ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಕ 4:1-41

4  ಅವನು ಮತ್ತೊಮ್ಮೆ ಸಮುದ್ರ ತೀರದಲ್ಲಿ ಬೋಧಿಸಲಾರಂಭಿಸಿದನು. ಬಹು ಜನರು ಅವನ ಬಳಿಗೆ ಕೂಡಿಬಂದದ್ದರಿಂದ ಅವನು ಸಮುದ್ರದಲ್ಲಿದ್ದ ಒಂದು ದೋಣಿಯನ್ನು ಹತ್ತಿ ಕುಳಿತುಕೊಂಡನು; ಆದರೆ ಜನರೆಲ್ಲರು ಸಮುದ್ರ ತೀರದಲ್ಲೇ ಇದ್ದರು.  ಅವನು ಅವರಿಗೆ ದೃಷ್ಟಾಂತಗಳ ಮೂಲಕ ಅನೇಕ ವಿಷಯಗಳನ್ನು ಬೋಧಿಸಲಾರಂಭಿಸಿ ಹೇಳಿದ್ದು:  “ಕಿವಿಗೊಡಿ. ನೋಡಿ! ಬಿತ್ತುವವನು ಬಿತ್ತುವುದಕ್ಕೆ ಹೊರಟನು.  ಅವನು ಬಿತ್ತುತ್ತಿದ್ದಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು ಮತ್ತು ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು.  ಇನ್ನು ಕೆಲವು ಬೀಜಗಳು ಮಣ್ಣು ತೆಳ್ಳಗಿದ್ದ ಬಂಡೆಯ ಸ್ಥಳದಲ್ಲಿ ಬಿದ್ದವು. ಮಣ್ಣು ಆಳವಾಗಿಲ್ಲದ ಕಾರಣ ಅವು ಬೇಗನೆ ಮೊಳೆತವು.  ಆದರೆ ಬಿಸಿಲೇರಿದಾಗ ಅವು ಬಾಡಿ, ಬೇರಿಲ್ಲದ ಕಾರಣ ಒಣಗಿಹೋದವು.  ಮತ್ತು ಬೇರೆ ಬೀಜಗಳು ಮುಳ್ಳುಗಿಡಗಳಿರುವ ನೆಲದಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅದುಮಿಬಿಟ್ಟದ್ದರಿಂದ ಅವು ಫಲಕೊಡದೆ ಹೋದವು.  ಆದರೆ ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು ಮೊಳೆತು ಬೆಳೆಯುತ್ತಾ, ಮೂವತ್ತರಷ್ಟು ಅರುವತ್ತರಷ್ಟು ನೂರರಷ್ಟು ಫಲಕೊಟ್ಟವು.”  ಆ ಬಳಿಕ ಅವನಂದದ್ದು: “ಆಲಿಸಲು ಕಿವಿಗಳಿರುವವನು ಆಲಿಸಲಿ.” 10  ಅವನು ಒಬ್ಬನೇ ಇದ್ದಾಗ, ಅವನ ಬಳಿಯಿದ್ದವರು ಹನ್ನೆರಡು ಮಂದಿಯ ಸಮೇತ ದೃಷ್ಟಾಂತಗಳ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳತೊಡಗಿದರು. 11  ಆಗ ಅವನು ಅವರಿಗೆ ಹೀಗೆ ಹೇಳಿದನು: “ದೇವರ ರಾಜ್ಯದ ಪವಿತ್ರ ರಹಸ್ಯವು ನಿಮಗೆ ಕೊಡಲ್ಪಟ್ಟಿದೆ, ಆದರೆ ಹೊರಗಿನವರಿಗೆ ಎಲ್ಲ ವಿಷಯಗಳು ದೃಷ್ಟಾಂತಗಳಾಗಿಯೇ ಉಳಿಯುತ್ತವೆ; 12  ಕಣ್ಣಾರೆ ನೋಡಿಯೂ ಅವರು ಕಾಣರು, ಕಿವಿಯಾರೆ ಕೇಳಿಯೂ ಅವರು ಗ್ರಹಿಸರು ಅಥವಾ ಎಂದೂ ದೇವರ ಕಡೆಗೆ ತಿರುಗಿಕೊಳ್ಳರು ಮತ್ತು ಕ್ಷಮಾಪಣೆಯನ್ನು ಹೊಂದರು.” 