ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಕಟನೆ 2:1-29

2  “ಎಫೆಸದಲ್ಲಿರುವ ಸಭೆಯ ದೂತನಿಗೆ ಬರೆ: ಏಳು ನಕ್ಷತ್ರಗಳನ್ನು ಬಲಗೈಯಲ್ಲಿ ಹಿಡಿದುಕೊಂಡು ಚಿನ್ನದ ಏಳು ದೀಪಸ್ತಂಭಗಳ ಮಧ್ಯೆ ನಡೆದಾಡುವವನು ಹೇಳುವುದೇನೆಂದರೆ,  ‘ನಿನ್ನ ಕ್ರಿಯೆಗಳನ್ನೂ ನಿನ್ನ ಪ್ರಯಾಸವನ್ನೂ ತಾಳ್ಮೆಯನ್ನೂ ನಾನು ಬಲ್ಲೆನು; ನೀನು ಕೆಟ್ಟ ಜನರನ್ನು ಸಹಿಸಿಕೊಳ್ಳಲಾರೆ ಮತ್ತು ಅಪೊಸ್ತಲರಲ್ಲದಿದ್ದರೂ ತಾವು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷೆಗೆ ಒಳಪಡಿಸಿ ಅವರು ಸುಳ್ಳುಗಾರರೆಂದು ಕಂಡುಕೊಂಡಿ.  ನೀನು ತಾಳ್ಮೆಯನ್ನು ಸಹ ತೋರಿಸುತ್ತಿದ್ದೀ ಮತ್ತು ನನ್ನ ಹೆಸರಿನ ನಿಮಿತ್ತ ಕಷ್ಟಗಳನ್ನು ಸಹಿಸಿಕೊಂಡಿದ್ದೀ, ಬೇಸರಗೊಳ್ಳಲಿಲ್ಲ.  ಹಾಗಿದ್ದರೂ, ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟುಬಿಟ್ಟಿದ್ದೀ ಎಂದು ನಿನ್ನ ವಿರುದ್ಧವಾಗಿ ತಪ್ಪುಹೊರಿಸುತ್ತೇನೆ.  “ ‘ಆದುದರಿಂದ, ನೀನು ಯಾವುದರಿಂದ ಬಿದ್ದಿದ್ದೀಯೊ ಅದನ್ನು ಜ್ಞಾಪಿಸಿಕೊಂಡು ಪಶ್ಚಾತ್ತಾಪಪಡು; ನೀನು ಮೊದಲು ಮಾಡುತ್ತಿದ್ದ ಕಾರ್ಯಗಳನ್ನು ಮಾಡು. ನೀನು ಹೀಗೆ ಮಾಡದಿದ್ದರೆ ನಾನು ನಿನ್ನ ಬಳಿಗೆ ಬರುತ್ತೇನೆ ಮತ್ತು ನೀನು ಪಶ್ಚಾತ್ತಾಪಪಡದಿದ್ದರೆ ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದುಹಾಕುವೆನು.  ಆದರೂ, ಒಂದು ವಿಷಯ ನಿನ್ನಲ್ಲಿ ಉಂಟು; ಅದೇನೆಂದರೆ, ನಾನು ದ್ವೇಷಿಸುವಂಥ ನಿಕೊಲಾಯನ ಪಂಥದ ಕೃತ್ಯಗಳನ್ನು ನೀನೂ ದ್ವೇಷಿಸುತ್ತೀ.  ಪವಿತ್ರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ: ಜಯಿಸುವವನಿಗೆ ನಾನು ದೇವರ ಪರದೈಸಿನಲ್ಲಿರುವ ಜೀವವೃಕ್ಷದಿಂದ ತಿನ್ನುವುದಕ್ಕೆ ಕೊಡುವೆನು.’  “ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಬರೆ: ‘ಮೊದಲನೆಯವನೂ ಕೊನೆಯವನೂ’ ಸತ್ತವನಾಗಿದ್ದು ಪುನಃ ಜೀವಿತನಾದವನೂ ಹೇಳುವುದೇನೆಂದರೆ,  ‘ನಾನು ನಿನ್ನ ಸಂಕಟವನ್ನೂ ಬಡತನವನ್ನೂ ಬಲ್ಲೆನು. ಆದರೆ ನೀನು ಐಶ್ವರ್ಯವಂತನಾಗಿದ್ದೀ. ಮಾತ್ರವಲ್ಲ, ಯೆಹೂದ್ಯರೆಂದು ಹೇಳಿಕೊಳ್ಳುವವರ ದೇವದೂಷಣೆಯನ್ನೂ ನಾನು ಬಲ್ಲೆನು. ಆದರೆ ಅವರು ಯೆಹೂದ್ಯರಲ್ಲ, ಸೈತಾನನ ಸಭಾಮಂದಿರವಾಗಿದ್ದಾರೆ. 10  ನೀನು ಅನುಭವಿಸಲಿಕ್ಕಿರುವ ವಿಷಯಗಳ ಕುರಿತು ಹೆದರಬೇಡ. ಇಗೋ, ನೀವು ಪೂರ್ಣವಾಗಿ ಪರೀಕ್ಷಿಸಲ್ಪಡುವಂತೆ ಮತ್ತು ಹತ್ತು ದಿನಗಳ ವರೆಗೆ ನಿಮಗೆ ಸಂಕಟವಿರುವಂತೆ ಪಿಶಾಚನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಗೆ ಹಾಕುತ್ತಾ ಇರುವನು. ಮರಣದ ತನಕವೂ ನಂಬಿಗಸ್ತನಾಗಿರು, ಆಗ ನಾನು ನಿನಗೆ ಜೀವದ ಕಿರೀಟ​ವನ್ನು ಕೊಡುವೆನು. 11  ಪವಿತ್ರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ: ಜಯಿಸುವವನಿಗೆ ಎರಡನೆಯ ಮರಣದಿಂದ ಯಾವುದೇ ಹಾನಿಯಾಗುವುದಿಲ್ಲ.’ 12  “ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಬರೆ: ಹರಿತವಾದ ಉದ್ದ ಇಬ್ಬಾಯಿ ಕತ್ತಿಯನ್ನು ಹೊಂದಿರುವವನು ಹೇಳುವುದೇನೆಂದರೆ, 13  ‘ನೀನು ಎಲ್ಲಿ ವಾಸಿಸುತ್ತಿದ್ದೀ ಎಂಬುದನ್ನು ನಾನು ಬಲ್ಲೆನು; ಅದು ಸೈತಾನನ ಸಿಂಹಾಸನವಿರುವ ಸ್ಥಳವಾಗಿದೆ. ಆದರೂ, ನೀನು ನನ್ನ ಹೆಸರನ್ನು ಬಿಗಿಯಾಗಿ ಹಿಡಿದುಕೊಂಡಿದ್ದೀ ಮತ್ತು ಸೈತಾನನು ಎಲ್ಲಿ ವಾಸಿಸುತ್ತಿದ್ದಾನೊ ಅಲ್ಲಿ ನಿನ್ನ ಪಕ್ಕದಲ್ಲಿ ನನ್ನ ಸಾಕ್ಷಿಯೂ ನಂಬಿಗಸ್ತನೂ ಆಗಿದ್ದ ಅಂತಿಪನು ಕೊಲ್ಲಲ್ಪಟ್ಟ ದಿನಗಳಲ್ಲಿಯೂ ನೀನು ನನ್ನಲ್ಲಿದ್ದ ನಿನ್ನ ನಂಬಿಕೆಯನ್ನು ಅಲ್ಲಗಳೆಯಲಿಲ್ಲ. 14  “ ‘ಹಾಗಿದ್ದರೂ, ನಿನಗೆ ವಿರುದ್ಧವಾಗಿ ಹೇಳಲು ನನಗೆ ಕೆಲವು ವಿಷಯಗಳಿವೆ. ಅದೇನೆಂದರೆ, ವಿಗ್ರಹಗಳಿಗೆ ಅರ್ಪಣೆ​ಮಾಡಿದ ಪದಾರ್ಥಗಳನ್ನು ತಿನ್ನುವಂತೆಯೂ ಜಾರತ್ವಮಾಡುವಂತೆಯೂ ಇಸ್ರಾಯೇಲ್ಯರ ಮುಂದೆ ಎಡವುಗಲ್ಲನ್ನು ಹಾಕುವಂತೆ ಬಾಲಾಕನಿಗೆ ಬೋಧಿಸಿದ ಬಿಳಾಮನ ಬೋಧನೆಯನ್ನು ಬಿಗಿಯಾಗಿ ಹಿಡಿದು​ಕೊಂಡಿರುವವರು ನಿನ್ನಲ್ಲಿದ್ದಾರೆ. 