ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮತ್ತಾಯ 27:1-66

27  ಬೆಳಗಾದಾಗ ಎಲ್ಲ ಮುಖ್ಯ ಯಾಜಕರೂ ಜನರ ಹಿರೀಪುರುಷರೂ ಯೇಸುವನ್ನು ಕೊಲ್ಲಿಸುವುದಕ್ಕಾಗಿ ಅವನ ವಿರುದ್ಧ ಸಮಾಲೋಚನೆ ಮಾಡಿದರು.  ಅವರು ಅವನನ್ನು ಕಟ್ಟಿದ ಬಳಿಕ ಕರೆದುಕೊಂಡು ಹೋಗಿ ರಾಜ್ಯಪಾಲನಾದ ಪಿಲಾತನ ಕೈಗೆ ಒಪ್ಪಿಸಿದರು.  ಅವನಿಗೆ ನಂಬಿಕೆ ದ್ರೋಹಮಾಡಿದ ಯೂದನು ಅವನಿಗೆ ಮರಣದಂಡನೆಯ ತೀರ್ಪಾದುದನ್ನು ನೋಡಿ ಪರಿತಾಪಪಟ್ಟು ಆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಮುಖ್ಯ ಯಾಜಕರಿಗೂ ಹಿರೀಪುರುಷರಿಗೂ ಹಿಂದಿರುಗಿಸುತ್ತಾ,  “ನಾನು ನೀತಿವಂತನ ರಕ್ತಕ್ಕೆ ದ್ರೋಹಬಗೆದು ಪಾಪಮಾಡಿದೆ” ಎಂದು ಹೇಳಿದನು. ಅದಕ್ಕೆ ಅವರು, “ಅದರಿಂದ ನಮಗೇನು? ಅದನ್ನು ನೀನೇ ನೋಡಿಕೊಳ್ಳಬೇಕು” ಎಂದರು.  ಆಗ ಅವನು ಆ ಬೆಳ್ಳಿ ನಾಣ್ಯಗಳನ್ನು ದೇವಾಲಯದೊಳಗೆ ಬಿಸಾಡಿಬಿಟ್ಟು ಹೊರಟುಹೋಗಿ ನೇಣುಹಾಕಿಕೊಂಡನು.  ಆದರೆ ಮುಖ್ಯ ಯಾಜಕರು ಆ ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡು, “ಇದು ರಕ್ತದ ಬೆಲೆಯಾಗಿರುವುದರಿಂದ ಇದನ್ನು ಪವಿತ್ರ ಬೊಕ್ಕಸದೊಳಕ್ಕೆ ಹಾಕುವುದು ಧರ್ಮಸಮ್ಮತವಲ್ಲ” ಎಂದು ಹೇಳಿದರು.  ಒಟ್ಟಿಗೆ ಸಮಾಲೋಚನೆ ನಡೆಸಿದ ಬಳಿಕ ಅದರಿಂದ ಅಪರಿಚಿತರನ್ನು ಹೂಣಲಿಕ್ಕಾಗಿ ಕುಂಬಾರನ ಹೊಲವನ್ನು ಕೊಂಡುಕೊಂಡರು.  ಆದುದರಿಂದ ಆ ಹೊಲಕ್ಕೆ ಇಂದಿನ ವರೆಗೂ “ರಕ್ತದ ಹೊಲ” ಎಂಬ ಹೆಸರಿದೆ.  ಹೀಗೆ ಪ್ರವಾದಿಯಾದ ಯೆರೆಮೀಯನ ಮೂಲಕ ತಿಳಿಸಲ್ಪಟ್ಟ ಮಾತು ನೆರವೇರಿತು. ಅದೇನೆಂದರೆ, “ಕೆಲವು ಇಸ್ರಾಯೇಲ್ಯರು ಒಬ್ಬನ ಮೇಲೆ ನಿಗದಿಪಡಿಸಿದ ಬೆಲೆಯನ್ನು ಅಂದರೆ ಒಬ್ಬ ಮನುಷ್ಯನಿಗೆ ಅವರು ಕಟ್ಟಿದ ಬೆಲೆಯಾದ ಮೂವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡು ಹೋಗಿ 10  ಯೆಹೋವನು ನನಗೆ ಆಜ್ಞಾಪಿಸಿದಂತೆಯೇ ಕುಂಬಾರನ ಹೊಲಕ್ಕೆ ಕೊಟ್ಟರು.” 