ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಮತ್ತಾಯ 19:1-30

19  ಯೇಸು ಈ ಮಾತುಗಳನ್ನು ಮುಗಿಸಿದ ಬಳಿಕ ಗಲಿಲಾಯದಿಂದ ಹೊರಟು ಯೋರ್ದನ್‌ ನದಿಯ ಆಚೆ ಕಡೆಯಲ್ಲಿರುವ ಯೂದಾಯದ ಗಡಿಪ್ರದೇಶಕ್ಕೆ ಬಂದನು.  ಜನರು ಗುಂಪುಗುಂಪಾಗಿ ಅವನ ಹಿಂದೆ ಹೋದರು ಮತ್ತು ಅವನು ಅವರನ್ನು ಅಲ್ಲಿ ವಾಸಿಮಾಡಿದನು.  ಆಗ ಫರಿಸಾಯರು ಅವನನ್ನು ಪರೀಕ್ಷಿಸಲಿಕ್ಕಾಗಿ ಅವನ ಬಳಿಗೆ ಬಂದು, “ಒಬ್ಬನು ಯಾವುದೇ ಕಾರಣಕ್ಕಾಗಿ ತನ್ನ ಹೆಂಡತಿಗೆ ವಿಚ್ಛೇದನ ನೀಡುವುದು ಧರ್ಮಸಮ್ಮತವೊ?” ಎಂದು ಕೇಳಿದರು.  ಅದಕ್ಕೆ ಉತ್ತರವಾಗಿ ಅವನು, “ಮನುಷ್ಯರನ್ನು ಸೃಷ್ಟಿಸಿದಾತನು ಆರಂಭದಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ,  ‘ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ಶರೀರವಾಗಿರುವರು’ ಎಂದು ಹೇಳಿದನು ಎಂಬುದನ್ನು ನೀವು ಓದಲಿಲ್ಲವೊ?  ಹೀಗೆ ಅವರು ಇನ್ನು ಮುಂದೆ ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದುದರಿಂದ ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ” ಎಂದು ಹೇಳಿದನು.  ಆಗ ಅವರು ಅವನಿಗೆ, “ಹಾಗಾದರೆ ತ್ಯಾಗಪತ್ರವನ್ನು ಕೊಟ್ಟು ಅವಳಿಗೆ ವಿಚ್ಛೇದನ ನೀಡಬಹುದೆಂದು ಮೋಶೆಯು ಏಕೆ ವಿಧಿಸಿದನು?” ಎಂದು ಕೇಳಿದರು.  ಅದಕ್ಕೆ ಅವನು ಅವರಿಗೆ, “ಮೋಶೆಯು ನಿಮ್ಮ ಹೃದಯದ ಕಾಠಿಣ್ಯದ ನಿಮಿತ್ತವಾಗಿ ನಿಮ್ಮ ಹೆಂಡತಿಯರಿಗೆ ವಿಚ್ಛೇದನ ನೀಡಲು ಅನುಮತಿಸಿದನು, ಆದರೆ ಆರಂಭದಿಂದಲೇ ಹಾಗೆ ಇರಲಿಲ್ಲ.  ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಗೆ ವಿಚ್ಛೇದನ ನೀಡಿ ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ ಎಂದು ನಿಮಗೆ ಹೇಳುತ್ತೇನೆ” ಅಂದನು. 10  ಶಿಷ್ಯರು ಅವನಿಗೆ, “ಹೆಂಡತಿಯ ವಿಷಯದಲ್ಲಿ ಗಂಡನ ಪರಿಸ್ಥಿತಿ ಹೀಗಿರುವಲ್ಲಿ ಮದುವೆಯಾಗದಿರುವುದೇ ಒಳ್ಳೇದು” ಎಂದರು. 