ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಮಾರ್ಕ 11:1-33

11  ಅವರು ಯೆರೂಸಲೇಮನ್ನು ಸಮೀಪಿಸಿ ಆಲೀವ್‌ ಗುಡ್ಡದ ಮೇಲಿದ್ದ ಬೇತ್ಫಗೆಗೂ ಬೇಥಾನ್ಯಕ್ಕೂ ಬಂದಾಗ ಅವನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು  ಅವರಿಗೆ, “ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ; ಮತ್ತು ಅಲ್ಲಿಗೆ ಹೋದ ಕೂಡಲೆ ಯಾವನೂ ಇನ್ನೂ ಸವಾರಿಮಾಡಿಲ್ಲದ ಒಂದು ಕತ್ತೇಮರಿಯು ಕಟ್ಟಲ್ಪಟ್ಟಿರುವುದನ್ನು ಕಾಣುವಿರಿ; ಅದನ್ನು ಬಿಚ್ಚಿ ತನ್ನಿರಿ.  ಯಾರಾದರೂ ನಿಮಗೆ, ‘ನೀವು ಹೀಗೇಕೆ ಮಾಡುತ್ತೀರಿ?’ ಎಂದು ಕೇಳಿದರೆ, ‘ಇದು ಕರ್ತನಿಗೆ ಬೇಕಾಗಿದೆ ಮತ್ತು ಅವನು ಕೂಡಲೆ ಇದನ್ನು ಹಿಂದಕ್ಕೆ ಕಳುಹಿಸುವನು’ ಎಂದು ಹೇಳಿರಿ” ಅಂದನು.  ಆಗ ಶಿಷ್ಯರು ಹೊರಟುಹೋಗಿ ಒಳಹಾದಿಯಲ್ಲಿ ಬಾಗಿಲಿನ ಹೊರಗೆ ಕಟ್ಟಿದ್ದ ಒಂದು ಕತ್ತೇಮರಿಯನ್ನು ಕಂಡು ಅದನ್ನು ಬಿಚ್ಚಿದರು.  ಅಲ್ಲಿ ನಿಂತಿದ್ದವರಲ್ಲಿ ಕೆಲವರು ಅವರಿಗೆ, “ನೀವು ಈ ಕತ್ತೇಮರಿಯನ್ನು ಬಿಚ್ಚಿ ಏನು ಮಾಡುತ್ತಿದ್ದೀರಿ?” ಎಂದು ಕೇಳಿದರು.  ಅದಕ್ಕೆ ಅವರು ಯೇಸು ಹೇಳಿದಂತೆಯೇ ಅವರಿಗೆ ಹೇಳಿದಾಗ ಅವರನ್ನು ಹೋಗಲು ಬಿಟ್ಟರು.  ಅವರು ಆ ಕತ್ತೇಮರಿಯನ್ನು ಯೇಸುವಿನ ಬಳಿಗೆ ತಂದು ತಮ್ಮ ಮೇಲಂಗಿಗಳನ್ನು ಅದರ ಮೇಲೆ ಹಾಕಲಾಗಿ ಅವನು ಅದರ ಮೇಲೆ ಕುಳಿತುಕೊಂಡನು.  ಮಾತ್ರವಲ್ಲದೆ, ಅನೇಕರು ತಮ್ಮ ಮೇಲಂಗಿಗಳನ್ನು ದಾರಿಯಲ್ಲಿ ಹಾಸಿದರು. ಬೇರೆ ಕೆಲವರು ತೋಟಗಳಿಂದ ರೆಂಬೆಗಳನ್ನು ಕತ್ತರಿಸಿ ತಂದು ಹರಡಿದರು.  ಅವನ ಹಿಂದೆಯೂ ಮುಂದೆಯೂ ಬರುತ್ತಿದ್ದವರು, “ರಕ್ಷಣೆಯನ್ನು ಕೋರುತ್ತೇವೆ! ಯೆಹೋವನ ನಾಮದಲ್ಲಿ ಬರುವವನು ಆಶೀರ್ವದಿತನು! 