15  ಹಾಗೆಯೇ, ನಿಕೊಲಾಯನ ಪಂಥದ ಬೋಧನೆಯನ್ನು ಬಿಗಿಯಾಗಿ ಹಿಡಿದುಕೊಂಡಿರುವವರು ಸಹ ನಿನ್ನಲ್ಲಿದ್ದಾರೆ. 16  ಆದುದರಿಂದ ಪಶ್ಚಾತ್ತಾಪಪಡು. ನೀನು ಹಾಗೆ ಮಾಡದಿದ್ದರೆ ನಾನು ಬೇಗನೆ ನಿನ್ನ ಬಳಿಗೆ ಬರುವೆನು ಮತ್ತು ನನ್ನ ಬಾಯಿಯ ಉದ್ದವಾದ ಕತ್ತಿಯಿಂದ ಅವರೊಂದಿಗೆ ಯುದ್ಧಮಾಡುವೆನು. 17  “ ‘ಪವಿತ್ರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ: ಜಯಿಸುವವನಿಗೆ ಬಚ್ಚಿಟ್ಟ ಮನ್ನದಲ್ಲಿ ಸ್ವಲ್ಪವನ್ನೂ ಒಂದು ಬಿಳೀ ಉರುಟುಕಲ್ಲನ್ನೂ ಕೊಡುವೆನು; ಆ ಉರುಟುಕಲ್ಲಿನ ಮೇಲೆ ಒಂದು ಹೊಸ ಹೆಸರು ಬರೆಯಲ್ಪಟ್ಟಿರುತ್ತದೆ ಮತ್ತು ಅದನ್ನು ಪಡೆಯುವವನಿಗಲ್ಲದೆ ಇನ್ನಾರಿಗೂ ಆ ಹೆಸರು ತಿಳಿಯದು.’ 18  “ಥುವತೈರದಲ್ಲಿರುವ ಸಭೆಯ ದೂತನಿಗೆ ಬರೆ: ಅಗ್ನಿಜ್ವಾಲೆಯಂಥ ಕಣ್ಣುಗಳನ್ನೂ ಶುದ್ಧ ತಾಮ್ರದಂಥ ಪಾದಗಳನ್ನೂ ಹೊಂದಿರುವ ದೇವರ ಮಗನು ಹೇಳುವುದೇನೆಂದರೆ, 19  ‘ನಾನು ನಿನ್ನ ಕ್ರಿಯೆಗಳನ್ನೂ ನಿನ್ನ ಪ್ರೀತಿಯನ್ನೂ ನಂಬಿಕೆಯನ್ನೂ ಶುಶ್ರೂಷೆಯನ್ನೂ ತಾಳ್ಮೆಯನ್ನೂ ಬಲ್ಲೆನು; ನಿನ್ನ ಇತ್ತೀಚಿಗಿನ ಕ್ರಿಯೆಗಳು ಹಿಂದಿನ ಕ್ರಿಯೆಗಳಿಗಿಂತ ಹೆಚ್ಚಾದವುಗಳಾಗಿವೆ ಎಂಬುದೂ ನನಗೆ ಗೊತ್ತು. 20  “ ‘ಹಾಗಿದ್ದರೂ, ನಿನಗೆ ವಿರುದ್ಧವಾಗಿ ಹೇಳಲು ಒಂದು ವಿಷಯವಿದೆ; ಅದೇನೆಂದರೆ, ತನ್ನನ್ನು ಪ್ರವಾದಿನಿ ಎಂದು ಹೇಳಿಕೊಳ್ಳುತ್ತಿರುವ ಈಜೆಬೇಲ್‌ ಎಂಬ ಆ ಸ್ತ್ರೀಯನ್ನು ನೀನು ಸಹಿಸಿಕೊಂಡಿದ್ದೀ ಮತ್ತು ಜಾರತ್ವಮಾಡುವಂತೆಯೂ ವಿಗ್ರಹಗಳಿಗೆ ಅರ್ಪಣೆಮಾಡಿದ ಪದಾರ್ಥಗಳನ್ನು ತಿನ್ನುವಂತೆಯೂ ಅವಳು ನನ್ನ ದಾಸರಿಗೆ ಬೋಧಿಸುತ್ತಾಳೆ ಹಾಗೂ ಅವರನ್ನು ದಾರಿತಪ್ಪಿಸುತ್ತಾಳೆ. 