ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫಿಲಿಪ್ಪಿ 3:1-21

3  ಕೊನೆಯದಾಗಿ ನನ್ನ ಸಹೋದರರೇ, ಕರ್ತನಲ್ಲಿ ಹರ್ಷಿಸುತ್ತಾ ಇರಿ. ಮೊದಲು ಬರೆದ ಸಂಗತಿಗಳನ್ನೇ ಪುನಃ ಬರೆಯಲು ನನಗೇನೂ ಬೇಸರವಿಲ್ಲ; ಆದರೆ ನಿಮಗೆ ಅದು ಸುರಕ್ಷೆಯಾಗಿದೆ.  ಆ ನಾಯಿಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ, ಕೇಡುಮಾಡುವವರ ವಿಷಯದಲ್ಲಿ ಎಚ್ಚರಿಕೆಯಿಂದಿರಿ, ಅಂಗಚ್ಛೇದನ ಮಾಡುವವರ ವಿಷಯದಲ್ಲಿ ಎಚ್ಚರಿಕೆಯಿಂದಿರಿ.  ದೇವರಾತ್ಮದ ಮೂಲಕ ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವವರೂ ಕ್ರಿಸ್ತ ಯೇಸುವಿನಲ್ಲಿ ಹೊಗಳಿಕೊಳ್ಳುವವರೂ ಶರೀರಸಂಬಂಧವಾದ ವಿಷಯಗಳಲ್ಲಿ ಭರವಸೆಯಿಡದವರೂ ಆಗಿರುವ ನಾವು ನಿಜವಾದ ಸುನ್ನತಿಯವರಾಗಿದ್ದೇವೆ.  ಯಾವನಿಗಾದರೂ ಶರೀರಸಂಬಂಧವಾದ ವಿಷಯಗಳಲ್ಲಿಯೂ ಭರವಸೆಯಿಡಲು ಆಧಾರವಿರುವಲ್ಲಿ ಆ ಆಧಾರ ನನಗಿದೆ. ಬೇರೆ ಯಾವನಾದರೂ ಶರೀರಸಂಬಂಧವಾದ ವಿಷಯಗಳಲ್ಲಿ ಭರವಸೆಯಿಡಲು ತನಗೆ ಆಧಾರವಿದೆ ಎಂದು ನೆನಸುವುದಾದರೆ ಅವನಿಗಿಂತಲೂ ಹೆಚ್ಚಾಗಿ ನಾನು ಹಾಗೆ ನೆನಸಬಹುದು.  ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು; ನಾನು ಇಸ್ರಾಯೇಲ್‌ ವಂಶದವನು; ಬೆನ್ಯಾಮೀನನ ಕುಲದವನು; ಇಬ್ರಿಯರಿಂದ ಹುಟ್ಟಿದ ಇಬ್ರಿಯನು; ಧರ್ಮಶಾಸ್ತ್ರಕ್ಕನುಸಾರ ಒಬ್ಬ ಫರಿಸಾಯನು;  ಹುರುಪಿಗೆ ಸಂಬಂಧಿಸಿ ಸಭೆಯನ್ನು ಹಿಂಸಿಸಿದವನು; ನಿಯಮದ ಮೂಲಕ ದೊರಕುವ ನೀತಿಯ ಸಂಬಂಧದಲ್ಲಿ ನಾನು ನಿರ್ದೋಷಿ ಎಂದು ತೋರಿಸಿಕೊಟ್ಟವನು.  ಆದರೂ ಯಾವ ವಿಷಯಗಳು ನನಗೆ ಲಾಭದಾಯಕವಾಗಿದ್ದವೋ ಅವುಗಳನ್ನು ನಾನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ.  