10  ನಮ್ಮ ತಂದೆಯಾದ ದಾವೀದನ ಬರಲಿರುವ ರಾಜ್ಯವು ಆಶೀರ್ವದಿತ! ಅತ್ಯುನ್ನತ ಸ್ಥಳಗಳಲ್ಲಿ ರಕ್ಷಿಸು ಎಂದು ಕೋರುತ್ತೇವೆ!” ಎಂದು ಕೂಗುತ್ತಿದ್ದರು. 11  ಅವನು ಯೆರೂಸಲೇಮಿಗೆ ಹೋಗಿ ದೇವಾಲಯವನ್ನು ಪ್ರವೇಶಿಸಿದನು. ಅವನು ಸುತ್ತಲಿದ್ದ ಎಲ್ಲವನ್ನೂ ನೋಡಿ ಈಗಾಗಲೇ ಸಂಜೆಯಾಗಿದ್ದುದರಿಂದ ಹನ್ನೆರಡು ಮಂದಿಯೊಂದಿಗೆ ಬೇಥಾನ್ಯಕ್ಕೆ ಹೋದನು. 12  ಮರುದಿನ ಅವರು ಬೇಥಾನ್ಯದಿಂದ ಬರುತ್ತಿದ್ದಾಗ ಅವನಿಗೆ ಹಸಿವಾಯಿತು. 13  ಮತ್ತು ಎಲೆಗಳಿದ್ದ ಅಂಜೂರದ ಮರವನ್ನು ಅವನು ದೂರದಿಂದಲೇ ನೋಡಿ ಅದರಲ್ಲಿ ತನಗೇನಾದರೂ ಹಣ್ಣು ಸಿಗಬಹುದೊ ಎಂದು ನೋಡಲು ಅಲ್ಲಿಗೆ ಹೋದನು. ಆದರೆ ಅದರ ಹತ್ತಿರ ಬಂದಾಗ ಅದರಲ್ಲಿ ಎಲೆಗಳನ್ನು ಬಿಟ್ಟು ಮತ್ತೇನನ್ನೂ ಕಾಣಲಿಲ್ಲ; ಏಕೆಂದರೆ ಅದು ಅಂಜೂರ ಹಣ್ಣಿನ ಕಾಲವಾಗಿರಲಿಲ್ಲ. 14  ಆಗ ಅವನು ಆ ಮರಕ್ಕೆ, “ನಿನ್ನಿಂದ ಇನ್ನೆಂದಿಗೂ ಯಾರೂ ಹಣ್ಣನ್ನು ತಿನ್ನದ ಹಾಗಾಗಲಿ” ಎಂದು ಹೇಳಿದನು. ಅವನ ಶಿಷ್ಯರು ಇದನ್ನು ಕೇಳಿಸಿಕೊಳ್ಳುತ್ತಿದ್ದರು. 15  ತರುವಾಯ ಅವರು ಯೆರೂಸಲೇಮಿಗೆ ಬಂದರು. ಅಲ್ಲಿ ಅವನು ದೇವಾಲಯವನ್ನು ಪ್ರವೇಶಿಸಿ ಅದರೊಳಗೆ ಮಾರುತ್ತಿದ್ದವರನ್ನೂ ಕೊಳ್ಳುತ್ತಿದ್ದವರನ್ನೂ ಹೊರಗಟ್ಟಲಾರಂಭಿಸಿದನು. ಮತ್ತು ಹಣವಿನಿಮಯಗಾರರ ಮೇಜುಗಳನ್ನು ಹಾಗೂ ಪಾರಿವಾಳಗಳನ್ನು ಮಾರುತ್ತಿದ್ದವರ ಕಾಲ್ಮಣೆಗಳನ್ನು ಕೆಡವಿದನು; 16  ಯಾರೂ ಪಾತ್ರೆಯನ್ನು ಹೊತ್ತುಕೊಂಡು ದೇವಾಲಯದೊಳಗಿಂದ ಹಾದುಹೋಗುವಂತೆ ಅವನು ಬಿಡಲಿಲ್ಲ. 17  ಆದರೆ ಅವನು ಅವರಿಗೆ ಬೋಧಿಸುತ್ತಾ, “ ‘ನನ್ನ ಆಲಯವು ಎಲ್ಲ ಜನಾಂಗಗಳಿಗೂ ಪ್ರಾರ್ಥನಾ ಮಂದಿರವೆನಿಸಿಕೊಳ್ಳುವುದು’ ಎಂದು ಬರೆದಿದೆಯಲ್ಲವೆ? ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ” ಎಂದು ಹೇಳಿದನು. 18  ಇದನ್ನು ಕೇಳಿಸಿಕೊಂಡ ಮುಖ್ಯ ಯಾಜಕರೂ ಶಾಸ್ತ್ರಿಗಳೂ ಅವನನ್ನು ಕೊಲ್ಲುವ ಮಾರ್ಗವನ್ನು ಹುಡುಕತೊಡಗಿದರು; ಏಕೆಂದರೆ ಜನರ ಗುಂಪೆಲ್ಲ ಅವನ ಬೋಧನೆಯನ್ನು ಕೇಳಿಸಿಕೊಂಡು ಯಾವಾಗಲೂ ಆಶ್ಚರ್ಯಪಡುತ್ತಿದ್ದ ಕಾರಣ ಅವನ ವಿಷಯದಲ್ಲಿ ಅವರಿಗೆ ಭಯವಿತ್ತು. 19  ಸಂಜೆಯಾದಾಗ ಅವರು ಪಟ್ಟಣವನ್ನು ಬಿಟ್ಟು ಹೊರಗೆ ಹೋಗುತ್ತಿದ್ದರು. 20  ಆದರೆ ಮರುದಿನ ಮುಂಜಾನೆ ಅವರು ದಾರಿಯಲ್ಲಿ ಬರುತ್ತಿದ್ದಾಗ ಆ ಅಂಜೂರದ ಮರವು ಬೇರುಸಹಿತವಾಗಿ ಒಣಗಿಹೋಗಿರುವುದನ್ನು ಕಂಡರು. 21  ಆಗ ಪೇತ್ರನು ವಿಷಯವನ್ನು ನೆನಪಿಸಿಕೊಂಡು ಅವನಿಗೆ, “ರಬ್ಬಿಯೇ ಅಲ್ಲಿ ನೋಡು! ನೀನು ಶಪಿಸಿದ ಅಂಜೂರದ ಮರವು ಒಣಗಿಹೋಗಿದೆ” ಎಂದು ಹೇಳಿದನು. 22  ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಅವರಿಗೆ, “ನಿಮಗೆ ದೇವರಲ್ಲಿ ನಂಬಿಕೆಯಿರಲಿ. 23  ನಿಮಗೆ ನಿಜವಾಗಿ ಹೇಳುತ್ತೇನೆ, ಯಾವನಾದರೂ ಈ ಬೆಟ್ಟಕ್ಕೆ ‘ಎತ್ತಲ್ಪಟ್ಟು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಹೇಳಿ ತನ್ನ ಹೃದಯದಲ್ಲಿ ಸಂಶಯಪಡದೆ ತಾನು ಹೇಳಿದ್ದು ಆಗುವುದೆಂದು ನಂಬುವುದಾದರೆ ಅವನು ಹೇಳಿದಂತೆಯೇ ಆಗುವುದು. 24  ಆದಕಾರಣ ನಾನು ನಿಮಗೆ ಹೇಳುವುದೇನೆಂದರೆ, ನೀವು ಪ್ರಾರ್ಥನೆಯಲ್ಲಿ ಬೇಡಿಕೊಳ್ಳುವ ಎಲ್ಲವನ್ನೂ ಕಾರ್ಯತಃ ಪಡೆದಿದ್ದೀರಿ ಎಂದು ನಂಬುವುದಾದರೆ ಅದು ನಿಮಗೆ ದೊರಕುವುದು. 25  ನೀವು ನಿಂತುಕೊಂಡು ಪ್ರಾರ್ಥಿಸುವಾಗ ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಕ್ಷಮಿಸಿರಿ; ಆಗ ಸ್ವರ್ಗದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ಅಪರಾಧಗಳನ್ನು ಕ್ಷಮಿಸಬಹುದು” ಎಂದು ಹೇಳಿದನು. 