ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಕಟನೆ 6:1-17

6  ಕುರಿಮರಿಯು ಆ ಏಳು ಮುದ್ರೆಗಳಲ್ಲಿ ಒಂದನ್ನು ಒಡೆದಾಗ ನಾನು ನೋಡಿದೆನು ಮತ್ತು ಆ ನಾಲ್ಕು ಜೀವಿಗಳಲ್ಲಿ ಒಂದು ಗುಡುಗಿನಂಥ ಧ್ವನಿಯಲ್ಲಿ “ಬಾ!” ಎಂದು ಹೇಳುವುದನ್ನು ಕೇಳಿದೆನು.  ನಾನು ನೋಡಿದಾಗ, ಇಗೋ ಒಂದು ಬಿಳೀ ಕುದುರೆಯು ಕಾಣಿಸಿತು ಮತ್ತು ಅದರ ಮೇಲೆ ಕುಳಿತುಕೊಂಡಿದ್ದವನ ಬಳಿ ಒಂದು ಬಿಲ್ಲು ಇತ್ತು. ಅವನಿಗೆ ಒಂದು ಕಿರೀಟವು ಕೊಡಲ್ಪಟ್ಟಿತು ಮತ್ತು ಅವನು ಜಯಿಸುತ್ತಾ ತನ್ನ ವಿಜಯವನ್ನು ಪೂರ್ಣಗೊಳಿಸಲು ಹೋದನು.  ಅವನು ಎರಡನೆಯ ಮುದ್ರೆಯನ್ನು ಒಡೆದಾಗ ಎರಡನೆಯ ಜೀವಿಯು “ಬಾ!” ಎಂದು ಹೇಳುವುದನ್ನು ನಾನು ಕೇಳಿದೆನು.  ಆಗ ಅಗ್ನಿವರ್ಣದ ಮತ್ತೊಂದು ಕುದುರೆಯು ಹೊರಟುಬಂತು; ಅದರ ಮೇಲೆ ಕುಳಿತುಕೊಂಡಿದ್ದವನಿಗೆ ಮನುಷ್ಯರು ಒಬ್ಬರು ಇನ್ನೊಬ್ಬರನ್ನು ಹತಿಸಬೇಕೆಂದು ಭೂಮಿಯಿಂದ ಶಾಂತಿಯನ್ನು ತೆಗೆದುಹಾಕಲು ಅನುಮತಿಯು ಕೊಡಲ್ಪಟ್ಟಿತು; ಅವನಿಗೆ ಒಂದು ದೊಡ್ಡ ಕತ್ತಿಯನ್ನು ಕೊಡಲಾಯಿತು.  ಅವನು ಮೂರನೆಯ ಮುದ್ರೆಯನ್ನು ಒಡೆದಾಗ ಮೂರನೆಯ ಜೀವಿಯು “ಬಾ!” ಎಂದು ಹೇಳುವುದನ್ನು ನಾನು ಕೇಳಿದೆನು. ಆಗ ಇಗೋ, ಒಂದು ಕಪ್ಪು ಕುದುರೆಯು ಕಾಣಿಸಿತು; ಅದರ ಮೇಲೆ ಕುಳಿತುಕೊಂಡಿದ್ದವನ ಕೈಯಲ್ಲಿ ಒಂದು ತಕ್ಕಡಿ ಇತ್ತು.  