ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಫಿಲಿಪ್ಪಿ 2:1-30

2  ಕ್ರಿಸ್ತನಲ್ಲಿ ಯಾವುದೇ ಉತ್ತೇಜನ ಇರುವಲ್ಲಿ, ಪ್ರೀತಿಯ ಸಂತೈಸುವಿಕೆ ಇರುವಲ್ಲಿ, ಪರಸ್ಪರ ಹಿತಚಿಂತನೆ ಇರುವಲ್ಲಿ, ಕೋಮಲ ಮಮತೆ ಮತ್ತು ಸಹಾನುಭೂತಿಗಳು ಇರುವಲ್ಲಿ,  ನೀವು ಒಂದೇ ಮನಸ್ಸುಳ್ಳವರೂ ಒಂದೇ ಪ್ರೀತಿಯುಳ್ಳವರೂ ಅನ್ಯೋನ್ಯಭಾವವುಳ್ಳವರೂ ಮನಸ್ಸಿನಲ್ಲಿ ಒಂದೇ ಆಲೋಚನೆಯುಳ್ಳವರೂ ಆಗಿರುವ ಮೂಲಕ ನನ್ನ ಆನಂದವನ್ನು ಪೂರ್ಣಗೊಳಿಸಿರಿ.  ಕಲಹಶೀಲ ಮನೋಭಾವದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ದೀನಮನಸ್ಸಿನಿಂದ ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಎಣಿಸಿರಿ.  ನಿಮ್ಮ ಸ್ವಂತ ವಿಷಯಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಟ್ಟಿರುವ ಬದಲಿಗೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿಯನ್ನು ತೋರಿಸುವವರಾಗಿರಿ.  ಕ್ರಿಸ್ತ ಯೇಸುವಿನಲ್ಲಿದ್ದ ಈ ಮನೋಭಾವವು ನಿಮ್ಮಲ್ಲಿಯೂ ಇರಲಿ.  ಅವನು ದೇವರ ಸ್ವರೂಪದಲ್ಲಿದ್ದರೂ, ವಶಪಡಿಸಿಕೊಳ್ಳುವುದಕ್ಕೆ ಅಂದರೆ ದೇವರಿಗೆ ಸಮಾನನಾಗಿರಬೇಕೆಂಬುದಕ್ಕೆ ಯಾವುದೇ ಪರಿಗಣನೆಯನ್ನು ತೋರಿಸಲಿಲ್ಲ.  ಅದರ ಬದಲಿಗೆ ಅವನು ತನ್ನನ್ನು ಬರಿದುಮಾಡಿಕೊಂಡು ದಾಸನ ರೂಪವನ್ನು ಧರಿಸಿ ಮನುಷ್ಯರಿಗೆ ಸದೃಶನಾದನು.  ಅದಕ್ಕಿಂತಲೂ ಹೆಚ್ಚಾಗಿ, ಅವನು ಮನುಷ್ಯನಾಗಿ ಕಾಣಿಸಿಕೊಂಡಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಯಾತನಾ ಕಂಬದ ಮೇಲೆ ಮರಣವನ್ನು ಹೊಂದುವಷ್ಟರ ಮಟ್ಟಿಗೆ ವಿಧೇಯನಾದನು.  ಇದೇ ಕಾರಣಕ್ಕಾಗಿ ದೇವರು ಸಹ ಅವನನ್ನು ಉನ್ನತವಾದ ಸ್ಥಾನಕ್ಕೆ ಏರಿಸಿ ಬೇರೆ ಎಲ್ಲ ಹೆಸರುಗಳಿಗಿಂತಲೂ ಉನ್ನತವಾದ ಹೆಸರನ್ನು ಅವನಿಗೆ ದಯಪಾಲಿಸಿದನು. 10  ಆದುದರಿಂದ ಸ್ವರ್ಗದಲ್ಲಿರುವವರೂ ಭೂಮಿಯಲ್ಲಿರುವವರೂ ನೆಲದ ಕೆಳಗಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಮೊಣಕಾಲೂರಬೇಕು 11  ಮತ್ತು ತಂದೆಯಾದ ದೇವರ ಮಹಿಮೆಗಾಗಿ ಯೇಸು ಕ್ರಿಸ್ತನೇ ಕರ್ತನೆಂದು ಪ್ರತಿಯೊಂದು ನಾಲಿಗೆಯೂ ಬಹಿರಂಗವಾಗಿ ಒಪ್ಪಿಕೊಳ್ಳಬೇಕು. 