ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮತ್ತಾಯ 14:1-36

14  ಆ ನಿರ್ದಿಷ್ಟ ಸಮಯದಲ್ಲಿ ಉಪಾಧಿಪತಿಯಾದ ಹೆರೋದನು ಯೇಸುವಿನ ಕುರಿತಾದ ಸುದ್ದಿಯನ್ನು ಕೇಳಿಸಿಕೊಂಡು  ತನ್ನ ಸೇವಕರಿಗೆ, “ಇವನು ಸ್ನಾನಿಕನಾದ ಯೋಹಾನನೇ. ಇವನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ; ಆದುದರಿಂದಲೇ ಈ ಮಹತ್ಕಾರ್ಯಗಳು ಇವನಿಂದ ನಡೆಯುತ್ತಿವೆ” ಎಂದು ಹೇಳಿದನು.  ಹೆರೋದನು ತನ್ನ ಅಣ್ಣನಾದ ಫಿಲಿಪ್ಪನ ಹೆಂಡತಿಯಾಗಿದ್ದ ಹೆರೋದ್ಯಳ ನಿಮಿತ್ತ ಯೋಹಾನನನ್ನು ಬಂಧಿಸಿ ಸೆರೆಯಲ್ಲಿ ಕಟ್ಟಿಹಾಕಿಸಿದ್ದನು.  ಏಕೆಂದರೆ ಯೋಹಾನನು ಅವನಿಗೆ, “ಅವಳನ್ನು ಇಟ್ಟುಕೊಂಡಿರುವುದು ನ್ಯಾಯವಲ್ಲ” ಎಂದು ಹೇಳುತ್ತಾ ಇದ್ದನು.  ಅವನು ಯೋಹಾನನನ್ನು ಕೊಲ್ಲಲು ಬಯಸಿದನಾದರೂ, ಜನರು ಅವನನ್ನು ಪ್ರವಾದಿ ಎಂದು ಪರಿಗಣಿಸಿದ್ದರಿಂದ ಅವರಿಗೆ ಹೆದರಿದನು.  ಆದರೆ ಹೆರೋದನ ಹುಟ್ಟಿದ ದಿನವು ಆಚರಿಸಲ್ಪಡುತ್ತಿದ್ದಾಗ ಹೆರೋದ್ಯಳ ಮಗಳು ನಾಟ್ಯವಾಡಿ ಹೆರೋದನನ್ನು ಎಷ್ಟು ಮೆಚ್ಚಿಸಿದಳೆಂದರೆ,  ಅವಳು ಏನೇ ಕೇಳಿದರೂ ಕೊಡುವೆನೆಂದು ಅವನು ಪ್ರಮಾಣಮಾಡಿ ಹೇಳಿದನು.  ಬಳಿಕ ಅವಳು ತನ್ನ ತಾಯಿ ಹೇಳಿಕೊಟ್ಟ ಪ್ರಕಾರ, “ನನಗೆ ಸ್ನಾನಿಕನಾದ ಯೋಹಾನನ ತಲೆಯನ್ನು ದೊಡ್ಡ ತಟ್ಟೆಯಲ್ಲಿ ಇಲ್ಲಿಗೆ ತಂದುಕೊಡು” ಎಂದು ಹೇಳಿದಳು.  ಅವನಿಗೆ ದುಃಖವಾಯಿತಾದರೂ, ತನ್ನ ಪ್ರಮಾಣಗಳ ನಿಮಿತ್ತವಾಗಿಯೂ ತನ್ನೊಂದಿಗೆ ಊಟಕ್ಕೆ ಕುಳಿತಿದ್ದವರ ನಿಮಿತ್ತವಾಗಿಯೂ ಅದನ್ನು ತಂದುಕೊಡುವಂತೆ ಆಜ್ಞಾಪಿಸಿದನು; 10  ಮತ್ತು ತನ್ನ ಸೇವಕರನ್ನು ಕಳುಹಿಸಿ ಸೆರೆಮನೆಯಲ್ಲಿ ಯೋಹಾನನ ತಲೆಯನ್ನು ಕಡಿಸಿದನು. 11  ಅವನ ತಲೆಯನ್ನು ದೊಡ್ಡ ತಟ್ಟೆಯಲ್ಲಿ ತಂದು ಆ ಹುಡುಗಿಗೆ ಕೊಟ್ಟಾಗ ಅವಳು ಅದನ್ನು ತನ್ನ ತಾಯಿಯ ಬಳಿಗೆ ತಂದಳು. 12  ಕೊನೆಗೆ ಅವನ ಶಿಷ್ಯರು ಬಂದು ಅವನ ಶವವನ್ನು ತೆಗೆದುಕೊಂಡು ಹೋಗಿ ಹೂಣಿಟ್ಟರು ಮತ್ತು ಯೇಸುವಿನ ಬಳಿಗೆ ಬಂದು ವರದಿಮಾಡಿದರು. 