮತ್ತು ಶಾಸ್ತ್ರಿಗಳು ಅವನನ್ನು, “ನಿನ್ನ ಶಿಷ್ಯರು ಪೂರ್ವಿಕರ ಸಂಪ್ರದಾಯಕ್ಕನುಸಾರ ಏಕೆ ನಡೆದುಕೊಳ್ಳುತ್ತಿಲ್ಲ? ಅವರು ಕೊಳಕು ಕೈಗಳಿಂದಲೇ ಊಟಮಾಡುತ್ತಾರಲ್ಲಾ” ಎಂದು ಕೇಳಿದರು.  ಅದಕ್ಕೆ ಅವನು, “ಕಪಟಿಗಳಾದ ನಿಮ್ಮ ಕುರಿತು ಯೆಶಾಯನು ಸರಿಯಾಗಿಯೇ ಪ್ರವಾದಿಸಿದ್ದಾನೆ; ಅವನು ‘ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಗೌರವಿಸುತ್ತಾರೆ, ಆದರೆ ಅವರ ಹೃದಯಗಳು ನನ್ನಿಂದ ಬಹಳ ದೂರವಾಗಿವೆ.  ಅವರು ಮನುಷ್ಯರ ಆಜ್ಞೆಗಳನ್ನೇ ಕಟ್ಟಳೆಗಳಾಗಿ ಬೋಧಿಸುವುದರಿಂದ ನನ್ನನ್ನು ಆರಾಧಿಸುತ್ತಿರುವುದು ವ್ಯರ್ಥ’ ಎಂದು ಬರೆದಿದ್ದಾನೆ.  ನೀವು ದೇವರ ಆಜ್ಞೆಯನ್ನು ತೊರೆದು ಮನುಷ್ಯರ ಸಂಪ್ರದಾಯವನ್ನೇ ಭದ್ರವಾಗಿ ಹಿಡಿದುಕೊಂಡಿದ್ದೀರಿ” ಎಂದು ಅವರಿಗೆ ಹೇಳಿದನು.  ಅವನು ಅವರಿಗೆ ಮುಂದುವರಿಸಿ ಹೇಳಿದ್ದು: “ನೀವು ನಿಮ್ಮ ಸಂಪ್ರದಾಯವನ್ನು ಕಾಪಾಡಿಕೊಳ್ಳಲಿಕ್ಕಾಗಿ ಬಹು ಚಾತುರ್ಯದಿಂದ ದೇವರ ಆಜ್ಞೆಯನ್ನು ಬದಿಗೊತ್ತುತ್ತೀರಿ. 10  ಉದಾಹರಣೆಗೆ, ‘ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು’ ಮತ್ತು ‘ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣದಂಡನೆ ಆಗಲಿ’ ಎಂದು ಮೋಶೆ ಹೇಳಿದನು. 11  ನೀವಾದರೋ ‘ಒಬ್ಬನು ತನ್ನ ತಂದೆಗೆ ಅಥವಾ ತಾಯಿಗೆ “ನನ್ನಿಂದ ನಿನಗೆ ಪ್ರಯೋಜನವಾಗತಕ್ಕದ್ದನ್ನು ಕೊರ್ಬಾನ್‌ (ಅಂದರೆ ದೇವರಿಗಾಗಿ ಮುಡಿಪಿಟ್ಟ ಕಾಣಿಕೆ) ಮಾಡಿದ್ದೇನೆ” ಎಂದು ಹೇಳುವುದಾದರೆ,’​—⁠ 12  ಅವನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನು ಮಾಡುವುದಕ್ಕೂ ನೀವು ಅನುಮತಿಸುವುದಿಲ್ಲ; 13  ಹೀಗೆ ನೀವು ಪಾಲಿಸುತ್ತಾ ಬಂದಿರುವ ಸಂಪ್ರದಾಯದ ಮೂಲಕ ದೇವರ ​ವಾಕ್ಯವನ್ನು ನಿರರ್ಥಕಮಾಡುತ್ತೀರಿ. ಮತ್ತು ಇಂಥ ಅನೇಕ ವಿಷಯಗಳನ್ನು ನೀವು ಮಾಡು​ತ್ತೀರಿ.” 14  ನಂತರ ಅವನು ಜನರ ಗುಂಪನ್ನು ತನ್ನ ಬಳಿಗೆ ಕರೆದು ಅವರಿಗಂದದ್ದು: “ನೀವೆಲ್ಲರೂ ನನಗೆ ಕಿವಿಗೊಡಿರಿ ಮತ್ತು ನನ್ನ ಮಾತುಗಳ ಅರ್ಥವನ್ನು ಗ್ರಹಿಸಿರಿ. 15  ಹೊರಗಿನಿಂದ ಮನುಷ್ಯನೊಳಗೆ ಹೋಗುವ ಯಾವುದೂ ಅವನನ್ನು ಹೊಲೆಮಾಡುವುದಿಲ್ಲ; ಬದಲಿಗೆ ಮನುಷ್ಯನೊಳಗಿಂದ ಹೊರಗೆ ಬರುವಂಥವು ಅವನನ್ನು ಹೊಲೆಮಾಡುತ್ತವೆ.” 16 * ​—⁠​—⁠ 17  ತರುವಾಯ ಅವನು ಜನರ ಗುಂಪನ್ನು ಬಿಟ್ಟು ಒಂದು ಮನೆಯನ್ನು ಪ್ರವೇಶಿಸಿದಾಗ, ಅವನ ಶಿಷ್ಯರು ಆ ದೃಷ್ಟಾಂತದ ಅರ್ಥವೇನೆಂದು ಕೇಳಿದರು. 18  ಅದಕ್ಕೆ ಅವನು, “ನೀವೂ ಅವರಂತೆ ಅರ್ಥಮಾಡಿಕೊಳ್ಳಲಾರದವರೊ? ಹೊರಗಿನಿಂದ ಮನುಷ್ಯನೊಳಗೆ ಹೋಗುವ ಯಾವುದೂ ಅವನನ್ನು ಹೊಲೆಮಾಡುವುದಿಲ್ಲ ಎಂಬುದು ನಿಮಗೆ ತಿಳಿಯದೊ? 19  ಏಕೆಂದರೆ ಅದು ಅವನ ಹೃದಯದೊಳಗೆ ಹೋಗದೆ ಹೊಟ್ಟೆಯನ್ನು ಸೇರಿ ಬಳಿಕ ವಿಸರ್ಜಿತವಾಗುತ್ತದೆ” ಎಂದು ಹೇಳಿದನು. ಹೀಗೆ ಹೇಳುವ ಮೂಲಕ ಅವನು ಎಲ್ಲ ಆಹಾರ ಪದಾರ್ಥಗಳು ಶುದ್ಧವಾಗಿವೆ ಎಂದು ಪ್ರಕಟಿಸಿದನು. 20  ಅವನು ಮುಂದುವರಿಸಿ ಹೇಳಿದ್ದು: “ಮನುಷ್ಯನೊಳಗಿಂದ ಹೊರಗೆ ಬರುವಂಥದೇ ಅವನನ್ನು ಹೊಲೆಮಾಡುತ್ತದೆ; 21  ಒಳಗಿನಿಂದ ಅಂದರೆ ಮನುಷ್ಯರ ಹೃದಯದಿಂದ, ಹಾದರ ಕಳ್ಳತನ ಕೊಲೆ 22  ವ್ಯಭಿಚಾರ ಲೋಭ ದುಷ್ಕೃತ್ಯ ವಂಚನೆ ಸಡಿಲುನಡತೆ ಅಸೂಯೆ ತುಂಬಿದ ಕಣ್ಣು ದೇವದೂಷಣೆ ಅಹಂಕಾರ ವಿಚಾರಹೀನತೆ ಮುಂತಾದವುಗಳ ಕುರಿತಾದ ಹಾನಿಕಾರಕ ಆಲೋಚನೆಗಳು ಹೊರಬರುತ್ತವೆ. 