ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮತ್ತಾಯ 16:1-28

16  ಫರಿಸಾಯರೂ ಸದ್ದುಕಾಯರೂ ಅವನ ಬಳಿಗೆ ಬಂದು ಅವನನ್ನು ಪರೀಕ್ಷಿಸಲಿಕ್ಕಾಗಿ ಆಕಾಶದಿಂದ ತಮಗೆ ಒಂದು ಸೂಚಕಕಾರ್ಯವನ್ನು ತೋರಿಸುವಂತೆ ಕೇಳಿಕೊಂಡರು.  ಆಗ ಅವನು ಅವರಿಗೆ, “ಸಂಜೆಯಾದಾಗ ನೀವು ​‘ಆಕಾಶವು ಕೆಂಪಾಗಿರುವುದರಿಂದ ಒಳ್ಳೆಯ ಹವಾಮಾನವಿರುವುದು’ ಎಂದು ಹೇಳುತ್ತೀರಿ;  ಬೆಳಗ್ಗೆ ‘ಆಕಾಶವು ಕೆಂಪಾಗಿದ್ದರೂ ಮೋಡ ಕವಿದಿರುವುದರಿಂದ ಇಂದು ಚಳಿಯ, ಮಳೆತರುವ ಹವಾಮಾನವಾಗಿರುವುದು’ ಎನ್ನುತ್ತೀರಿ. ಆಕಾಶದಲ್ಲಿ ಕಾಣುವ ಲಕ್ಷಣಗಳನ್ನು ಹೇಗೆ ಅರ್ಥಮಾಡಿಕೊಳ್ಳ​ಬೇಕೆಂಬುದು ನಿಮಗೆ ಗೊತ್ತಿದೆ, ಆದರೆ ಕಾಲಗಳ ಕುರಿತಾದ ಸೂಚನೆಗಳನ್ನು ಅರ್ಥಮಾಡಿಕೊಳ್ಳಲಾರಿರಿ.  ಈ ದುಷ್ಟ ಮತ್ತು ವ್ಯಭಿಚಾರದ ಸಂತತಿಯು ಒಂದು ಸೂಚಕಕಾರ್ಯವನ್ನು ಹುಡುಕುತ್ತಾ ಇದೆ; ಆದರೆ ಯೋನನ ಸೂಚಕಕಾರ್ಯವೇ ಹೊರತು ಬೇರೆ ಯಾವುದೇ ಸೂಚಕಕಾರ್ಯವು ಇದಕ್ಕೆ ಕೊಡಲ್ಪಡುವುದಿಲ್ಲ” ಎಂದು ಹೇಳಿ ಅವನು ಅವರನ್ನು ಬಿಟ್ಟು ಹೊರಟು​ಹೋದನು.  ಶಿಷ್ಯರು ತಮ್ಮೊಂದಿಗೆ ರೊಟ್ಟಿಯನ್ನು ತೆಗೆದುಕೊಂಡುಹೋಗಲು ಮರೆತು ಆಚೇದಡವನ್ನು ತಲಪಿದರು.  ಯೇಸು ಅವರಿಗೆ, “ಎಚ್ಚರಿಕೆಯಿಂದಿರಿ, ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗ್ರತೆಯಿಂದಿರಿ” ಎಂದು ಹೇಳಿದನು.  ಆಗ ಅವರು, “ನಮ್ಮೊಂದಿಗೆ ರೊಟ್ಟಿಯನ್ನು ತಂದಿಲ್ಲವಲ್ಲಾ” ಎಂದು ತಮ್ಮತಮ್ಮೊಳಗೆ ಚರ್ಚಿಸಲಾರಂಭಿಸಿದರು.  ಇದನ್ನು ತಿಳಿದು ಯೇಸು ಅವರಿಗೆ, “ಅಲ್ಪವಿಶ್ವಾಸಿಗಳೇ, ನಿಮ್ಮ ಬಳಿ ರೊಟ್ಟಿಯಿಲ್ಲವಲ್ಲಾ ಎಂದು ನಿಮ್ಮೊಳಗೆ ಚರ್ಚಿಸುತ್ತಿರುವುದೇಕೆ?  ನೀವು ಇನ್ನೂ ಗ್ರಹಿಸಲಿಲ್ಲವೊ? ನಾನು ಆ ಐದು ರೊಟ್ಟಿಗಳನ್ನು ಐದು ಸಾವಿರ ಮಂದಿಗೆ ಹಂಚಿಸಿದಾಗ ನೀವು ಎಷ್ಟು ಬುಟ್ಟಿಗಳ ತುಂಬ ರೊಟ್ಟಿತುಂಡು​ಗಳನ್ನು ಒಟ್ಟುಗೂಡಿಸಿದಿರಿ ಎಂಬುದು ನಿಮಗೆ ನೆನಪಿಲ್ಲವೊ? 10  ಅಥವಾ ನಾನು ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಮಂದಿಗೆ ಹಂಚಿಸಿದಾಗ ನೀವು ಎಷ್ಟು ಬುಟ್ಟಿಗಳ ತುಂಬ ರೊಟ್ಟಿತುಂಡುಗಳನ್ನು ಒಟ್ಟುಗೂಡಿಸಿದಿರಿ? 