ಅಷ್ಟುಮಾತ್ರವಲ್ಲ, ನನ್ನ ಕರ್ತನಾದ ಕ್ರಿಸ್ತ ಯೇಸುವಿನ ಕುರಿತಾದ ಜ್ಞಾನದ ಅಪಾರವಾದ ಮೌಲ್ಯದ ನಿಮಿತ್ತ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ; ಅವನ ನಿಮಿತ್ತ ನಾನು ಎಲ್ಲವನ್ನೂ ನಷ್ಟವೆಂದು ಪರಿಗಣಿಸಿ ಅವುಗಳನ್ನು ಕಸವೆಂದೆಣಿಸುತ್ತೇನೆ. ನಾನು ಕ್ರಿಸ್ತನನ್ನು ಗಳಿಸಿ,  ಅವನೊಂದಿಗೆ ಐಕ್ಯದಿಂದಿದ್ದು, ಧರ್ಮಶಾಸ್ತ್ರದಿಂದ ಉಂಟಾಗುವ ನನ್ನ ಸ್ವಂತ ನೀತಿಯನ್ನಲ್ಲ ಕ್ರಿಸ್ತನಲ್ಲಿ ನಂಬಿಕೆಯನ್ನಿಡುವ ಮೂಲಕ ದೊರಕುವಂಥ ಅಂದರೆ ನಂಬಿಕೆಯ ಆಧಾರದ ಮೇಲೆ ದೇವರಿಂದ ಕೊಡಲ್ಪಡುವಂಥ ನೀತಿಯನ್ನು ಹೊಂದಬೇಕೆಂಬುದೇ ನನ್ನ ಉದ್ದೇಶ. 10  ಮಾತ್ರವಲ್ಲದೆ, ಕ್ರಿಸ್ತನನ್ನೂ ಅವನ ಪುನರುತ್ಥಾನದ ಶಕ್ತಿಯನ್ನೂ ಅವನ ಕಷ್ಟಾನುಭವದಲ್ಲಿ ಪಾಲ್ಗೊಳ್ಳುವುದನ್ನೂ ತಿಳಿದುಕೊಂಡು, ಅವನು ಅನುಭವಿಸಿದಂಥ ರೀತಿಯ ಮರಣಕ್ಕೆ ನನ್ನನ್ನು ಒಪ್ಪಿಸಿಕೊಡುವುದೇ ನನ್ನ ಅಪೇಕ್ಷೆ. 11  ಹೀಗಾದರೆ ಸತ್ತವರೊಳಗಿಂದಾಗುವ ಮುಂಚಿತವಾದ ಪುನರುತ್ಥಾನವನ್ನು ನಾನು ಹೇಗಾದರೂ ಪಡೆಯಬಹುದೇನೋ ಎಂದು ನೆನಸುತ್ತೇನೆ. 12  ಈಗಾಗಲೇ ನಾನು ಆ ಬಹುಮಾನವನ್ನು ಪಡೆದುಕೊಂಡಿದ್ದೇನೆ ಅಥವಾ ಈಗಾಗಲೇ ಪರಿಪೂರ್ಣಗೊಳಿಸಲ್ಪಟ್ಟಿದ್ದೇನೆ ಎಂದಲ್ಲ, ಆದರೆ ಯಾವುದಕ್ಕಾಗಿ ಕ್ರಿಸ್ತ ಯೇಸು ನನ್ನನ್ನು ಹಿಡಿದುಕೊಂಡನೋ ಅದನ್ನು ನಾನು ಸಹ ಹಿಡಿದುಕೊಳ್ಳಸಾಧ್ಯವಾಗಬಹುದೋ ಎಂದು ನೋಡಲಿಕ್ಕಾಗಿ ಓಡುತ್ತಾ ಇದ್ದೇನೆ. 13  ಸಹೋದರರೇ, ನಾನು ಅದನ್ನು ಆಗಲೇ ಹಿಡಿದಿದ್ದೇನೆಂದು ಈ ವರೆಗೂ ಎಣಿಸಿಕೊಳ್ಳುವುದಿಲ್ಲ; ಆದರೆ ಒಂದು ವಿಷಯವೇನೆಂದರೆ, ಹಿಂದಿನ ವಿಷಯಗಳನ್ನು ಮರೆತುಬಿಟ್ಟು ಮುಂದಿನ ವಿಷಯಗಳ ಕಡೆಗೆ ಮುಂದೊತ್ತುತ್ತಾ, 14  ಕ್ರಿಸ್ತ ಯೇಸುವಿನ ಮೂಲಕ ದೇವರು ಕೊಡುವ ಮೇಲಣ ಕರೆಯ ಬಹುಮಾನದ ಗುರಿಯ ಕಡೆಗೆ ಓಡುತ್ತಾ ಇದ್ದೇನೆ. 