ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಕಟನೆ 19:1-21

19  ಇವುಗಳಾದ ಮೇಲೆ ನಾನು ಸ್ವರ್ಗದಲ್ಲಿ ಒಂದು ಮಹಾ ಸಮೂಹದ ಧ್ವನಿಯಂಥ ಗಟ್ಟಿಯಾದ ಒಂದು ಧ್ವನಿಯನ್ನು ಕೇಳಿಸಿಕೊಂಡೆನು. ಅವರು, “ಜನರೇ, ಯಾಹುವನ್ನು ಸ್ತುತಿಸಿರಿ! ರಕ್ಷಣೆಯೂ ಮಹಿಮೆಯೂ ಶಕ್ತಿಯೂ ನಮ್ಮ ದೇವರಿಗೆ ಸೇರಿದ್ದಾಗಿದೆ,  ಏಕೆಂದರೆ ಆತನ ನ್ಯಾಯತೀರ್ಪುಗಳು ಸತ್ಯವೂ ನೀತಿಯುತವೂ ