ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಪ್ರಕಟನೆ 5:1-14

5  ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಂದು ಸುರುಳಿಯನ್ನು ನೋಡಿದೆನು; ಆ ಸುರುಳಿಯು ಒಳಭಾಗದಲ್ಲಿಯೂ ಹೊರಭಾಗದಲ್ಲಿಯೂ ಬರೆಯಲ್ಪಟ್ಟದ್ದಾಗಿದ್ದು ಅದಕ್ಕೆ ಏಳು ಮುದ್ರೆಗಳಿಂದ ಬಿಗಿಯಾಗಿ ಮುದ್ರೆಯೊತ್ತಲಾಗಿತ್ತು.  ಇದಲ್ಲದೆ ಬಲಿಷ್ಠನಾದ ಒಬ್ಬ ದೇವದೂತನು ಮಹಾ ಧ್ವನಿಯಿಂದ, “ಸುರುಳಿಯನ್ನು ತೆರೆಯುವುದಕ್ಕೂ ಅದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು?” ಎಂದು ಘೋಷಿಸುವುದನ್ನು ನೋಡಿದೆನು.  ಆದರೆ ಸ್ವರ್ಗದಲ್ಲಾಗಲಿ ಭೂಮಿಯ ಮೇಲಾಗಲಿ ಭೂಮಿಯ ಕೆಳಗಾಗಲಿ ಆ ಸುರುಳಿಯನ್ನು ತೆರೆಯುವುದಕ್ಕೂ ಅದರಲ್ಲಿರುವುದನ್ನು ನೋಡುವುದಕ್ಕೂ ಶಕ್ತನಾದವನು ಒಬ್ಬನೂ ಇರಲಿಲ್ಲ.  ಆ ಸುರುಳಿಯನ್ನು ತೆರೆಯುವುದಕ್ಕೂ ಅದರಲ್ಲಿರುವುದನ್ನು ನೋಡುವುದಕ್ಕೂ ಯೋಗ್ಯನಾದವನು ಒಬ್ಬನೂ ಸಿಗಲಿಲ್ಲವಾದ್ದರಿಂದ ನಾನು ಬಹಳವಾಗಿ ಅತ್ತೆನು.  ಆದರೆ ಹಿರಿಯರಲ್ಲಿ ಒಬ್ಬನು ನನಗೆ, “ಅಳುವುದನ್ನು ನಿಲ್ಲಿಸು. ನೋಡು! ಸುರುಳಿಯನ್ನೂ ಅದರ ಏಳು ಮುದ್ರೆಗಳನ್ನೂ ಬಿಚ್ಚುವುದಕ್ಕೋಸ್ಕರ ಯೆಹೂದ ಕುಲದ ಸಿಂಹವೂ ದಾವೀದನ ಬುಡವೂ ಆಗಿರುವವನು ಜಯಹೊಂದಿದ್ದಾನೆ” ಎಂದು ಹೇಳಿದನು.  ವಧಿಸಲ್ಪಟ್ಟಿದೆಯೋ ಎಂಬಂತೆ ತೋರುವ ಒಂದು ಕುರಿಮರಿಯು ಸಿಂಹಾಸನದ ಮತ್ತು ನಾಲ್ಕು ಜೀವಿಗಳ ಮಧ್ಯದಲ್ಲಿಯೂ ಹಿರಿಯರ ಮಧ್ಯದಲ್ಲಿಯೂ ನಿಂತಿರುವುದನ್ನು ಕಂಡೆನು; ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇವೆ; ಆ ಕಣ್ಣುಗಳು ಭೂಮಿಯಾದ್ಯಂತ ಕಳುಹಿಸಲ್ಪಟ್ಟ ದೇವರ ಏಳು ಆತ್ಮಗಳನ್ನು ಸೂಚಿಸುತ್ತವೆ.  ಅವನು ಹೋಗಿ ಸಿಂಹಾಸನದ ಮೇಲೆ ಕುಳಿತುಕೊಂಡಿರುವಾತನ ಬಲಗೈಯಿಂದ ಅದನ್ನು ಆ ಕೂಡಲೆ ತೆಗೆದುಕೊಂಡನು.  