ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಮಾರ್ಕ 14:1-72

14  ಪಸ್ಕದ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬವು ಎರಡು ದಿನಗಳ ನಂತರ ನಡೆಯಲಿಕ್ಕಿತ್ತು. ಮುಖ್ಯ ಯಾಜಕರೂ ಶಾಸ್ತ್ರಿಗಳೂ ಅವನನ್ನು ಕುತಂತ್ರದಿಂದ ಹಿಡಿದು ಕೊಲ್ಲಲಿಕ್ಕಾಗಿ ಸಂದರ್ಭ ಹುಡುಕುತ್ತಿದ್ದರು;  ಏಕೆಂದರೆ, “ಹಬ್ಬದಲ್ಲಿ ಹಿಡಿಯುವುದು ಬೇಡ; ಹಾಗೆ ಮಾಡಿದರೆ ಒಂದುವೇಳೆ ಜನರು ದೊಂಬಿ ಎದ್ದಾರು” ಎಂದು ಅವರು ಮಾತಾಡಿಕೊಳ್ಳುತ್ತಿದ್ದರು.  ಅವನು ಬೇಥಾನ್ಯದಲ್ಲಿ ಕುಷ್ಠರೋಗಿಯಾಗಿದ್ದ ಸೀಮೋನನ ಮನೆಯಲ್ಲಿ ಊಟಕ್ಕೆ ಕುಳಿತುಕೊಂಡಿದ್ದಾಗ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಶುದ್ಧವಾದ ಜಟಮಾಂಸಿ ಸುಗಂಧ ತೈಲದ ಹಾಲುಗಲ್ಲಿನ ಭರಣಿಯನ್ನು ತೆಗೆದುಕೊಂಡು ಬಂದು ಆ ಭರಣಿಯನ್ನು ಒಡೆದು ತೆರೆದು ಆ ತೈಲವನ್ನು ಅವನ ತಲೆಯ ಮೇಲೆ ಹೊಯ್ಯಲಾರಂಭಿಸಿದಳು.  ಅದಕ್ಕೆ ಕೆಲವರು ತಮ್ಮೊಳಗೆ ಕೋಪವನ್ನು ವ್ಯಕ್ತಪಡಿಸುತ್ತಾ, “ಈ ಸುಗಂಧ ತೈಲವನ್ನು ನಷ್ಟಮಾಡಿದ್ದೇಕೆ?  ಇದನ್ನು ಮುನ್ನೂರು ದಿನಾರುಗಳಿಗಿಂತ ಹೆಚ್ಚು ಬೆಲೆಗೆ ಮಾರಿ ಬಡವರಿಗೆ ನೀಡಬಹುದಿತ್ತಲ್ಲಾ” ಎಂದು ಹೇಳಿ ಅವಳ ಮೇಲೆ ಬಹಳ ಅಸಂತೋಷಪಟ್ಟರು.  ಆದರೆ ಯೇಸು ಅವರಿಗೆ, “ಅವಳನ್ನು ಬಿಟ್ಟುಬಿಡಿ. ಅವಳಿಗೆ ಯಾಕೆ ತೊಂದರೆಕೊಡುತ್ತೀರಿ? ಅವಳು ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ.  ಏಕೆಂದರೆ ಬಡವರು ಯಾವಾಗಲೂ ನಿಮ್ಮ ಬಳಿ ಇರುತ್ತಾರೆ; ನೀವು ಬಯಸಿದಾಗೆಲ್ಲ ಅವರಿಗೆ ಒಳ್ಳೇದನ್ನು ಮಾಡಬಹುದು. ಆದರೆ ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ.  ಅವಳು ತನ್ನಿಂದಾದುದನ್ನು ಮಾಡಿದ್ದಾಳೆ; ಹೂಣಿಡುವುದಕ್ಕಾಗಿ ಅವಳು ಮುಂದಾಗಿಯೇ ನನ್ನ ದೇಹದ ಮೇಲೆ ಸುಗಂಧ ತೈಲವನ್ನು ಹಾಕಿದ್ದಾಳೆ.  