ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಮತ್ತಾಯ 21:1-46

21  ಅವರು ಯೆರೂಸಲೇಮನ್ನು ಸಮೀಪಿಸಿ ಆಲೀವ್‌ ಗುಡ್ಡದ ಮೇಲಿದ್ದ ಬೇತ್ಫಗೆಗೆ ಬಂದಾಗ ಯೇಸು ಇಬ್ಬರು ಶಿಷ್ಯರನ್ನು ಕರೆದು  ಅವರಿಗೆ, “ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ; ಹೋದ ಕೂಡಲೆ ಕಟ್ಟಲ್ಪಟ್ಟಿರುವ ಒಂದು ಕತ್ತೆಯನ್ನು ಮತ್ತು ಅದರೊಂದಿಗೆ ಒಂದು ಮರಿಯನ್ನು ಕಾಣುವಿರಿ; ಅವುಗಳನ್ನು ಬಿಚ್ಚಿ ನನ್ನ ಬಳಿಗೆ ತನ್ನಿರಿ.  ಯಾರಾದರೂ ನಿಮಗೆ ಏನಾದರೂ ಹೇಳಿದರೆ, ‘ಇವು ಕರ್ತನಿಗೆ ಬೇಕಾಗಿವೆ’ ಎಂದು ನೀವು ಹೇಳಬೇಕು. ಆಗ ಅವನು ಅವುಗಳನ್ನು ತಕ್ಷಣವೇ ಕಳುಹಿಸಿಕೊಡುವನು” ಎಂದು ಹೇಳಿಕಳುಹಿಸಿದನು.  ವಾಸ್ತವದಲ್ಲಿ, ಪ್ರವಾದಿಯ ಮೂಲಕ ಏನು ತಿಳಿಸಲ್ಪಟ್ಟಿತೋ ಅದು ಇದರಿಂದ ನೆರವೇರುವಂತಾಯಿತು. ಅದೇನೆಂದರೆ,  “ ‘ಇಗೋ! ನಿನ್ನ ಅರಸನು ಸೌಮ್ಯಭಾವದವನಾಗಿ ಕತ್ತೆಯ ಮೇಲೆ, ಹೌದು, ಕತ್ತೇಮರಿಯ ಮೇಲೆ ಹತ್ತಿದವನಾಗಿ ನಿನ್ನ ಬಳಿಗೆ ಬರುತ್ತಿದ್ದಾನೆ’ ಎಂದು ಚೀಯೋನ್‌ ನಗರಿಗೆ ಹೇಳಿರಿ.”  ಶಿಷ್ಯರು ಹೊರಟುಹೋಗಿ ಯೇಸು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು.  ಅವರು ಆ ಕತ್ತೆಯನ್ನೂ ಕತ್ತೇಮರಿಯನ್ನೂ ತಂದು ತಮ್ಮ ಮೇಲಂಗಿಗಳನ್ನು ಅವುಗಳ ಮೇಲೆ ಹಾಕಲಾಗಿ ಅವನು ಹತ್ತಿ ಕುಳಿತುಕೊಂಡನು.  ಜನರಲ್ಲಿ ಹೆಚ್ಚಿನವರು ತಮ್ಮ ಮೇಲಂಗಿಗಳನ್ನು ದಾರಿಯಲ್ಲಿ ಹಾಸಿದರು; ಬೇರೆ ಕೆಲವರು ಮರಗಳಿಂದ ರೆಂಬೆಗಳನ್ನು ಕತ್ತರಿಸಿ ತಂದು ದಾರಿಯಲ್ಲಿ ಹರಡುತ್ತಿದ್ದರು.  