ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಪ್ರಕಟನೆ 20:1-15

20  ಇದಲ್ಲದೆ, ಒಬ್ಬ ದೇವದೂತನು ತನ್ನ ಕೈಯಲ್ಲಿ ಅಗಾಧ ಸ್ಥಳದ ಬೀಗದ ಕೈಯನ್ನೂ ಒಂದು ದೊಡ್ಡ ಸರಪಣಿಯನ್ನೂ ಹಿಡಿದುಕೊಂಡು ಸ್ವರ್ಗದಿಂದ ಇಳಿದು ಬರುತ್ತಿರುವುದನ್ನು ನಾನು ನೋಡಿದೆನು.  ಅವನು ಪಿಶಾಚನೂ ಸೈತಾನನೂ ಆಗಿರುವ ಪುರಾತನ ಸರ್ಪವನ್ನು, ಅಂದರೆ ಘಟಸರ್ಪವನ್ನು ಹಿಡಿದು ಸಾವಿರ ವರ್ಷಗಳ ವರೆಗೆ ಬಂಧನದಲ್ಲಿಟ್ಟನು.  ಇದಲ್ಲದೆ, ಆ ಸಾವಿರ ವರ್ಷಗಳು ಮುಗಿಯುವ ತನಕ ಅವನು ಇನ್ನೆಂದೂ ಜನಾಂಗಗಳನ್ನು ಮರುಳುಗೊಳಿಸದಂತೆ ಅವನನ್ನು ಅಗಾಧ ಸ್ಥಳಕ್ಕೆ ದೊಬ್ಬಿ ಅದನ್ನು ಮುಚ್ಚಿ ಅದಕ್ಕೆ ಮುದ್ರೆಹಾಕಿದನು. ಇವುಗಳಾದ ಮೇಲೆ ಸ್ವಲ್ಪಕಾಲಕ್ಕಾಗಿ ಅವನಿಗೆ ಬಿಡುಗಡೆಯಾಗಬೇಕು.  ತರುವಾಯ ನಾನು ಸಿಂಹಾಸನಗಳನ್ನು ನೋಡಿದೆನು ಮತ್ತು ಅವುಗಳ ಮೇಲೆ ಕುಳಿತುಕೊಂಡಿದ್ದವರು ಇದ್ದರು; ನ್ಯಾಯತೀರಿಸುವ ಅಧಿಕಾರವು ಅವರಿಗೆ ಕೊಡಲ್ಪಟ್ಟಿತು. ಇದಲ್ಲದೆ, ಯೇಸುವಿನ ವಿಷಯವಾದ ಸಾಕ್ಷಿಯ ನಿಮಿತ್ತವಾಗಿಯೂ ದೇವರ ಕುರಿತು ಮಾತಾಡಿದ್ದಕ್ಕಾಗಿಯೂ ಕೊಡಲಿಯಿಂದ ಹತಿಸಲ್ಪಟ್ಟವರ ಮತ್ತು ಕಾಡುಮೃಗವನ್ನಾಗಲಿ ಅದರ ವಿಗ್ರಹವನ್ನಾಗಲಿ ಆರಾಧಿಸದೇ ಇದ್ದವರ ಹಾಗೂ ತಮ್ಮ ಹಣೆಯ ಮೇಲೆಯೂ ಕೈಯ ಮೇಲೆಯೂ ಗುರುತನ್ನು ಹಾಕಿಸಿಕೊಳ್ಳದೇ ಇದ್ದವರ ಪ್ರಾಣಗಳನ್ನು ನಾನು ನೋಡಿದೆನು. ಅವರು ಪುನಃ ಜೀವಿತರಾಗಿ ಆ ಸಾವಿರ ವರ್ಷಗಳ ವರೆಗೆ ಕ್ರಿಸ್ತನೊಂದಿಗೆ ರಾಜರಾಗಿ ಆಳಿದರು.  (ಸತ್ತವರಲ್ಲಿ ಉಳಿದವರು ಆ ಸಾವಿರ ವರ್ಷಗಳು ಮುಗಿಯುವ ತನಕ ಜೀವಿತರಾಗಿ ಏಳಲಿಲ್ಲ.) ಇದೇ ಮೊದಲನೆಯ ಪುನರುತ್ಥಾನ.  ಮೊದಲನೆಯ ಪುನರುತ್ಥಾನದಲ್ಲಿ ಪಾಲಿಗನಾಗಿರುವ ಪ್ರತಿಯೊಬ್ಬನು ಸಂತೋಷಿತನೂ ಪವಿತ್ರನೂ ಆಗಿದ್ದಾನೆ; ಇವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ, ಆದರೆ ಅವರು ದೇವರ ಮತ್ತು ಕ್ರಿಸ್ತನ ಯಾಜಕರಾಗಿರುವರು ಮತ್ತು ಅವನೊಂದಿಗೆ ಆ ಸಾವಿರ ವರ್ಷ ರಾಜರಾಗಿ ಆಳುವರು.  ಆ ಸಾವಿರ ವರ್ಷಗಳು ಮುಗಿದ ಕೂಡಲೆ ಸೈತಾನನಿಗೆ ಅವನ ಸೆರೆಯಿಂದ ಬಿಡುಗಡೆಯಾಗುವುದು.  