11  ಯೇಸು ರಾಜ್ಯಪಾಲನ ಮುಂದೆ ನಿಂತಿದ್ದಾಗ ರಾಜ್ಯಪಾಲನು ಅವನಿಗೆ, “ನೀನು ಯೆಹೂದ್ಯರ ಅರಸನೊ?” ಎಂದು ಪ್ರಶ್ನಿಸಿದನು. ಅದಕ್ಕೆ ಯೇಸು, “ನೀನೇ ಅದನ್ನು ಹೇಳುತ್ತಾ ಇದ್ದೀ” ಎಂದು ಉತ್ತರಿಸಿದನು. 12  ಆದರೆ ಮುಖ್ಯ ಯಾಜಕರೂ ಹಿರೀಪುರುಷರೂ ಅವನ ಮೇಲೆ ದೂರುಹೊರಿಸುತ್ತಿರುವಾಗ ಅವನು ಏನೂ ಉತ್ತರಕೊಡಲಿಲ್ಲ. 13  ಆಗ ಪಿಲಾತನು ಅವನಿಗೆ, “ಅವರು ನಿನ್ನ ವಿರುದ್ಧ ಎಷ್ಟು ಸಾಕ್ಷಿಹೇಳುತ್ತಿದ್ದಾರೆ ಎಂಬುದು ನಿನಗೆ ಕೇಳಿಸುತ್ತಿಲ್ಲವೊ?” ಅಂದನು. 14  ಆದರೂ ಅದಕ್ಕೆ ಯೇಸು ಯಾವುದೇ ಉತ್ತರವನ್ನು ಕೊಡಲಿಲ್ಲ, ಒಂದು ಮಾತನ್ನೂ ಆಡಲಿಲ್ಲ; ಆದಕಾರಣ ರಾಜ್ಯಪಾಲನು ತುಂಬ ಆಶ್ಚರ್ಯಪಟ್ಟನು. 15  ಪ್ರತಿ ಹಬ್ಬದ ಸಮಯದಲ್ಲಿ ಜನರು ಇಷ್ಟಪಡುವ ಒಬ್ಬ ಸೆರೆಯಾಳನ್ನು ಬಿಡುಗಡೆಮಾಡುವುದು ರಾಜ್ಯಪಾಲನ ಪದ್ಧತಿಯಾಗಿತ್ತು. 16  ಆ ಸಮಯದಲ್ಲಿ ಬರಬ್ಬನೆಂಬ ಒಬ್ಬ ಕುಖ್ಯಾತ ಸೆರೆಯಾಳನ್ನು ಅವರು ಹಿಡಿದಿಟ್ಟಿದ್ದರು. 17  ಆದುದರಿಂದ ಜನಸಮೂಹವು ಕೂಡಿಬಂದಿದ್ದಾಗ ಪಿಲಾತನು ಅವರಿಗೆ, “ನಾನು ನಿಮಗಾಗಿ ಯಾರನ್ನು ಬಿಡುಗಡೆಮಾಡಬೇಕೆಂದು ನೀವು ಬಯಸುತ್ತೀರಿ? ಬರಬ್ಬನನ್ನೋ ಅಥವಾ ಕ್ರಿಸ್ತನೆನಿಸಿಕೊಳ್ಳುವ ಯೇಸುವನ್ನೊ?” ಎಂದು ಕೇಳಿದನು. 18  ಏಕೆಂದರೆ ಮತ್ಸರದಿಂದಲೇ ಅವರು ಇವನನ್ನು ತನಗೆ ಒಪ್ಪಿಸಿದ್ದಾರೆ ಎಂಬುದು ಅವನಿಗೆ ತಿಳಿದಿತ್ತು. 