ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಕಟನೆ 4:1-11

4  ಇವುಗಳಾದ ಮೇಲೆ ನಾನು ಸ್ವರ್ಗದಲ್ಲಿ ಒಂದು ತೆರೆದ ಬಾಗಿಲನ್ನು ನೋಡಿದೆನು; ನಾನು ಕೇಳಿಸಿಕೊಂಡ ಮೊದಲ ಶಬ್ದವು ತುತೂರಿಯ ಶಬ್ದದಂತಿದ್ದು ನನ್ನೊಂದಿಗೆ ಮಾತಾಡುತ್ತಾ, “ಇಲ್ಲಿಗೆ ಏರಿ ಬಾ, ನಡೆಯಬೇಕಾಗಿರುವ ಸಂಗತಿಗಳನ್ನು ನಾನು ನಿನಗೆ ತೋರಿಸುವೆನು” ಎಂದು ಹೇಳಿತು.  ಇವುಗಳಾದ ಮೇಲೆ ನಾನು ಕೂಡಲೆ ಪವಿತ್ರಾತ್ಮದ ಶಕ್ತಿಗೊಳಗಾದೆನು. ಇಗೋ, ಸ್ವರ್ಗದಲ್ಲಿ ಒಂದು ಸಿಂಹಾಸನವು ಅದರ ಸ್ಥಾನದಲ್ಲಿತ್ತು ಮತ್ತು ಆ ಸಿಂಹಾಸನದ ಮೇಲೆ ಒಬ್ಬನು ಕುಳಿತುಕೊಂಡಿದ್ದಾನೆ.  ಕುಳಿತು​ಕೊಂಡಿರುವಾತನು ಸೂರ್ಯಕಾಂತ ಮಣಿ​ಯಂತೆಯೂ ಅಮೂಲ್ಯವಾದ ಕೆಂಪು ಬಣ್ಣದ ಮಣಿಯಂತೆಯೂ ತೋರುತ್ತಾನೆ; ಸಿಂಹಾಸನದ ಸುತ್ತಲೂ ಹಸಿರು ಬಣ್ಣದ ರತ್ನದಂತೆ ತೋರುವ ಒಂದು ಮುಗಿಲುಬಿಲ್ಲು ಇದೆ.  ಇದಲ್ಲದೆ ಆ ಸಿಂಹಾಸನದ ಸುತ್ತಲೂ ಇಪ್ಪತ್ತನಾಲ್ಕು ಸಿಂಹಾಸನಗಳಿವೆ ಮತ್ತು ಆ ಸಿಂಹಾಸನಗಳ ಮೇಲೆ ಬಿಳೀ ಮೇಲಂಗಿಗಳನ್ನು ಧರಿಸಿಕೊಂಡಿರುವ ಇಪ್ಪತ್ತನಾಲ್ಕು ಮಂದಿ ಹಿರಿಯರು ಕುಳಿತುಕೊಂಡಿರುವುದನ್ನು ನಾನು ನೋಡಿದೆನು ಹಾಗೂ ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು.  ಸಿಂಹಾಸನದೊಳಗಿಂದ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಹೊರಡುತ್ತಿವೆ; ಸಿಂಹಾಸನದ ಮುಂದೆ ಬೆಂಕಿಯ ಏಳು ದೀಪಗಳು ಉರಿಯುತ್ತಿವೆ ಮತ್ತು ಇವು ದೇವರ ಏಳು ಆತ್ಮಗಳನ್ನು ಸೂಚಿಸುತ್ತವೆ.  ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕದಂಥ ಗಾಜಿನ ಸಮುದ್ರದಂತಿದ್ದದ್ದು ತೋರಿತು. ಸಿಂಹಾಸನದ ಮಧ್ಯದಲ್ಲಿಯೂ ಸಿಂಹಾಸನದ ಸುತ್ತಲೂ ನಾಲ್ಕು ಜೀವಿಗಳಿವೆ; ಅವು ಮುಂದೆಯೂ ಹಿಂದೆಯೂ ಕಣ್ಣುಗಳಿಂದ ತುಂಬಿವೆ.  ಮೊದಲನೆಯ ಜೀವಿಯು ಸಿಂಹದಂತಿದೆ, ಎರಡನೆಯ ಜೀವಿಯು ಎಳೆಯ ಹೋರಿಯಂತಿದೆ, ಮೂರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿದೆ ಮತ್ತು ನಾಲ್ಕನೆಯ ಜೀವಿಯು ಹಾರುವ ಗರುಡಪಕ್ಷಿಯಂತಿದೆ.  ಆ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೆ ಆರಾರು ರೆಕ್ಕೆಗಳಿವೆ; ಸುತ್ತಲೂ ಕೆಳಗಡೆಯೂ ಅವುಗಳು ಕಣ್ಣುಗಳಿಂದ ತುಂಬಿವೆ. ಅವುಗಳು ಹಗಲೂರಾತ್ರಿ ವಿಶ್ರಮಿಸದೆ “ಇದ್ದಾತನೂ ಇರುವಾತನೂ ಬರಲಿರುವಾತನೂ ಆಗಿರುವ ಸರ್ವಶಕ್ತ ದೇವರಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು” ಎಂದು ಹೇಳುತ್ತಾ ಇವೆ.  ಆ ಜೀವಿಗಳು ಸಿಂಹಾಸನದ ಮೇಲೆ ಕುಳಿತುಕೊಂಡಿರುವಾತನಿಗೆ, ಸದಾಸರ್ವದಾ ಜೀವಿಸುವಾತನಿಗೆ ಮಹಿಮೆಯನ್ನೂ ಗೌರವವನ್ನೂ ಕೃತಜ್ಞತಾಸ್ತುತಿಯನ್ನೂ ಸಲ್ಲಿಸುವಾಗೆಲ್ಲ, 10  ಇಪ್ಪತ್ತನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕುಳಿತುಕೊಂಡಿರುವಾತನ ಮುಂದೆ ಅಡ್ಡಬಿದ್ದು ಸದಾಸರ್ವದಾ ಜೀವಿಸುವಾತನನ್ನು ಆರಾಧಿಸುತ್ತಾರೆ ಮತ್ತು ಅವರು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ, 11  “ಯೆಹೋವನೇ, ನಮ್ಮ ದೇವರೇ, ನೀನು ಮಹಿಮೆ, ಗೌರವ ಮತ್ತು ​ಶಕ್ತಿಯನ್ನು ಪಡೆಯಲು ಯೋಗ್ಯನಾಗಿದ್ದೀ; ಏಕೆಂದರೆ ಎಲ್ಲವನ್ನೂ ನೀನೇ ಸೃಷ್ಟಿಸಿದಿ ಮತ್ತು ನಿನ್ನ ಚಿತ್ತದಿಂದಲೇ ಅವು ಅಸ್ತಿತ್ವಕ್ಕೆ ಬಂದವು ಹಾಗೂ ಸೃಷ್ಟಿಸಲ್ಪಟ್ಟವು” ಎಂದು ಹೇಳುತ್ತಾರೆ.

ಪಾದಟಿಪ್ಪಣಿ