26  *—⁠—⁠ 27  ಅವರು ಪುನಃ ಯೆರೂಸಲೇಮಿಗೆ ಬಂದರು. ಮತ್ತು ಅವನು ದೇವಾಲಯದಲ್ಲಿ ತಿರುಗಾಡುತ್ತಿದ್ದಾಗ ಮುಖ್ಯ ಯಾಜಕರೂ ಶಾಸ್ತ್ರಿಗಳೂ ಹಿರೀಪುರುಷರೂ ಅವನ ಬಳಿಗೆ ಬಂದು, 28  “ನೀನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೀ? ಅಥವಾ ಇವುಗಳನ್ನು ಮಾಡುವುದಕ್ಕೆ ನಿನಗೆ ಅಧಿಕಾರವನ್ನು ಕೊಟ್ಟವರು ಯಾರು?” ಎಂದು ಅವನನ್ನು ಕೇಳಿದರು. 29  ಯೇಸು ಅವರಿಗೆ, “ನಾನು ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರಕೊಟ್ಟರೆ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂಬುದನ್ನು ನಿಮಗೆ ಹೇಳುತ್ತೇನೆ. 30  ಯೋಹಾನನು ಮಾಡಿಸಿದ ದೀಕ್ಷಾಸ್ನಾನವು ಸ್ವರ್ಗದಿಂದ ಬಂತೋ ಮನುಷ್ಯರಿಂದ ಬಂತೊ? ಉತ್ತರ ಕೊಡಿರಿ” ಎಂದನು. 31  ಆಗ ಅವರು, “ ‘ಸ್ವರ್ಗದಿಂದ ಬಂತು’ ಎಂದು ನಾವು ಹೇಳಿದರೆ, ‘ಹಾಗಾದರೆ ನೀವೇಕೆ ಅವನನ್ನು ನಂಬಲಿಲ್ಲ?’ ಎಂದು ಹೇಳುವನು. 32  ಆದರೆ ‘ಮನುಷ್ಯರಿಂದ ಬಂತು’ ಎಂದು ಹೇಳುವ ಧೈರ್ಯ ನಮಗಿದೆಯೆ?” ಎಂದು ತಮ್ಮತಮ್ಮೊಳಗೆ ಚರ್ಚಿಸಲಾರಂಭಿಸಿದರು.—⁠ಅವರಿಗೆ ಜನರ ಭಯವಿತ್ತು, ಏಕೆಂದರೆ ಜನರೆಲ್ಲರೂ ಯೋಹಾನನನ್ನು ಒಬ್ಬ ಪ್ರವಾದಿಯೆಂದು ನಂಬಿದ್ದರು. 33  ಆದಕಾರಣ ಯೇಸುವಿನ ಮಾತಿಗೆ ಉತ್ತರವಾಗಿ ಅವರು, “ನಮಗೆ ಗೊತ್ತಿಲ್ಲ” ಅಂದರು. ಆಗ ಯೇಸು ಅವರಿಗೆ, “ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆ ಎಂಬುದನ್ನು ನಾನೂ ನಿಮಗೆ ಹೇಳುವುದಿಲ್ಲ” ಎಂದನು.

ಪಾದಟಿಪ್ಪಣಿ

ಮಾರ್ಕ 11:26 ಮತ್ತಾ 17:21ರ ಪಾದಟಿಪ್ಪಣಿಯನ್ನು ನೋಡಿ.