19  ಇದಲ್ಲದೆ ಅವನು ನ್ಯಾಯಾಸನದ ಮೇಲೆ ಕುಳಿತುಕೊಂಡಿದ್ದಾಗ ಅವನ ಹೆಂಡತಿಯು ಅವನಿಗೆ, “ಈ ನೀತಿವಂತನ ಗೊಡವೆಗೆ ಹೋಗಬೇಡ, ಏಕೆಂದರೆ ಅವನಿಂದಾಗಿ ಇಂದು ಕನಸಿನಲ್ಲಿ ನಾನು ತುಂಬ ಕಷ್ಟಪಟ್ಟೆ” ಎಂದು ಹೇಳಿಕಳುಹಿಸಿದಳು. 20  ಆದರೆ ಮುಖ್ಯ ಯಾಜಕರೂ ಹಿರೀಪುರುಷರೂ ಬರಬ್ಬನನ್ನು ಬಿಡುಗಡೆಮಾಡಿ ಯೇಸುವನ್ನು ನಾಶಮಾಡಲು ಕೇಳಿಕೊಳ್ಳುವಂತೆ ಜನರನ್ನು ಒಡಂಬಡಿಸಿದರು. 21  ಆಗ ರಾಜ್ಯಪಾಲನು ಪುನಃ ಅವರಿಗೆ, “ಈ ಇಬ್ಬರಲ್ಲಿ ನಿಮಗಾಗಿ ನಾನು ಯಾರನ್ನು ಬಿಡುಗಡೆಮಾಡಬೇಕೆಂದು ಬಯಸುತ್ತೀರಿ?” ಎಂದಾಗ “ಬರಬ್ಬನನ್ನೇ” ಎಂದು ಅವರು ಉತ್ತರಿಸಿದರು. 22  ಪಿಲಾತನು ಅವರಿಗೆ, “ಹಾಗಾದರೆ ಕ್ರಿಸ್ತನೆನಿಸಿಕೊಳ್ಳುವ ಯೇಸುವನ್ನು ನಾನು ಏನು ಮಾಡಲಿ?” ಎಂದು ಕೇಳಿದಾಗ ಅವರೆಲ್ಲರು, “ಅವನನ್ನು ಶೂಲಕ್ಕೇರಿಸು” ಎಂದು ಹೇಳಿದರು. 23  ಅದಕ್ಕೆ ಅವನು, “ಏಕೆ? ಇವನು ಯಾವ ಅಪರಾಧವನ್ನು ಮಾಡಿದ್ದಾನೆ?” ಎಂದು ಕೇಳಿದನು. ಆದರೂ ಅವರು “ಅವನನ್ನು ಶೂಲಕ್ಕೇರಿಸು” ಎಂದು ಇನ್ನಷ್ಟು ಜೋರಾಗಿ ಬೊಬ್ಬೆಹಾಕುತ್ತಾ ಇದ್ದರು. 24  ಇದರಿಂದ ಯಾವುದೇ ಒಳಿತಾಗುತ್ತಿಲ್ಲ, ಬದಲಾಗಿ ಗದ್ದಲವೇ ಹೆಚ್ಚಾಗುತ್ತಿದೆ ಎಂಬುದನ್ನು ಕಂಡ ಪಿಲಾತನು ನೀರನ್ನು ತೆಗೆದುಕೊಂಡು ಜನರ ಮುಂದೆ ತನ್ನ ಕೈಗಳನ್ನು ತೊಳೆದು, “ಈ ಮನುಷ್ಯನ ರಕ್ತದಿಂದ ನಾನು ದೋಷಮುಕ್ತನಾಗಿದ್ದೇನೆ. ನೀವೇ ಇದನ್ನು ನೋಡಿಕೊಳ್ಳಬೇಕು” ಎಂದು ಹೇಳಿದನು. 25  ಆಗ ಜನರೆಲ್ಲರು, “ಇವನ ರಕ್ತಾಪರಾಧವು ನಮ್ಮ ಮೇಲೂ ನಮ್ಮ ಮಕ್ಕಳ ಮೇಲೂ ಬರಲಿ” ಎಂದು ಹೇಳಿದರು. 26  ಆಗ ಅವನು ಅವರಿಗೆ ಬರಬ್ಬನನ್ನು ಬಿಡುಗಡೆಮಾಡಿ ಯೇಸುವನ್ನು ಕೊರಡೆಗಳಿಂದ ಹೊಡೆಸಿ ಶೂಲಕ್ಕೇರಿಸಲು ಒಪ್ಪಿಸಿದನು. 27  ರಾಜ್ಯಪಾಲನ ಸೈನಿಕರು ಯೇಸುವನ್ನು ರಾಜ್ಯಪಾಲನ ಅರಮನೆಯೊಳಗೆ ಕರೆದುಕೊಂಡುಹೋದರು ಮತ್ತು ಅವನ ಬಳಿ ತಮ್ಮ ದಳದವರನ್ನೆಲ್ಲ ಒಟ್ಟುಗೂಡಿಸಿದರು. 