13  ಅನಂತರ ಅವನು ಅವರಿಗೆ, “ಈ ದೃಷ್ಟಾಂತದ ಅರ್ಥ ನಿಮಗೆ ತಿಳಿಯದಿದ್ದರೆ ಬೇರೆಲ್ಲ ದೃಷ್ಟಾಂತಗಳನ್ನು ನೀವು ಹೇಗೆ ಅರ್ಥಮಾಡಿಕೊಳ್ಳುವಿರಿ?” ಎಂದು ಕೇಳಿದನು. 14  “ಬಿತ್ತುವವನು ವಾಕ್ಯವನ್ನು ಬಿತ್ತು​ತ್ತಾನೆ. 15  ಕೆಲವರು ವಾಕ್ಯವು ಬಿತ್ತಲ್ಪಟ್ಟಿರುವ ದಾರಿಬದಿಯಂತಿದ್ದಾರೆ; ಆದರೆ ಇವರು ವಾಕ್ಯವನ್ನು ಕೇಳಿದ ಕೂಡಲೆ ಸೈತಾನನು ಬಂದು ಅವರಲ್ಲಿ ಬಿತ್ತಲ್ಪಟ್ಟಿರುವ ವಾಕ್ಯವನ್ನು ತೆಗೆದು​ಬಿಡುತ್ತಾನೆ. 16  ಇನ್ನು ಕೆಲವರು ವಾಕ್ಯವು ಬಿತ್ತಲ್ಪಟ್ಟಿರುವ ಬಂಡೆ ತುಂಬಿರುವ ಸ್ಥಳಗಳಂತಿದ್ದಾರೆ; ಇವರು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ. 17  ಆದರೂ ತಮ್ಮಲ್ಲಿ ಬೇರಿಲ್ಲದ ಕಾರಣ ಅವರು ಸ್ವಲ್ಪಕಾಲ ಮಾತ್ರ ಮುಂದುವರಿಯುತ್ತಾರೆ; ಬಳಿಕ ವಾಕ್ಯದ ನಿಮಿತ್ತ ಸಂಕಟ ಅಥವಾ ಹಿಂಸೆಯು ಬಂದ ಕೂಡಲೆ ಅವರು ಎಡವಿಬೀಳುತ್ತಾರೆ. 18  ಬೇರೆ ಕೆಲವರು ವಾಕ್ಯವು ಬಿತ್ತಲ್ಪಟ್ಟಿರುವ ಮುಳ್ಳುಗಿಡಗಳಿರುವ ನೆಲದಂತಿದ್ದಾರೆ; ಇವರು ವಾಕ್ಯವನ್ನು ಕೇಳಿಸಿಕೊಳ್ಳುತ್ತಾರೆ, 19  ಆದರೆ ಈ ವಿಷಯಗಳ ವ್ಯವಸ್ಥೆಯ ಚಿಂತೆಗಳು, ಐಶ್ವರ್ಯದ ಮೋಸಕರವಾದ ಪ್ರಭಾವ ಮತ್ತು ಉಳಿದೆಲ್ಲ ವಿಷಯಗಳಿಗಾಗಿರುವ ಆಶೆಗಳು ಒಳಗೆ ಸೇರಿ ವಾಕ್ಯವನ್ನು ಅದುಮಿಬಿಡುತ್ತವೆ ಹಾಗೂ ಅದು ಫಲವನ್ನು ಕೊಡದೇ ಹೋಗುತ್ತದೆ. 20  ಕೊನೆಯದಾಗಿ, ವಾಕ್ಯವು ಬಿತ್ತಲ್ಪಟ್ಟಿರುವ ಒಳ್ಳೆಯ ನೆಲದಂತಿರುವವರು, ವಾಕ್ಯಕ್ಕೆ ಕಿವಿಗೊಟ್ಟು ಅದನ್ನು ಅಂಗೀಕರಿಸಿ ಮೂವತ್ತರಷ್ಟು ಅರುವತ್ತರಷ್ಟು ನೂರರಷ್ಟು ಫಲವನ್ನು ಕೊಡುತ್ತಾರೆ.” 21  ಅವನು ಮುಂದುವರಿಸಿ ಅವರಿಗೆ ಹೇಳಿದ್ದು: “ದೀಪವನ್ನು ಹಚ್ಚಿ ಕೊಳಗದೊಳಗಾಗಲಿ* ಮಂಚದ ಕೆಳಗಾಗಲಿ ಇಡುವುದುಂಟೆ? ಅದನ್ನು ತಂದು ದೀಪ​ಸ್ತಂಭದ ಮೇಲೆ ಇಡುತ್ತಾರಲ್ಲವೆ? 