12  ಆದುದರಿಂದ ನನ್ನ ಪ್ರಿಯರೇ, ನೀವು ಯಾವಾಗಲೂ ವಿಧೇಯರಾಗಿದ್ದಂತೆಯೇ ಈಗಲೂ ವಿಧೇಯರಾಗಿ ನಾನು ಉಪಸ್ಥಿತನಿರುವಾಗ ಮಾತ್ರವಲ್ಲದೆ ನಾನು ದೂರವಿರುವಾಗಲೂ ಇನ್ನೂ ಹೆಚ್ಚು ಮನಸಾರೆ ನಿಮ್ಮ ಸ್ವಂತ ರಕ್ಷಣೆಯನ್ನು ಭಯದಿಂದಲೂ ನಡುಕದಿಂದಲೂ ಸಾಧಿಸಿಕೊಳ್ಳುತ್ತಾ ಇರಿ. 13  ಏಕೆಂದರೆ ತನ್ನ ಸುಸಂತೋಷದಿಂದ ನೀವು ಉದ್ದೇಶಿಸಿ ಕ್ರಿಯೆಗೈಯುವಂತೆ ನಿಮ್ಮಲ್ಲಿ ಕಾರ್ಯನಡಿಸುವಾತನು ದೇವರೇ ಆಗಿದ್ದಾನೆ. 14  ಎಲ್ಲ ವಿಷಯಗಳನ್ನು ಗುಣುಗುಟ್ಟದೆಯೂ ವಾಗ್ವಾದಿಸದೆಯೂ ಮಾಡುತ್ತಾ ಇರಿ. 15  ಇದರಿಂದ ನೀವು ನಿರ್ದೋಷಿಗಳೂ ನಿರಪರಾಧಿಗಳೂ ಆಗಿದ್ದು, ವಿಕೃತವಾದ ಮತ್ತು ವಕ್ರವಾದ ಸಂತತಿಯ ಮಧ್ಯೆ ದೇವರ ನಿಷ್ಕಳಂಕರಾದ ಮಕ್ಕಳಾಗಿ ಕಂಡುಬರುವಿರಿ. ಈ ಸಂತತಿಯ ಮಧ್ಯೆ ನೀವು ಲೋಕದಲ್ಲಿ ಬೆಳಕು ಕೊಡುವ ವ್ಯಕ್ತಿಗಳಂತೆ ಹೊಳೆಯುವವರಾಗಿದ್ದು 16  ಜೀವದ ವಾಕ್ಯವನ್ನು ಬಿಗಿಯಾಗಿ ಹಿಡಿದುಕೊಂಡಿದ್ದೀರಿ. ಹೀಗೆ ನಾನು ಓಡಿದ್ದು ಅಥವಾ ಪ್ರಯಾಸಪಟ್ಟದ್ದು ವ್ಯರ್ಥವಾಗಲಿಲ್ಲ ಎಂದು ಕ್ರಿಸ್ತನ ದಿನದಲ್ಲಿ ಅತ್ಯಾನಂದಪಡಲು ನನಗೆ ಕಾರಣವಿರುವುದು. 17  ಆದರೂ ನಂಬಿಕೆಯು ನಿಮ್ಮನ್ನು ನಡಿಸಿರುವ ಯಜ್ಞ ಮತ್ತು ಸಾರ್ವಜನಿಕ ಸೇವೆಯ ಮೇಲೆ ನಾನು ಪಾನದ್ರವ್ಯವಾಗಿ ಸುರಿಯಲ್ಪಡುತ್ತಿರುವುದಾದರೂ ಸಂತೋಷಪಡುತ್ತೇನೆ ಮತ್ತು ನಿಮ್ಮೆಲ್ಲರೊಂದಿಗೆ ಹರ್ಷಿಸುತ್ತೇನೆ. 18  ಇದೇ ರೀತಿಯಲ್ಲಿ ನೀವು ಸಹ ಸಂತೋಷಪಡಿರಿ ಮತ್ತು ನನ್ನೊಂದಿಗೆ ಹರ್ಷಿಸಿರಿ. 19  ಕರ್ತನಾದ ಯೇಸುವಿನ ಚಿತ್ತವಿರುವುದಾದರೆ ನಾನು ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ; ಹೀಗೆ ನಿಮಗೆ ಸಂಬಂಧಿಸಿದ ವಿಷಯಗಳನ್ನು ತಿಳಿದುಕೊಂಡಾಗ ನಾನು ಸಹ ಉಲ್ಲಾಸಿಸುವಂತಾಗುವುದು. 20  ಅವನ ಹಾಗೆ ನಿಮಗೆ ಸಂಬಂಧಿಸಿದ ವಿಷಯಗಳ ಕುರಿತು ಯಥಾರ್ಥವಾಗಿ ಚಿಂತಿಸುವ ಮನೋಭಾವವನ್ನು ತೋರಿಸುವವರು ನನ್ನ ಬಳಿ ಬೇರೆ ಯಾರೂ ಇಲ್ಲ. 21  ಏಕೆಂದರೆ ಬೇರೆಲ್ಲರೂ ಕ್ರಿಸ್ತ ಯೇಸುವಿನ ಅಭಿರುಚಿಗಳ ಮೇಲೆ ಅಲ್ಲ, ತಮ್ಮ ಸ್ವಂತ ಅಭಿರುಚಿಗಳ ಮೇಲೆ ಮನಸ್ಸಿಟ್ಟವರಾಗಿದ್ದಾರೆ. 