ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮತ್ತಾಯ 12:1-50

12  ಆ ಕಾಲಾವಧಿಯಲ್ಲಿ ಯೇಸು ಸಬ್ಬತ್‌ ದಿನದಂದು ಪೈರಿನ ಹೊಲಗಳನ್ನು ಹಾದುಹೋಗು​ತ್ತಿದ್ದಾಗ ಅವನ ಶಿಷ್ಯರಿಗೆ ಹಸಿವೆಯಾದುದರಿಂದ ಅವರು ಪೈರಿನ ತೆನೆಗಳನ್ನು ಕಿತ್ತುಕೊಂಡು ತಿನ್ನಲಾರಂಭಿಸಿದರು.  ಇದನ್ನು ನೋಡಿ ಫರಿಸಾಯರು ಅವನಿಗೆ, “ನೋಡು! ನಿನ್ನ ಶಿಷ್ಯರು ಸಬ್ಬತ್‌ ದಿನದಲ್ಲಿ ಮಾಡಲು ಧರ್ಮಸಮ್ಮತವಲ್ಲದ ಕೆಲಸವನ್ನು ಮಾಡುತ್ತಿದ್ದಾರೆ” ಎಂದು ಹೇಳಿದರು.  ಅವನು ಅವರಿಗೆ, “ದಾವೀದನು ತಾನೂ ತನ್ನೊಂದಿಗಿದ್ದವರೂ ಹಸಿದಾಗ ಏನು ಮಾಡಿದನೆಂಬುದನ್ನು ನೀವು ಓದಲಿಲ್ಲವೊ?  ಅವನು ದೇವಾಲಯವನ್ನು ಪ್ರವೇಶಿಸಿದನು ಮತ್ತು ಯಾಜಕರು ಹೊರತು ತಾನಾಗಲಿ ತನ್ನ ಸಂಗಡ ಇದ್ದವರಾಗಲಿ ತಿನ್ನುವುದು ಧರ್ಮಸಮ್ಮತವಾಗಿದ್ದಿರದ ನೈವೇ​ದ್ಯದ ರೊಟ್ಟಿಗಳನ್ನು ಅವರು ತಿಂದರಲ್ಲಾ?  ಅಥವಾ ಸಬ್ಬತ್‌ ದಿನಗಳಂದು ದೇವಾಲಯದಲ್ಲಿರುವ ಯಾಜಕರು ಸಬ್ಬತ್‌ ದಿನದಲ್ಲಿ ಕೆಲಸಮಾಡಿದರೂ * ನಿರ್ದೋಷಿಗಳಾಗಿಯೇ ಇರುತ್ತಾರೆ ಎಂಬುದನ್ನು ನೀವು ಧರ್ಮಶಾಸ್ತ್ರದಲ್ಲಿ ಓದಲಿಲ್ಲವೇ?  ಆದರೆ ದೇವಾಲಯಕ್ಕಿಂತ ಹೆಚ್ಚಿನವನು ಇಲ್ಲಿದ್ದಾನೆ ಎಂದು ನಿಮಗೆ ಹೇಳುತ್ತೇನೆ.  ‘ನನಗೆ ಯಜ್ಞವಲ್ಲ ಕರುಣೆಯೇ ಬೇಕು’ ಎಂಬುದರ ಅರ್ಥವನ್ನು ತಿಳಿದಿರುತ್ತಿದ್ದಲ್ಲಿ ನೀವು ನಿರ್ದೋಷಿಗಳನ್ನು ಖಂಡಿಸುತ್ತಿರಲಿಲ್ಲ.  ಏಕೆಂದರೆ ಮನುಷ್ಯಕುಮಾರನು ಸಬ್ಬತ್ತಿನ ಒಡೆಯ​ನಾಗಿದ್ದಾನೆ” ಎಂದು ಹೇಳಿದನು.  ಅವನು ಆ ಸ್ಥಳದಿಂದ ಹೊರಟು ಅವರ ಸಭಾಮಂದಿರದೊಳಗೆ ಹೋದನು; 10  ಅಲ್ಲಿ ಕೈಬತ್ತಿಹೋಗಿದ್ದ ಒಬ್ಬ ಮನುಷ್ಯನಿದ್ದನು. ಆಗ ಅವರು ಅವನ ವಿರುದ್ಧ ತಪ್ಪನ್ನು ಕಂಡುಹಿಡಿಯಲಿಕ್ಕಾಗಿ, ‘ಸಬ್ಬತ್‌ ದಿನದಲ್ಲಿ ವಾಸಿಮಾಡುವುದು ಧರ್ಮಸಮ್ಮತವೊ?’ ಎಂದು ಅವನನ್ನು ಕೇಳಿದರು. 11  ಅದಕ್ಕೆ ಅವನು, “ನಿಮ್ಮಲ್ಲಿ ಯಾವನಿಗಾದರೂ ಒಂದೇ ಕುರಿಯಿದ್ದು ಅದು ಸಬ್ಬತ್‌ ದಿನದಂದು ಕುಣಿಯಲ್ಲಿ ಬಿದ್ದರೆ ಅವನು ಅದನ್ನು ಹಿಡಿದು ಮೇಲಕ್ಕೆ ಎತ್ತದಿರುವನೇ? 12  ಎಲ್ಲವನ್ನೂ ಪರಿಗಣಿಸುವಲ್ಲಿ, ಒಂದು ಕುರಿಗಿಂತ ಒಬ್ಬ ಮನುಷ್ಯನು ಎಷ್ಟೋ ಮೇಲಾಗಿದ್ದಾನೆ! ಆದುದರಿಂದ ಸಬ್ಬತ್‌ ದಿನದಲ್ಲಿ ಒಳ್ಳೆಯ ವಿಷಯವನ್ನು ಮಾಡುವುದು ಧರ್ಮಸಮ್ಮತವಾಗಿದೆ” ಎಂದನು. 13  ಬಳಿಕ ಅವನು ಆ ಮನುಷ್ಯನಿಗೆ, “ನಿನ್ನ ಕೈಚಾಚು” ಎಂದು ಹೇಳಿದನು. ಅವನು ಕೈಯನ್ನು ಚಾಚಿದನು ಮತ್ತು ಅದು ವಾಸಿಯಾಗಿ ಮತ್ತೊಂದು ಕೈಯಂತೆಯೇ ಆಯಿತು. 14  ಆದರೆ ಫರಿಸಾಯರು ಅಲ್ಲಿಂದ ಹೊರಗೆ ಹೋಗಿ ಅವನನ್ನು ಕೊಲ್ಲಲಿಕ್ಕಾಗಿ ಅವನ ವಿರುದ್ಧ ಸಮಾಲೋಚನೆ ನಡೆಸಿದರು. 15  ಇದನ್ನು ತಿಳಿದು, ಯೇಸು ಅಲ್ಲಿಂದ ಹೊರಟುಹೋದನು. ಅನೇಕರು ಅವನ ಹಿಂದೆ ಹೋದರು ಮತ್ತು ಅವರೆಲ್ಲರನ್ನೂ ಅವನು ವಾಸಿಮಾಡಿದನು; 16  ಆದರೆ ತಾನು ಯಾರೆಂಬುದನ್ನು ಪ್ರಕಟಿಸಬಾರದೆಂದು ಅವನು ಅವರಿಗೆ ಕಟ್ಟಪ್ಪಣೆ ಮಾಡಿದನು; 17  ಇದರಿಂದಾಗಿ ಪ್ರವಾದಿಯಾದ ಯೆಶಾಯನ ಮೂಲಕ ತಿಳಿಸಲ್ಪಟ್ಟ ಮಾತು ನೆರವೇರುವಂತಾಯಿತು. ಅದೇನೆಂದರೆ, 18  “ಇಗೋ! ನಾನು ಆರಿಸಿ​ಕೊಂಡಿರುವ ಸೇವಕನು; ನನ್ನ ಪ್ರಿಯನು; ನನ್ನ ಪ್ರಾಣವು ಇವನನ್ನು ಮೆಚ್ಚಿದೆ! ನಾನು ಇವನ ಮೇಲೆ ನನ್ನ ಆತ್ಮವನ್ನು * ಇರಿಸುವೆನು ಮತ್ತು ಇವನು ಅನ್ಯಜನಾಂಗಗಳಿಗೆ ನ್ಯಾಯವೇನೆಂಬುದನ್ನು ಸ್ಪಷ್ಟಪಡಿಸುವನು. 