ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫಿಲೆಮೋನ 1:1-25

1  ಕ್ರಿಸ್ತ ಯೇಸುವಿನ ನಿಮಿತ್ತ ಸೆರೆಯವನಾಗಿರುವ ಪೌಲನೆಂಬ ನಾನೂ ನಮ್ಮ ಸಹೋದರನಾದ ತಿಮೊಥೆಯನೂ ನಮಗೆ ಪ್ರಿಯನು ಮತ್ತು ಜೊತೆ ಕೆಲಸಗಾರನು ಆಗಿರುವ ಫಿಲೆಮೋನನಿಗೂ  ನಮ್ಮ ಸಹೋದರಿಯಾದ ಅಪ್ಫಿಯಳಿಗೂ ನಮ್ಮ ಜೊತೆ ಸೈನಿಕನಾದ ಅರ್ಖಿಪ್ಪನಿಗೂ ನಿನ್ನ ಮನೆಯಲ್ಲಿ ಕೂಡಿಬರುವ ಸಭೆಯವರಿಗೂ ಬರೆಯುವುದೇನೆಂದರೆ,  ನಮ್ಮ ತಂದೆಯಾದ ದೇವರಿಂದ ಮತ್ತು ಕರ್ತನಾದ ಯೇಸು ಕ್ರಿಸ್ತನಿಂದ ನಿಮಗೆ ಅಪಾತ್ರ ದಯೆಯೂ * ಶಾಂತಿಯೂ ಇರಲಿ.  ನನ್ನ ಪ್ರಾರ್ಥನೆಗಳಲ್ಲಿ ನಿನ್ನ ಕುರಿತು ತಿಳಿಸುವಾಗ ನಾನು ಯಾವಾಗಲೂ ನನ್ನ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.  ಏಕೆಂದರೆ ಕರ್ತನಾದ ಯೇಸುವಿನ ಕಡೆಗೂ ಪವಿತ್ರ ಜನರೆಲ್ಲರ ಕಡೆಗೂ ನಿನಗಿರುವ ಪ್ರೀತಿ ಮತ್ತು ನಂಬಿಕೆಯ ಕುರಿತು ನಾನು ಕೇಳಿಸಿಕೊಳ್ಳುತ್ತಾ ಇದ್ದೇನೆ.  ಕ್ರಿಸ್ತನ ಸಂಬಂಧದಲ್ಲಿ ನಮಗೆ ದೊರೆತಿರುವ ಎಲ್ಲ ಒಳ್ಳೇ ವಿಷಯಗಳನ್ನು ನೀನು ಅಂಗೀಕರಿಸುವ ಮೂಲಕ ನಿನ್ನ ನಂಬಿಕೆಯನ್ನು ಹಂಚಿಕೊಳ್ಳುವುದರಲ್ಲಿ ಕ್ರಿಯಾಶೀಲನಾಗಿರುವಂತೆ ನಾನು ಪ್ರಾರ್ಥಿಸುತ್ತೇನೆ.  ಸಹೋದರನೇ, ನಿನ್ನ ಮೂಲಕ ಪವಿತ್ರ ಜನರ ಹೃದಯಗಳು ಚೈತನ್ಯಗೊಳಿಸಲ್ಪಟ್ಟಿರುವುದರಿಂದ ನಿನ್ನ ಪ್ರೀತಿಯ ನಿಮಿತ್ತ ನನಗೆ ಬಹಳ ಆನಂದವೂ ಸಾಂತ್ವನವೂ ಉಂಟಾಯಿತು.  