ಲೋಕದ ಸುತ್ತಲೂ ಎಲ್ಲೆಲ್ಲ ಸುವಾರ್ತೆಯು ಸಾರಲ್ಪಡುತ್ತದೋ ಅಲ್ಲೆಲ್ಲ ಈ ಸ್ತ್ರೀಯು ಮಾಡಿದ ಕಾರ್ಯವು ಸಹ ಅವಳ ನೆನಪಿಗಾಗಿ ತಿಳಿಸಲ್ಪಡುವುದು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಅಂದನು. 10  ಆ ಮೇಲೆ ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದ ಇಸ್ಕರಿಯೋತ ಯೂದನು ಅವನನ್ನು ಮುಖ್ಯ ಯಾಜಕರಿಗೆ ದ್ರೋಹದಿಂದ ಹಿಡಿದುಕೊಡಲಿಕ್ಕಾಗಿ ಅವರ ಬಳಿಗೆ ಹೋದನು. 11  ಇದನ್ನು ಕೇಳಿಸಿಕೊಂಡಾಗ ಅವರು ಬಹು ಸಂತೋಷಪಟ್ಟು ಅವನಿಗೆ ಬೆಳ್ಳಿಯ ಹಣವನ್ನು ಕೊಡುವುದಾಗಿ ಮಾತುಕೊಟ್ಟರು. ಅಂದಿನಿಂದ ಯೂದನು ಅವನನ್ನು ದ್ರೋಹದಿಂದ ಹಿಡಿದುಕೊಡಲು ಅನುಕೂಲವಾದ ಸಂದರ್ಭವನ್ನು ಹುಡುಕುತ್ತಿದ್ದನು. 12  ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನ, ಅಂದರೆ ಅವರು ವಾಡಿಕೆಯಂತೆ ಪಸ್ಕದ ಪ್ರಾಣಿಯನ್ನು ಯಜ್ಞವಾಗಿ ಅರ್ಪಿಸುವ ದಿನದಂದು ಅವನ ಶಿಷ್ಯರು ಅವನಿಗೆ, “ನೀನು ಪಸ್ಕದ ಊಟವನ್ನು ಮಾಡುವಂತೆ ನಾವು ಎಲ್ಲಿಗೆ ಹೋಗಿ ಸಿದ್ಧಮಾಡಬೇಕೆನ್ನುತ್ತಿ?” ಎಂದು ಕೇಳಿದರು. 13  ಆಗ ಅವನು ತನ್ನ ಇಬ್ಬರು ಶಿಷ್ಯರನ್ನು ಕರೆದು, “ನೀವು ಪಟ್ಟಣದೊಳಗೆ ಹೋಗಿರಿ; ಅಲ್ಲಿ ಮಣ್ಣಿನ ಕೊಡದಲ್ಲಿ ನೀರನ್ನು ಹೊತ್ತುಕೊಂಡು ಹೋಗುತ್ತಿರುವ ಒಬ್ಬ ಮನುಷ್ಯನನ್ನು ಕಾಣುವಿರಿ. ಅವನ ಹಿಂದೆ ಹೋಗಿರಿ 14  ಮತ್ತು ಅವನು ಯಾವ ಮನೆಯೊಳಗೆ ಹೋಗುತ್ತಾನೋ ಆ ಮನೆಯ ಯಜಮಾನನಿಗೆ, ‘ “ನನ್ನ ಶಿಷ್ಯರೊಂದಿಗೆ ಪಸ್ಕದ ಊಟವನ್ನು ಮಾಡುವುದಕ್ಕೆ ನನಗಾಗಿ ಅತಿಥಿ ಕೋಣೆ ಎಲ್ಲಿದೆ?” ಎಂದು ಬೋಧಕನು ಕೇಳುತ್ತಾನೆ’ ಎಂದು ಹೇಳಿರಿ. 15  ಆಗ ಅವನು ನಿಮಗೆ ಸಜ್ಜುಗೊಳಿಸಲ್ಪಟ್ಟು ಸಿದ್ಧವಾಗಿರುವ ಮೇಲಂತಸ್ತಿನ ದೊಡ್ಡ ಕೋಣೆಯನ್ನು ತೋರಿಸುವನು; ಅಲ್ಲಿ ನಮಗೋಸ್ಕರ ಸಿದ್ಧತೆಗಳನ್ನು ಮಾಡಿರಿ” ಎಂದು ಹೇಳಿಕಳುಹಿಸಿದನು. 16  ಶಿಷ್ಯರು ಹೊರಟುಹೋದರು ಮತ್ತು ಪಟ್ಟಣವನ್ನು ಪ್ರವೇಶಿಸಿದಾಗ ಅವನು ಹೇಳಿದಂತೆಯೇ ಇದ್ದುದನ್ನು ಕಂಡು ಪಸ್ಕಕ್ಕಾಗಿ ಸಿದ್ಧತೆಗಳನ್ನು ಮಾಡಿದರು. 17  ಸಂಜೆಯಾದಾಗ ಅವನು ತನ್ನ ಹನ್ನೆರಡು ಮಂದಿ ಶಿಷ್ಯರೊಂದಿಗೆ ಬಂದನು. 18  ಅವರು ಮೇಜಿನ ಬಳಿ ಕುಳಿತುಕೊಂಡು ಊಟಮಾಡುತ್ತಿರುವಾಗ ಯೇಸು ಅವರಿಗೆ, “ನನ್ನೊಂದಿಗೆ ಊಟಮಾಡುತ್ತಿರುವ ನಿಮ್ಮಲ್ಲಿ ಒಬ್ಬನು ನನಗೆ ದ್ರೋಹಮಾಡುವನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಅಂದನು. 19  ಅದನ್ನು ಕೇಳಿ ಶಿಷ್ಯರು ಬಹಳ ದುಃಖಿತರಾಗಿ, “ನಾನಲ್ಲವಲ್ಲ?” ಎಂದು ಒಬ್ಬೊಬ್ಬರಾಗಿ ಅವನನ್ನು ಕೇಳತೊಡಗಿದರು. 20  ಆಗ ಅವನು ಅವರಿಗೆ, “ಅವನು ಹನ್ನೆರಡು ಮಂದಿಯಲ್ಲಿ ಒಬ್ಬನು, ನನ್ನ ಸಂಗಡ ಒಂದೇ ಬಟ್ಟಲಲ್ಲಿ ರೊಟ್ಟಿಯನ್ನು ಅದ್ದುವವನೇ. 21  ಮನುಷ್ಯಕುಮಾರನ ವಿಷಯದಲ್ಲಿ ಬರೆಯಲ್ಪಟ್ಟಿರುವ ಪ್ರಕಾರವೇ ಅವನು ನಿಮ್ಮನ್ನು ಬಿಟ್ಟುಹೋಗುತ್ತಾನೆ ನಿಜ; ಆದರೆ ಯಾವನ ಮೂಲಕ ಮನುಷ್ಯಕುಮಾರನಿಗೆ ದ್ರೋಹವಾಗುತ್ತದೋ ಅವನ ಗತಿಯನ್ನು ಏನು ಹೇಳಲಿ! ಆ ಮನುಷ್ಯನು ಹುಟ್ಟದೇಹೋಗಿದ್ದರೆ ಅವನಿಗೆ ಎಷ್ಟೋ ಒಳ್ಳೇದಾಗಿತ್ತು” ಎಂದು ಹೇಳಿದನು. 22  ಅವರು ಊಟಮಾಡುತ್ತಿರುವಾಗ ಅವನು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಮುರಿದು ಅವರಿಗೆ ನೀಡಿ “ತೆಗೆದುಕೊಳ್ಳಿರಿ, ಇದು ನನ್ನ ದೇಹವನ್ನು ಸೂಚಿಸುತ್ತದೆ” ಎಂದು ಹೇಳಿದನು. 23  ಅನಂತರ ಪಾತ್ರೆಯನ್ನು ತೆಗೆದುಕೊಂಡು ಕೃತಜ್ಞತೆ ಸಲ್ಲಿಸಿ ಅವರಿಗೆ ಕೊಟ್ಟನು ಮತ್ತು ಅವರೆಲ್ಲರೂ ಅದರಲ್ಲಿ ಕುಡಿದರು. 24  ಮತ್ತು ಅವನು ಅವರಿಗೆ, “ಇದು ಅನೇಕರಿಗೋಸ್ಕರ ಸುರಿಸಲ್ಪಡಲಿರುವ ನನ್ನ ‘ಒಡಂಬಡಿಕೆಯ ರಕ್ತವನ್ನು’ ಸೂಚಿಸುತ್ತದೆ. 