ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮತ್ತಾಯ 24:1-51

24  ಯೇಸು ದೇವಾಲಯದಿಂದ ಹೊರಟುಹೋಗುತ್ತಿದ್ದಾಗ ಅವನ ಶಿಷ್ಯರು ದೇವಾಲಯದ ಕಟ್ಟಡಗಳನ್ನು ತೋರಿಸಲಿಕ್ಕಾಗಿ ಅವನ ಬಳಿಗೆ ಬಂದರು.  ಆಗ ಯೇಸು ಅವರಿಗೆ, “ನೀವು ಇವುಗಳನ್ನೆಲ್ಲ ನೋಡುತ್ತೀರಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವೂ ಕೆಡವಲ್ಪಡುವುದು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಅಂದನು.  ಅವನು ಆಲೀವ್‌ ಮರಗಳ ಗುಡ್ಡದ ಮೇಲೆ ಕುಳಿತುಕೊಂಡಿದ್ದಾಗ ಶಿಷ್ಯರು ಪ್ರತ್ಯೇಕವಾಗಿ ಅವನ ಬಳಿಗೆ ಬಂದು, “ಈ ಸಂಗತಿಗಳು ಯಾವಾಗ ಸಂಭವಿಸುವವು ಮತ್ತು ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನು? ನಮಗೆ ಹೇಳು” ಎಂದರು.  ಅದಕ್ಕೆ ಉತ್ತರವಾಗಿ ಯೇಸು ಅವರಿಗೆ, “ನಿಮ್ಮನ್ನು ಯಾರೂ ತಪ್ಪುದಾರಿಗೆ ಎಳೆಯದಂತೆ ಎಚ್ಚರವಾಗಿರಿ.  ಅನೇಕರು ನನ್ನ ಹೆಸರಿನಲ್ಲಿ ಬಂದು ‘ನಾನೇ ಆ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ತಪ್ಪುದಾರಿಗೆ ಎಳೆಯುವರು.  ನೀವು ಯುದ್ಧಗಳಾಗುವುದನ್ನೂ ಯುದ್ಧಗಳ ಸುದ್ದಿಯನ್ನೂ ಕೇಳಿಸಿಕೊಳ್ಳುವಿರಿ; ಆಗ ಭಯಪಡದಂತೆ ನೋಡಿಕೊಳ್ಳಿರಿ. ಏಕೆಂದರೆ ಈ ಸಂಗತಿಗಳು ಸಂಭವಿಸಲೇಬೇಕು, ಆದರೆ ಇದು ಇನ್ನೂ ಅಂತ್ಯವಲ್ಲ.  “ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆಯೂ ಭೂಕಂಪಗಳೂ ಆಗುವವು.  ಇವೆಲ್ಲವೂ ಸಂಕಟದ ಶೂಲೆಯ ಪ್ರಾರಂಭ.  “ಆಗ ಜನರು ನಿಮ್ಮನ್ನು ಸಂಕಟಕ್ಕೆ ಒಪ್ಪಿಸಿ ಕೊಲ್ಲುವರು ಮತ್ತು ನನ್ನ ಹೆಸರಿನ ನಿಮಿತ್ತ ನೀವು ಎಲ್ಲ ಜನಾಂಗಗಳ ದ್ವೇಷಕ್ಕೆ ಗುರಿಯಾಗುವಿರಿ. 10  ಆಗ ಅನೇಕರು ಎಡವಲ್ಪಡುವರು, ಒಬ್ಬರಿಗೊಬ್ಬರು ದ್ರೋಹಮಾಡುವರು ಮತ್ತು ಒಬ್ಬರನ್ನೊಬ್ಬರು ದ್ವೇಷಿಸುವರು. 11  ಅನೇಕ ಸುಳ್ಳು ಪ್ರವಾದಿಗಳು ಎದ್ದು ಅನೇಕರನ್ನು ತಪ್ಪುದಾರಿಗೆ ಎಳೆಯುವರು; 12  ಅನ್ಯಾಯವು ಹೆಚ್ಚಾಗುವುದರಿಂದ ಬಹುಜನರ ಪ್ರೀತಿಯು ತಣ್ಣಗಾಗಿಹೋಗುವುದು. 13  ಆದರೆ ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು. 14  ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು. 