ಅವನ ಮುಂದೆಯೂ ಹಿಂದೆಯೂ ಗುಂಪುಗುಂಪಾಗಿ ಬರುತ್ತಿದ್ದ ಜನರು, “ದಾವೀದನ ಕುಮಾರನಿಗೆ ರಕ್ಷಣೆಯನ್ನು ಕೋರುತ್ತೇವೆ! ಯೆಹೋವನ ನಾಮದಲ್ಲಿ ಬರುವವನು ಆಶೀರ್ವದಿತನು! ಅತ್ಯುನ್ನತ ಸ್ಥಳಗಳಲ್ಲಿ ಅವನನ್ನು ರಕ್ಷಿಸು ಎಂದು ಕೋರುತ್ತೇವೆ!” ಎಂದು ಕೂಗುತ್ತಿದ್ದರು. 10  ಅವನು ಯೆರೂಸಲೇಮನ್ನು ಪ್ರವೇಶಿಸಿದಾಗ, ಪಟ್ಟಣದಾದ್ಯಂತ ಗದ್ದಲ ಉಂಟಾಗಿ “ಇವನು ಯಾರು?” ಎಂದು ಮಾತಾಡಿಕೊಳ್ಳುತ್ತಿದ್ದರು. 11  ಅದಕ್ಕೆ ಜನರು, “ಇವನು ಪ್ರವಾದಿಯಾದ ಯೇಸು; ಗಲಿಲಾಯದ ನಜರೇತಿನವನು” ಎಂದು ಹೇಳುತ್ತಿದ್ದರು. 12  ಬಳಿಕ ಯೇಸು ದೇವಾಲಯವನ್ನು ಪ್ರವೇಶಿಸಿ ಅದರೊಳಗೆ ಮಾರುತ್ತಿದ್ದವರನ್ನೂ ಕೊಳ್ಳುತ್ತಿದ್ದವರನ್ನೂ ಹೊರಗಟ್ಟಿದನು ಮತ್ತು ಹಣವಿನಿಮಯಗಾರರ ಮೇಜುಗಳನ್ನು ಹಾಗೂ ಪಾರಿವಾಳಗಳನ್ನು ಮಾರುತ್ತಿದ್ದವರ ಕಾಲ್ಮಣೆಗಳನ್ನು ಕೆಡವಿದನು. 13  ಮತ್ತು ಅವನು ಅವರಿಗೆ, “ ‘ನನ್ನ ಆಲಯವು ಪ್ರಾರ್ಥನಾ ಮಂದಿರವೆನಿಸಿಕೊಳ್ಳುವುದು’ ಎಂದು ಬರೆದಿದೆ. ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡುತ್ತಿದ್ದೀರಿ” ಎಂದು ಹೇಳಿದನು. 14  ಇದಲ್ಲದೆ, ದೇವಾಲಯದಲ್ಲಿ ಕುರುಡರೂ ಕುಂಟರೂ ಅವನ ಬಳಿಗೆ ಬಂದಾಗ ಅವನು ಅವರನ್ನು ವಾಸಿಮಾಡಿದನು. 15  ಮುಖ್ಯ ಯಾಜಕರೂ ಶಾಸ್ತ್ರಿಗಳೂ ಅವನು ಮಾಡಿದ ಅದ್ಭುತಕಾರ್ಯಗಳನ್ನು ಮತ್ತು “ದಾವೀದನ ಕುಮಾರನಿಗೆ ರಕ್ಷಣೆಯನ್ನು ಕೋರುತ್ತೇವೆ!” ಎಂದು ದೇವಾಲಯದಲ್ಲಿ ಕೂಗಿಹೇಳುತ್ತಿರುವ ಹುಡುಗರನ್ನು ನೋಡಿ ಕೋಪಗೊಂಡು 16  ಅವನಿಗೆ, “ಇವರು ಹೇಳುತ್ತಿರುವುದು ನಿನಗೆ ಕೇಳುತ್ತಿದೆಯೇ?” ಎಂದರು. ಆಗ ಯೇಸು ಅವರಿಗೆ, “ಹೌದು. ‘ಶಿಶುಗಳ ಬಾಯಿಂದಲೂ ಮೊಲೆಕೂಸುಗಳ ಬಾಯಿಂದಲೂ ಸ್ತುತಿಯನ್ನು ಸಿದ್ಧಿಗೆ ತಂದಿದ್ದೀ’ ಎಂಬುದನ್ನು ನೀವು ಎಂದೂ ಓದಲಿಲ್ಲವೇ?” ಎಂದು ಹೇಳಿದನು. 