11  ನಾನು ರೊಟ್ಟಿಗಳ ಕುರಿತು ನಿಮ್ಮೊಂದಿಗೆ ಮಾತಾಡಲಿಲ್ಲ ಎಂಬುದನ್ನು ನೀವು ಗ್ರಹಿಸದೆ ಇರುವುದು ಹೇಗೆ? ಆದರೆ ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯ​ದಲ್ಲಿ ಜಾಗ್ರತೆಯಿಂದಿರಿ” ಎಂದು ಹೇಳಿದನು. 12  ಆಗ ಅವರು ರೊಟ್ಟಿಯ ಹುಳಿಹಿಟ್ಟಿನ ವಿಷಯದಲ್ಲಿ ಅಲ್ಲ, ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯ ವಿಷಯ​ದಲ್ಲಿ ಜಾಗರೂಕರಾಗಿರುವಂತೆ ಅವನು ಹೇಳಿದನು ಎಂಬುದನ್ನು ಗ್ರಹಿಸಿದರು. 13  ಯೇಸು ಕೈಸರೈಯ ಫಿಲಿಪ್ಪೀ ಪ್ರದೇಶ​ಗಳಿಗೆ ಬಂದಾಗ ತನ್ನ ಶಿಷ್ಯರಿಗೆ, “ಮನುಷ್ಯಕುಮಾರನು ಯಾರೆಂದು ಜನರು ಹೇಳುತ್ತಾರೆ?” ಎಂದು ಕೇಳಿದನು. 14  ಅದಕ್ಕವರು, “ಕೆಲವರು ​ಸ್ನಾನಿಕನಾದ ಯೋಹಾನನೆಂದೂ ಇತರರು ಎಲೀಯನೆಂದೂ ಮತ್ತಿತರರು ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ಒಬ್ಬನೆಂದೂ ಹೇಳುತ್ತಾರೆ” ಅಂದರು.  15  ಅದಕ್ಕೆ ಅವನು ಅವರಿಗೆ, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪ್ರಶ್ನಿಸಿ​ದನು. 16  ಆಗ ಸೀಮೋನ ಪೇತ್ರನು, “ನೀನು ಕ್ರಿಸ್ತನು, ಜೀವವುಳ್ಳ ದೇವರ ಮಗನು” ಎಂದು ಉತ್ತರಕೊಟ್ಟನು. 17  ಪ್ರತಿಯಾಗಿ ಯೇಸು ಅವನಿಗೆ, “ಯೋನನ ಮಗನಾದ ಸೀಮೋನನೇ, ನೀನು ಸಂತೋಷಿತನು; ಏಕೆಂದರೆ ಇದನ್ನು ನರಮನುಷ್ಯನಲ್ಲ ಬದಲಾಗಿ ಸ್ವರ್ಗದಲ್ಲಿರುವ ನನ್ನ ತಂದೆಯೇ ನಿನಗೆ ಪ್ರಕಟಪಡಿಸಿದನು. 18  ಇದಲ್ಲದೆ ನಾನು ನಿನಗೆ ಹೇಳುವುದೇನೆಂದರೆ, ನೀನು ಪೇತ್ರನು ಮತ್ತು ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನು; ಹೇಡೀಸ್‍ನ ದ್ವಾರಗಳು ಅದನ್ನು ಸೋಲಿಸಲಾರವು. 19  ನಾನು ನಿನಗೆ ಸ್ವರ್ಗದ ರಾಜ್ಯದ ಬೀಗದ ಕೈಗಳನ್ನು ಕೊಡುವೆನು; ಭೂಮಿಯ ಮೇಲೆ ನೀನು ಏನನ್ನು ಕಟ್ಟುತ್ತಿಯೋ ಅದು ಸ್ವರ್ಗದಲ್ಲಿ ಕಟ್ಟಲ್ಪಟ್ಟಿರುವುದು ಮತ್ತು ಭೂಮಿಯ ಮೇಲೆ ನೀನು ಏನನ್ನು ಬಿಚ್ಚುತ್ತಿಯೋ ಅದು ಸ್ವರ್ಗದಲ್ಲಿ ಬಿಚ್ಚಲ್ಪಟ್ಟಿರುವುದು” ಎಂದು ಹೇಳಿದನು. 