ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಪ್ರಕಟನೆ 22:1-21

22  ಆಮೇಲೆ ಅವನು ನನಗೆ ಸ್ಫಟಿಕದಂತೆ ಸ್ವಚ್ಛವಾಗಿರುವ ಜೀವಜಲದ ನದಿಯನ್ನು ತೋರಿಸಿದನು; ಅದು ದೇವರ ಮತ್ತು ಕುರಿಮರಿಯ ಸಿಂಹಾಸನದಿಂದ ಹೊರಟು  ನಗರದ ವಿಶಾಲವಾದ ಮಾರ್ಗದ ಮಧ್ಯದಲ್ಲಿ ಹರಿಯುತ್ತಿತ್ತು. ನದಿಯ ಉಭಯ ಪಾರ್ಶ್ವಗಳಲ್ಲಿ ಜೀವವೃಕ್ಷಗಳಿದ್ದವು; ಅವು ಪ್ರತಿ ತಿಂಗಳು ಫಲವನ್ನು ಬಿಟ್ಟು, ಫಲದ ಹನ್ನೆರಡು ಬೆಳೆಗಳನ್ನು ಉತ್ಪಾದಿಸುತ್ತಿದ್ದವು. ಆ ಮರಗಳ ಎಲೆಗಳು ಜನಾಂಗಗಳನ್ನು ವಾಸಿಮಾಡುವುದಕ್ಕೋಸ್ಕರವಾಗಿದ್ದವು.  ಇದಲ್ಲದೆ, ಇನ್ನು ಮುಂದೆ ಯಾವುದೇ ಶಾಪವು ಅಲ್ಲಿರುವುದಿಲ್ಲ. ಆದರೆ ದೇವರ ಮತ್ತು ಕುರಿಮರಿಯ ಸಿಂಹಾಸನವು ಆ ನಗರದಲ್ಲಿರುವುದು; ಆತನ ದಾಸರು ಆತನಿಗೆ ಪವಿತ್ರ ಸೇವೆಯನ್ನು ಸಲ್ಲಿಸುವರು.  ಅವರು ಆತನ ಮುಖವನ್ನು ನೋಡುವರು ಮತ್ತು ಅವರ ಹಣೆಗಳ ಮೇಲೆ ಆತನ ಹೆಸರು ಇರುವುದು.  ಇದಲ್ಲದೆ ಇನ್ನು ಮುಂದೆ ರಾತ್ರಿ ಇರುವುದಿಲ್ಲ; ಅವರಿಗೆ ದೀಪದ ಬೆಳಕಾಗಲಿ ಸೂರ್ಯನ ಬೆಳಕಾಗಲಿ ಬೇಕಾಗುವುದಿಲ್ಲ, ಏಕೆಂದರೆ ಯೆಹೋವ ದೇವರು ಅವರ ಮೇಲೆ ಬೆಳಕನ್ನು ಪ್ರಕಾಶಿಸುವನು ಮತ್ತು ಅವರು ಸದಾಸರ್ವದಾ ರಾಜರಾಗಿ ಆಳುವರು.  ಅವನು ನನಗೆ, “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ; ಹೌದು, ಪ್ರವಾದಿಗಳ ಪ್ರೇರಿತ ಅಭಿವ್ಯಕ್ತಿಗಳ ದೇವರಾಗಿರುವ ಯೆಹೋವನು ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸಲು ತನ್ನ ದೂತನನ್ನು ಕಳುಹಿಸಿಕೊಟ್ಟನು.  ಇಗೋ, ನಾನು ಬೇಗನೆ ಬರುತ್ತೇನೆ. ಈ ಸುರುಳಿಯಲ್ಲಿರುವ ಪ್ರವಾದನೆಯ ಮಾತುಗಳನ್ನು ಕೈಕೊಂಡು ನಡೆಯುತ್ತಿರುವವನು ಸಂತೋಷಿತನು” ಎಂದು ಹೇಳಿದನು.  