28  ಅವನ ಬಟ್ಟೆಗಳನ್ನು ತೆಗೆದುಹಾಕಿ ಅವನಿಗೆ ಕಡುಗೆಂಪು ಬಣ್ಣದ ವಸ್ತ್ರವನ್ನು ಹೊದಿಸಿದರು 29  ಮತ್ತು ಅವರು ಮುಳ್ಳಿನ ಕಿರೀಟವನ್ನು ಹೆಣೆದು ಅವನ ತಲೆಯ ಮೇಲಿಟ್ಟು, ಅವನ ಬಲಗೈಯಲ್ಲಿ ಒಂದು ಬೆತ್ತವನ್ನು ಕೊಟ್ಟರು. ಬಳಿಕ ಅವನ ಮುಂದೆ ಮೊಣಕಾಲೂರಿ, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ!” ಎಂದು ಹೇಳಿ ಅಪಹಾಸ್ಯಮಾಡಿದರು. 30  ಇದಲ್ಲದೆ ಅವರು ಅವನ ಮೇಲೆ ಉಗುಳಿದರು ಮತ್ತು ಬೆತ್ತವನ್ನು ತೆಗೆದುಕೊಂಡು ಅವನ ತಲೆಯ ಮೇಲೆ ಹೊಡೆದರು. 31  ಈ ರೀತಿಯಲ್ಲಿ ಅವನನ್ನು ಪರಿಹಾಸ್ಯಮಾಡಿದ ಬಳಿಕ ಅವರು ಅವನ ಮೇಲೆ ಹೊದಿಸಿದ ವಸ್ತ್ರವನ್ನು ತೆಗೆದು ಅವನ ಮೇಲಂಗಿಯನ್ನೇ ಅವನಿಗೆ ಉಡಿಸಿ ಅವನನ್ನು ಶೂಲಕ್ಕೇರಿಸಲು ಕರೆದುಕೊಂಡುಹೋದರು. 32  ಅವರು ಹೊರಗೆ ಹೋಗುತ್ತಿರುವಾಗ ಕುರೇನೆ ಪಟ್ಟಣದ ಸೀಮೋನ ಎಂಬ ವ್ಯಕ್ತಿಯನ್ನು ಕಂಡರು. ಅವನನ್ನು ಯೇಸುವಿನ ಯಾತನಾ ಕಂಬವನ್ನು ಹೊರುವ ಕೆಲಸಕ್ಕೆ ಬಲವಂತವಾಗಿ ನೇಮಿಸಿದರು. 33  ಅವರು ಗೊಲ್ಗೊಥಾ ಎಂಬಲ್ಲಿಗೆ ಅಂದರೆ ಕಪಾಲ ಸ್ಥಳ ಎಂದು ಕರೆಯಲಾಗುತ್ತಿದ್ದಲ್ಲಿಗೆ ಬಂದಾಗ, 34  ಕಹಿ ರಸದಿಂದ ಕೂಡಿದ ದ್ರಾಕ್ಷಾಮದ್ಯವನ್ನು ಅವನಿಗೆ ಕುಡಿಯಲು ಕೊಟ್ಟರು; ಆದರೆ ಅವನು ಅದನ್ನು ರುಚಿನೋಡಿದ ಬಳಿಕ ಕುಡಿಯಲು ನಿರಾಕರಿಸಿದನು. 35  ಅವರು ಅವನನ್ನು ಶೂಲಕ್ಕೇರಿಸಿದ ಬಳಿಕ ಅವನ ಮೇಲಂಗಿಗಳನ್ನು ಚೀಟಿಎತ್ತಿ ಹಂಚಿಕೊಂಡರು. 36  ಮತ್ತು ಅಲ್ಲಿ ಕುಳಿತುಕೊಂಡು ಅವನ ಮೇಲೆ ಕಾವಲಿಟ್ಟರು. 37  ಇದಲ್ಲದೆ ಅವನ ತಲೆಯ ಮೇಲ್ಗಡೆ “ಇವನು ಯೆಹೂದ್ಯರ ಅರಸನಾದ ಯೇಸು” ಎಂಬ ಆಪಾದನೆಯ ಬರಹವನ್ನು ಅಂಟಿಸಿದರು. 