13  ಇದನ್ನು ಕೇಳಿ ಯೇಸು ದೋಣಿಯನ್ನು ಹತ್ತಿ ತಾನೊಬ್ಬನೇ ಇರಲಿಕ್ಕಾಗಿ ಏಕಾಂತವಾದ ಒಂದು ಸ್ಥಳಕ್ಕೆ ಹೋದನು; ಆದರೆ ಜನರ ಗುಂಪುಗಳು ಇದನ್ನು ಕೇಳಿಸಿಕೊಂಡಾಗ ತಮ್ಮ ಊರುಗಳಿಂದ ಕಾಲುನಡಿಗೆಯಲ್ಲಿ ಅವನನ್ನು ಹಿಂಬಾಲಿಸಿದವು. 14  ಅವನು ಅಲ್ಲಿಗೆ ಬಂದಾಗ ಜನರ ದೊಡ್ಡ ಗುಂಪನ್ನು ನೋಡಿ ಅವರಿಗಾಗಿ ಕನಿಕರಪಟ್ಟು ಅವರಲ್ಲಿದ್ದ ರೋಗಿಗಳನ್ನು ಗುಣಪಡಿಸಿದನು. 15  ಸಂಜೆಯಾದಾಗ ಶಿಷ್ಯರು ಅವನ ಬಳಿಗೆ ಬಂದು, “ಇದು ನಿರ್ಜನ ಸ್ಥಳ ಮತ್ತು ಈಗಾಗಲೇ ತುಂಬ ಹೊತ್ತಾಗಿದೆ. ಈ ಜನರು ಹಳ್ಳಿಗಳಿಗೆ ಹೋಗಿ ಊಟಕ್ಕೆ ಏನಾದರೂ ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿಬಿಡು” ಎಂದು ಹೇಳಿದರು. 16  ಆಗ ಯೇಸು ಅವರಿಗೆ, “ಅವರು ಹೋಗಬೇಕಾಗಿಲ್ಲ, ನೀವೇ ಅವರಿಗೆ ಏನನ್ನಾದರೂ ಊಟಕ್ಕೆ ಕೊಡಿರಿ” ಅಂದನು. 17  ಅವರು ಅವನಿಗೆ, “ಐದು ರೊಟ್ಟಿಗಳು ಮತ್ತು ಎರಡು ಮೀನುಗಳನ್ನು ಬಿಟ್ಟರೆ ನಮ್ಮ ಬಳಿ ಬೇರೇನೂ ಇಲ್ಲ” ಎಂದರು. 18  ಆಗ ಅವನು, “ಅವುಗಳನ್ನು ನನ್ನ ಬಳಿಗೆ ತನ್ನಿರಿ” ಎಂದು ಹೇಳಿದನು. 19  ತದನಂತರ ಜನರ ಗುಂಪಿಗೆ ಹುಲ್ಲುಹಾಸಿನ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟನು; ಅವನು ಐದು ರೊಟ್ಟಿಗಳು ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಸ್ತೋತ್ರಮಾಡಿ ರೊಟ್ಟಿಗಳನ್ನು ಮುರಿದು ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಅವರು ಅದನ್ನು ಜನರ ಗುಂಪುಗಳಿಗೆ ಹಂಚಿದರು. 20  ಅವರೆಲ್ಲರೂ ಊಟಮಾಡಿ ತೃಪ್ತರಾದರು ಮತ್ತು ಅವರು ಉಳಿದ ತುಂಡುಗಳನ್ನು ಕೂಡಿಸಲಾಗಿ ಹನ್ನೆರಡು ಬುಟ್ಟಿಗಳು ತುಂಬಿದವು. 21  ಊಟಮಾಡಿದವರು ಹೆಂಗಸರು ಮತ್ತು ಮಕ್ಕಳಲ್ಲದೆ ಗಂಡಸರೇ ಸುಮಾರು ಐದು ಸಾವಿರ ಮಂದಿ ಇದ್ದರು. 22  ಇದಾದ ಕೂಡಲೆ ಅವನು ಜನರ ಗುಂಪನ್ನು ಕಳುಹಿಸಿಬಿಡುವಷ್ಟರೊಳಗೆ ತನ್ನ ಶಿಷ್ಯರಿಗೆ ದೋಣಿಯನ್ನು ಹತ್ತಿ ತನಗಿಂತ ಮುಂಚೆ ಆಚೇದಡಕ್ಕೆ ಹೋಗುವಂತೆ ಒತ್ತಾಯಿಸಿದನು. 23  ಅವನು ಜನರ ಗುಂಪನ್ನು ಬೀಳ್ಕೊಟ್ಟ ಬಳಿಕ ಪ್ರಾರ್ಥಿಸಲಿಕ್ಕಾಗಿ ಏಕಾಂತವಾಗಿ ಬೆಟ್ಟಕ್ಕೆ ಹೋದನು. ಬಹಳ ಹೊತ್ತಾಗಿದ್ದರೂ ಅವನು ಒಬ್ಬನೇ ಅಲ್ಲಿದ್ದನು. 