25  ನಾನು ದೇವರ ರಾಜ್ಯದಲ್ಲಿ ನಿಮ್ಮೊಂದಿಗೆ ಹೊಸದಾಗಿ ದ್ರಾಕ್ಷಾಮದ್ಯವನ್ನು ಕುಡಿಯುವ ತನಕ ಇನ್ನೆಂದೂ ಅದನ್ನು ಕುಡಿಯುವುದೇ ಇಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಅಂದನು. 26  ಬಳಿಕ ಅವರು ಸ್ತುತಿಗೀತೆಗಳನ್ನು ಹಾಡಿ ಆಲೀವ್‌ ಮರಗಳ ಗುಡ್ಡಕ್ಕೆ ಹೋದರು. 27  ಆಗ ಯೇಸು ಅವರಿಗೆ, “ನೀವೆಲ್ಲರೂ ಎಡವುವಿರಿ, ಏಕೆಂದರೆ ‘ನಾನು ಕುರುಬನನ್ನು ಹೊಡೆಯುವೆನು ಆಗ ಕುರಿಗಳು ಚೆದರಿಹೋಗುವವು’ ಎಂದು ಬರೆದಿದೆ. 28  ಆದರೆ ನಾನು ಎಬ್ಬಿಸಲ್ಪಟ್ಟ ಬಳಿಕ ನಿಮಗಿಂತ ಮುಂದಾಗಿ ಗಲಿಲಾಯಕ್ಕೆ ಹೋಗುವೆನು” ಅಂದನು. 29  ಆಗ ಪೇತ್ರನು ಅವನಿಗೆ, “ಬೇರೆಲ್ಲರೂ ಎಡವಲ್ಪಟ್ಟರೂ ನನಗೆ ಹಾಗಾಗುವುದಿಲ್ಲ” ಎಂದು ಹೇಳಿದನು. 30  ಅದಕ್ಕೆ ಯೇಸು ಅವನಿಗೆ, “ಇಂದು, ಇದೇ ರಾತ್ರಿ ಹುಂಜವು ಎರಡು ಸಾರಿ ಕೂಗುವುದರೊಳಗೆ ನೀನು ಕೂಡ ನನ್ನನ್ನು ಮೂರು ಸಾರಿ ಅಲ್ಲಗಳೆಯುವಿ ಎಂದು ನಿನಗೆ ನಿಜವಾಗಿ ಹೇಳುತ್ತೇನೆ” ಅಂದನು. 31  ಆದರೆ ಅವನು, “ನಾನು ನಿನ್ನೊಂದಿಗೆ ಸಾಯಬೇಕಾದರೂ ನಿನ್ನನ್ನು ಅಲ್ಲಗಳೆಯುವುದಿಲ್ಲ” ಎಂದು ಖಂಡಿತವಾಗಿ ಹೇಳಿದನು. ಹಾಗೆಯೇ ಇತರರೆಲ್ಲರೂ ಇದನ್ನೇ ಹೇಳಲಾರಂಭಿಸಿದರು. 32  ತರುವಾಯ ಅವರು ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದರು. ಅಲ್ಲಿ ಅವನು ತನ್ನ ಶಿಷ್ಯರಿಗೆ, “ನಾನು ಪ್ರಾರ್ಥನೆಮಾಡುತ್ತಿರುವಾಗ ಇಲ್ಲೇ ಕುಳಿತುಕೊಂಡಿರಿ” ಎಂದು ಹೇಳಿದನು. 33  ಅವನು ಪೇತ್ರ ಯಾಕೋಬ ಯೋಹಾನರನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೋದನು; ಅನಂತರ ಅವನು ಅತಿಯಾಗಿ ತಲ್ಲಣಗೊಂಡವನೂ ತೀರ ಕ್ಷೋಭೆಗೊಳಗಾದವನೂ ಆದನು. 34  ಅವನು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ತೀವ್ರವಾದ ದುಃಖಕ್ಕೆ ಒಳಗಾಗಿದೆ. ಇಲ್ಲೇ ಇದ್ದು ಎಚ್ಚರವಾಗಿರಿ” ಎಂದು ಹೇಳಿದನು. 35  ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಬಿದ್ದು, ಸಾಧ್ಯವಾದರೆ ಈ ಗಳಿಗೆಯು ತನ್ನನ್ನು ದಾಟಿಹೋಗುವಂತೆ ಪ್ರಾರ್ಥಿಸತೊಡಗಿದನು. 