ಈ ಸಂಗತಿಗಳನ್ನು ಕೇಳಿಸಿಕೊಳ್ಳುತ್ತಿದ್ದವನೂ ನೋಡುತ್ತಿದ್ದವನೂ ಯೋಹಾನನೆಂಬ ನಾನೇ. ನಾನು ಕೇಳಿಸಿಕೊಂಡ ಮತ್ತು ನೋಡಿದ ಬಳಿಕ, ಇವುಗಳನ್ನು ನನಗೆ ತೋರಿಸುತ್ತಿದ್ದ ದೇವದೂತನನ್ನು ಆರಾಧಿಸಲು ಅವನ ಪಾದಗಳ ಮುಂದೆ ಬಿದ್ದೆನು.  ಆದರೆ ಅವನು ನನಗೆ, “ಜಾಗ್ರತೆ! ಹಾಗೆ ಮಾಡಬೇಡ! ನಾನು ನಿನಗೂ ಪ್ರವಾದಿಗಳಾದ ನಿನ್ನ ಸಹೋದರರಿಗೂ ಈ ಸುರುಳಿಯಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವವರಿಗೂ ಜೊತೆ ದಾಸನಾಗಿದ್ದೇನೆ ಅಷ್ಟೆ. ದೇವರನ್ನು ಆರಾಧಿಸು” ಎಂದು ಹೇಳಿದನು. 10  ಅವನು ನನಗೆ ಮತ್ತೂ ಹೇಳಿದ್ದು: “ಈ ಸುರುಳಿಯಲ್ಲಿರುವ ಪ್ರವಾದನೆಯ ಮಾತುಗಳಿಗೆ ಮುದ್ರೆಹಾಕಬೇಡ, ಏಕೆಂದರೆ ನೇಮಿತ ಸಮಯವು ಸಮೀಪಿಸಿದೆ. 11  ಅನೀತಿಯನ್ನು ಮಾಡುತ್ತಿರುವವನು ಇನ್ನೂ ಅನೀತಿಯನ್ನು ಮಾಡಲಿ; ಕೊಳಕನು ಇನ್ನೂ ಕೊಳಕು ಮಾಡಲ್ಪಡಲಿ; ಆದರೆ ನೀತಿವಂತನು ಇನ್ನೂ ನೀತಿಯನ್ನು ಆಚರಿಸಲಿ ಮತ್ತು ಪವಿತ್ರನು ಇನ್ನೂ ಪವಿತ್ರ ಮಾಡಲ್ಪಡಲಿ. 12  “ ‘ಇಗೋ, ನಾನು ಬೇಗನೆ ಬರುತ್ತೇನೆ ಮತ್ತು ಪ್ರತಿಯೊಬ್ಬನಿಗೆ ಅವನವನ ಕೆಲಸಕ್ಕೆ ತಕ್ಕಂತೆ ಕೊಡತಕ್ಕ ಪ್ರತಿಫಲವು ನನ್ನಲ್ಲಿದೆ. 13  ನಾನು ಆಲ್ಫ ಮತ್ತು ಒಮೇಗ ಅಂದರೆ ಮೊದಲನೆಯವನೂ ಕೊನೆಯವನೂ, ಆದಿಯೂ ಅಂತ್ಯವೂ ಆಗಿದ್ದೇನೆ. 14  ಜೀವವೃಕ್ಷಗಳ ಬಳಿಗೆ ಹೋಗುವ ಅಧಿಕಾರವು ತಮ್ಮದಾಗುವಂತೆ ಮತ್ತು ನಗರದ ಹೆಬ್ಬಾಗಿಲುಗಳ ಮೂಲಕ ಅದರೊಳಗೆ ಪ್ರವೇಶ ಪಡೆಯುವಂತೆ ತಮ್ಮ ನಿಲುವಂಗಿಗಳನ್ನು ತೊಳೆದುಕೊಳ್ಳುವವರು ಸಂತೋಷಿತರು. 