ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮತ್ತಾಯ 9:1-38

9  ಆದುದರಿಂದ ಅವನು ದೋಣಿಯನ್ನು ಹತ್ತಿ ಆಚೇದಡದಲ್ಲಿರುವ ತನ್ನ ಸ್ವಂತ ಊರಿಗೆ ಹೋದನು.  ಆಗ ಜನರು ಹಾಸಿಗೆಯ ಮೇಲೆ ಮಲಗಿರುವ ಒಬ್ಬ ಪಾರ್ಶ್ವವಾಯು ರೋಗಿಯನ್ನು ಅವನ ಬಳಿಗೆ ಹೊತ್ತುಕೊಂಡು ಬಂದರು. ಯೇಸು ಅವರ ನಂಬಿಕೆಯನ್ನು ನೋಡಿ, ಆ ಪಾರ್ಶ್ವವಾಯು ರೋಗಿಗೆ, “ಮಗನೇ ಧೈರ್ಯವಾಗಿರು; ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದನು.  ಅಲ್ಲಿದ್ದ ಶಾಸ್ತ್ರಿ​ಗಳಲ್ಲಿ ಕೆಲವರು, “ಇವನು ದೇವದೂಷಣೆಮಾಡುತ್ತಿದ್ದಾನೆ” ಎಂದು ತಮ್ಮತಮ್ಮೊಳಗೆ ಹೇಳಿಕೊಂಡರು.  ಯೇಸು ಅವರ ಆಲೋಚನೆಗಳನ್ನು ಗ್ರಹಿಸಿ ಅವರಿಗೆ, “ನೀವು ನಿಮ್ಮ ಹೃದಯಗಳಲ್ಲಿ ಕೆಟ್ಟ ವಿಷಯಗಳನ್ನು ಆಲೋಚಿಸುತ್ತಿರುವುದೇಕೆ?  ಯಾವುದು ಸುಲಭ? ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಎನ್ನುವುದೊ ಅಥವಾ ಎದ್ದು ನಡೆ ಎಂದು ಹೇಳುವುದೊ?  ಆದರೆ ಭೂಮಿಯ ಮೇಲೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯಕುಮಾರನಿಗೆ ಅಧಿಕಾರವಿದೆ ಎಂದು ನೀವು ತಿಳಿದುಕೊಳ್ಳುವುದಕ್ಕೋಸ್ಕರವೇ” ಎಂದು ಹೇಳಿ​—⁠ಅವನು ಪಾರ್ಶ್ವವಾಯು ರೋಗಿಗೆ, “ನೀನೆದ್ದು ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗು” ಅಂದನು.  ಹಾಗೆಯೇ ಅವನು ಎದ್ದು ತನ್ನ ಮನೆಗೆ ಹೊರಟುಹೋದನು.  ಇದನ್ನು ನೋಡಿ ಜನರು ಭಯಚಕಿತರಾಗಿ ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟ ದೇವರನ್ನು ಮಹಿಮೆಪಡಿಸಿದರು.  ಯೇಸು ಅಲ್ಲಿಂದ ಹೋಗುತ್ತಿರುವಾಗ, ತೆರಿಗೆ ಕಟ್ಟೆಯಲ್ಲಿ ಕುಳಿತುಕೊಂಡಿದ್ದ ಮತ್ತಾಯನೆಂಬ ಹೆಸರಿನ ಒಬ್ಬ ಮನುಷ್ಯನನ್ನು ಕಂಡು ಅವನಿಗೆ, “ನನ್ನ ಹಿಂಬಾಲಕನಾಗು” ಎಂದು ಹೇಳಿದನು. ಆಗ ಅವನೆದ್ದು ಅವನನ್ನು ಹಿಂಬಾಲಿಸಿದನು. 