36  ಮತ್ತು ಅವನು ಮುಂದುವರಿಸಿ, “ಅಪ್ಪಾ, ತಂದೆಯೇ, ನಿನಗೆ ಎಲ್ಲವೂ ಸಾಧ್ಯ; ಈ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೂ ನನ್ನ ಅಪೇಕ್ಷೆಯಂತಲ್ಲ ನಿನ್ನ ಅಪೇಕ್ಷೆಯಂತೆಯೇ ಆಗಲಿ” ಎಂದು ಹೇಳಿದನು. 37  ಅವನು ಬಂದಾಗ ಅವರು ನಿದ್ರಿಸುತ್ತಿರುವುದನ್ನು ಕಂಡು ಪೇತ್ರನಿಗೆ, “ಸೀಮೋನನೇ, ನೀನು ನಿದ್ರಿಸುತ್ತಿದ್ದೀಯಾ? ನಿನಗೆ ಒಂದು ತಾಸು ಎಚ್ಚರವಾಗಿರುವಷ್ಟೂ ಶಕ್ತಿಯಿರಲಿಲ್ಲವೆ? 38  ನೀವು ಪ್ರಲೋಭನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸುತ್ತಿರಿ. ಹೃದಯವು ಸಿದ್ಧವಾಗಿದೆ ನಿಜ, ಆದರೆ ದೇಹಕ್ಕೆ ಬಲ ಸಾಲದು” ಎಂದು ಹೇಳಿದನು. 39  ಅವನು ಪುನಃ ಹೋಗಿ ಅದೇ ಮಾತನ್ನು ಹೇಳುತ್ತಾ ಪ್ರಾರ್ಥಿಸಿದನು. 40  ಅವನು ತಿರಿಗಿ ಬಂದಾಗ ಅವರು ನಿದ್ರಿಸುತ್ತಿರುವುದನ್ನು ಕಂಡನು. ಏಕೆಂದರೆ ಅವರ ಕಣ್ಣುಗಳು ತುಂಬ ಭಾರವಾಗಿದ್ದವು ಮತ್ತು ಅವನಿಗೆ ಏನು ಉತ್ತರ ಕೊಡಬೇಕೆಂದು ಅವರಿಗೆ ತಿಳಿಯಲಿಲ್ಲ. 41  ಅವನು ಮೂರನೆಯ ಸಾರಿ ಅವರ ಬಳಿಗೆ ಬಂದು, “ಇಂತಹ ಸಮಯದಲ್ಲಿ ನೀವು ನಿದ್ರಿಸಿ ವಿಶ್ರಾಂತಿಯನ್ನು ಪಡೆಯುತ್ತಿದ್ದೀರೋ! ಇನ್ನು ಸಾಕು! ಸಮಯ ಬಂದಿದೆ! ಇಗೋ, ಮನುಷ್ಯಕುಮಾರನು ಪಾಪಿಗಳ ಕೈಗೆ ದ್ರೋಹದಿಂದ ಒಪ್ಪಿಸಲ್ಪಡುತ್ತಾನೆ. 42  ಏಳಿರಿ ಹೋಗೋಣ. ಇಗೋ, ನನಗೆ ದ್ರೋಹಮಾಡುವವನು ಹತ್ತಿರಕ್ಕೆ ಬಂದಿದ್ದಾನೆ” ಎಂದು ಹೇಳಿದನು. 43  ಅವನು ಇನ್ನೂ ಮಾತಾಡುತ್ತಿರುವಾಗಲೇ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದನು ಅಲ್ಲಿಗೆ ಬಂದನು; ಮುಖ್ಯ ಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಹಿರೀಪುರುಷರಿಂದಲೂ ಕಳುಹಿಸಲ್ಪಟ್ಟ ಜನರ ಒಂದು ಗುಂಪು ಕತ್ತಿದೊಣ್ಣೆಗಳನ್ನು ಹಿಡಿದುಕೊಂಡು ಅವನೊಂದಿಗೆ ಬಂತು. 