21  ನಾನು ಅವಳಿಗೆ ಪಶ್ಚಾತ್ತಾಪಪಡಲು ಸಮಯವನ್ನು ಕೊಟ್ಟೆನು, ಆದರೆ ತನ್ನ ಜಾರತ್ವದ ವಿಷಯದಲ್ಲಿ ಪಶ್ಚಾತ್ತಾಪಪಡಲು ಅವಳಿಗೆ ಮನಸ್ಸಿಲ್ಲ. 22  ನೋಡು, ನಾನು ಅವಳನ್ನು ರೋಗಶಯ್ಯೆಗೆ ಮತ್ತು ಅವಳೊಂದಿಗೆ ವ್ಯಭಿಚಾರಮಾಡುವವರು ಅವಳು ಪ್ರೇರೇಪಿಸಿದ ಕ್ರಿಯೆಗಳಿಗಾಗಿ ಪಶ್ಚಾತ್ತಾಪಪಡದಿದ್ದರೆ ಅವರನ್ನು ಮಹಾ ಸಂಕಟಕ್ಕೆ ಎಸೆಯಲಿದ್ದೇನೆ. 23  ಅವಳ ಮಕ್ಕಳನ್ನು ಮಾರಕ ವ್ಯಾಧಿಯಿಂದ ಕೊಲ್ಲುವೆನು; ಆಗ ಆಳವಾದ ಭಾವನೆಗಳನ್ನೂ ಆಲೋಚನೆಗಳನ್ನೂ * ಪರಿಶೋಧಿಸುವವನು ನಾನೇ ಆಗಿದ್ದೇನೆ ಎಂಬುದು ಎಲ್ಲ ಸಭೆಗಳಿಗೆ ಗೊತ್ತಾಗುವುದು ಮತ್ತು ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಅವನವನ ಕ್ರಿಯೆಗಳಿಗನುಸಾರ ಪ್ರತಿಫಲ ಕೊಡುವೆನು. 24  “ ‘ಆದರೆ ಥುವತೈರದಲ್ಲಿರುವ ಉಳಿದವರಿಗೆ ಅಂದರೆ ಈ ಬೋಧನೆಯನ್ನು ಹೊಂದದಿರುವವರೆಲ್ಲರಿಗೆ, “ಸೈತಾನನ ಅಗಾಧ ವಿಷಯಗಳು” ಎಂದು ಅವರು ಹೇಳುವುದನ್ನು ತಿಳಿಯದಿದ್ದವರಿಗೆ ನಾನು ಹೇಳುವುದೇನೆಂದರೆ, ನಾನು ನಿಮ್ಮ ಮೇಲೆ ಬೇರೆ ಯಾವುದೇ ಭಾರವನ್ನು ಹಾಕುವುದಿಲ್ಲ. 25  ಹಾಗಿದ್ದರೂ ನಾನು ಬರುವ ತನಕ ನಿಮಗಿರುವುದನ್ನು ಬಿಗಿಯಾಗಿ ​ಹಿಡಿದುಕೊಳ್ಳಿರಿ. 26  ಜಯಿಸುವವನಿಗೆ ಮತ್ತು ಕೊನೆಯ ವರೆಗೆ ನನ್ನ ಕ್ರಿಯೆಗಳನ್ನು ಕೈಕೊಂಡು ನಡೆಯುವವನಿಗೆ ನಾನು ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು. 27  ಅವನು ಕಬ್ಬಿಣದ ಕೋಲಿನಿಂದ ಜನರನ್ನು ಆಳುವನು; ಮಣ್ಣಿನ ಮಡಿಕೆಗಳಂತೆ ಅವರು ಚೂರುಚೂರಾಗಿ ಒಡೆಯಲ್ಪಡುವರು. ನನಗೆ ತಂದೆಯಿಂದ ಅಧಿಕಾರವು ಕೊಡಲ್ಪಟ್ಟಿರುವಂತೆ ಅವನಿಗೂ ಕೊಡುವೆನು 28  ಮತ್ತು ನಾನು ಅವನಿಗೆ ಉದಯ ನಕ್ಷತ್ರವನ್ನು ಕೊಡುವೆನು. 29  ಪವಿತ್ರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.’

ಪಾದಟಿಪ್ಪಣಿ

ಪ್ರಕ 2:23  ಅಕ್ಷರಾರ್ಥವಾಗಿ, “ಮೂತ್ರಜನಕಾಂಗಗಳನ್ನೂ ಹೃದಯಗಳನ್ನೂ.”