38  ಅವನ ಬಲಗಡೆಯಲ್ಲಿ ಮತ್ತು ಎಡಗಡೆಯಲ್ಲಿ ಇಬ್ಬರು ಕಳ್ಳರನ್ನು ಶೂಲಕ್ಕೇರಿಸಲಾಯಿತು. 39  ಆದುದರಿಂದ ಹಾದುಹೋಗುತ್ತಿದ್ದವರು ತಮ್ಮ ತಲೆಗಳನ್ನು ಆಡಿಸುತ್ತಾ, 40  “ಆಹಾ, ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟಲಿರುವವನೇ, ನಿನ್ನನ್ನು ರಕ್ಷಿಸಿಕೋ! ನೀನು ದೇವಕುಮಾರನಾಗಿರುವಲ್ಲಿ ಈ ಯಾತನಾ ಕಂಬದಿಂದ ಕೆಳಗಿಳಿದು ಬಾ!” ಎಂದು ಅವನನ್ನು ಹಂಗಿಸಿದರು. 41  ಅಂತೆಯೇ ಮುಖ್ಯ ಯಾಜಕರೂ ಶಾಸ್ತ್ರಿಗಳೂ ಹಿರೀಪುರುಷರೂ ಸೇರಿ ಅವನನ್ನು ಅಪಹಾಸ್ಯಮಾಡುತ್ತಾ, 42  “ಇವನು ಇತರರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. ಇವನು ಇಸ್ರಾಯೇಲ್ಯರ ಅರಸನು; ಈಗ ಯಾತನಾ ಕಂಬದಿಂದ ಕೆಳಗಿಳಿದು ಬರಲಿ, ಆಗ ನಾವು ಅವನಲ್ಲಿ ನಂಬಿಕೆಯಿಡುವೆವು. 43  ಇವನು ದೇವರಲ್ಲಿ ಭರವಸೆಯಿಟ್ಟಿದ್ದಾನೆ; ಆತನಿಗೆ ಇವನು ಬೇಕಾಗಿದ್ದರೆ ಇವನನ್ನು ಕಾಪಾಡಲಿ, ಏಕೆಂದರೆ ‘ನಾನು ದೇವರ ಮಗನು’ ಎಂದು ಇವನೇ ಹೇಳಿದ್ದಾನೆ” ಎಂದರು. 44  ಅವನೊಂದಿಗೆ ಶೂಲಕ್ಕೇರಿಸಲ್ಪಟ್ಟಿದ್ದ ಕಳ್ಳರು ಸಹ ಅವನನ್ನು ಅದೇ ರೀತಿ ನಿಂದಿಸಲಾರಂಭಿಸಿದರು. 45  ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಮೂರು ಗಂಟೆಯ ವರೆಗೆ ದೇಶದಲ್ಲೆಲ್ಲಾ ಕತ್ತಲೆ ಕವಿಯಿತು. 46  ಮತ್ತು ಸುಮಾರು ಮೂರು ಗಂಟೆಗೆ ಯೇಸು, “ಏಲೀ, ಏಲೀ, ಲಮಾ ಸಬಕ್ತಾನೀ?” ಅಂದರೆ “ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ?” ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು. 47  ಅಲ್ಲಿ ನಿಂತಿದ್ದವರಲ್ಲಿ ಕೆಲವರು ಇದನ್ನು ಕೇಳಿಸಿಕೊಂಡು, “ನೋಡಿ, ಇವನು ಎಲೀಯನನ್ನು ಕರೆಯುತ್ತಿದ್ದಾನೆ” ಎಂದು ಹೇಳಿದರು. 