44  ಅವನಿಗೆ ದ್ರೋಹಮಾಡುವವನು ಅವರಿಗೆ ಒಂದು ಸಮ್ಮತ ಗುರುತನ್ನು ಕೊಟ್ಟು, “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆ ಮನುಷ್ಯನು; ಅವನನ್ನು ಬಂಧಿಸಿ ಭದ್ರವಾಗಿ ತೆಗೆದುಕೊಂಡುಹೋಗಿರಿ” ಎಂದು ಹೇಳಿದ್ದನು. 45  ಯೂದನು ಬಂದ ಕೂಡಲೆ ನೇರವಾಗಿ ಅವನ ಬಳಿಗೆ ಹೋಗಿ, “ರಬ್ಬೀ” ಎಂದು ಹೇಳಿ ಅವನಿಗೆ ಕೋಮಲವಾಗಿ ಮುದ್ದಿಟ್ಟನು. 46  ಆಗ ಜನರು ಅವನನ್ನು ಹಿಡಿದು ಬಂಧಿಸಿದರು. 47  ಆದರೆ ಅಲ್ಲಿ ನಿಂತಿದ್ದವರಲ್ಲಿ ಒಬ್ಬನು ತನ್ನ ಕತ್ತಿಯನ್ನು ತೆಗೆದು ಮಹಾ ಯಾಜಕನ ಆಳಿಗೆ ಹೊಡೆದು ಅವನ ಕಿವಿಯನ್ನು ಕಡಿದುಹಾಕಿದನು. 48  ಆಗ ಯೇಸು ಅವರಿಗೆ, “ಒಬ್ಬ ಕಳ್ಳನನ್ನು ಹಿಡಿಯುವುದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ಹಿಡಿದುಕೊಂಡು ನನ್ನನ್ನು ಬಂಧಿಸುವುದಕ್ಕೆ ಬಂದಿರೊ? 49  ನಾನು ಪ್ರತಿದಿನವೂ ದೇವಾಲಯದಲ್ಲಿ ಬೋಧಿಸುತ್ತಾ ನಿಮ್ಮೊಂದಿಗಿದ್ದೆನು; ಆಗ ನೀವು ನನ್ನನ್ನು ಬಂಧಿಸಲಿಲ್ಲ. ಆದರೆ ಶಾಸ್ತ್ರಗ್ರಂಥವು ನೆರವೇರಲಿಕ್ಕಾಗಿ ಹೀಗೆ ಆಯಿತು” ಎಂದು ಹೇಳಿದನು. 50  ಆಗ ಶಿಷ್ಯರೆಲ್ಲರೂ ಅವನನ್ನು ಬಿಟ್ಟು ಓಡಿಹೋದರು. 51  ಆದರೆ ಮೈಮೇಲೆ ನಾರುಮಡಿಯನ್ನು ಧರಿಸಿದ್ದ ಒಬ್ಬ ಯೌವನಸ್ಥನು ಅವನನ್ನು ಹತ್ತಿರದಿಂದ ಹಿಂಬಾಲಿಸುತ್ತಿದ್ದನು; ಅವರು ಅವನನ್ನು ಹಿಡಿಯಲು ಪ್ರಯತ್ನಿಸಿದಾಗ 52  ಅವನು ತನ್ನ ನಾರುಮಡಿಯನ್ನು ಬಿಟ್ಟು ಓಡಿಹೋದನು. 53  ಅಷ್ಟರಲ್ಲಿ ಅವರು ಯೇಸುವನ್ನು ಮಹಾ ಯಾಜಕನ ಬಳಿ ತೆಗೆದುಕೊಂಡುಹೋದರು ಮತ್ತು ಎಲ್ಲ ಮುಖ್ಯ ಯಾಜಕರೂ ಹಿರೀಪುರುಷರೂ ಶಾಸ್ತ್ರಿಗಳೂ ಕೂಡಿಬಂದರು. 54  ಪೇತ್ರನಾದರೋ ದೂರದಿಂದ ಅವನನ್ನು ಹಿಂಬಾಲಿಸುತ್ತಾ ಮಹಾ ಯಾಜಕನ ಅಂಗಳದ ವರೆಗೂ ಬಂದು ಮನೆಯಾಳುಗಳೊಂದಿಗೆ ಉರಿಯುತ್ತಿದ್ದ ಬೆಂಕಿಯ ಹತ್ತಿರ ಕುಳಿತುಕೊಂಡು ಚಳಿಕಾಯಿಸಿಕೊಳ್ಳುತ್ತಿದ್ದನು. 