24  ಇಷ್ಟರಲ್ಲಿ ದೋಣಿಯು ತೀರದಿಂದ ನೂರಾರು ಗಜಗಳಷ್ಟು ದೂರದಲ್ಲಿತ್ತು ಮತ್ತು ಎದುರುಗಾಳಿಯು ಬೀಸುತ್ತಾ ಇದ್ದುದರಿಂದ ಅದು ಅಲೆಗಳ ಬಡಿತಕ್ಕೆ ಸಿಕ್ಕಿ ಹೊಯ್ದಾಡುತ್ತಿತ್ತು. 25  ನಾಲ್ಕನೆಯ ಜಾವದಲ್ಲಿ * ಅವನು ಸಮುದ್ರದ ಮೇಲೆ ನಡೆಯುತ್ತಾ ಅವರ ಬಳಿಗೆ ಬಂದನು. 26  ಅವನು ಸಮುದ್ರದ ಮೇಲೆ ನಡೆಯುತ್ತಿರುವುದನ್ನು ಶಿಷ್ಯರು ಕಂಡಾಗ ಅವರು ಗಲಿಬಿಲಿಗೊಂಡು, “ಅಲ್ಲಿ ಏನೋ ಇದೆ” ಎಂದು ಹೇಳಿ ಭಯದಿಂದ ಚೀರಿದರು. 27  ಕೂಡಲೆ ಯೇಸು ಅವರಿಗೆ, “ಧೈರ್ಯವಾಗಿರಿ, ನಾನೇ; ಭಯಪಡಬೇಡಿರಿ” ಎಂದು ಹೇಳಿದನು. 28  ಆಗ ಪೇತ್ರನು ಅವನಿಗೆ, “ಕರ್ತನೇ, ಅದು ನೀನೇ ಆಗಿರುವಲ್ಲಿ, ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವಂತೆ ನನಗೆ ಅಪ್ಪಣೆಕೊಡು” ಎಂದು ಹೇಳಿದನು. 29  ಅದಕ್ಕೆ ಅವನು, “ಬಾ” ಎಂದಾಗ ಪೇತ್ರನು ದೋಣಿಯಿಂದ ಇಳಿದು ನೀರಿನ ಮೇಲೆ ನಡೆಯುತ್ತಾ ಯೇಸುವಿನ ಬಳಿಗೆ ಹೋದನು. 30  ಆದರೆ ಬಿರುಗಾಳಿಯನ್ನು ನೋಡಿ ಅವನು ಭಯಗೊಂಡು ಮುಳುಗತೊಡಗಿದಾಗ “ಕರ್ತನೇ ನನ್ನನ್ನು ಕಾಪಾಡು” ಎಂದು ಕೂಗಿಕೊಂಡನು. 31  ಆ ಕೂಡಲೆ ಯೇಸು ಕೈಚಾಚಿ ಅವನನ್ನು ಹಿಡಿದು, “ಎಲೈ ಅಲ್ಪವಿಶ್ವಾಸಿಯೇ, ನೀನೇಕೆ ಸಂಶಯಕ್ಕೆ ಆಸ್ಪದಕೊಟ್ಟೆ?” ಎಂದನು. 32  ಅವರು ದೋಣಿಯನ್ನು ಹತ್ತಿದಾಗ ಬಿರುಗಾಳಿಯು ನಿಂತುಹೋಯಿತು. 33  ಆಗ ದೋಣಿಯಲ್ಲಿದ್ದವರು “ನಿಜವಾಗಿಯೂ ನೀನು ದೇವರ ಮಗನು” ಎಂದು ಹೇಳಿ ಅವನಿಗೆ ಪ್ರಣಾಮಮಾಡಿದರು. 34  ಅವರು ಸಮುದ್ರವನ್ನು ದಾಟಿ ಗೆನೆಜರೇತ್‌ ಊರಿಗೆ ಬಂದು ಮುಟ್ಟಿದರು. 35  ಆ ಸ್ಥಳದವರು ಅವನ ಗುರುತುಹಿಡಿದು ಸುತ್ತಲಿನ ಊರುಗಳಿಗೆ ಹೇಳಿಕಳುಹಿಸಿದಾಗ ಜನರು ಅಸ್ವಸ್ಥರಾಗಿದ್ದವರನ್ನೆಲ್ಲ ಅವನ ಬಳಿಗೆ ತಂದರು. 36  ಅವರು ಅವನ ಮೇಲಂಗಿಯ ಅಂಚನ್ನಾದರೂ ಮುಟ್ಟಲು ಅನುಮತಿಸುವಂತೆ ಅವನನ್ನು ಬೇಡಿಕೊಳ್ಳುತ್ತಾ ಇದ್ದರು ಮತ್ತು ಅದನ್ನು ಮುಟ್ಟಿದವರೆಲ್ಲರಿಗೂ ಸಂಪೂರ್ಣವಾಗಿ ವಾಸಿಯಾಯಿತು.

ಪಾದಟಿಪ್ಪಣಿ

ಮತ್ತಾ 14:25  ಕೊನೆಯ ಜಾವ (ಬೆಳಗ್ಗೆ ಸುಮಾರು ಮೂರು ಗಂಟೆಯಿಂದ ಸೂರ್ಯೋದಯದ ತನಕ).