10  ಅನಂತರ ಯೇಸು ಆ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ, ಅನೇಕ ಮಂದಿ ತೆರಿಗೆ ವಸೂಲಿ​ಗಾರರೂ ಪಾಪಿಗಳೂ ಬಂದು ಅವನ ಮತ್ತು ಅವನ ಶಿಷ್ಯರ ಪಂಕ್ತಿಯಲ್ಲೇ ಕುಳಿತು​ಕೊಂಡರು. 11  ಆದರೆ ಫರಿಸಾಯರು ಇದನ್ನು ನೋಡಿ, “ನಿಮ್ಮ ಬೋಧಕನು ತೆರಿಗೆ ವಸೂಲಿಮಾಡುವವರ ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಅವನ ಶಿಷ್ಯರನ್ನು ಕೇಳಿದರು. 12  ಅವರ ಮಾತುಗಳನ್ನು ಕೇಳಿ ಅವನು, “ಆರೋಗ್ಯವಂತರಿಗೆ ವೈದ್ಯನ ಆವಶ್ಯಕತೆ ಇಲ್ಲ, ಆದರೆ ರೋಗಿಗಳಿಗೆ ಇದೆ. 13  ಆದುದರಿಂದ ನೀವು ಹೋಗಿ, ‘ನನಗೆ ಯಜ್ಞವಲ್ಲ ಕರುಣೆಯೇ ಬೇಕು’ ಎಂಬುದರ ಅರ್ಥವನ್ನು ಕಲಿಯಿರಿ. ಏಕೆಂದರೆ ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಕರೆಯಲಿಕ್ಕಾಗಿ ಬಂದಿದ್ದೇನೆ” ಅಂದನು. 14  ಆಗ ಯೋಹಾನನ ಶಿಷ್ಯರು ಅವನ ಬಳಿಗೆ ಬಂದು, “ನಾವೂ ಫರಿಸಾಯರೂ ಉಪವಾಸವನ್ನು ಆಚರಿಸುತ್ತೇವೆ, ಆದರೆ ನಿನ್ನ ಶಿಷ್ಯರು ಏಕೆ ಉಪವಾಸಮಾಡುವುದಿಲ್ಲ?” ಎಂದು ಕೇಳಿದರು. 15  ಅದಕ್ಕೆ ಯೇಸು ಅವರಿಗೆ ಹೇಳಿದ್ದು: “ಮದು​ಮಗನು ತಮ್ಮೊಂದಿಗಿರುವಷ್ಟು ಸಮಯ ದುಃಖ​ಪಡಲು ಅವನ ಸ್ನೇಹಿತರಿಗೆ ಯಾವುದೇ ಕಾರಣವಿಲ್ಲ, ಅಲ್ಲವೆ? ಆದರೆ ಮದುಮಗನನ್ನು ಅವರ ಬಳಿಯಿಂದ ತೆಗೆದುಕೊಂಡುಹೋಗುವ ದಿವಸಗಳು ಬರುವವು. ಆಗ ಅವರು ಉಪವಾಸಮಾಡುವರು. 16  ಯಾರೂ ಹಳೆಯ ಮೇಲಂಗಿಗೆ ಮುದುರಿಸದಿರುವ ಬಟ್ಟೆ ತುಂಡನ್ನು ತೇಪೆಹಚ್ಚುವುದಿಲ್ಲ; ಹಚ್ಚಿದರೆ ಅದು ಹಳೆಯ ಮೇಲಂಗಿಯನ್ನು ಎಳೆಯಲಾಗಿ ಹರಿದ ಭಾಗವು ಇನ್ನೂ ದೊಡ್ಡದಾಗುವುದು. 17  ಮಾತ್ರವಲ್ಲ, ಜನರು ಹೊಸ ದ್ರಾಕ್ಷಾಮದ್ಯವನ್ನು ಹಳೆಯ ಚರ್ಮದ ಚೀಲಗಳಲ್ಲಿ ಹಾಕಿಡುವುದಿಲ್ಲ; ಹಾಕಿಟ್ಟರೆ ಚರ್ಮದ ಚೀಲಗಳು ಬಿರಿದು ದ್ರಾಕ್ಷಾಮದ್ಯವು ಹೊರಚೆಲ್ಲುತ್ತದೆ ಮತ್ತು ಚರ್ಮದ ಚೀಲಗಳು ಹಾಳಾಗಿಹೋಗುವವು. ಆದರೆ ಜನರು ಹೊಸ ದ್ರಾಕ್ಷಾಮದ್ಯವನ್ನು ಹೊಸ ಚರ್ಮದ ಚೀಲಗಳಲ್ಲಿ ಹಾಕಿಡುತ್ತಾರೆ; ಆಗ ಎರಡೂ ಕೆಡದೆ ಸುರಕ್ಷಿತವಾಗಿರುತ್ತವೆ.” 18  ಅವನು ಅವರಿಗೆ ಈ ವಿಷಯಗಳನ್ನು ಹೇಳುತ್ತಿದ್ದಾಗಲೇ ಒಬ್ಬ ​ಅಧಿಕಾರಿಯು ಅಲ್ಲಿಗೆ ಬಂದು ಪ್ರಣಾಮಮಾಡಿ, “ಇಷ್ಟರಲ್ಲಿ ನನ್ನ ಮಗಳು ತೀರಿಕೊಂಡಿರಬೇಕು; ಆದರೆ ನೀನು ಬಂದು ಅವಳ ಮೇಲೆ ಕೈಯಿಡು, ಆಗ ಅವಳು ಬದುಕುವಳು” ಎಂದು ಹೇಳಿದನು. 19  ಆಗ ಯೇಸು ಎದ್ದು ಅವನ ಹಿಂದೆ ಹೋದನು; ಅವನ ಶಿಷ್ಯರೂ ಹೋದರು. 20  ಆಗ ಹನ್ನೆರಡು ವರ್ಷಗಳಿಂದ ರಕ್ತ​ಸ್ರಾವರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀಯು ಹಿಂದಿನಿಂದ ಬಂದು ಅವನ ಮೇಲಂಗಿಯ ಅಂಚನ್ನು ಮುಟ್ಟಿದಳು; 21  ಏಕೆಂದರೆ ಅವಳು, “ನಾನು ಅವನ ಮೇಲಂಗಿಯನ್ನು ಮುಟ್ಟಿದರೆ ಸಾಕು, ವಾಸಿಯಾಗುವೆನು” ಎಂದು ತನ್ನಲ್ಲೇ ಅಂದುಕೊಂಡಿದ್ದಳು. 22  ಯೇಸು ಹಿಂದೆ ತಿರುಗಿ ಅವಳನ್ನು ನೋಡಿ, “ಮಗಳೇ ಧೈರ್ಯವಾಗಿರು; ನಿನ್ನ ನಂಬಿಕೆಯು ನಿನ್ನನ್ನು ವಾಸಿಮಾಡಿದೆ” ಎಂದು ಹೇಳಿದನು. ಆ ಗಳಿಗೆಯಿಂದ ಆ ಸ್ತ್ರೀಯು ಸ್ವಸ್ಥಳಾದಳು. 23  ಯೇಸು ಆ ಅಧಿಕಾರಿಯ ಮನೆಗೆ ಬಂದಾಗ, ಕೊಳಲೂದುವವರನ್ನೂ ಜನರ ಗದ್ದಲ ಮತ್ತು ಗಲಿಬಿಲಿಯನ್ನೂ ಕಂಡು, 24  “ಇಲ್ಲಿಂದ ಹೊರಗೆ ಹೋಗಿ; ಈ ಹುಡುಗಿಯು ಸತ್ತಿಲ್ಲ, ನಿದ್ರೆಮಾಡುತ್ತಿದ್ದಾಳೆ” ಅಂದನು. ಇದನ್ನು ಕೇಳಿ ಅವರು ತಿರಸ್ಕಾರಭಾವದಿಂದ ನಗತೊಡಗಿದರು. 25  ಜನರ ಗುಂಪನ್ನು ಹೊರಗೆ ಕಳುಹಿಸಿದ ಕೂಡಲೆ ಅವನು ಒಳಗೆ ಹೋಗಿ ಆ ಹುಡುಗಿಯ ಕೈಹಿಡಿದಾಗ ಅವಳು ಎದ್ದಳು. 26  ಈ ಸುದ್ದಿಯು ಖಂಡಿತ​ವಾಗಿಯೂ ಆ ಪ್ರಾಂತದಲ್ಲೆಲ್ಲಾ ಹಬ್ಬಿತು. 27  ಯೇಸು ಅಲ್ಲಿಂದ ಹಾದು​ಹೋಗುತ್ತಿದ್ದಾಗ ಇಬ್ಬರು ಕುರುಡರು ಅವನ ಹಿಂದೆ ಬರುತ್ತಾ, “ದಾವೀದನ ಕುಮಾರನೇ, ನಮಗೆ ಕರುಣೆ ತೋರಿಸು” ಎಂದು ಕೂಗುತ್ತಾ ಇದ್ದರು. 28  ಅವನು ಮನೆಗೆ ಬಂದಾಗ ಆ ಕುರುಡರೂ ಅವನ ಬಳಿಗೆ ಬಂದರು; ಯೇಸು ಅವರಿಗೆ, “ನಾನು ಇದನ್ನು ಮಾಡಬಲ್ಲೆನೆಂಬ ನಂಬಿಕೆ ನಿಮಗಿದೆಯೊ?” ಎಂದು ಕೇಳಿದನು. ಅದಕ್ಕೆ ಅವರು, “ಹೌದು ಸ್ವಾಮಿ” ಎಂದು ಉತ್ತರಿಸಿದರು. 