11  ಅದಕ್ಕೆ ಅವನು, “ಈ ಮಾತಿಗೆ ಆಸ್ಪದಮಾಡಿಕೊಡುವ ವರವನ್ನು ಯಾರು ಹೊಂದಿದ್ದಾರೋ ಅವರೇ ಹೊರತು ಇನ್ನಾರೂ ಇದಕ್ಕೆ ಆಸ್ಪದಮಾಡಿಕೊಡುವುದಿಲ್ಲ. 12  ತಾಯಿಯ ಗರ್ಭದಿಂದಲೇ ನಪುಂಸಕರಾಗಿ ಹುಟ್ಟಿದವರು ಇದ್ದಾರೆ; ಮನುಷ್ಯರಿಂದ ನಪುಂಸಕರಾಗಿ ಮಾಡಲ್ಪಟ್ಟಿರುವ ನಪುಂಸಕರು ಇದ್ದಾರೆ; ಮತ್ತು ಸ್ವರ್ಗದ ರಾಜ್ಯದ ನಿಮಿತ್ತ ತಮ್ಮನ್ನು ತಾವೇ ನಪುಂಸಕರಾಗಿ ಮಾಡಿಕೊಂಡ ನಪುಂಸಕರು ಇದ್ದಾರೆ. ಇದಕ್ಕೆ ಆಸ್ಪದಮಾಡಿಕೊಳ್ಳಬಲ್ಲವನು ಆಸ್ಪದಮಾಡಿಕೊಳ್ಳಲಿ” ಎಂದು ಹೇಳಿದನು. 13  ಬಳಿಕ ಅವನು ತನ್ನ ಕೈಗಳನ್ನಿಟ್ಟು ಪ್ರಾರ್ಥಿಸುವಂತೆ ಜನರು ಚಿಕ್ಕ ಮಕ್ಕಳನ್ನು ಅವನ ಬಳಿಗೆ ತಂದರು; ಆದರೆ ಶಿಷ್ಯರು ಅವರನ್ನು ಗದರಿಸಿದರು. 14  ಆಗ ಯೇಸು, “ಚಿಕ್ಕ ಮಕ್ಕಳನ್ನು ಬಿಡಿರಿ; ನನ್ನ ಬಳಿಗೆ ಬರುವುದರಿಂದ ಅವುಗಳನ್ನು ತಡೆಯಬೇಡಿ, ಏಕೆಂದರೆ ಸ್ವರ್ಗದ ರಾಜ್ಯವು ಇಂಥವರಿಗೆ ಸೇರಿದ್ದಾಗಿದೆ” ಎಂದು ಹೇಳಿದನು. 15  ಅವನು ಅವುಗಳ ಮೇಲೆ ಕೈಗಳನ್ನಿಟ್ಟು ಆಶೀರ್ವದಿಸಿ ಅಲ್ಲಿಂದ ಹೊರಟುಹೋದನು. 16  ಆಗ ಒಬ್ಬನು ಅವನ ಬಳಿಗೆ ಬಂದು, “ಬೋಧಕನೇ, ನಾನು ನಿತ್ಯಜೀವವನ್ನು ಪಡೆಯಬೇಕಾದರೆ ಯಾವ ಒಳ್ಳೆಯ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು. 17  ಅದಕ್ಕೆ ಅವನು, “ಒಳ್ಳೇದರ ಕುರಿತು ನೀನು ನನ್ನನ್ನು ಏಕೆ ಕೇಳುತ್ತೀ? ಒಳ್ಳೆಯವನು ಒಬ್ಬನೇ. ಆದರೆ ನೀನು ಜೀವವನ್ನು ಹೊಂದಬೇಕೆಂದಿದ್ದರೆ ದೇವರಾಜ್ಞೆಗಳನ್ನು ನಿರಂತರವಾಗಿ ಪಾಲಿಸುತ್ತಾ ಇರು” ಎಂದನು. 18  ಅವನು “ಯಾವ ಆಜ್ಞೆಗಳನ್ನು?” ಎಂದು ಕೇಳಿದಾಗ ಯೇಸು, “ನೀನು ನರಹತ್ಯ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳು ಸಾಕ್ಷಿಯನ್ನು ಹೇಳಬಾರದು, 19  ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂದು ಹೇಳಿದನು. 20  ಅದಕ್ಕೆ ಆ ಯೌವನಸ್ಥನು, “ನಾನು ಈ ಎಲ್ಲ ಆಜ್ಞೆಗಳನ್ನು ಪಾಲಿಸುತ್ತಾ ಬಂದಿದ್ದೇನೆ; ನನ್ನಲ್ಲಿ ಇನ್ನೇನು ಕೊರತೆಯಿದೆ?” ಎಂದು ಕೇಳಿದನು. 