ಆಗ ಆ ನಾಲ್ಕು ಜೀವಿಗಳ ಮಧ್ಯದಿಂದಲೋ ಎಂಬಂತೆ ಒಂದು ಧ್ವನಿಯನ್ನು ನಾನು ಕೇಳಿದೆನು. ಅದು, “ಒಂದು ದಿನಾರಿಗೆ * ಒಂದು ಕ್ವಾರ್ಟ್ * ಗೋದಿ; ಒಂದು ದಿನಾರಿಗೆ ಮೂರು ಕ್ವಾರ್ಟ್ ಜವೆಗೋದಿ; ಆಲೀವ್‌ ಎಣ್ಣೆಯನ್ನೂ ದ್ರಾಕ್ಷಾಮದ್ಯವನ್ನೂ ಕೆಡಿಸಬೇಡ” ಎಂದು ಹೇಳಿತು.  ಅವನು ನಾಲ್ಕನೆಯ ಮುದ್ರೆಯನ್ನು ಒಡೆದಾಗ ನಾಲ್ಕನೆಯ ಜೀವಿಯ ಧ್ವನಿಯು “ಬಾ!” ಎಂದು ಹೇಳುವುದನ್ನು ನಾನು ಕೇಳಿದೆನು.  ನಾನು ನೋಡಿದೆನು ಮತ್ತು ಇಗೋ, ಒಂದು ನಸುಬಿಳಿಚಾದ ಕುದುರೆಯು ಕಾಣಿಸಿತು; ಅದರ ಮೇಲೆ ಕುಳಿತುಕೊಂಡಿದ್ದವನಿಗೆ ಮೃತ್ಯು ಎಂಬ ಹೆಸರಿತ್ತು. ಹೇಡೀಸ್‌ ಅವನನ್ನು ಬಹಳ ಹತ್ತಿರದಿಂದ ಹಿಂಬಾಲಿಸುತ್ತಾ ಇತ್ತು. ಒಂದು ಉದ್ದವಾದ ಕತ್ತಿಯಿಂದಲೂ ಆಹಾರದ ಕೊರತೆಯಿಂದಲೂ ಮಾರಕ ವ್ಯಾಧಿಯಿಂದಲೂ ಭೂಮಿಯ ಕಾಡುಮೃಗಗಳಿಂದಲೂ ಕೊಲ್ಲಲು ಭೂಮಿಯ ನಾಲ್ಕನೆಯ ಒಂದು ಭಾಗದ ಮೇಲೆ ಅವರಿಗೆ ಅಧಿಕಾರವು ಕೊಡಲ್ಪಟ್ಟಿತು.  ಅವನು ಐದನೆಯ ಮುದ್ರೆಯನ್ನು ಒಡೆದಾಗ, ದೇವರ ವಾಕ್ಯದ ನಿಮಿತ್ತವಾಗಿಯೂ ಅವರು ಮಾಡುತ್ತಿದ್ದ ಸಾಕ್ಷಿಕಾರ್ಯದ ನಿಮಿತ್ತವಾಗಿಯೂ ವಧಿಸಲ್ಪಟ್ಟವರ ಪ್ರಾಣಗಳು ಯಜ್ಞವೇದಿಯ ಕೆಳಗಿರುವುದನ್ನು ನಾನು ನೋಡಿದೆನು. 10  ಅವರು ಮಹಾ ಧ್ವನಿಯಿಂದ, “ಪವಿತ್ರನೂ ಸತ್ಯವಂತನೂ ಆದ ಪರಮಾಧಿಕಾರಿ ಕರ್ತನೇ, ನೀನು ಎಂದಿನ ತನಕ ಭೂನಿವಾಸಿಗಳ ಮೇಲೆ ನಮ್ಮ ರಕ್ತಕ್ಕೆ ನ್ಯಾಯತೀರಿಸದೆಯೂ ಸೇಡು ತೀರಿಸದೆಯೂ ಇರುವಿ?” ಎಂದು ಕೂಗಿ ಹೇಳಿದರು. 11  ಅವರಲ್ಲಿ ಪ್ರತಿಯೊಬ್ಬನಿಗೆ ಒಂದು ಬಿಳೀ ನಿಲುವಂಗಿಯು ಕೊಡಲ್ಪಟ್ಟಿತು; ಸ್ವಲ್ಪ ಸಮಯದೊಳಗೆ ಅವರಂತೆಯೇ ಕೊಲ್ಲಲ್ಪಡಲಿಕ್ಕಿದ್ದ ಅವರ ಜೊತೆ ದಾಸರ ಮತ್ತು ಅವರ ಸಹೋದರರ ಸಂಖ್ಯೆಯು ಭರ್ತಿಯಾಗುವ ತನಕ ಸ್ವಲ್ಪಕಾಲ ವಿಶ್ರಮಿಸಿಕೊಳ್ಳುವಂತೆ ಅವರಿಗೆ ಹೇಳಲಾಯಿತು. 