19  ಇವನು ಜಗಳವಾಡುವುದಿಲ್ಲ, ಕೂಗಾಡುವುದಿಲ್ಲ, ಅಗಲವಾದ ಬೀದಿ​ಗಳಲ್ಲಿ ಇವನ ಸ್ವರವು ಯಾರಿಗೂ ಕೇಳಿ​ಬರುವುದಿಲ್ಲ. 20  ನ್ಯಾಯವನ್ನು ಜಯಗೊಳಿಸುವ ವರೆಗೆ ಇವನು ಜಜ್ಜಿಹೋದ ದಂಟನ್ನು ಮುರಿದುಹಾಕುವುದಿಲ್ಲ ಮತ್ತು ಆರಿಹೋಗುತ್ತಿರುವ ಬತ್ತಿಯನ್ನು ನಂದಿಸುವುದಿಲ್ಲ. 21  ನಿಶ್ಚಯವಾಗಿ ಇವನ ಹೆಸರಿನಲ್ಲಿ ಜನಾಂಗಗಳವರು ನಿರೀಕ್ಷೆಯಿಡುವರು.” 22  ಬಳಿಕ ಅವರು ದೆವ್ವಹಿಡಿದಿದ್ದ ಕುರುಡನೂ ಮೂಕನೂ ಆಗಿದ್ದ ಒಬ್ಬ ಮನುಷ್ಯನನ್ನು ಅವನ ಬಳಿಗೆ ತಂದರು; ಅವನು ಆ ಮೂಕನನ್ನು ವಾಸಿಮಾಡಿದಾಗ ಅವನು ಮಾತಾಡಿದನು ಮತ್ತು ನೋಡಿದನು. 23  ಇದನ್ನು ಕಂಡು ಜನರೆಲ್ಲರೂ ಬೆರಗಾಗಿ, “ಪ್ರಾಯಶಃ ಇವನೇ ದಾವೀದನ ಕುಮಾರನಾಗಿರಬಹುದೊ?” ಎಂದು ಹೇಳತೊಡಗಿದರು. 24  ಇದನ್ನು ಕೇಳಿದ ಫರಿಸಾಯರು, “ಇವನು ದೆವ್ವಗಳ ಅಧಿಪತಿಯಾದ ಬೆಲ್ಜೆಬೂಲನ ಸಹಾಯದಿಂದಲೇ ಹೊರತು ಬೇರೆ ರೀತಿಯಿಂದ ಅವುಗಳನ್ನು ಬಿಡಿಸುವುದಿಲ್ಲ” ಎಂದರು. 25  ಅವರ ಆಲೋಚನೆಗಳನ್ನು ಅರಿತವನಾಗಿ ಅವನು ಅವರಿಗೆ, “ತನ್ನೊಳಗೆ ಒಡೆದು ವಿಭಾಗವಾಗಿರುವ ಪ್ರತಿಯೊಂದು ರಾಜ್ಯವು ಹಾಳಾಗುವುದು; ತನ್ನಲ್ಲಿ ವಿಭಾಗಗೊಂಡಿರುವ ಪ್ರತಿಯೊಂದು ಪಟ್ಟಣವು ಅಥವಾ ಮನೆಯು ನಿಲ್ಲಲಾರದು. 26  ಅಂತೆಯೇ, ಸೈತಾನನು ಸೈತಾನನನ್ನೇ ಬಿಡಿಸುವಲ್ಲಿ ಅವನು ವಿಭಾಗಿಸಲ್ಪಡುತ್ತಾನೆ; ಹೀಗಿರುವಾಗ ಅವನ ರಾಜ್ಯವು ಹೇಗೆ ನಿಲ್ಲುವುದು? 27  ಇದಲ್ಲದೆ ನಾನು ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮ ಶಿಷ್ಯರು ಯಾರ ಸಹಾಯದಿಂದ ಅವುಗಳನ್ನು ಬಿಡಿಸುತ್ತಾರೆ? ಈ ಕಾರಣದಿಂದ ಅವರೇ ನಿಮಗೆ ನ್ಯಾಯತೀರಿಸುವವರಾಗಿರುವರು. 28  ನಾನು ದೇವರ ಆತ್ಮದ ಸಹಾಯದಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ರಾಜ್ಯವು ನಿಜವಾಗಿಯೂ ನಿಮ್ಮನ್ನು ದಾಟಿಹೋಗಿದೆ. 