15  ಆದರೆ ನಾಯಿಗಳೂ ಪ್ರೇತವ್ಯವಹಾರವನ್ನು ಆಚರಿಸುವವರೂ ಜಾರರೂ ಕೊಲೆಗಾರರೂ ವಿಗ್ರಹಾರಾಧಕರೂ ಸುಳ್ಳನ್ನು ಇಷ್ಟಪಟ್ಟು ಅದನ್ನು ಮುಂದುವರಿಸುತ್ತಾ ಇರುವವರೆಲ್ಲರೂ ಹೊರಗಿರುವರು.’ 16  “ ‘ಯೇಸುವೆಂಬ ನಾನು ಸಭೆಗಳಿಗಾಗಿ ಈ ಸಂಗತಿಗಳ ವಿಷಯದಲ್ಲಿ ನಿಮಗೆ ಸಾಕ್ಷಿಹೇಳುವುದಕ್ಕೋಸ್ಕರ ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು ದಾವೀದನ ಬುಡವೂ ಸಂತತಿಯೂ ಪ್ರಕಾಶಮಾನವಾದ ಉದಯ ನಕ್ಷತ್ರವೂ ಆಗಿದ್ದೇನೆ.’ ” 17  ಇದಲ್ಲದೆ ಪವಿತ್ರಾತ್ಮವೂ ವಧುವೂ, “ಬಾ!” ಎಂದು ಹೇಳುತ್ತಾ ಇರುತ್ತಾರೆ. ಕೇಳಿಸಿಕೊಳ್ಳುತ್ತಿರುವ ಪ್ರತಿಯೊಬ್ಬನು “ಬಾ!” ಎನ್ನಲಿ. ಬಾಯಾರುತ್ತಿರುವ ಪ್ರತಿಯೊಬ್ಬನು ಬರಲಿ! ಇಷ್ಟವುಳ್ಳ ಪ್ರತಿಯೊಬ್ಬನು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ. 18  “ಈ ಸುರುಳಿಯಲ್ಲಿರುವ ಪ್ರವಾದನೆಯ ಮಾತುಗಳನ್ನು ಕೇಳಿಸಿಕೊಳ್ಳುವ ಪ್ರತಿಯೊಬ್ಬನಿಗೆ ನಾನು ಸಾಕ್ಷಿನೀಡುವುದೇನೆಂದರೆ, ಯಾವನಾದರೂ ಈ ವಿಷಯಗಳಿಗೆ ಒಂದನ್ನು ಕೂಡಿಸುವುದಾದರೆ ಈ ಸುರುಳಿಯಲ್ಲಿ ಬರೆದಿರುವ ಉಪದ್ರವಗಳನ್ನು ದೇವರು ಅವನಿಗೆ ಕೂಡಿಸುವನು; 19  ಯಾವನಾದರೂ ಈ ಪ್ರವಾದನೆಯ ಸುರುಳಿಯಲ್ಲಿರುವ ಮಾತುಗಳಿಂದ ಏನನ್ನಾದರೂ ತೆಗೆದುಬಿಡುವುದಾದರೆ ಈ ಸುರುಳಿಯಲ್ಲಿ ಯಾವುದರ ಕುರಿತು ಬರೆದಿದೆಯೋ ಆ ಜೀವವೃಕ್ಷಗಳಿಂದಲೂ ಪವಿತ್ರ ನಗರದಿಂದಲೂ ಅವನಿಗಿರುವ ಪಾಲನ್ನು ದೇವರು ತೆಗೆದುಬಿಡುವನು. 20  “ಈ ವಿಷಯಗಳ ಕುರಿತು ಸಾಕ್ಷಿಹೇಳುವವನು, ‘ಹೌದು; ನಾನು ಬೇಗನೆ ಬರುತ್ತೇನೆ’ ಎಂದು ಹೇಳುತ್ತಾನೆ.” “ಆಮೆನ್‌! ಕರ್ತನಾದ ಯೇಸುವೇ, ಬಾ!” 21  ಕರ್ತನಾದ ಯೇಸು ಕ್ರಿಸ್ತನ ಅಪಾತ್ರ ದಯೆಯು ಪವಿತ್ರ ಜನರೊಂದಿಗಿರಲಿ.

ಪಾದಟಿಪ್ಪಣಿ