22  ಆದರೆ ತಿಮೊಥೆಯನು ತನ್ನ ಕುರಿತು ಕೊಟ್ಟ ರುಜುವಾತು ನಿಮಗೆ ಗೊತ್ತುಂಟು; ಮಗನು ತಂದೆಯೊಂದಿಗೆ ಹೇಗೋ ಹಾಗೆಯೇ ಅವನು ಸುವಾರ್ತೆಯ ಅಭಿವೃದ್ಧಿಗಾಗಿ ನನ್ನೊಂದಿಗೆ ಕಷ್ಟಪಟ್ಟು ಕೆಲಸಮಾಡಿದನು. 23  ಆದುದರಿಂದ ನನ್ನ ವಿಷಯದಲ್ಲಿ ಏನಾಗುತ್ತದೆ ಎಂಬುದನ್ನು ನೋಡಿದ ಕೂಡಲೆ ನಾನು ಇವನನ್ನು ನಿಮ್ಮ ಬಳಿಗೆ ಕಳುಹಿಸಲು ಎದುರುನೋಡುತ್ತೇನೆ. 24  ವಾಸ್ತವದಲ್ಲಿ ನಾನು ಸಹ ಬೇಗನೆ ಬರುವೆನೆಂದು ಕರ್ತನಲ್ಲಿ ಭರವಸೆಯುಳ್ಳವನಾಗಿದ್ದೇನೆ. 25  ಆದರೂ ನನ್ನ ಸಹೋದರನೂ ಜೊತೆ ಕೆಲಸಗಾರನೂ ಜೊತೆ ಸೈನಿಕನೂ ಆಗಿರುವ ಮತ್ತು ನಿಮ್ಮ ನಿಯೋಗಿಯೂ ನನ್ನ ಅಗತ್ಯಕ್ಕಾಗಿರುವ ಖಾಸಗಿ ಸೇವಕನೂ ಆದ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವುದು ಆವಶ್ಯಕವೆಂದು ನನಗೆ ತೋರುತ್ತದೆ. 26  ಏಕೆಂದರೆ ಅವನು ನಿಮ್ಮೆಲ್ಲರನ್ನು ನೋಡಲು ಹಂಬಲಿಸುತ್ತಿದ್ದಾನೆ ಮತ್ತು ಅವನು ಅಸ್ವಸ್ಥನಾಗಿದ್ದನು ಎಂಬುದನ್ನು ನೀವು ಕೇಳಿಸಿಕೊಂಡಿದ್ದೀರೆಂದು ತಿಳಿದು ಅವನು ದುಃಖಿತನಾಗಿದ್ದಾನೆ. 27  ಅವನು ಅಸ್ವಸ್ಥನಾಗಿ ಸಾಯುವ ಹಂತಕ್ಕೆ ಬಂದಿದ್ದನು ಎಂಬುದು ನಿಜ; ಆದರೆ ದೇವರು ಅವನಿಗೆ ಕರುಣೆ ತೋರಿಸಿದನು, ವಾಸ್ತವದಲ್ಲಿ ಅವನಿಗೆ ಮಾತ್ರವಲ್ಲದೆ ನನಗೆ ದುಃಖದ ಮೇಲೆ ದುಃಖವಾಗದಂತೆ ನನಗೂ ಕರುಣೆ ತೋರಿಸಿದನು. 28  ಆದುದರಿಂದ ಅವನನ್ನು ನೋಡಿ ನೀವು ಪುನಃ ಹರ್ಷಿಸುವಂತೆಯೂ ನನ್ನ ದುಃಖವು ಕಡಮೆಯಾಗುವಂತೆಯೂ ನಾನು ಅವನನ್ನು ಹೆಚ್ಚು ತ್ವರಿತವಾಗಿ ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. 29  ಆದಕಾರಣ ಪೂರ್ಣ ಆನಂದದಿಂದ ಕರ್ತನಲ್ಲಿ ವಾಡಿಕೆಯ ಪ್ರಕಾರ ಅವನನ್ನು ಬರಮಾಡಿಕೊಳ್ಳಿರಿ; ಮತ್ತು ಇಂಥ ರೀತಿಯ ಪುರುಷರನ್ನು ಪ್ರಿಯರೆಂದು ಎಣಿಸಿರಿ. 30  ಏಕೆಂದರೆ ನನಗೆ ಖಾಸಗಿಯಾದ ಸೇವೆಯನ್ನು ಮಾಡಲು ನೀವು ಇಲ್ಲಿ ಇಲ್ಲದಿರುವ ಕೊರತೆಯನ್ನು ಪೂರ್ಣ ರೀತಿಯಲ್ಲಿ ನೀಗಿಸಲಿಕ್ಕಾಗಿ ಅವನು ಕ್ರಿಸ್ತನ ಕೆಲಸದ ನಿಮಿತ್ತ ತನ್ನ ಪ್ರಾಣವನ್ನು ಅಪಾಯಕ್ಕೊಡ್ಡಿ ಮರಣದ ಅಂಚಿಗೆ ಬಂದಿದ್ದನು.

ಪಾದಟಿಪ್ಪಣಿ