29  ಅಥವಾ ಯಾವನಾದರೂ ಮೊದಲು ಬಲಿಷ್ಠನೊಬ್ಬನನ್ನು ಕಟ್ಟಿಹಾಕದೆ ಅವನ ಮನೆಯನ್ನು ಆಕ್ರಮಿಸಿ ಅವನ ಚರಸೊತ್ತನ್ನು ಸೂರೆಮಾಡುವುದಾದರೂ ಹೇಗೆ? ​ಅವನನ್ನು ಕಟ್ಟಿಹಾಕಿದ ಮೇಲೆ ಅವನ ಮನೆಯನ್ನು ಸೂರೆಮಾಡುವನು. 30  ನನ್ನ ಪಕ್ಷದಲ್ಲಿಲ್ಲದವನು ನನಗೆ ವಿರೋಧವಾಗಿದ್ದಾನೆ; ನನ್ನೊಂದಿಗೆ ಒಟ್ಟುಗೂಡಿಸದವನು ಚೆದರಿಸುವವನಾಗಿದ್ದಾನೆ. 31  “ಆದಕಾರಣ ನಾನು ನಿಮಗೆ ಹೇಳು​ವುದೇನೆಂದರೆ, ಮನುಷ್ಯರು ಮಾಡುವ ಎಲ್ಲ ರೀತಿಯ ಪಾಪಕ್ಕೂ ದೂಷಣೆಗೂ ಕ್ಷಮಾಪಣೆ ಉಂಟು, ಆದರೆ ಪವಿತ್ರಾತ್ಮದ ವಿರುದ್ಧ ಮಾಡಲ್ಪಡುವ ದೂಷಣೆಗೆ ಕ್ಷಮಾಪಣೆ ಇಲ್ಲ. 32  ಉದಾಹರಣೆಗೆ, ಯಾವನಾದರೂ ಮನುಷ್ಯಕುಮಾರನ ವಿರುದ್ಧ ಏನಾದರೂ ಮಾತಾಡುವುದಾದರೆ ಅದು ಅವನಿಗೆ ಕ್ಷಮಿಸಲ್ಪಡುವುದು; ಆದರೆ ಪವಿತ್ರಾತ್ಮದ ವಿರುದ್ಧ ಮಾತಾಡುವುದಾದರೆ ಈ ವಿಷಯಗಳ ವ್ಯವಸ್ಥೆಯಲ್ಲಾಗಲಿ ಬರಲಿರುವ ವ್ಯವಸ್ಥೆಯಲ್ಲಾಗಲಿ ಅದು ಅವನಿಗೆ ಕ್ಷಮಿಸಲ್ಪಡುವುದಿಲ್ಲ. 33  “ನೀವು ಒಂದೊ ಮರವನ್ನು ಮತ್ತು ಅದರ ಫಲವನ್ನು ಉತ್ತಮವಾಗಿಸುತ್ತೀರಿ, ಇಲ್ಲವೆ ಮರವನ್ನು ಮತ್ತು ಅದರ ​ಫಲವನ್ನು ಹುಳುಕಾಗಿಸುತ್ತೀರಿ. ಏಕೆಂದರೆ ಮರವು ಅದರ ಫಲದಿಂದ ಗುರುತಿಸಲ್ಪಡುತ್ತದೆ. 34  ವಿಷಸರ್ಪಗಳ ಪೀಳಿಗೆಯವರೇ, ನೀವು ಕೆಟ್ಟವರಾಗಿರುವಾಗ ಒಳ್ಳೆಯ ವಿಷಯಗಳನ್ನು ಹೇಗೆ ಮಾತಾಡಬಲ್ಲಿರಿ? ಹೃದಯದಲ್ಲಿ ತುಂಬಿರುವುದನ್ನೇ ಬಾಯಿ ಮಾತಾಡುತ್ತದೆ. 35  ಒಳ್ಳೆಯ ಮನುಷ್ಯನು ತನ್ನ ಒಳ್ಳೆಯ ಬೊಕ್ಕಸದಿಂದ ಒಳ್ಳೆಯ ವಿಷಯಗಳನ್ನು ಹೊರತರುತ್ತಾನೆ; ಆದರೆ ಕೆಟ್ಟ ಮನುಷ್ಯನು ತನ್ನ ಕೆಟ್ಟ ಬೊಕ್ಕಸದಿಂದ ಕೆಟ್ಟ ವಿಷಯಗಳನ್ನು ಹೊರ​ತರುತ್ತಾನೆ. 