55  ಈ ಮಧ್ಯೆ ಮುಖ್ಯ ಯಾಜಕರೂ ಹಿರೀಸಭೆಯವರೆಲ್ಲರೂ* ಯೇಸುವನ್ನು ಕೊಲ್ಲಿಸಲಿಕ್ಕಾಗಿ ಅವನ ವಿರುದ್ಧ ಸಾಕ್ಷಿಯನ್ನು ಹುಡುಕುತ್ತಿದ್ದರು. ಆದರೆ ಅವರಿಗೆ ಯಾವ ಸಾಕ್ಷಿಯೂ ಸಿಗಲಿಲ್ಲ. 56  ಅನೇಕರು ಅವನ ವಿರುದ್ಧ ಸುಳ್ಳು ಸಾಕ್ಷಿಯನ್ನು ಹೇಳುತ್ತಿದ್ದರಾದರೂ ಅವರ ಸಾಕ್ಷಿಗಳು ಒಂದಕ್ಕೊಂದು ಸರಿಬೀಳುತ್ತಿರಲಿಲ್ಲ. 57  ಮಾತ್ರವಲ್ಲದೆ ಕೆಲವರು ಎದ್ದು ಅವನ ವಿರುದ್ಧ ಸುಳ್ಳು ಸಾಕ್ಷಿ ಹೇಳುತ್ತಾ, 58  “ ‘ಕೈಗಳಿಂದ ಕಟ್ಟಲ್ಪಟ್ಟ ಈ ಆಲಯವನ್ನು ನಾನು ಕೆಡವಿಹಾಕಿ ಕೈಗಳಿಂದ ಕಟ್ಟಲ್ಪಡದ ಇನ್ನೊಂದನ್ನು ಮೂರು ದಿನಗಳಲ್ಲಿ ಕಟ್ಟುವೆನು’ ಎಂದು ಇವನು ಹೇಳುವುದನ್ನು ನಾವು ಕೇಳಿದ್ದೇವೆ” ಎಂದರು. 59  ಆದರೆ ಈ ವಿಷಯದಲ್ಲೂ ಅವರು ಹೇಳುತ್ತಿದ್ದ ಸಾಕ್ಷಿ ಒಂದಕ್ಕೊಂದು ಸರಿಬೀಳಲಿಲ್ಲ. 60  ಕೊನೆಯದಾಗಿ ಮಹಾ ಯಾಜಕನು ಅವರ ನಡುವೆ ಎದ್ದುನಿಂತು ಯೇಸುವಿಗೆ, “ಇವರಿಗೆ ಉತ್ತರವಾಗಿ ನೀನೇನೂ ಹೇಳುವುದಿಲ್ಲವೆ? ನಿನ್ನ ವಿರುದ್ಧವಾಗಿ ಇವರು ಹೇಳುತ್ತಿರುವ ಸಾಕ್ಷಿ ಏನು?” ಎಂದು ಪ್ರಶ್ನಿಸಿದನು. 61  ಆದರೆ ಅವನು ಏನೂ ಉತ್ತರ ಕೊಡದೆ ಸುಮ್ಮನಿದ್ದನು. ಮಹಾ ಯಾಜಕನು ಪುನಃ ಅವನನ್ನು, “ನೀನು ಸ್ತೋತ್ರಪಾತ್ರನ ಮಗನಾದ ಕ್ರಿಸ್ತನೊ?” ಎಂದು ಕೇಳಿದನು. 62  ಅದಕ್ಕೆ ಯೇಸು, “ಹೌದು; ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಕುಳಿತುಕೊಂಡಿರುವುದನ್ನೂ ಆಕಾಶದ ಮೇಘಗಳಲ್ಲಿ ಬರುವುದನ್ನೂ ನೀವು ನೋಡುವಿರಿ” ಎಂದು ಹೇಳಿದನು. 63  ಇದನ್ನು ಕೇಳಿ ಮಹಾ ಯಾಜಕನು ತನ್ನ ಒಳ ಅಂಗಿಗಳನ್ನು ಹರಿದುಕೊಂಡು, “ನಮಗೆ ಇದಕ್ಕಿಂತ ಹೆಚ್ಚಿನ ಸಾಕ್ಷಿಗಳು ಇನ್ನು ಏಕೆ ಬೇಕು? 64  ಇವನು ಆಡಿದ ದೇವದೂಷಣೆಯ ಮಾತುಗಳನ್ನು ಕೇಳಿದಿರಲ್ಲಾ. ನಿಮಗೆ ಹೇಗೆ ಕಾಣುತ್ತದೆ?” ಎಂದನು. ಆಗ ಅವರೆಲ್ಲರೂ ಅವನನ್ನು ಮರಣಕ್ಕೆ ಪಾತ್ರನೆಂದು ನಿರ್ಣಯಿಸಿದರು. 