17  ಮತ್ತು ಅವರನ್ನು ಬಿಟ್ಟು ಪಟ್ಟಣದಿಂದ ಹೊರಟು ಬೇಥಾನ್ಯಕ್ಕೆ ಬಂದು ಅಲ್ಲಿ ರಾತ್ರಿಯನ್ನು ಕಳೆದನು. 18  ಮರುದಿನ ಬೆಳಗ್ಗೆ ಪಟ್ಟಣಕ್ಕೆ ಹಿಂದಿರುಗುತ್ತಿದ್ದಾಗ ಅವನಿಗೆ ಹಸಿವಾಯಿತು. 19  ದಾರಿಯ ಪಕ್ಕದಲ್ಲಿಯೇ ಇದ್ದ ಒಂದು ಅಂಜೂರದ ಮರವನ್ನು ಕಂಡಾಗ ಅವನು ಅದರ ಬಳಿಗೆ ಹೋದನು, ಆದರೆ ಅದರಲ್ಲಿ ಎಲೆಗಳನ್ನು ಬಿಟ್ಟು ಮತ್ತೇನನ್ನೂ ಕಾಣಲಿಲ್ಲ. ಆಗ ಅವನು ಅದಕ್ಕೆ, “ಇನ್ನು ಮೇಲೆ ನಿನ್ನಲ್ಲಿ ಫಲವು ಎಂದೆಂದಿಗೂ ಆಗದಿರಲಿ” ಎಂದನು. ಆ ಕ್ಷಣವೇ ಅಂಜೂರದ ಮರವು ಒಣಗಿಹೋಯಿತು. 20  ಶಿಷ್ಯರು ಇದನ್ನು ನೋಡಿ ಆಶ್ಚರ್ಯಪಟ್ಟು, “ಒಂದೇ ಕ್ಷಣದಲ್ಲಿ ಈ ಅಂಜೂರದ ಮರವು ಹೇಗೆ ಒಣಗಿಹೋಯಿತು?” ಎಂದರು. 21  ಅದಕ್ಕೆ ಯೇಸು ಅವರಿಗೆ, “ನಿಮಗೆ ನಿಜವಾಗಿ ಹೇಳುತ್ತೇನೆ, ನೀವು ಸಂಶಯಪಡದೆ ನಂಬುವುದಾದರೆ ನಾನು ಅಂಜೂರದ ಮರಕ್ಕೆ ಏನು ಮಾಡಿದೆನೋ ಅದನ್ನು ಮಾಡುವಿರಿ ಮಾತ್ರವೇ ಅಲ್ಲ, ನೀವು ಈ ಬೆಟ್ಟಕ್ಕೆ ‘ಎತ್ತಲ್ಪಟ್ಟು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಹೇಳಿದರೂ ಅದು ಆಗುವುದು. 22  ನೀವು ನಂಬಿಕೆಯಿಂದ ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುತ್ತೀರೋ ಅದೆಲ್ಲವೂ ನಿಮಗೆ ದೊರಕುವುದು” ಎಂದು ಹೇಳಿದನು. 23  ತರುವಾಯ ಅವನು ದೇವಾಲಯಕ್ಕೆ ಹೋಗಿ ಬೋಧಿಸುತ್ತಿದ್ದಾಗ ಮುಖ್ಯ ಯಾಜಕರೂ ಜನರ ಹಿರೀಪುರುಷರೂ ಅವನ ಬಳಿಗೆ ಬಂದು, “ನೀನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೀ? ಮತ್ತು ನಿನಗೆ ಈ ಅಧಿಕಾರವನ್ನು ಕೊಟ್ಟವರು ಯಾರು?” ಎಂದು ಕೇಳಿದರು. 