23  ಈ ಎಲ್ಲ ದುಷ್ಟ ವಿಷಯಗಳು ಮನುಷ್ಯನೊಳಗಿಂದ ಹೊರಟು ಅವನನ್ನು ಹೊಲೆಮಾಡುತ್ತವೆ.” 24  ತರುವಾಯ ಅವನು ಅಲ್ಲಿಂದ ಎದ್ದು ತೂರ್‌ ಮತ್ತು ಸೀದೋನ್‌ ಪ್ರಾಂತಗಳಿಗೆ ಹೋದನು. ಅಲ್ಲಿ ಅವನು ಒಂದು ಮನೆಯನ್ನು ಪ್ರವೇಶಿಸಿದನು ಮತ್ತು ತಾನು ಬಂದ ಸುದ್ದಿ ಯಾರಿಗೂ ತಿಳಿಯ​ಬಾರದೆಂದು ಬಯಸಿದನು. ಹಾಗಿದ್ದರೂ ಅವನು ಜನರ ಕಣ್ಣಿಗೆ ಬೀಳದಿರಲು ಸಾಧ್ಯವಾಗಲಿಲ್ಲ; 25  ಅವನ ವಿಷಯ ತಿಳಿದ ಕೂಡಲೆ ದೆವ್ವಹಿಡಿದಿದ್ದ ಒಬ್ಬ ಚಿಕ್ಕ ಹುಡುಗಿಯ ತಾಯಿ ಅವನ ಬಳಿಗೆ ಬಂದು ಅವನ ಪಾದಗಳಿಗೆ ಬಿದ್ದಳು. 26  ಅವಳು ಸಿರಿಯ ದೇಶದ ಫೊಯಿನಿಕೆ ಪ್ರಾಂತಕ್ಕೆ ಸೇರಿದ ಗ್ರೀಕ್‌ ಸ್ತ್ರೀಯಾಗಿದ್ದಳು; ಅವಳು ತನ್ನ ಮಗಳಿಗೆ ಹಿಡಿದಿದ್ದ ದೆವ್ವವನ್ನು ಬಿಡಿಸುವಂತೆ ಅವನನ್ನು ಬೇಡಿಕೊಳ್ಳುತ್ತಾ ಇದ್ದಳು. 27  ಆದರೆ ಅವನು ಅವಳಿಗೆ, “ಮೊದಲು ಮಕ್ಕಳಿಗೆ ತೃಪ್ತಿಯಾಗಲಿ; ಮಕ್ಕಳಿಗೆ ಕೊಡುವ ರೊಟ್ಟಿಯನ್ನು ನಾಯಿಮರಿ​ಗಳಿಗೆ ಹಾಕುವುದು ಸರಿಯಲ್ಲ” ಎಂದು ಹೇಳಿದನು. 28  ಇದಕ್ಕೆ ಪ್ರತ್ಯುತ್ತರವಾಗಿ ಅವಳು, “ಕರ್ತನೇ, ಅದು ನಿಜ. ಆದರೆ ಮೇಜಿನ ಕೆಳಗಿರುವ ನಾಯಿಮರಿಗಳು ಚಿಕ್ಕ ಮಕ್ಕಳ ಕೈಯಿಂದ ಬೀಳುವ ರೊಟ್ಟಿಯ ತುಣುಕುಗಳನ್ನು ತಿನ್ನುತ್ತವಲ್ಲಾ” ಎಂದಳು. 29  ಅದಕ್ಕೆ ಅವನು, “ನೀನು ಈ ಮಾತನ್ನು ಹೇಳಿದ್ದರಿಂದ, ಹೋಗು; ದೆವ್ವವು ನಿನ್ನ ಮಗಳನ್ನು ಬಿಟ್ಟುಹೋಗಿದೆ” ಎಂದನು. 