21  ಯೇಸು ಅವನಿಗೆ, “ನೀನು ಪರಿಪೂರ್ಣನಾಗಲು ಬಯಸುವುದಾದರೆ ಹೋಗಿ ನಿನ್ನ ಸೊತ್ತನ್ನೆಲ್ಲ ಮಾರಿ ಬಡವರಿಗೆ ಕೊಡು; ಆಗ ಸ್ವರ್ಗದಲ್ಲಿ ನಿನಗೆ ಸಂಪತ್ತಿರುವುದು ಮತ್ತು ನೀನು ಬಂದು ನನ್ನ ಹಿಂಬಾಲಕನಾಗು” ಎಂದನು. 22  ಆ ಯೌವನಸ್ಥನ ಬಳಿ ಬಹಳ ಆಸ್ತಿಯಿದ್ದ ಕಾರಣ ಅವನು ಈ ಮಾತನ್ನು ಕೇಳಿ ದುಃಖದಿಂದ ಹೊರಟುಹೋದನು. 23  ಆಗ ಯೇಸು ತನ್ನ ಶಿಷ್ಯರಿಗೆ, “ಐಶ್ವರ್ಯವಂತನು ಸ್ವರ್ಗದ ರಾಜ್ಯವನ್ನು ಸೇರುವುದು ಕಷ್ಟ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 24  ಪುನಃ ನಾನು ನಿಮಗೆ ಹೇಳುವುದೇನೆಂದರೆ, ಒಬ್ಬ ಐಶ್ವರ್ಯವಂತನು ದೇವರ ರಾಜ್ಯವನ್ನು ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗಿಹೋಗುವುದು ಹೆಚ್ಚು ಸುಲಭ” ಅಂದನು. 25  ಶಿಷ್ಯರು ಇದನ್ನು ಕೇಳಿಸಿಕೊಂಡಾಗ ಬಹಳ ಆಶ್ಚರ್ಯಗೊಂಡು, “ಹಾಗಾದರೆ ಯಾರಿಗೆ ತಾನೇ ರಕ್ಷಣೆಯಾದೀತು?” ಎಂದು ಕೇಳಿದರು. 26  ಯೇಸು ಅವರನ್ನು ದಿಟ್ಟಿಸಿ ನೋಡಿ, “ಮನುಷ್ಯರಿಂದ ಇದು ಅಸಾಧ್ಯ. ಆದರೆ ದೇವರಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು. 27  ಆಗ ಪೇತ್ರನು ಅವನಿಗೆ, “ಇಗೋ, ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ; ನಮಗೆ ಏನು ದೊರಕುವುದು?” ಎಂದು ಕೇಳಿದನು. 28  ಅದಕ್ಕೆ ಯೇಸು, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವಾಗ, ನನ್ನನ್ನು ಹಿಂಬಾಲಿಸಿರುವ ನೀವು ಸಹ ಹನ್ನೆರಡು ಸಿಂಹಾಸನಗಳಲ್ಲಿ ಕುಳಿತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ. 29  ನನ್ನ ಹೆಸರಿನ ನಿಮಿತ್ತವಾಗಿ ಮನೆಗಳನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಂದೆಯನ್ನಾಗಲಿ ತಾಯಿಯನ್ನಾಗಲಿ ಮಕ್ಕಳನ್ನಾಗಲಿ ಹೊಲಗಳನ್ನಾಗಲಿ ಬಿಟ್ಟುಬಂದ ಪ್ರತಿಯೊಬ್ಬನಿಗೂ ಅನೇಕ ಪಾಲು ಹೆಚ್ಚಾಗಿ ಸಿಗುವುದು ಮತ್ತು ಅವನು ನಿತ್ಯಜೀವಕ್ಕೆ ಬಾಧ್ಯನಾಗುವನು. 30  “ಆದರೆ ಮೊದಲಿನವರಾದ ಅನೇಕರು ಕೊನೆಯವರಾಗುವರು, ಕೊನೆಯವರು ಮೊದಲಿನವರಾಗುವರು.

ಪಾದಟಿಪ್ಪಣಿ