24  ಅದಕ್ಕೆ ಯೇಸು ಅವರಿಗೆ, “ನಾನು ಸಹ ನಿಮಗೆ ಒಂದು ಸಂಗತಿಯನ್ನು ಕೇಳುತ್ತೇನೆ. ನೀವು ನನಗೆ ಉತ್ತರಕೊಟ್ಟರೆ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂಬುದನ್ನು ನಾನೂ ನಿಮಗೆ ಹೇಳುತ್ತೇನೆ. 25  ಯೋಹಾನನು ಮಾಡಿಸಿದ ದೀಕ್ಷಾಸ್ನಾನವು ಯಾವ ಮೂಲದಿಂದ ಬಂತು? ಸ್ವರ್ಗದಿಂದಲೊ? ಮನುಷ್ಯರಿಂದಲೊ?” ಎಂದು ಕೇಳಿದನು. ಆಗ ಅವರು, “ ‘ಸ್ವರ್ಗದಿಂದ ಬಂತು’ ಎಂದು ನಾವು ಹೇಳಿದರೆ, ‘ಹಾಗಾದರೆ ನೀವೇಕೆ ಅವನನ್ನು ನಂಬಲಿಲ್ಲ?’ ಎಂದು ಇವನು ನಮಗೆ ಹೇಳುವನು. 26  ಆದರೆ ‘ಮನುಷ್ಯರಿಂದ ಬಂತು’ ಎಂದು ಹೇಳುವುದಾದರೆ ನಮಗೆ ಜನರ ಭಯವಿದೆ, ಏಕೆಂದರೆ ಅವರೆಲ್ಲರು ಯೋಹಾನನನ್ನು ಪ್ರವಾದಿಯೆಂದು ನಂಬುತ್ತಾರೆ” ಎಂದು ತಮ್ಮತಮ್ಮೊಳಗೆ ಚರ್ಚಿಸಲಾರಂಭಿಸಿದರು. 27  ಆದಕಾರಣ ಯೇಸುವಿನ ಮಾತಿಗೆ ಪ್ರತ್ಯುತ್ತರವಾಗಿ ಅವರು, “ನಮಗೆ ಗೊತ್ತಿಲ್ಲ” ಅಂದರು. ಆಗ ಅವನು ಅವರಿಗೆ, “ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆ ಎಂಬುದನ್ನು ನಾನೂ ನಿಮಗೆ ಹೇಳುವುದಿಲ್ಲ. 28  “ನಿಮ್ಮ ಅಭಿಪ್ರಾಯವೇನು? ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. ಅವನು ಮೊದಲನೆಯವನ ಬಳಿಗೆ ಹೋಗಿ, ‘ಮಗನೇ, ಹೋಗಿ ಇವತ್ತು ದ್ರಾಕ್ಷಿಯ ತೋಟದಲ್ಲಿ ಕೆಲಸಮಾಡು’ ಅಂದನು. 29  ಆಗ ಅವನು, ‘ಹೋಗುತ್ತೇನೆ ಅಪ್ಪಾ’ ಎಂದು ಹೇಳಿದನಾದರೂ ಹೋಗಲಿಲ್ಲ. 30  ಎರಡನೆಯವನ ಬಳಿಗೆ ಬಂದು ಅವನಿಗೂ ಇದನ್ನೇ ಹೇಳಿದನು. ಅದಕ್ಕೆ ಅವನು ‘ನಾನು ಹೋಗುವುದಿಲ್ಲ’ ಅಂದನು. ಆದರೆ ತರುವಾಯ ವಿಷಾದಪಟ್ಟು ತೋಟಕ್ಕೆ ಹೋದನು. 