22  ಬಯಲುಪಡಿಸುವ ಉದ್ದೇಶಕ್ಕಾ​ಗಿಯೇ ಹೊರತು ಯಾವುದೂ ಮರೆಯಾಗಿ ಇಡಲ್ಪಡುವುದಿಲ್ಲ; ಬೈಲಿಗೆ ತರಲ್ಪಡುವ ಉದ್ದೇಶಕ್ಕಾಗಿಯೇ ಹೊರತು ಯಾವುದೂ ಗೋಪ್ಯವಾಗಿ ಇಡಲ್ಪಡುವುದಿಲ್ಲ. 23  ಆಲಿಸಲು ಕಿವಿಗಳಿರುವವನು ಆಲಿಸಲಿ.” 24  ಮತ್ತು ಅವನು ಅವರಿಗೆ ಹೇಳಿದ್ದು: “ನೀವು ಏನನ್ನು ಕೇಳಿಸಿಕೊಳ್ಳುತ್ತಿದ್ದೀರೋ ಅದಕ್ಕೆ ಗಮನಕೊಡಿರಿ. ನೀವು ಅಳೆಯುತ್ತಿರುವ ಅಳತೆಯಿಂದಲೇ ನಿಮಗೆ ಅಳೆದುಕೊಡಲಾಗುವುದು ಮತ್ತು ನಿಮಗೆ ಇನ್ನೂ ಹೆಚ್ಚು ಕೂಡಿಸಿ ಕೊಡಲ್ಪಡುವುದು. 25  ಏಕೆಂದರೆ ಇದ್ದವನಿಗೆ ಹೆಚ್ಚು ಕೊಡಲ್ಪಡುವುದು; ಆದರೆ ಇಲ್ಲದವನಿಂದ ಇದ್ದದ್ದೂ ತೆಗೆದುಕೊಳ್ಳಲ್ಪಡುವುದು.” 26  ಅವನು ಮುಂದುವರಿಸುತ್ತಾ ಹೇಳಿದ್ದು: “ಈ ರೀತಿಯಲ್ಲಿ ದೇವರ ರಾಜ್ಯವು ಮನುಷ್ಯನೊಬ್ಬನು ಹೊಲದಲ್ಲಿ ಮಾಡಿದ ಬಿತ್ತನೆಗೆ ಹೋಲಿಕೆಯಾಗಿದೆ. 27  ಬೀಜವನ್ನು ಬಿತ್ತಿದ ಬಳಿಕ ಅವನು ರಾತ್ರಿ ಮಲಗಿದಾಗಲೂ ಹಗಲು ಎದ್ದಿರುವಾಗಲೂ, ಅವನಿಗೆ ತಿಳಿಯದ ರೀತಿಯಲ್ಲಿ ಬೀಜವು ಮೊಳೆತು ಎತ್ತರವಾಗಿ ಬೆಳೆಯುತ್ತದೆ. 28  ನೆಲವು ತಾನೇ ಕ್ರಮೇಣ​ವಾಗಿ ಮೊದಲು ಗರಿಕೆ, ಬಳಿಕ ತೆನೆಯನ್ನು ಮತ್ತು ಕೊನೆಗೆ ತೆನೆಯಲ್ಲಿ ತುಂಬ ಕಾಳನ್ನು ಫಲಿಸುತ್ತದೆ. 29  ಆದರೆ ಫಲ ಮಾಗಿದ ಕೂಡಲೆ, ಸುಗ್ಗಿಕಾಲ ಬಂದಿರುವುದರಿಂದ ಅವನು ಕುಡುಗೋಲನ್ನು ಹಾಕಿ ಅದನ್ನು ಕೊಯ್ಯುತ್ತಾನೆ.” 30  ಇನ್ನೂ ಅವನು ಅವರಿಗೆ ಅಂದದ್ದು: “ನಾವು ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸೋಣ? ಯಾವ ದೃಷ್ಟಾಂತವನ್ನು ಉಪಯೋಗಿಸುತ್ತಾ ಅದನ್ನು ವರ್ಣಿಸೋಣ? 31  ಅದು ನೆಲದಲ್ಲಿ ಬಿತ್ತಲ್ಪಡುವಾಗ ಭೂಮಿಯ ಮೇಲಿರುವ ಎಲ್ಲ ಬೀಜಗಳಿಗಿಂತ ಅತಿ ಚಿಕ್ಕದಾಗಿರುವ ಸಾಸಿವೆ ಕಾಳಿನಂತಿರುತ್ತದೆ​—⁠ 32  ಆದರೆ ಅದು ಬಿತ್ತಲ್ಪಟ್ಟ ಬಳಿಕ ಬೇರೆಲ್ಲ ಸಸ್ಯಜಾತಿಗಿಂತ ದೊಡ್ಡದಾಗಿ ಬೆಳೆದು ದೊಡ್ಡದೊಡ್ಡ ಕೊಂಬೆಗಳನ್ನು ಬಿಡುತ್ತದೆ ಮತ್ತು ಆಕಾಶದ ಹಕ್ಕಿಗಳಿಗೆ ಅದರ ನೆರಳಿನಲ್ಲಿ ಆಶ್ರಯವನ್ನು ಪಡೆಯ​ಸಾಧ್ಯವಾಗುತ್ತದೆ.” 