12  ಅವನು ಆರನೆಯ ಮುದ್ರೆಯನ್ನು ಒಡೆದದ್ದನ್ನು ನಾನು ನೋಡಿದಾಗ ಒಂದು ಮಹಾ ಭೂಕಂಪವು ಸಂಭವಿಸಿತು; ಸೂರ್ಯನು ಕೂದಲಿನ ಗೋಣೀತಟ್ಟಿನಂತೆ ಕಪ್ಪಾದನು, ಇಡೀ ಚಂದ್ರನು ರಕ್ತದಂತಾದನು 13  ಮತ್ತು ಬಿರುಸಾದ ಗಾಳಿಯ ಹೊಡೆತದಿಂದಾಗಿ ಅಂಜೂರ ಮರವು ತನ್ನ ಹಣ್ಣಾಗದ ಅಂಜೂರಗಳನ್ನು ಉದುರಿಸುವ ಪ್ರಕಾರ ಆಕಾಶದ ನಕ್ಷತ್ರಗಳು ಭೂಮಿಗೆ ಬಿದ್ದವು. 14  ಆಕಾಶವು ಸುತ್ತಲ್ಪಡುತ್ತಿರುವ ಸುರುಳಿಯಂತೆ ಅಗಲಿತು; ಪ್ರತಿಯೊಂದು ಪರ್ವತವೂ ಪ್ರತಿಯೊಂದು ದ್ವೀಪವೂ ಅವುಗಳ ಸ್ಥಳಗಳಿಂದ ತೆಗೆದುಹಾಕಲ್ಪಟ್ಟವು. 15  ಇದಲ್ಲದೆ ಭೂರಾಜರೂ ಉನ್ನತ ಪದವಿಯವರೂ ಮಿಲಿಟರಿ ಅಧಿಪತಿಗಳೂ ಐಶ್ವರ್ಯವಂತರೂ ಬಲಿಷ್ಠರೂ ಪ್ರತಿಯೊಬ್ಬ ದಾಸನೂ ಪ್ರತಿಯೊಬ್ಬ ಸ್ವತಂತ್ರನೂ ಗುಹೆಗಳಲ್ಲಿಯೂ ಪರ್ವತಗಳ ಬಂಡೆರಾಶಿಗಳಲ್ಲಿಯೂ ಅಡಗಿಕೊಂಡರು. 16  ಅವರು ಬೆಟ್ಟಗಳಿಗೂ ಬಂಡೆರಾಶಿಗಳಿಗೂ, “ನಮ್ಮ ಮೇಲೆ ಬೀಳಿರಿ; ಸಿಂಹಾಸನದ ಮೇಲೆ ಕುಳಿತುಕೊಂಡಿರುವಾತನ ಮುಖದಿಂದಲೂ ಕುರಿಮರಿಯ ಕ್ರೋಧದಿಂದಲೂ ನಮ್ಮನ್ನು ಮರೆಮಾಡಿರಿ, 17  ಏಕೆಂದರೆ ಅವರ ಕ್ರೋಧದ ಮಹಾ ದಿನವು ಬಂದಿದೆ, ಯಾರು ನಿಲ್ಲಶಕ್ತರು?” ಎಂದು ಹೇಳುತ್ತಾ ಇದ್ದರು.

ಪಾದಟಿಪ್ಪಣಿ

ಪ್ರಕ 6:6  ಮತ್ತಾ 18:24 ರ ಪಾದಟಿಪ್ಪಣಿಯನ್ನು ನೋಡಿ.
ಪ್ರಕ 6:6  ಗ್ರೀಕ್‌ ಪ್ರಮಾಣ: ಒಂದು ಲೀಟರ್‌ಗಿಂತ ಸ್ವಲ್ಪ ಹೆಚ್ಚು.