ಆದಕಾರಣ ಯುಕ್ತವಾದದ್ದನ್ನು ಮಾಡುವಂತೆ ನಿನಗೆ ಆಜ್ಞಾಪಿಸುವುದಕ್ಕೆ ಕ್ರಿಸ್ತನ ಸಂಬಂಧದಲ್ಲಿ ನನಗೆ ಪೂರ್ಣ ವಾಕ್ಸರಳತೆ ಇರುವುದಾದರೂ  ಹಾಗೆ ಮಾಡದೆ ವೃದ್ಧನೂ ಕ್ರಿಸ್ತ ಯೇಸುವಿನ ನಿಮಿತ್ತ ಸೆರೆಯವನೂ ಆಗಿರುವ ಪೌಲನೆಂಬ ನಾನೇ ಪ್ರೀತಿಯ ಆಧಾರದ ಮೇಲೆ ನಿನ್ನನ್ನು ಪ್ರೋತ್ಸಾಹಿಸುತ್ತೇನೆ. 10  ನಾನು ಸೆರೆಯ ಬೇಡಿಗಳಲ್ಲಿದ್ದಾಗ ಯಾರಿಗೆ ತಂದೆಯಂತಾದೆನೋ ಆ ನನ್ನ ಮಗನಾದ ಓನೇಸಿಮನ ವಿಷಯದಲ್ಲಿ ನಿನ್ನನ್ನು ಬೇಡಿಕೊಳ್ಳುತ್ತೇನೆ. 11  ಅವನು ಮುಂಚೆ ನಿನಗೆ ಪ್ರಯೋಜನವಿಲ್ಲದವನಾಗಿದ್ದನು, ಆದರೆ ಈಗ ನಿನಗೂ ನನಗೂ ಪ್ರಯೋಜನಕಾರಿಯಾಗಿದ್ದಾನೆ. 12  ಇವನನ್ನು, ಹೌದು, ಇವನನ್ನೇ ಅಂದರೆ ನನ್ನ ಸ್ವಂತ ಕೋಮಲ ಮಮತೆಯಾಗಿರುವವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸುತ್ತೇನೆ. 13  ಸುವಾರ್ತೆಯ ನಿಮಿತ್ತ ಸೆರೆಯ ಬೇಡಿಗಳಲ್ಲಿರುವ ನನಗೆ ಉಪಚಾರಮಾಡಲಿಕ್ಕಾಗಿ ನಿನಗೆ ಬದಲಾಗಿ ಅವನನ್ನು ನನ್ನ ಬಳಿಯೇ ಇರಿಸಿಕೊಳ್ಳಲು ಬಯಸುತ್ತೇನೆ. 14  ಆದರೆ ನಿನ್ನ ಸುಕೃತ್ಯವು ಬಲಾತ್ಕಾರದಿಂದಲ್ಲ, ನಿನ್ನ ಸ್ವಂತ ಇಷ್ಟದಿಂದ ಮಾಡಲ್ಪಡಬೇಕೆಂದು ನೆನಸಿ ನಿನ್ನ ಒಪ್ಪಿಗೆ ಇಲ್ಲದೆ ಏನು ಮಾಡುವುದಕ್ಕೂ ನಾನು ಬಯಸುವುದಿಲ್ಲ. 15  ಅವನು ಸ್ವಲ್ಪಕಾಲ ನಿನ್ನಿಂದ ಹೋದದ್ದು ಪ್ರಾಯಶಃ ನೀನು ಅವನನ್ನು ನಿರಂತರಕ್ಕೂ ನಿನ್ನ ಬಳಿ ಇರಿಸಿಕೊಳ್ಳಲಿಕ್ಕಾಗಿಯೇ ಇರಬಹುದು. 16  ಇನ್ನು ಮೇಲೆ ಅವನು ದಾಸನಂತಿರದೆ, ದಾಸನಿಗಿಂತ ಉತ್ತಮನಾದ ಪ್ರಿಯ ಸಹೋದರನಂತಿದ್ದಾನೆ; ಅವನು ನನಗೇ ಪ್ರಿಯನಾಗಿರುವಾಗ ಲೋಕಸಂಬಂಧದಲ್ಲಿಯೂ ಕರ್ತನ ಸಂಬಂಧದಲ್ಲಿಯೂ ನಿನಗೆ ಇನ್ನೂ ಎಷ್ಟೋ ಹೆಚ್ಚು ಪ್ರಿಯನಾಗಿರುವನು. 