33  ಈ ರೀತಿಯ ಅನೇಕ ದೃಷ್ಟಾಂತಗಳಿಂದ ಅವನು, ಅವರು ಗ್ರಹಿಸಲು ಶಕ್ತರಾಗಿರುವ ಮಟ್ಟಿಗೆ ವಾಕ್ಯವನ್ನು ಅವರಿಗೆ ಬೋಧಿಸುತ್ತಿದ್ದನು. 34  ವಾಸ್ತವದಲ್ಲಿ, ದೃಷ್ಟಾಂತವನ್ನು ಉಪಯೋಗಿಸದೆ ಅವನೆಂದೂ ಅವರೊಂದಿಗೆ ಮಾತಾಡುತ್ತಿರಲಿಲ್ಲ. ಆದರೆ ಪ್ರತ್ಯೇಕವಾಗಿದ್ದಾಗ ಅವನು ತನ್ನ ಶಿಷ್ಯರಿಗೆ ಎಲ್ಲ ವಿಷಯಗಳನ್ನು ವಿವರಿಸಿ ಹೇಳುತ್ತಿದ್ದನು. 35  ಆ ದಿನ ಸಂಜೆಯಾದಾಗ ಅವನು ಅವರಿಗೆ, “ನಾವು ಆಚೇದಡಕ್ಕೆ ಹೋಗೋಣ” ಅಂದನು. 36  ಹೀಗೆ, ಅವರು ಜನರ ಗುಂಪನ್ನು ಕಳುಹಿಸಿಬಿಟ್ಟ ಬಳಿಕ ಅವನನ್ನು ಅದೇ ದೋಣಿಯಲ್ಲಿ ಹಾಗೆಯೇ ಕರೆದುಕೊಂಡುಹೋದರು ಮತ್ತು ಬೇರೆ ದೋಣಿಗಳು ಸಹ ಅದರ ಸಂಗಡ ಇದ್ದವು. 37  ಆಗ ಭಯಂಕರವಾದ ಬಿರುಗಾಳಿಯು ಎದ್ದು ಅಲೆಗಳು ದೋಣಿಗೆ ಬಡಿದು ಒಳಗೆ ನುಗ್ಗಿದ್ದರಿಂದ ಅದು ಮುಳುಗುವುದರಲ್ಲಿತ್ತು. 38  ಆದರೆ ಅವನು ದೋಣಿಯ ಹಿಂಭಾಗದಲ್ಲಿ ದಿಂಬಿನ ಮೇಲೆ ತಲೆಯಿಟ್ಟು ಮಲಗಿದ್ದನು. ಶಿಷ್ಯರು ಅವನನ್ನು ಎಬ್ಬಿಸಿ, “ಬೋಧಕನೇ, ನಾವು ಮುಳುಗಿ ಸಾಯಲಿಕ್ಕಿದ್ದೇವೆ ಎಂಬ ಚಿಂತೆ ನಿನಗಿಲ್ಲವೆ?” ಎಂದು ಕೇಳಿದರು. 39  ಆಗ ಅವನು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ, “ಷ್‌! ​ಸುಮ್ಮನಿರು!” ಎಂದು ಹೇಳಿದನು. ಆಗ ಬಿರುಗಾಳಿಯು ನಿಂತು ಎಲ್ಲವೂ ಶಾಂತವಾಯಿತು. 40  ಅನಂತರ ಅವನು ಅವರಿಗೆ, “ನೀವೇಕೆ ಭಯಪಡುತ್ತೀರಿ? ನಿಮಗೆ ಇನ್ನೂ ನಂಬಿಕೆ ಇಲ್ಲವೆ?” ಎಂದು ಕೇಳಿದನು. 41  ಆದರೆ ಅವರು ಅಸಾಧಾರಣವಾಗಿ ಭಯಪಟ್ಟು, “ಇವನು ನಿಜವಾಗಿಯೂ ಯಾರು? ಗಾಳಿಯೂ ಸಮುದ್ರವೂ ಇವನ ಮಾತುಗಳನ್ನು ಪಾಲಿಸುತ್ತವಲ್ಲಾ?” ಎಂದು ಪರಸ್ಪರ ಮಾತಾಡಿಕೊಂಡರು.

ಪಾದಟಿಪ್ಪಣಿ

ಮಾರ್ಕ 4:21 ಮತ್ತಾ 5:15 ರ ಪಾದಟಿಪ್ಪಣಿಯನ್ನು ನೋಡಿ.