ಅವನು ಹೊರಗೆ ಬಂದು ಭೂಮಿಯ ನಾಲ್ಕು ಮೂಲೆಗಳಲ್ಲಿರುವ ಗೋಗ್‌ ಮತ್ತು ಮಾಗೋಗ್‌ ಎಂಬ ಜನಾಂಗಗಳನ್ನು ದಾರಿತಪ್ಪಿಸಲು, ಅವರನ್ನು ಯುದ್ಧಕ್ಕಾಗಿ ಒಟ್ಟುಗೂಡಿಸಲು ಹೋಗುವನು. ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವುದು.  ಅವರು ಭೂಮಿಯಾದ್ಯಂತ ಹರಡಿಕೊಂಡು ಪವಿತ್ರ ಜನರ ಪಾಳೆಯವನ್ನೂ ಪ್ರಿಯ ನಗರವನ್ನೂ ಸುತ್ತುಗಟ್ಟಿದರು. ಆದರೆ ಸ್ವರ್ಗದಿಂದ ಬೆಂಕಿಯು ಇಳಿದು ಬಂದು ಅವರನ್ನು ದಹಿಸಿಬಿಟ್ಟಿತು. 10  ಅವರನ್ನು ದಾರಿತಪ್ಪಿಸುತ್ತಿದ್ದ ಪಿಶಾಚನು ಬೆಂಕಿಗಂಧಕಗಳ ಕೆರೆಗೆ ದೊಬ್ಬಲ್ಪಟ್ಟನು; ಅಲ್ಲಿ ಈಗಾಗಲೇ ಕಾಡುಮೃಗವೂ ಸುಳ್ಳು ಪ್ರವಾದಿಯೂ ಇದ್ದರು; ಅವರಿಗೆ ಹಗಲೂ ರಾತ್ರಿ ಸದಾಸರ್ವದಾ ಯಾತನೆಯು ಕೊಡಲ್ಪಡುವುದು. 11  ಇದಲ್ಲದೆ, ಬೆಳ್ಳಗಿರುವ ಒಂದು ಮಹಾ ಸಿಂಹಾಸನವನ್ನೂ ಅದರ ಮೇಲೆ ಕುಳಿತುಕೊಂಡಿದ್ದಾತನನ್ನೂ ನಾನು ನೋಡಿದೆನು. ಆತನ ಎದುರಿನಿಂದ ಭೂಮಿಯೂ ಆಕಾಶವೂ ಓಡಿಹೋದವು ಮತ್ತು ಅವುಗಳಿಗಾಗಿ ಯಾವುದೇ ಸ್ಥಳವು ಕಂಡುಬರಲಿಲ್ಲ. 12  ಸತ್ತವರಾದ ದೊಡ್ಡವರೂ ಚಿಕ್ಕವರೂ ಸಿಂಹಾಸನದ ಮುಂದೆ ನಿಂತಿರುವುದನ್ನು ನಾನು ನೋಡಿದೆನು; ಆಗ ಸುರುಳಿಗಳು ತೆರೆಯಲ್ಪಟ್ಟವು. ಆದರೆ ಇನ್ನೊಂದು ಸುರುಳಿ ತೆರೆಯಲ್ಪಟ್ಟಿತು; ಅದು ಜೀವದ ಸುರುಳಿಯಾಗಿದೆ. ಸುರುಳಿಗಳಲ್ಲಿದ್ದ ವಿಷಯಗಳ ಆಧಾರದ ಮೇಲೆ ಅವರವರ ಕ್ರಿಯೆಗಳಿಗನುಸಾರ ಸತ್ತವರಿಗೆ ನ್ಯಾಯತೀರ್ಪಾಯಿತು. 13  ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯು ಮತ್ತು ಹೇಡೀಸ್‌ ತಮ್ಮೊಳಗಿದ್ದ ಸತ್ತವರನ್ನು ಒಪ್ಪಿಸಿದವು; ಅವರಲ್ಲಿ ಪ್ರತಿಯೊಬ್ಬರು ತಮ್ಮತಮ್ಮ ಕ್ರಿಯೆಗಳಿಗನುಸಾರ ನ್ಯಾಯತೀರ್ಪನ್ನು ಹೊಂದಿದರು. 14  ಬಳಿಕ ಮೃತ್ಯು ಮತ್ತು ಹೇಡೀಸ್‌ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು. ಬೆಂಕಿಯ ಕೆರೆ ಎಂದರೆ ಎರಡನೆಯ ಮರಣ. 15  ಇದಲ್ಲದೆ, ಯಾವನ ಹೆಸರು ಜೀವದ ಪುಸ್ತಕದಲ್ಲಿ ಬರೆಯಲ್ಪಟ್ಟದ್ದಾಗಿ ಕಂಡುಬರಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.

ಪಾದಟಿಪ್ಪಣಿ