17  ಆದುದರಿಂದ ನೀನು ನನ್ನನ್ನು ಜೊತೆಗಾರನೆಂದು ಎಣಿಸುವುದಾದರೆ ನನ್ನನ್ನು ಸೇರಿಸಿಕೊಳ್ಳುವ ಪ್ರಕಾರವೇ ದಯೆಯಿಂದ ಅವನನ್ನೂ ಸೇರಿಸಿಕೊ. 18  ಮಾತ್ರವಲ್ಲದೆ, ಅವನು ನಿನಗೆ ಏನಾದರು ತಪ್ಪುಮಾಡಿದ್ದರೆ ಅಥವಾ ಅವನು ನಿನಗೆ ಸಾಲವನ್ನೇನಾದರೂ ಸಲ್ಲಿಸಬೇಕಾಗಿರುವಲ್ಲಿ ಅದನ್ನು ನನ್ನ ಲೆಕ್ಕಕ್ಕೆ ಸೇರಿಸು. 19  ಅದನ್ನು ನಾನೇ ಕೊಟ್ಟು ತೀರಿಸುವೆನೆಂದು ಪೌಲನೆಂಬ ನಾನು ಸ್ವಂತ ಕೈಯಿಂದ ಬರೆಯುತ್ತಿದ್ದೇನೆ; ಆದರೆ ನೀನು ನಿನ್ನನ್ನೇ ನನಗೆ ನೀಡಿಕೊಳ್ಳಬೇಕಾದ ಸಾಲದಲ್ಲಿದ್ದೀ ಎಂದು ಬೇರೆ ಹೇಳಬೇಕೇ. 20  ಹೌದು ಸಹೋದರನೇ, ಕರ್ತನ ಸಂಬಂಧದಲ್ಲಿ ನಿನ್ನಿಂದ ನಾನು ಪ್ರಯೋಜನ ಪಡೆದುಕೊಳ್ಳುವಂತಾಗಲಿ; ಕ್ರಿಸ್ತನಲ್ಲಿ ನನ್ನ ಹೃದಯವನ್ನು ಚೈತನ್ಯಗೊಳಿಸು. 21  ನೀನು ನನ್ನ ಮಾತನ್ನು ಕೇಳುವಿ ಎಂಬ ಭರವಸೆಯಿಂದ ನಾನು ಇದನ್ನು ನಿನಗೆ ಬರೆಯುತ್ತಿದ್ದೇನೆ; ನಾನು ಹೇಳುವುದಕ್ಕಿಂತಲೂ ಹೆಚ್ಚನ್ನೇ ಮಾಡುವಿ ಎಂದು ನನಗೆ ಗೊತ್ತು. 22  ಇದಲ್ಲದೆ ನಿಮ್ಮ ಪ್ರಾರ್ಥನೆಗಳಿಂದಾಗಿ ನಾನು ನಿಮ್ಮ ಪ್ರಯೋಜನಕ್ಕಾಗಿ ಬಿಡುಗಡೆಹೊಂದಬಹುದೆಂದು ನಿರೀಕ್ಷಿಸುತ್ತಿರುವುದರಿಂದ ನನಗೋಸ್ಕರ ವಸತಿಯನ್ನು ಸಿದ್ಧಮಾಡು. 23  ಕ್ರಿಸ್ತನೊಂದಿಗೆ ಐಕ್ಯದಲ್ಲಿ ನನ್ನ ಜೊತೆ ಸೆರೆಯವನಾಗಿರುವ ಎಪಫ್ರನೂ ನಿನಗೆ ವಂದನೆಗಳನ್ನು ಕಳುಹಿಸುತ್ತಾನೆ. 24  ನನ್ನ ಜೊತೆ ಕೆಲಸಗಾರರಾಗಿರುವ ಮಾರ್ಕ, ಅರಿಸ್ತಾರ್ಕ, ದೇಮ ಮತ್ತು ಲೂಕರೂ ವಂದನೆಗಳನ್ನು ತಿಳಿಸುತ್ತಾರೆ. 25  ಕರ್ತನಾದ ಯೇಸು ಕ್ರಿಸ್ತನ ಅಪಾತ್ರ ದಯೆಯು ನೀವು ತೋರಿಸುವ ಮನೋಭಾವದೊಂದಿಗಿರಲಿ.

ಪಾದಟಿಪ್ಪಣಿ

ಫಿಲೆ 3  ಅಥವಾ, “ಅಪಾರ ದಯೆಯೂ.”