48  ಕೂಡಲೆ ಅವರಲ್ಲೊಬ್ಬನು ಓಡಿಹೋಗಿ ಒಂದು ಸ್ಪಂಜನ್ನು ತೆಗೆದುಕೊಂಡು ಹುಳಿ ದ್ರಾಕ್ಷಾಮದ್ಯದಲ್ಲಿ ಅದ್ದಿ ಅದನ್ನು ಜೊಂಡು ಕೋಲಿಗೆ ಸಿಕ್ಕಿಸಿ ಅವನಿಗೆ ಕುಡಿಯುವುದಕ್ಕೆ ಕೊಟ್ಟನು. 49  ಆಗ ಉಳಿದವರೆಲ್ಲರೂ, “ಬಿಡಿರಿ, ಎಲೀಯನು ಇವನನ್ನು ರಕ್ಷಿಸಲು ಬರುತ್ತಾನೋ ನೋಡೋಣ” ಎಂದರು. ಇನ್ನೊಬ್ಬನು ಬಂದು ಈಟಿಯನ್ನು ತೆಗೆದು ಅವನ ಪಕ್ಕೆಗೆ ತಿವಿದಾಗ ರಕ್ತವೂ ನೀರೂ ಹೊರಬಂತು. 50  ಯೇಸು ಪುನಃ ಮಹಾಧ್ವನಿಯಿಂದ ಕೂಗಿ ಜೀವಬಿಟ್ಟನು. 51  ಆಗ ಪವಿತ್ರಸ್ಥಳದ ತೆರೆಯು ಮೇಲಿಂದ ಕೆಳಗಿನ ವರೆಗೆ ಹರಿದು ಇಬ್ಭಾಗವಾಯಿತು, ಭೂಮಿಯು ಕಂಪಿಸಿತು ಮತ್ತು ಬಂಡೆಗಳು ಸೀಳಿದವು. 52  ಸ್ಮರಣೆಯ ಸಮಾಧಿಗಳು ತೆರೆಯಲ್ಪಟ್ಟು ನಿದ್ರೆಹೋಗಿದ್ದ ಅನೇಕ ಪವಿತ್ರ ಜನರ ದೇಹಗಳು ಎಬ್ಬಿಸಲ್ಪಟ್ಟವು 53  ಮತ್ತು ಅವು ಅನೇಕರಿಗೆ ಕಾಣಿಸಿಕೊಂಡವು. (ಅವನು ಎಬ್ಬಿಸಲ್ಪಟ್ಟ ಬಳಿಕ ಸ್ಮರಣೆಯ ಸಮಾಧಿಗಳ ಮಧ್ಯದಿಂದ ಬಂದ ವ್ಯಕ್ತಿಗಳು ಪವಿತ್ರ ಪಟ್ಟಣವನ್ನು ಪ್ರವೇಶಿಸಿದರು.) 54  ಯೇಸುವನ್ನು ಕಾಯುತ್ತಾ ಇದ್ದ ಶತಾಧಿಪತಿಯೂ ಅವನೊಂದಿಗಿದ್ದವರೂ ಭೂಕಂಪವನ್ನು ಮತ್ತು ನಡೆದ ಸಂಗತಿಯನ್ನು ನೋಡಿ ತುಂಬ ಭಯಪಟ್ಟು, “ಖಂಡಿತವಾಗಿಯೂ ಇವನು ದೇವಕುಮಾರನಾಗಿದ್ದನು” ಎಂದರು. 55  ಇದಲ್ಲದೆ ಯೇಸುವಿನ ಸೇವೆಮಾಡಲು ಗಲಿಲಾಯದಿಂದ ಅವನ ಜೊತೆಯಲ್ಲಿ ಬಂದಿದ್ದ ಅನೇಕ ಸ್ತ್ರೀಯರು ದೂರದಿಂದ ಇದನ್ನು ನೋಡುತ್ತಿದ್ದರು; 56  ಅವರಲ್ಲಿ ಮಗ್ದಲದ ಮರಿಯಳೂ ಯಾಕೋಬನ ಮತ್ತು ಯೋಸೆಯ ತಾಯಿಯಾದ ಮರಿಯಳೂ ಜೆಬೆದಾಯನ ಮಕ್ಕಳ ತಾಯಿಯೂ ಇದ್ದರು. 