31  ಇವರಿಬ್ಬರಲ್ಲಿ ತಂದೆಯ ಚಿತ್ತವನ್ನು ಮಾಡಿದವರು ಯಾರು?” ಎಂದು ಕೇಳಿದನು. ಅದಕ್ಕೆ ಅವರು, “ಎರಡನೆಯವನು” ಎಂದರು. ಯೇಸು ಅವರಿಗೆ, “ತೆರಿಗೆ ವಸೂಲಿಮಾಡುವವರೂ ವೇಶ್ಯೆಯರೂ ನಿಮಗಿಂತ ಮುಂಚೆ ದೇವರ ರಾಜ್ಯದೊಳಗೆ ಹೋಗುವರು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 32  ಯೋಹಾನನು ನೀತಿಯ ಮಾರ್ಗವನ್ನು ಬೋಧಿಸುವವನಾಗಿ ನಿಮ್ಮ ಬಳಿಗೆ ಬಂದನು, ಆದರೆ ನೀವು ಅವನನ್ನು ನಂಬಲಿಲ್ಲ. ತೆರಿಗೆ ವಸೂಲಿಮಾಡುವವರೂ ವೇಶ್ಯೆಯರೂ ಅವನನ್ನು ನಂಬಿದರು; ನೀವು ಇದನ್ನು ನೋಡಿದರೂ ಅವನನ್ನು ನಂಬುವ ವಿಷಯದಲ್ಲಿ ಬಳಿಕ ವಿಷಾದಪಡಲಿಲ್ಲ. 33  “ಇನ್ನೊಂದು ದೃಷ್ಟಾಂತವನ್ನು ಕೇಳಿಸಿಕೊಳ್ಳಿರಿ: ಒಬ್ಬ ಮನೆಯ ಯಜಮಾನನು ಒಂದು ದ್ರಾಕ್ಷಿಯ ತೋಟವನ್ನು ಮಾಡಿ ಅದರ ಸುತ್ತಲೂ ಬೇಲಿ ಹಾಕಿಸಿ ದ್ರಾಕ್ಷಾರಸವನ್ನು ತೆಗೆಯಲು ಒಂದು ಭಾರಿ ತೊಟ್ಟಿಯನ್ನು ಅಗೆಸಿ, ಒಂದು ಬುರುಜನ್ನು ಕಟ್ಟಿ, ಅದನ್ನು ವ್ಯವಸಾಯಗಾರರಿಗೆ ವಹಿಸಿಕೊಟ್ಟು ವಿದೇಶಕ್ಕೆ ಹೊರಟುಹೋದನು. 34  ಹಣ್ಣಿನ ಕಾಲ ಬಂದಾಗ ಅವನು ತನ್ನ ಪಾಲಿನ ಫಲವನ್ನು ತೆಗೆದುಕೊಂಡು ಬರಲಿಕ್ಕಾಗಿ ಆ ವ್ಯವಸಾಯಗಾರರ ಬಳಿಗೆ ತನ್ನ ಆಳುಗಳನ್ನು ಕಳುಹಿಸಿದನು. 35  ಆದರೆ ವ್ಯವಸಾಯಗಾರರು ಅವನ ಆಳುಗಳನ್ನು ಹಿಡಿದು ಒಬ್ಬನನ್ನು ಹೊಡೆದರು, ಇನ್ನೊಬ್ಬನನ್ನು ಕೊಂದುಹಾಕಿದರು, ಮತ್ತೊಬ್ಬನನ್ನು ಕಲ್ಲೆಸೆದು ಕೊಂದರು. 36  ಅನಂತರ ಅವನು ಮೊದಲಿಗಿಂತ ಹೆಚ್ಚು ಮಂದಿ ಆಳುಗಳನ್ನು ಕಳುಹಿಸಿದಾಗ ಅವರಿಗೂ ಹಾಗೆಯೇ ಮಾಡಿದರು. 37  ‘ಅವರು ನನ್ನ ಮಗನಿಗೆ ಗೌರವ ತೋರಿಸುವರು’ ಎಂದು ಭಾವಿಸಿ ಕಡೆಯದಾಗಿ ಅವನನ್ನು ಅವರ ಬಳಿಗೆ ಕಳುಹಿಸಿದನು. 