15  “ಆದುದರಿಂದ ಪ್ರವಾದಿಯಾದ ದಾನಿಯೇಲನ ಮೂಲಕ ತಿಳಿಸಲ್ಪಟ್ಟಿರುವ ಹಾಳುಮಾಡುವ ಅಸಹ್ಯ ವಸ್ತುವು ಪವಿತ್ರ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಾಗ (ಇದನ್ನು ಓದುವವನು ವಿವೇಚನೆಯನ್ನು ಉಪಯೋಗಿಸಲಿ) 16  ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗತೊಡಗಲಿ. 17  ಮಾಳಿಗೆಯ ಮೇಲೆ ಇರುವವನು ತನ್ನ ಮನೆಯಿಂದ ವಸ್ತುಗಳನ್ನು ತೆಗೆದುಕೊಳ್ಳಲಿಕ್ಕಾಗಿ ಕೆಳಗೆ ಇಳಿಯದಿರಲಿ; 18  ಹೊಲದಲ್ಲಿರುವವನು ತನ್ನ ಮೇಲಂಗಿಯನ್ನು ತೆಗೆದುಕೊಳ್ಳುವುದಕ್ಕಾಗಿ ಮನೆಗೆ ಹಿಂದಿರುಗದಿರಲಿ. 19  ಆ ದಿನಗಳಲ್ಲಿ ಗರ್ಭಿಣಿಯರಿಗೂ ಮೊಲೆಕೂಸಿರುವ ಸ್ತ್ರೀಯರಿಗೂ ಆಗುವ ಗತಿಯನ್ನು ಏನು ಹೇಳಲಿ! 20  ನಿಮ್ಮ ಪಲಾಯನವು ಚಳಿಗಾಲದಲ್ಲಿ ಇಲ್ಲವೆ ಸಬ್ಬತ್‌ ದಿನದಲ್ಲಿ ಆಗದಂತೆ ಪ್ರಾರ್ಥಿಸುತ್ತಾ ಇರಿ; 21  ಏಕೆಂದರೆ ಆಗ ಮಹಾ ಸಂಕಟವು ಇರುವುದು; ಲೋಕದ ಆರಂಭದಿಂದ ಇಂದಿನ ವರೆಗೆ ಅಂಥ ಸಂಕಟವು ಸಂಭವಿಸಿಲ್ಲ; ಇನ್ನು ಮುಂದೆಯೂ ಸಂಭವಿಸುವುದಿಲ್ಲ. 22  ವಾಸ್ತವದಲ್ಲಿ, ಆ ದಿನಗಳನ್ನು ಕಡಮೆಮಾಡದಿದ್ದರೆ ಯಾವನೂ ಉಳಿಯನು. ಆದರೆ ಆಯ್ದುಕೊಳ್ಳಲ್ಪಟ್ಟವರ ನಿಮಿತ್ತವಾಗಿ ಆ ದಿನಗಳು ಕಡಮೆಮಾಡಲ್ಪಡುವವು. 23  “ಆಗ ಯಾರಾದರೂ ನಿಮಗೆ ‘ಇಗೋ ಕ್ರಿಸ್ತನು ಇಲ್ಲಿದ್ದಾನೆ,’ ‘ಅಗೋ ಅಲ್ಲಿದ್ದಾನೆ’ ಎಂದು ಹೇಳುವುದಾದರೆ ಅದನ್ನು ನಂಬಬೇಡಿ. 24  ಏಕೆಂದರೆ ಸುಳ್ಳು ಕ್ರಿಸ್ತರೂ ಸುಳ್ಳು ಪ್ರವಾದಿಗಳೂ ಎದ್ದು ಸಾಧ್ಯವಾದರೆ ಆಯ್ದುಕೊಳ್ಳಲ್ಪಟ್ಟವರನ್ನೂ ತಪ್ಪುದಾರಿಗೆ ಎಳೆಯಲಿಕ್ಕಾಗಿ ಮಹಾ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿತೋರಿಸುವರು. 25  ನೋಡಿ, ನಾನು ನಿಮಗೆ ಮುಂದಾಗಿಯೇ ಎಚ್ಚರಿಕೆ ನೀಡಿದ್ದೇನೆ. 26  ಆದುದರಿಂದ ಜನರು ನಿಮಗೆ ‘ಇಗೋ, ಅವನು ಅರಣ್ಯದಲ್ಲಿದ್ದಾನೆ’ ಎಂದು ಹೇಳುವುದಾದರೆ ಹೊರಗೆ ಹೋಗಬೇಡಿ; ‘ಇಗೋ, ಅವನು ಒಳಕೋಣೆಯಲ್ಲಿದ್ದಾನೆ’ ಎಂದು ಹೇಳುವುದಾದರೆ ನಂಬಬೇಡಿ. 27  ಮಿಂಚು ಪೂರ್ವ ಭಾಗಗಳಿಂದ ಬಂದು ಪಶ್ಚಿಮ ಭಾಗಗಳ ಮೇಲೆ ಪ್ರಕಾಶಿಸುವಂತೆಯೇ ಮನುಷ್ಯಕುಮಾರನ ಸಾನ್ನಿಧ್ಯವು ಇರುವುದು. 28  ಹೆಣವು ಎಲ್ಲಿರುತ್ತದೋ ಅಲ್ಲಿ ಹದ್ದುಗಳು ಒಟ್ಟುಗೂಡುವವು. 