57  ಇಷ್ಟರಲ್ಲಾಗಲೇ ಸಂಜೆಯಾಗಿದ್ದ ಕಾರಣ ಅರಿಮಥಾಯದ ಯೋಸೇಫನೆಂಬ ಐಶ್ವರ್ಯವಂತನು ಅಲ್ಲಿಗೆ ಬಂದನು; ಇವನು ಸಹ ಯೇಸುವಿನ ಶಿಷ್ಯನಾಗಿದ್ದನು. 58  ಇವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಕೇಳಿಕೊಂಡನು. ಆಗ ಪಿಲಾತನು ಅದನ್ನು ಕೊಡುವಂತೆ ಅಪ್ಪಣೆಕೊಟ್ಟನು. 59  ಯೋಸೇಫನು ದೇಹವನ್ನು ತೆಗೆದುಕೊಂಡು ಶುದ್ಧವಾದ ನಾರುಮಡಿಯಲ್ಲಿ ಅದನ್ನು ಸುತ್ತಿ 60  ಬಂಡೆಯಲ್ಲಿ ತಾನು ತೋಡಿದ್ದ ಹೊಸ ಸ್ಮರಣೆಯ ಸಮಾಧಿಯಲ್ಲಿಟ್ಟನು. ಮತ್ತು ಅದರ ಬಾಗಿಲಿಗೆ ದೊಡ್ಡ ಕಲ್ಲನ್ನು ಉರುಳಿಸಿದ ಬಳಿಕ ಅಲ್ಲಿಂದ ಹೊರಟುಹೋದನು. 61  ಆದರೆ ಮಗ್ದಲದ ಮರಿಯಳೂ ಇನ್ನೊಬ್ಬ ಮರಿಯಳೂ ಸಮಾಧಿಯ ಮುಂದೆ ಕುಳಿತುಕೊಂಡೇ ಇದ್ದರು. 62  ಮರುದಿನ ಅಂದರೆ ಸಿದ್ಧತೆಯ ದಿನವು ಕಳೆದ ಮೇಲೆ ಮುಖ್ಯ ಯಾಜಕರೂ ಫರಿಸಾಯರೂ ಪಿಲಾತನ ಮುಂದೆ ಕೂಡಿಬಂದು, 63  “ದೊರೆಯೇ, ಆ ವಂಚಕನು ಜೀವದಿಂದಿದ್ದಾಗ ‘ಮೂರು ದಿನಗಳ ಬಳಿಕ ನಾನು ಎಬ್ಬಿಸಲ್ಪಡುವೆನು’ ಎಂದು ಹೇಳಿದ್ದು ನಮ್ಮ ನೆನಪಿಗೆ ಬಂತು. 64  ಆದುದರಿಂದ ಮೂರನೆಯ ದಿನದ ತನಕ ಗೋರಿಯನ್ನು ಭದ್ರವಾಗಿ ಕಾಯುವಂತೆ ಅಪ್ಪಣೆಕೊಡು; ಇಲ್ಲದಿದ್ದರೆ ಅವನ ಶಿಷ್ಯರು ಬಂದು ಅವನ ದೇಹವನ್ನು ಕದ್ದುಕೊಂಡು ಹೋಗಿ ‘ಅವನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ’ ಎಂದು ಹೇಳಬಹುದು. ಆಗ ಮೊದಲನೆಯ ವಂಚನೆಗಿಂತ ಈ ಕಡೆಯ ವಂಚನೆಯು ಹೆಚ್ಚು ಕೆಟ್ಟದಾದೀತು” ಎಂದರು. 65  ಪಿಲಾತನು ಅವರಿಗೆ, “ಕಾವಲುಗಾರರನ್ನು ತೆಗೆದುಕೊಳ್ಳಿ. ಹೋಗಿ ನಿಮಗೆ ಎಷ್ಟು ಭದ್ರವಾಗಿಡಬೇಕೊ ಅಷ್ಟು ಭದ್ರವಾಗಿಡಿ” ಎಂದು ಹೇಳಿದನು. 66  ಅವರು ಹೋಗಿ ಕಲ್ಲಿಗೆ ಮುದ್ರೆಹಾಕಿ ಕಾವಲುಗಾರರನ್ನು ನೇಮಿಸಿ ಗೋರಿಯನ್ನು ಭದ್ರಪಡಿಸಿದರು.

ಪಾದಟಿಪ್ಪಣಿ