30  ಅವಳು ಮನೆಗೆ ಹೋದಾಗ ಮಗಳು ಹಾಸಿಗೆಯ ಮೇಲೆ ಮಲಗಿರುವುದನ್ನು ಮತ್ತು ದೆವ್ವವು ಅವಳನ್ನು ಬಿಟ್ಟುಹೋಗಿರುವುದನ್ನು ಕಂಡಳು. 31  ಆ ಮೇಲೆ ಅವನು ತೂರ್‌ ಪ್ರಾಂತಗಳಿಂದ ಹಿಂದಿರುಗುತ್ತಾ ಸೀದೋನ್‍ನ ಮಾರ್ಗವಾಗಿ ದೆಕಪೊಲಿ ಪ್ರಾಂತಗಳನ್ನು ಹಾದು ಗಲಿಲಾಯ ಸಮುದ್ರಕ್ಕೆ ಬಂದನು. 32  ದೆಕಪೊಲಿ ಪ್ರಾಂತದಲ್ಲಿ ಅವರು ​ಕಿವುಡನೂ ತೊದಲು ಮಾತಾಡುವವನೂ ಆಗಿದ್ದ ಒಬ್ಬ ಮನುಷ್ಯನನ್ನು ಅವನ ಬಳಿಗೆ ಕರೆತಂದು, ಆ ಮನುಷ್ಯನ ಮೇಲೆ ಕೈಯಿಡುವಂತೆ ಅವನನ್ನು ಬೇಡಿಕೊಂಡರು. 33  ಅವನು ಆ ಮನುಷ್ಯನನ್ನು ಗುಂಪಿನಿಂದ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಅವನ ಕಿವಿಗಳಲ್ಲಿ ತನ್ನ ಬೆರಳುಗಳನ್ನು ಇಟ್ಟು ಉಗುಳಿದ ನಂತರ ಅವನ ನಾಲಿಗೆಯನ್ನು ಮುಟ್ಟಿದನು. 34  ಅನಂತರ ಆಕಾಶದ ಕಡೆಗೆ ನೋಡಿ ನಿಟ್ಟುಸಿರುಬಿಟ್ಟು ಅವನಿಗೆ, “ಎಫ್‌ಫಥಾ” ಎಂದು ಹೇಳಿದನು. ಈ ಪದಕ್ಕೆ “ತೆರೆಯಲಿ” ಎಂದರ್ಥ. 35  ಆಗ ಅವನ ಕಿವಿಗಳು ತೆರೆಯಲ್ಪಟ್ಟವು, ಅವನ ನಾಲಿಗೆಯು ಸಡಿಲವಾಯಿತು ಮತ್ತು ಅವನು ಸಹಜವಾಗಿ ಮಾತಾಡಲಾರಂಭಿಸಿದನು. 36  ಈ ಸಂಗತಿಯನ್ನು ಯಾರಿಗೂ ತಿಳಿಸಬಾರದೆಂದು ಅವನು ಜನರಿಗೆ ಖಂಡಿತವಾಗಿ ಹೇಳಿದನು; ಆದರೆ ಅವನು ಎಷ್ಟು ಖಡಾಖಂಡಿತವಾಗಿ ಹೇಳಿದನೋ ಅವರು ಅಷ್ಟೇ ಹೆಚ್ಚಾಗಿ ಪ್ರಚಾರ​ಮಾಡಿದರು. 37  ವಾಸ್ತವದಲ್ಲಿ ಅವರು ಅತ್ಯಂತ ಆಶ್ಚರ್ಯಪಟ್ಟು, “ಅವನು ಎಲ್ಲವನ್ನೂ ಚೆನ್ನಾಗಿ ಮಾಡಿದ್ದಾನೆ. ಕಿವುಡರು ಕೇಳುವಂತೆಯೂ ಮೂಕರು ಮಾತಾಡುವಂತೆಯೂ ಮಾಡುತ್ತಾನೆ” ಎಂದು ​ಹೇಳಿದರು.

ಪಾದಟಿಪ್ಪಣಿ

ಮಾರ್ಕ 7:16 ಮತ್ತಾ 17:21ರ ಪಾದಟಿಪ್ಪಣಿಯನ್ನು ನೋಡಿ.