29  “ಆ ದಿನಗಳ ಸಂಕಟವು ತೀರಿದ ಕೂಡಲೆ ಸೂರ್ಯನು ಕತ್ತಲಾಗಿ ಹೋಗುವನು, ಚಂದ್ರನು ಬೆಳಕು ಕೊಡದೆ ಇರುವನು, ನಕ್ಷತ್ರಗಳು ಆಕಾಶದಿಂದ ಉದುರುವವು ಮತ್ತು ಆಕಾಶದ ಶಕ್ತಿಗಳು ಕುಲುಕಿಸಲ್ಪಡುವವು. 30  ಮತ್ತು ಆಗ ಮನುಷ್ಯಕುಮಾರನ ಸೂಚನೆಯು ಆಕಾಶದಲ್ಲಿ ಕಾಣಿಸಿಕೊಳ್ಳುವುದು; ಭೂಮಿಯ ಎಲ್ಲ ಕುಲಗಳವರು ಗೋಳಾಡುತ್ತಾ ಎದೆಬಡಿದುಕೊಳ್ಳುವರು ಮತ್ತು ಮನುಷ್ಯಕುಮಾರನು ಆಕಾಶದ ಮೇಘಗಳ ಮೇಲೆ ಶಕ್ತಿಯಿಂದಲೂ ಮಹಾ ಮಹಿಮೆಯಿಂದಲೂ ಬರುವುದನ್ನು ಕಾಣುವರು. 31  ಅವನು ತುತೂರಿಯ ಮಹಾ ಶಬ್ದದೊಂದಿಗೆ ತನ್ನ ದೂತರನ್ನು ಕಳುಹಿಸುವನು ಮತ್ತು ಅವರು ಅವನು ಆಯ್ದುಕೊಂಡವರನ್ನು ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯ ವರೆಗೆ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸುವರು. 32  “ಅಂಜೂರದ ಮರದ ದೃಷ್ಟಾಂತದಿಂದ ಈ ಅಂಶವನ್ನು ಕಲಿಯಿರಿ: ಅದರ ಎಳೆಯ ಕೊಂಬೆಯು ಕೋಮಲವಾಗಿ ಬೆಳೆದು ಎಲೆಗಳನ್ನು ಬಿಡುತ್ತಲೇ ಬೇಸಿಗೆಯು ಸಮೀಪಿಸಿದೆ ಎಂಬುದನ್ನು ನೀವು ತಿಳಿದುಕೊಳ್ಳುತ್ತೀರಿ. 33  ತದ್ರೀತಿಯಲ್ಲಿ ಈ ಎಲ್ಲ ಸಂಗತಿಗಳನ್ನು ನೀವು ನೋಡುವಾಗ ಅವನು ಬಾಗಿಲ ಹತ್ತಿರದಲ್ಲೇ ಇದ್ದಾನೆ ಎಂಬುದನ್ನು ತಿಳಿದುಕೊಳ್ಳಿರಿ. 34  ಈ ಎಲ್ಲ ಸಂಗತಿಗಳು ಸಂಭವಿಸುವ ತನಕ ಈ ಸಂತತಿಯು ಅಳಿದು ಹೋಗುವುದೇ ಇಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 35  ಆಕಾಶವೂ ಭೂಮಿಯೂ ಅಳಿದು ಹೋಗುವವು, ಆದರೆ ನನ್ನ ಮಾತುಗಳು ಎಂದಿಗೂ ಅಳಿದು ಹೋಗುವುದೇ ಇಲ್ಲ. 36  “ಆ ದಿನ ಮತ್ತು ಗಳಿಗೆಯ ವಿಷಯವಾಗಿ ತಂದೆಗೆ ಮಾತ್ರ ತಿಳಿದಿದೆಯೇ ಹೊರತು ಮತ್ತಾರಿಗೂ ತಿಳಿದಿಲ್ಲ; ಸ್ವರ್ಗದ ದೇವದೂತರಿಗಾಗಲಿ ಮಗನಿಗಾಗಲಿ ತಿಳಿದಿಲ್ಲ. 37  ನೋಹನ ದಿನಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಸಾನ್ನಿಧ್ಯವೂ ಇರುವುದು. 38  ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯೊಳಗೆ ಪ್ರವೇಶಿಸುವ ದಿನದ ವರೆಗೆ ಜನರು ಊಟಮಾಡುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಸ್ತ್ರೀಯರನ್ನು ಮದುವೆಮಾಡಿಕೊಡುತ್ತಾ ಇದ್ದರು; 39  ಪ್ರಳಯವು ಬಂದು ಅವರೆಲ್ಲರನ್ನು ಕೊಚ್ಚಿಕೊಂಡುಹೋಗುವ ತನಕ ಅವರು ಲಕ್ಷ್ಯಕೊಡಲೇ ಇಲ್ಲ. ಹಾಗೆಯೇ ಮನುಷ್ಯಕುಮಾರನ ಸಾನ್ನಿಧ್ಯವೂ ಇರುವುದು. 