65  ಆಮೇಲೆ ಕೆಲವರು ಅವನ ಮೇಲೆ ಉಗುಳಿದರು ಮತ್ತು ಅವನ ಮುಖಕ್ಕೆ ಮುಸುಕುಹಾಕಿ ತಮ್ಮ ಮುಷ್ಟಿಗಳಿಂದ ಗುದ್ದಿ, “ಪ್ರವಾದಿಸು!” ಎಂದು ಹೇಳಿದರು. ನ್ಯಾಯಸಭೆಯ ಸೇವಕರು ಅವನ ಮುಖಕ್ಕೆ ಹೊಡೆದು ಅವನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. 66  ಇತ್ತಲಾಗಿ ಪೇತ್ರನು ಕೆಳಗೆ ಅಂಗಳದಲ್ಲಿದ್ದಾಗ ಮಹಾ ಯಾಜಕನ ಸೇವಕಿಯರಲ್ಲಿ ಒಬ್ಬಳು ಬಂದು 67  ಪೇತ್ರನು ಚಳಿಕಾಯಿಸಿಕೊಳ್ಳುತ್ತಿರುವುದನ್ನು ಕಂಡು ಅವನನ್ನು ನೇರವಾಗಿ ನೋಡಿ, “ನೀನು ಸಹ ನಜರೇತಿನವನಾದ ಈ ಯೇಸುವಿನೊಂದಿಗೆ ಇದ್ದವನು” ಎಂದು ಹೇಳಿದಳು. 68  ಆದರೆ ಅವನು ಅದನ್ನು ಅಲ್ಲಗಳೆಯುತ್ತಾ, “ನನಗೆ ಅವನ ಪರಿಚಯವೂ ಇಲ್ಲ, ನೀನು ಏನು ಹೇಳುತ್ತಿದ್ದೀ ಎಂಬುದು ನನಗೆ ತಿಳಿಯುತ್ತಲೂ ಇಲ್ಲ” ಎಂದು ಹೇಳಿ ಹೊರಂಗಳಕ್ಕೆ ಹೋದನು. 69  ಅಲ್ಲಿ ಆ ಸೇವಕಿಯು ಅವನನ್ನು ನೋಡಿ ಹತ್ತಿರದಲ್ಲಿ ನಿಂತಿದ್ದವರಿಗೆ, “ಇವನೂ ಅವರಲ್ಲಿ ಒಬ್ಬನು” ಎಂದು ಪುನಃ ಹೇಳತೊಡಗಿದಳು. 70  ಅವನು ಅದನ್ನು ಪುನಃ ಅಲ್ಲಗಳೆದನು. ಸ್ವಲ್ಪ ಸಮಯದ ನಂತರ ಹತ್ತಿರದಲ್ಲಿ ನಿಂತಿದ್ದವರು ಪೇತ್ರನಿಗೆ, “ಖಂಡಿತವಾಗಿಯೂ ನೀನು ಅವರಲ್ಲಿ ಒಬ್ಬನು; ನೀನು ಗಲಿಲಾಯದವನು” ಎಂದು ಹೇಳಲಾರಂಭಿಸಿದರು. 71  ಆದರೆ ಅವನು ಶಪಿಸಿಕೊಳ್ಳುವುದಕ್ಕೂ ಆಣೆಯಿಟ್ಟುಕೊಳ್ಳುವುದಕ್ಕೂ ಆರಂಭಿಸಿ, “ನೀವು ಹೇಳುತ್ತಿರುವ ಈ ಮನುಷ್ಯನನ್ನು ನಾನರಿಯೆ” ಎಂದನು. 72  ಆ ಕೂಡಲೆ ಎರಡನೆಯ ಸಾರಿ ಹುಂಜವು ಕೂಗಿತು; ಆಗ, “ಹುಂಜವು ಎರಡು ಸಾರಿ ಕೂಗುವುದರೊಳಗೆ ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವಿ” ಎಂದು ಯೇಸು ತನಗೆ ಹೇಳಿದ್ದನ್ನು ಪೇತ್ರನು ನೆನಪಿಸಿಕೊಂಡು ವ್ಯಥೆಪಟ್ಟು ಅತ್ತನು.

ಪಾದಟಿಪ್ಪಣಿ

ಮಾರ್ಕ 14:55 ಮತ್ತಾ 26:59ರ ಪಾದಟಿಪ್ಪಣಿಯನ್ನು ನೋಡಿ.