36  ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರು ಮಾತಾಡುವ ಪ್ರತಿಯೊಂದು ನಿಷ್ಪ್ರಯೋಜಕ ಮಾತಿನ ವಿಷಯದಲ್ಲಿ ನ್ಯಾಯತೀರ್ಪಿನ ದಿನದಂದು ಅವರು ಲೆಕ್ಕ ಒಪ್ಪಿಸುವರು; 37  ಏಕೆಂದರೆ ನಿನ್ನ ಮಾತುಗಳಿಂದಲೇ ನೀನು ನೀತಿವಂತನೆಂದು ನಿರ್ಣಯಿಸಲ್ಪಡುವಿ ಮತ್ತು ನಿನ್ನ ಮಾತುಗಳಿಂದಲೇ ನೀನು ಖಂಡಿಸಲ್ಪಡುವಿ” ಎಂದು ಹೇಳಿದನು. 38  ಆಗ ಅವನಿಗೆ ಪ್ರತ್ಯುತ್ತರವಾಗಿ ಶಾಸ್ತ್ರಿಗಳಲ್ಲಿಯೂ ಫರಿಸಾಯರಲ್ಲಿಯೂ ಕೆಲವರು, “ಬೋಧಕನೇ, ನಿನ್ನಿಂದ ಒಂದು ಸೂಚಕಕಾರ್ಯವನ್ನು ನೋಡಲು ಬಯಸುತ್ತೇವೆ” ಎಂದರು. 39  ಅದಕ್ಕೆ ಅವನು ಅವರಿಗೆ, “ದುಷ್ಟ ಮತ್ತು ವ್ಯಭಿಚಾರದ ಸಂತತಿಯು ಒಂದು ಸೂಚಕಕಾರ್ಯವನ್ನು ಹುಡುಕುತ್ತಾ ಇರುತ್ತದೆ; ಆದರೆ ಪ್ರವಾದಿ​ಯಾದ ಯೋನನ ಸೂಚಕಕಾರ್ಯವೇ ಹೊರತು ಬೇರೆ ಯಾವುದೇ ಸೂಚಕಕಾರ್ಯವು ಇದಕ್ಕೆ ಕೊಡಲ್ಪಡುವುದಿಲ್ಲ. 40  ಯೋನನು ಮೂರು ಹಗಲು ಮೂರು ರಾತ್ರಿ ದೊಡ್ಡ ಮೀನಿನ ಹೊಟ್ಟೆಯಲ್ಲಿದ್ದಂತೆಯೇ ಮನುಷ್ಯಕುಮಾರನು ಮೂರು ಹಗಲು ಮೂರು ರಾತ್ರಿ ಭೂಗರ್ಭದೊಳಗೆ ಇರುವನು. 41  ನ್ಯಾಯತೀರ್ಪಿನಲ್ಲಿ ನಿನೆವೆಯ ಜನರು ಈ ಸಂತತಿಯೊಂದಿಗೆ ಎದ್ದುನಿಂತು ಇದನ್ನು ಖಂಡಿಸುವರು; ಏಕೆಂದರೆ ಯೋನನು ಸಾರಿದ್ದನ್ನು ಕೇಳಿ ಅವರು ಪಶ್ಚಾತ್ತಾಪಪಟ್ಟರು, ಆದರೆ ಯೋನನಿಗಿಂತಲೂ ಹೆಚ್ಚಿನವನು ಇಲ್ಲಿದ್ದಾನೆ. 42  ನ್ಯಾಯತೀರ್ಪಿನಲ್ಲಿ ದಕ್ಷಿಣದ ರಾಣಿಯು ಈ ಸಂತತಿಯೊಂದಿಗೆ ಎದ್ದುನಿಂತು ಇದನ್ನು ಖಂಡಿಸುವಳು; ಏಕೆಂದರೆ ಅವಳು ಸೊಲೊಮೋನನ ವಿವೇಕದ ಕುರಿತು ಕೇಳಿಸಿಕೊಳ್ಳುವುದಕ್ಕಾಗಿ ಭೂಮಿಯ ಕಟ್ಟಕಡೆಯಿಂದ ಬಂದಳು, ಆದರೆ ಸೊಲೊಮೋನನಿಗಿಂತಲೂ ಹೆಚ್ಚಿನವನು ಇಲ್ಲಿದ್ದಾನೆ. 