15  ಆದುದರಿಂದ ನಮ್ಮಲ್ಲಿ ಪ್ರೌಢರಾಗಿರುವವರೆಲ್ಲರು ಇದೇ ಮನೋಭಾವವನ್ನು ಹೊಂದಿರೋಣ ಮತ್ತು ಯಾವುದೇ ವಿಷಯದಲ್ಲಿ ನೀವು ಬೇರೆ ಮನೋಭಾವವನ್ನು ಹೊಂದಿರುವುದಾದರೆ ದೇವರು ಯೋಗ್ಯವಾದ ಮನೋಭಾವವನ್ನು ನಿಮಗೆ ತೋರಿಸಿಕೊಡುವನು. 16  ಏನೇ ಆಗಲಿ, ನಾವು ಎಷ್ಟರ ಮಟ್ಟಿಗೆ ಪ್ರಗತಿಯನ್ನು ಮಾಡಿದ್ದೇವೋ ಅದೇ ನಿಯತಕ್ರಮದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಾ ಇರೋಣ. 17  ಸಹೋದರರೇ, ನೀವೆಲ್ಲರು ಐಕ್ಯಭಾವದಿಂದ ನನ್ನನ್ನು ಅನುಕರಿಸುವವರಾಗಿರಿ; ನಾವು ನಿಮಗೆ ತೋರಿಸಿದ ಮಾದರಿಗನುಸಾರ ನಡೆಯುತ್ತಿರುವವರ ಮೇಲೆ ನಿಗಾ ಇಡಿರಿ. 18  ಏಕೆಂದರೆ ಕ್ರಿಸ್ತನ ಯಾತನಾ ಕಂಬಕ್ಕೆ ವೈರಿಗಳಾಗಿ ನಡೆಯುವವರು ಅನೇಕರಿದ್ದಾರೆ; ಅವರ ವಿಷಯದಲ್ಲಿ ನಾನು ಅನೇಕಬಾರಿ ತಿಳಿಸಿದ್ದೇನೆ, ಆದರೆ ಈಗ ಅಳುತ್ತಲೇ ಅವರ ಬಗ್ಗೆ ತಿಳಿಸುತ್ತೇನೆ. 19  ನಾಶನವೇ ಅವರ ಅಂತ್ಯಾವಸ್ಥೆ ಮತ್ತು ಹೊಟ್ಟೆಯೇ ಅವರ ದೇವರು; ನಾಚಿಕೆಗೆಟ್ಟ ಕೆಲಸಗಳಲ್ಲಿಯೇ ಅವರಿಗೆ ಮಹಿಮೆ ಮತ್ತು ಅವರು ಭೂಮಿಗೆ ಸಂಬಂಧಪಟ್ಟ ವಿಷಯಗಳ ಮೇಲೆ ಮನಸ್ಸಿಡುವವರಾಗಿದ್ದಾರೆ. 20  ನಮಗಾದರೋ ನಮ್ಮ ಪೌರತ್ವವು ಸ್ವರ್ಗದಲ್ಲಿದೆ; ಅದೇ ಸ್ಥಳದಿಂದ ಬರುವ ಒಬ್ಬ ರಕ್ಷಕನಿಗೆ ಅಂದರೆ ಕರ್ತನಾದ ಯೇಸು ಕ್ರಿಸ್ತನಿಗೆ ನಾವು ಆತುರದಿಂದ ಎದುರುನೋಡುತ್ತಿದ್ದೇವೆ. 21  ಎಲ್ಲವನ್ನೂ ತನಗೆ ಅಧೀನಪಡಿಸಿಕೊಳ್ಳಸಾಧ್ಯವಿರುವ ಅವನ ಶಕ್ತಿಯಿಂದಾಗಿ ಅವನು ದೀನಾವಸ್ಥೆಯಲ್ಲಿರುವ ನಮ್ಮ ದೇಹವನ್ನು ಮರುರೂಪಿಸಿ ತನ್ನ ಮಹಿಮಾಭರಿತ ದೇಹಕ್ಕೆ ಅನುರೂಪವಾಗುವಂತೆ ಮಾಡುವನು.

ಪಾದಟಿಪ್ಪಣಿ