ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಕಟನೆ 8:1-13

8  ಅವನು ಏಳನೆಯ ಮುದ್ರೆಯನ್ನು ಒಡೆದಾಗ ಸುಮಾರು ಅರ್ಧ ತಾಸಿನ ವರೆಗೆ ಸ್ವರ್ಗದಲ್ಲಿ ನಿಶ್ಶಬ್ದ ಉಂಟಾಯಿತು.  ಆಗ ದೇವರ ಮುಂದೆ ನಿಂತಿರುವ ಏಳು ದೇವದೂತರನ್ನು ನಾನು ನೋಡಿದೆನು ಮತ್ತು ಅವರಿಗೆ ಏಳು ತುತೂರಿಗಳು ಕೊಡಲ್ಪಟ್ಟವು.  ಮತ್ತೊಬ್ಬ ದೇವದೂತನು ಬಂದು ಯಜ್ಞವೇದಿಯ ಬಳಿಯಲ್ಲಿ ನಿಂತುಕೊಂಡನು; ಅವನ ಬಳಿ ಚಿನ್ನದ ಒಂದು ಧೂಪದ ಪಾತ್ರೆ ಇತ್ತು. ಸಿಂಹಾಸನದ ಮುಂದೆ ಇದ್ದ ಚಿನ್ನದ ಯಜ್ಞವೇದಿಯ ಮೇಲೆ ಪವಿತ್ರ ಜನರೆಲ್ಲರ ಪ್ರಾರ್ಥನೆಗಳೊಂದಿಗೆ ಸಮರ್ಪಿಸಲು ಅವನಿಗೆ ದೊಡ್ಡ ಪ್ರಮಾಣದಲ್ಲಿ ಧೂಪವು ಕೊಡಲ್ಪಟ್ಟಿತು.  ಆಗ ಆ ಧೂಪದ ಹೊಗೆಯು ದೇವದೂತನ ಕೈಯಿಂದ ಹೊರಟು ಪವಿತ್ರ ಜನರ ಪ್ರಾರ್ಥನೆಗಳೊಂದಿಗೆ ದೇವರ ಬಳಿಗೆ ಏರಿಹೋಯಿತು.  ಕೂಡಲೆ ಆ ದೇವದೂತನು ಧೂಪದ ಪಾತ್ರೆಯನ್ನು ತೆಗೆದುಕೊಂಡು ಯಜ್ಞವೇದಿಯ ಮೇಲಿದ್ದ ಬೆಂಕಿಯಲ್ಲಿ ಸ್ವಲ್ಪವನ್ನು ಅದರಲ್ಲಿ ತುಂಬಿಸಿ ಅದನ್ನು ಭೂಮಿಗೆ ಎಸೆದನು. ಆಗ ಗುಡುಗುಗಳೂ ವಾಣಿಗಳೂ ಮಿಂಚುಗಳೂ ಭೂಕಂಪವೂ ಸಂಭವಿಸಿದವು.  ಏಳು ತುತೂರಿಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರು ಅವುಗಳನ್ನು ಊದುವುದಕ್ಕೆ ಸಿದ್ಧರಾದರು.  ಮೊದಲನೆಯವನು ತನ್ನ ತುತೂರಿಯನ್ನು ಊದಿದನು. ಆಗ ಆಲಿಕಲ್ಲಿನ ಮಳೆಯೂ ರಕ್ತದೊಂದಿಗೆ ಮಿಶ್ರವಾಗಿದ್ದ ಬೆಂಕಿಯೂ ಉಂಟಾಯಿತು ಮತ್ತು ಅದನ್ನು ಭೂಮಿಗೆ ಎಸೆಯಲಾಯಿತು. ಭೂಮಿಯ ಮೂರನೆಯ ಒಂದು ಭಾಗವು ಸುಟ್ಟುಹೋಯಿತು, ಮರಗಳಲ್ಲಿ ಮೂರನೆಯ ಒಂದು ಭಾಗವು ಸುಟ್ಟು​ಹೋಯಿತು ಮತ್ತು ಹಸುರು ಸಸ್ಯವರ್ಗವೆಲ್ಲ ಸುಟ್ಟುಹೋಯಿತು.  ಎರಡನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಬೆಂಕಿಹತ್ತಿ ಉರಿಯುತ್ತಿರುವ ದೊಡ್ಡ ಬೆಟ್ಟದಂಥ ಒಂದು ವಸ್ತುವನ್ನು ಸಮುದ್ರದೊಳಗೆ ಎಸೆಯಲಾಯಿತು. ಸಮುದ್ರದ ಮೂರನೆಯ ಒಂದು ಭಾಗವು ರಕ್ತವಾಯಿತು;  ಸಮುದ್ರದಲ್ಲಿ ಪ್ರಾಣವಿರುವ ಜೀವಿಗಳಲ್ಲಿ ಮೂರನೆಯ ಒಂದು ಭಾಗವು ಸತ್ತು​ಹೋಯಿತು ಮತ್ತು ಹಡಗುಗಳಲ್ಲಿ ಮೂರನೆಯ ಒಂದು ಭಾಗವು ನಾಶವಾಯಿತು. 10  ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ದೀಪದಂತೆ ಉರಿಯುತ್ತಿದ್ದ ಒಂದು ದೊಡ್ಡ ನಕ್ಷತ್ರವು ಆಕಾಶದಿಂದ ಬಿತ್ತು ಮತ್ತು ಅದು ನದಿಗಳಲ್ಲಿ ಮೂರನೆಯ ಒಂದು ಭಾಗದ ಮೇಲೆಯೂ ನೀರುಗಳ ಒರತೆಗಳ ಮೇಲೆಯೂ ಬಿತ್ತು. 11  ಆ ನಕ್ಷತ್ರದ ಹೆಸರು ಮಾಚಿಪತ್ರೆ ಎಂದಾಗಿದೆ. ನೀರುಗಳ ಮೂರನೆಯ ಒಂದು ಭಾಗವು ಮಾಚಿಪತ್ರೆಯಾಗಿ ಬದಲಾಯಿತು ಮತ್ತು ನೀರುಗಳು ಕಹಿಯಾಗಿ ಮಾಡಲ್ಪಟ್ಟಿದ್ದರಿಂದ ಮನುಷ್ಯರಲ್ಲಿ ಅನೇಕರು ಅದರಿಂದ ಸತ್ತರು. 12  ನಾಲ್ಕನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಸೂರ್ಯನಲ್ಲಿಯೂ ಚಂದ್ರನಲ್ಲಿಯೂ ನಕ್ಷತ್ರಗಳಲ್ಲಿಯೂ ಮೂರನೆಯ ಒಂದು ಭಾಗಕ್ಕೆ ಬಲವಾದ ಹೊಡೆತ ಬಿತ್ತು; ಅವುಗಳ ಮೂರನೆಯ ಒಂದು ಭಾಗ ಕತ್ತಲಾಗುವಂತೆಯೂ ಹಗಲಿನ ಮೂರನೆಯ ಒಂದು ಭಾಗವು ಪ್ರಕಾಶವಿಲ್ಲದೇ ಇರುವಂತೆಯೂ ಹೀಗೆ ಮಾಡಲ್ಪಟ್ಟಿತು; ರಾತ್ರಿಗೂ ಹಾಗೆಯೇ ಆಯಿತು. 13  ಆಮೇಲೆ ನಾನು ನೋಡಲಾಗಿ ಆಕಾಶಮಧ್ಯದಲ್ಲಿ ಹಾರಾಡುತ್ತಿದ್ದ ಒಂದು ಗರುಡಪಕ್ಷಿಯು, “ಇನ್ನೇನು ತಮ್ಮ ತುತೂರಿ​ಗಳನ್ನು ಊದಲಿಕ್ಕಿರುವ ಮೂವರು ದೇವದೂತರ ಉಳಿದ ತುತೂರಿಗಳ ಧ್ವನಿಯ ಕಾರಣ ಭೂಮಿಯ ಮೇಲೆ ವಾಸಿಸುತ್ತಿರುವವರಿಗೆ ಅಯ್ಯೋ, ಅಯ್ಯೋ, ಅಯ್ಯೋ!” ಎಂದು ಮಹಾ ಧ್ವನಿಯಿಂದ ಹೇಳುವುದನ್ನು ಕೇಳಿಸಿಕೊಂಡೆನು.

ಪಾದಟಿಪ್ಪಣಿ