38  ಆದರೆ ಆ ವ್ಯವಸಾಯಗಾರರು ಅವನ ಮಗನನ್ನು ಕಂಡಾಗ ತಮ್ಮತಮ್ಮೊಳಗೆ, ‘ಇವನೇ ಬಾಧ್ಯಸ್ಥನು. ಬನ್ನಿರಿ ಇವನನ್ನು ಕೊಂದುಹಾಕಿ ಅವನ ಆಸ್ತಿಯನ್ನು ನಮ್ಮದಾಗಿ ಮಾಡಿಕೊಳ್ಳೋಣ’ ಎಂದು ಮಾತಾಡಿಕೊಂಡರು. 39  ಹೀಗೆ ಅವರು ಅವನನ್ನು ಹಿಡಿದು ದ್ರಾಕ್ಷಿಯ ತೋಟದಿಂದ ಹೊರಗೆ ಎಸೆದು ಕೊಂದುಹಾಕಿದರು. 40  ಹಾಗಾದರೆ ದ್ರಾಕ್ಷಿಯ ತೋಟದ ಯಜಮಾನನು ಬಂದಾಗ ಆ ವ್ಯವಸಾಯಗಾರರಿಗೆ ಏನು ಮಾಡುವನು?” ಎಂದನು. 41  ಅದಕ್ಕೆ ಅವರು, “ಅವರು ಕೆಡುಕರಾಗಿರುವುದರಿಂದ ಅವರ ಮೇಲೆ ಕೆಡುಕಾದ ನಾಶನವನ್ನು ತರುವನು ಮತ್ತು ತಕ್ಕ ಕಾಲದಲ್ಲಿ ತನಗೆ ಫಲವನ್ನು ಸಲ್ಲಿಸುವಂಥ ಬೇರೆ ವ್ಯವಸಾಯಗಾರರಿಗೆ ದ್ರಾಕ್ಷಿಯ ತೋಟವನ್ನು ವಹಿಸಿಕೊಡುವನು” ಎಂದರು. 42  ಯೇಸು ಅವರಿಗೆ, “ ‘ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು. ಇದು ಯೆಹೋವನಿಂದಲೇ ಆಗಿದೆ; ನಮಗೆ ಇದು ಆಶ್ಚರ್ಯವಾಗಿ ತೋರುತ್ತದೆ’ ಎಂದು ಶಾಸ್ತ್ರಗ್ರಂಥದಲ್ಲಿ ನೀವು ಎಂದಾದರೂ ಓದಲಿಲ್ಲವೆ? 43  ಆದುದರಿಂದ ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲ್ಪಡುವುದು ಎಂದು ನಿಮಗೆ ಹೇಳುತ್ತೇನೆ. 44  ಇದಲ್ಲದೆ, ಈ ಕಲ್ಲಿನ ಮೇಲೆ ಬೀಳುವವನು ಚೂರುಚೂರಾಗುವನು ಮತ್ತು ಇದು ಯಾವನ ಮೇಲೆ ಬೀಳುವುದೋ ಅವನನ್ನು ಪುಡಿಪುಡಿಮಾಡುವುದು” ಎಂದು ಹೇಳಿದನು. 45  ಮುಖ್ಯ ಯಾಜಕರೂ ಫರಿಸಾಯರೂ ಅವನ ದೃಷ್ಟಾಂತಗಳನ್ನು ಕೇಳಿಸಿಕೊಂಡಾಗ ಅವನು ತಮ್ಮ ಕುರಿತೇ ಮಾತಾಡಿದನೆಂಬುದನ್ನು ಗ್ರಹಿಸಿದರು. 46  ಅವರು ಅವನನ್ನು ಹಿಡಿಯುವುದಕ್ಕೆ ಸಂದರ್ಭ ನೋಡುತ್ತಿದ್ದರಾದರೂ ಜನರು ಅವನನ್ನು ಒಬ್ಬ ಪ್ರವಾದಿಯೆಂದು ಪರಿಗಣಿಸಿದ್ದರಿಂದ ಅವರಿಗೆ ಭಯಪಟ್ಟರು.

ಪಾದಟಿಪ್ಪಣಿ