20  ಅನಂತರ ಅವನು ಶಿಷ್ಯರಿಗೆ ತಾನು ಕ್ರಿಸ್ತನೆಂಬುದನ್ನು ಯಾರಿಗೂ ಹೇಳಬಾರದೆಂದು ಕಟ್ಟಪ್ಪಣೆ ನೀಡಿದನು. 21  ಅಂದಿನಿಂದ ಯೇಸು ಕ್ರಿಸ್ತನು ತಾನು ಯೆರೂಸಲೇಮಿಗೆ ಹೋಗಿ ಹಿರೀಪುರುಷ​ರಿಂದಲೂ ಮುಖ್ಯ ಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಅನೇಕ ಕಷ್ಟಗಳನ್ನು ಅನುಭವಿಸಿ ಕೊಲ್ಲಲ್ಪಡುವೆನು ಮತ್ತು ಮೂರನೆಯ ದಿನದಲ್ಲಿ ಎಬ್ಬಿಸಲ್ಪಡುವೆನು ಎಂದು ತನ್ನ ಶಿಷ್ಯರಿಗೆ ತಿಳಿಸಲಾರಂಭಿಸಿದನು. 22  ಆಗ ಪೇತ್ರನು ಅವನನ್ನು ಬದಿಗೆ ಕರೆದುಕೊಂಡು ಹೋಗಿ, “ಕರ್ತನೇ, ನಿನಗೆ ದಯೆತೋರಿಸಿಕೋ; ನಿನಗೆ ಈ ಗತಿ ಎಂದಿಗೂ ಆಗದು” ಎಂದು ಗದರಿಸಿ ಹೇಳಿದನು. 23  ಅವನು ತಿರುಗಿ ಪೇತ್ರನಿಗೆ, “ಸೈತಾನನೇ, ನನ್ನಿಂದ ತೊಲಗಿಹೋಗು. ನೀನು ನನಗೆ ಎಡವುಗಲ್ಲಾಗಿದ್ದೀ, ಏಕೆಂದರೆ ನೀನು ಆಲೋಚಿಸುವುದು ಮನುಷ್ಯರ ಆಲೋಚನೆ​ಗಳೇ ಹೊರತು ದೇವರದಲ್ಲ!” ಎಂದು ಹೇಳಿದನು. 24  ಅನಂತರ ಯೇಸು ತನ್ನ ಶಿಷ್ಯರಿಗೆ, “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ ತನ್ನ ಯಾತನಾ ಕಂಬವನ್ನು ಹೊತ್ತುಕೊಂಡು ಎಡೆಬಿಡದೆ ನನ್ನನ್ನು ಹಿಂಬಾಲಿಸಲಿ. 25  ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಬಯಸುವವನು ಅದನ್ನು ಕಳೆದುಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು. 26  ಒಬ್ಬ ಮನುಷ್ಯನು ಇಡೀ ಲೋಕವನ್ನೇ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು? ಅಥವಾ ಒಬ್ಬನು ತನ್ನ ಪ್ರಾಣಕ್ಕೆ ಪ್ರತಿಯಾಗಿ ಏನನ್ನು ಕೊಡುವನು? 27  ಮನುಷ್ಯ​ಕುಮಾರನು ತನ್ನ ತಂದೆಯ ಮಹಿಮೆಯಲ್ಲಿ ತನ್ನ ದೂತರೊಡನೆ ಬರಲಿಕ್ಕಿದ್ದಾನೆ; ಆಗ ಅವನು ಪ್ರತಿಯೊಬ್ಬನಿಗೂ ​ಅವನವನ ವರ್ತನೆಗೆ ತಕ್ಕಂತೆ ಪ್ರತಿಫಲ ನೀಡುವನು. 28  ಇಲ್ಲಿ ನಿಂತಿರುವವರಲ್ಲಿ ಕೆಲವರು ಮೊದಲು ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವುದನ್ನು ನೋಡುವ ವರೆಗೆ ಮರಣ​ಹೊಂದುವುದೇ ಇಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಅಂದನು.

ಪಾದಟಿಪ್ಪಣಿ