29  ನಂತರ ಅವನು ಅವರ ಕಣ್ಣುಗಳನ್ನು ಮುಟ್ಟಿ, “ನೀವು ನಂಬಿದಂತೆಯೇ ನಿಮಗಾಗಲಿ” ಎಂದು ಹೇಳಿದನು. 30  ಆಗ ಅವರ ಕಣ್ಣುಗಳಿಗೆ ದೃಷ್ಟಿಬಂತು. ಇದಲ್ಲದೆ, “ಇದರ ಕುರಿತು ಯಾರಿಗೂ ತಿಳಿದುಬರದಂತೆ ನೋಡಿಕೊಳ್ಳಿ” ಎಂದು ಯೇಸು ಅವರಿಗೆ ಕಟ್ಟಪ್ಪಣೆ ಮಾಡಿದನು. 31  ಆದರೆ ಅವರು ಹೊರಗೆ ಹೋದ ಬಳಿಕ ಆ ಪ್ರಾಂತದಲ್ಲೆಲ್ಲಾ ಅವನ ಕುರಿತಾದ ಸುದ್ದಿಯನ್ನು ಬಹಿರಂಗಪಡಿಸಿದರು. 32  ಅವರು ಹೊರಡುತ್ತಿದ್ದಾಗ ದೆವ್ವ​ಹಿಡಿದಿದ್ದ ಒಬ್ಬ ಮೂಕನನ್ನು ಜನರು ಅವನ ಬಳಿಗೆ ಕರೆತಂದರು. 33  ಆ ದೆವ್ವವನ್ನು ಬಿಡಿಸಿದ ಬಳಿಕ ಆ ಮೂಕನು ಮಾತಾಡಿದನು. ಇದರಿಂದ ಜನರ ಗುಂಪು ಆಶ್ಚರ್ಯಪಟ್ಟು, “ಇಂಥ ಕಾರ್ಯವನ್ನು ಇಸ್ರಾಯೇಲಿನಲ್ಲಿ ಇದುವರೆಗೆ ನೋಡಿಲ್ಲ” ಎಂದು ಹೇಳಿತು. 34  ಆದರೆ ಫರಿಸಾಯರು, “ಇವನು ದೆವ್ವಗಳ ಒಡೆಯನ ಸಹಾಯದಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ” ಎಂದು ಹೇಳತೊಡಗಿದರು. 35  ಯೇಸು ಎಲ್ಲ ಪಟ್ಟಣಗಳಲ್ಲಿಯೂ ಹಳ್ಳಿಗಳಲ್ಲಿಯೂ ಸಂಚರಿಸಿ ಅವರ ಸಭಾಮಂದಿರಗಳಲ್ಲಿ ಬೋಧಿಸುತ್ತಾ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರ ಎಲ್ಲ ರೀತಿಯ ರೋಗಗಳನ್ನೂ ದೇಹದೌರ್ಬಲ್ಯಗಳನ್ನೂ ಗುಣಪಡಿಸುತ್ತಾ ಬಂದನು. 36  ಅವನು ಜನರ ಗುಂಪನ್ನು ನೋಡಿ ಇವರು ಕುರುಬನಿಲ್ಲದ ಕುರಿಗಳ ಹಾಗೆ ಸುಲಿಯಲ್ಪಟ್ಟು * ಚದುರಿಸಲ್ಪಟ್ಟಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು. 37  ಬಳಿಕ ಅವನು ತನ್ನ ಶಿಷ್ಯರಿಗೆ “ಹೌದು, ಕೊಯ್ಲು ಬಹಳವಿದೆ; ಆದರೆ ಕೆಲಸ​ಗಾರರು ಕೊಂಚ. 38  ಆದುದರಿಂದ ತನ್ನ ಕೊಯ್ಲಿಗೆ ಕೆಲಸದವರನ್ನು ಕಳುಹಿಸಿಕೊಡುವಂತೆ ಕೊಯ್ಲಿನ ಯಜಮಾನನನ್ನು ಬೇಡಿಕೊಳ್ಳಿರಿ” ಎಂದು ಹೇಳಿದನು.

ಪಾದಟಿಪ್ಪಣಿ

ಮತ್ತಾ 9:36  ಅಥವಾ, “ಪೀಡಿಸಲ್ಪಟ್ಟು; ಕಿರುಕುಳ​ಕೊಡಲ್ಪಟ್ಟು.”