ಅವನು ಆ ಸುರುಳಿಯನ್ನು ತೆಗೆದುಕೊಂಡಾಗ, ನಾಲ್ಕು ಜೀವಿಗಳೂ ಇಪ್ಪತ್ತನಾಲ್ಕು ಮಂದಿ ಹಿರಿಯರೂ ಕುರಿಮರಿಯ ಮುಂದೆ ಅಡ್ಡಬಿದ್ದರು. ಅವರಲ್ಲಿ ಪ್ರತಿಯೊಬ್ಬನ ಬಳಿ ಒಂದೊಂದು ಕಿನ್ನರಿಯೂ ಧೂಪದಿಂದ ತುಂಬಿದ್ದ ಚಿನ್ನದ ಬೋಗುಣಿಗಳೂ ಇದ್ದವು; ಧೂಪವು ಪವಿತ್ರ ಜನರ ಪ್ರಾರ್ಥನೆಗಳನ್ನು ಸೂಚಿಸುತ್ತದೆ.  ಅವರು ಒಂದು ಹೊಸ ಹಾಡನ್ನು ಹಾಡುತ್ತಾ, “ನೀನು ಸುರುಳಿಯನ್ನು ತೆಗೆದುಕೊಂಡು ಅದರ ಮುದ್ರೆಗಳನ್ನು ಒಡೆಯುವುದಕ್ಕೆ ಯೋಗ್ಯನಾಗಿದ್ದೀ, ಏಕೆಂದರೆ ನೀನು ವಧಿಸಲ್ಪಟ್ಟು ನಿನ್ನ ರಕ್ತದಿಂದ ಪ್ರತಿ ಕುಲ, ಭಾಷೆ, ಪ್ರಜೆ, ಜನಾಂಗಗಳವರಿಂದ ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡಿ. 10  ನೀನು ಅವರನ್ನು ನಮ್ಮ ದೇವರಿಗೆ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದಿ ಮತ್ತು ಅವರು ಭೂಮಿಯ ಮೇಲೆ ರಾಜರಾಗಿ ಆಳಲಿದ್ದಾರೆ” ಎಂದು ಹೇಳಿದರು. 11  ಇದಲ್ಲದೆ ನಾನು ನೋಡಿದಾಗ ಸಿಂಹಾಸನದ ಜೀವಿಗಳ ಮತ್ತು ಹಿರಿಯರ ಸುತ್ತಲೂ ಅನೇಕ ದೇವದೂತರ ಸ್ವರವನ್ನು ಕೇಳಿದೆನು; ಅವರ ಸಂಖ್ಯೆಯು ಕೋಟ್ಯನುಕೋಟಿಯಾಗಿಯೂ ಲಕ್ಷೋಪಲಕ್ಷವಾಗಿಯೂ ಇತ್ತು. 12  ಅವರು ಮಹಾ ಧ್ವನಿಯಲ್ಲಿ, “ವಧಿಸಲ್ಪಟ್ಟ ಕುರಿಮರಿಯು ಶಕ್ತಿ, ಐಶ್ವರ್ಯ, ವಿವೇಕ, ಬಲ, ಗೌರವ, ಮಹಿಮೆ ಮತ್ತು ಆಶೀರ್ವಾದವನ್ನು ಹೊಂದುವುದಕ್ಕೆ ಯೋಗ್ಯವಾಗಿದೆ” ಎಂದು ಹೇಳಿದರು. 13  ಇದಲ್ಲದೆ ಸ್ವರ್ಗದಲ್ಲಿಯೂ ಭೂಮಿಯ ಮೇಲೆಯೂ ಭೂಮಿಯ ಕೆಳಗೆಯೂ ಸಮುದ್ರದ ಮೇಲೆಯೂ ಇರುವ ಜೀವಿಗಳು ಮತ್ತು ಅವುಗಳಲ್ಲಿರುವ ಎಲ್ಲವೂ, “ಸಿಂಹಾಸನದ ಮೇಲೆ ಕುಳಿತುಕೊಂಡಿರುವಾತನಿಗೂ ಕುರಿಮರಿಗೂ ಸ್ತುತಿ, ಗೌರವ, ಮಹಿಮೆ ಮತ್ತು ಬಲಗಳು ಸದಾಸರ್ವದಾ ಇರಲಿ” ಎಂದು ಹೇಳುವುದನ್ನು ಕೇಳಿದೆನು. 14  ಮತ್ತು ಆ ನಾಲ್ಕು ಜೀವಿಗಳು “ಆಮೆನ್‌!” ಎಂದು ಹೇಳುತ್ತಿದ್ದಾಗ ಆ ಹಿರಿಯರು ಅಡ್ಡಬಿದ್ದು ಆರಾಧಿಸಿದರು.

ಪಾದಟಿಪ್ಪಣಿ