40  ಆಗ ಇಬ್ಬರು ಪುರುಷರು ಹೊಲದಲ್ಲಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಇನ್ನೊಬ್ಬನು ಬಿಡಲ್ಪಡುವನು. 41  ಇಬ್ಬರು ಸ್ತ್ರೀಯರು ಬೀಸುವ ಕಲ್ಲಿನ ಮುಂದೆ ಕುಳಿತು ಬೀಸುತ್ತಿರುವರು; ಒಬ್ಬಳು ತೆಗೆದುಕೊಳ್ಳಲ್ಪಡುವಳು, ಇನ್ನೊಬ್ಬಳು ಬಿಡಲ್ಪಡುವಳು. 42  ಆದುದರಿಂದ ನಿಮ್ಮ ಕರ್ತನು ಯಾವ ದಿನದಲ್ಲಿ ಬರುತ್ತಾನೆಂಬುದು ನಿಮಗೆ ತಿಳಿದಿಲ್ಲದ ಕಾರಣ ಸದಾ ಎಚ್ಚರವಾಗಿರಿ. 43  “ಮನೆಯ ಯಜಮಾನನಿಗೆ ಕಳ್ಳನು ಯಾವ ಜಾವದಲ್ಲಿ ಬರುತ್ತಾನೆಂಬುದು ಗೊತ್ತಿರುತ್ತಿದ್ದಲ್ಲಿ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕಳ್ಳನು ನುಗ್ಗುವಂತೆ ಬಿಡುತ್ತಿರಲಿಲ್ಲ ಎಂಬುದನ್ನು ತಿಳಿದುಕೊಳ್ಳಿರಿ. 44  ಆದುದರಿಂದ ನೀವು ಸಹ ನಿಮ್ಮನ್ನು ಸಿದ್ಧರಾಗಿಟ್ಟುಕೊಳ್ಳಿರಿ, ಏಕೆಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ. 45  “ತನ್ನ ಮನೆಯವರಿಗೆ ತಕ್ಕ ಸಮಯಕ್ಕೆ ಆಹಾರವನ್ನು ಕೊಡಲಿಕ್ಕಾಗಿ ಯಜಮಾನನು ನೇಮಿಸಿದ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ನಿಜವಾಗಿಯೂ ಯಾರು? 46  ಯಜಮಾನನು ಬಂದಾಗ ಯಾವ ಆಳು ಹೀಗೆ ಮಾಡುತ್ತಿರುವುದನ್ನು ಕಾಣುವನೋ ಆ ಆಳು ಸಂತೋಷಿತನು! 47  ಅವನು ಆ ಆಳನ್ನು ತನ್ನ ಎಲ್ಲ ಆಸ್ತಿಯ ಮೇಲೆ ನೇಮಿಸುವನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 48  “ಆದರೆ ಆ ಕೆಟ್ಟ ಆಳು ಎಂದಾದರೂ ತನ್ನ ಹೃದಯದಲ್ಲಿ, ‘ನನ್ನ ಯಜಮಾನನು ತಡಮಾಡುತ್ತಿದ್ದಾನೆ’ ಅಂದುಕೊಂಡು 49  ತನ್ನ ಜೊತೆ ಆಳುಗಳನ್ನು ಹೊಡೆಯಲಾರಂಭಿಸಿ ಕುಡುಕರೊಂದಿಗೆ ತಿನ್ನುತ್ತಾ ಕುಡಿಯುತ್ತಾ ಇರುವುದಾದರೆ, 50  ಅವನು ಎದುರುನೋಡದ ದಿನದಲ್ಲಿಯೂ ಅವನಿಗೆ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು 51  ಅವನಿಗೆ ಅತಿ ತೀಕ್ಷ್ಣವಾದ ದಂಡನೆಯನ್ನು ನೀಡಿ ಕಪಟಿಗಳೊಂದಿಗೆ ಅವನ ಪಾಲನ್ನು ನೇಮಿಸುವನು. ಅಲ್ಲಿ ಅವನ ಗೋಳಾಟವೂ ಹಲ್ಲುಕಡಿಯೋಣವೂ ಇರುವುದು.

ಪಾದಟಿಪ್ಪಣಿ