43  “ಒಂದು ದೆವ್ವವು ಒಬ್ಬ ಮನುಷ್ಯನಿಂದ ಹೊರಗೆ ಬಂದ ಮೇಲೆ ವಿಶ್ರಾಂತಿ ಸ್ಥಳಕ್ಕಾಗಿ ಹುಡುಕುತ್ತಾ ನೀರಿಲ್ಲದ ಸ್ಥಳಗಳನ್ನು ದಾಟಿಹೋಗುತ್ತದೆ, ಆದರೆ ಅದಕ್ಕೆ ಅಂಥ ಸ್ಥಳವು ಸಿಗುವುದಿಲ್ಲ. 44  ಆಗ ಅದು, ‘ನಾನು ಎಲ್ಲಿಂದ ಹೊರಗೆ ಬಂದೆನೋ ಆ ನನ್ನ ಮನೆಗೆ ಹಿಂದಿರುಗುತ್ತೇನೆ’ ಅಂದುಕೊಳ್ಳುತ್ತದೆ; ಮತ್ತು ಅಲ್ಲಿಗೆ ಬಂದಾಗ ಅಲ್ಲಿ ಯಾರೂ ಇಲ್ಲದಿರುವುದಾದರೂ ಅದು ಚೆನ್ನಾಗಿ ಗುಡಿಸಿ ಅಲಂಕರಿಸಲ್ಪಟ್ಟಿರುವುದು ಕಾಣಿಸುತ್ತದೆ. 45  ಅದು ಹೊರಟುಹೋಗಿ ತನಗಿಂತ ಹೆಚ್ಚು ಕೆಟ್ಟವು​ಗಳಾದ ಬೇರೆ ಏಳು ದೆವ್ವಗಳನ್ನು ತನ್ನೊಂದಿಗೆ ಕರೆದುಕೊಂಡು ಬರುತ್ತದೆ ಮತ್ತು ಅವು ಒಳಗೆ ಸೇರಿ ಅಲ್ಲೇ ವಾಸಿಸುತ್ತವೆ; ಆಗ ಆ ಮನುಷ್ಯನ ಅಂತ್ಯ ಸ್ಥಿತಿಯು ಮೊದಲಿಗಿಂತ ಹೆಚ್ಚು ಕೆಟ್ಟದಾಗಿರುತ್ತದೆ. ಈ ದುಷ್ಟ ​ಸಂತತಿಗೂ ಹೀಗೆಯೇ ಸಂಭವಿಸುವುದು” ಎಂದು ಹೇಳಿದನು. 46  ಅವನು ಜನರ ಗುಂಪುಗಳೊಂದಿಗೆ ಇನ್ನೂ ಮಾತಾಡುತ್ತಿದ್ದಾಗ, ಅವನ ತಾಯಿಯೂ ತಮ್ಮಂದಿರೂ ಅವನೊಂದಿಗೆ ಮಾತಾಡಲಿಕ್ಕಾಗಿ ಕಾಯುತ್ತಾ ಹೊರಗೆ ನಿಂತಿದ್ದರು. 47  ಆಗ ಒಬ್ಬನು ಅವನಿಗೆ, “ಇಗೋ! ನಿನ್ನ ತಾಯಿಯೂ ತಮ್ಮಂದಿರೂ ನಿನ್ನನ್ನು ಮಾತಾಡಿಸಲಿಕ್ಕಾಗಿ ಕಾಯುತ್ತಾ ಹೊರಗೆ ನಿಂತಿದ್ದಾರೆ” ಎಂದನು. 48  ಅದಕ್ಕೆ ಅವನು ಇದನ್ನು ಹೇಳಿದವನಿಗೆ ಪ್ರತ್ಯುತ್ತರವಾಗಿ, “ನನ್ನ ತಾಯಿ ಯಾರು? ನನ್ನ ತಮ್ಮಂದಿರು ಯಾರು?” ಎಂದು ಕೇಳಿದನು. 49  ಅನಂತರ ಅವನು ತನ್ನ ಶಿಷ್ಯರ ಕಡೆಗೆ ಕೈಚಾಚಿ, “ಇಗೋ, ಇವರೇ ನನ್ನ ತಾಯಿ ಮತ್ತು ನನ್ನ ತಮ್ಮಂದಿರು! 50  ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವರೇ ನನ್ನ ತಮ್ಮ, ತಂಗಿ ಮತ್ತು ತಾಯಿ ಆಗಿದ್ದಾರೆ” ಎಂದು ​ಹೇಳಿದನು.

ಪಾದಟಿಪ್ಪಣಿ

ಮತ್ತಾ 12:5  ಅಕ್ಷರಾರ್ಥವಾಗಿ, “ಪವಿತ್ರವೆಂದು ಎಣಿಸದಿದ್ದರೂ.”
ಮತ್ತಾ 12:18  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.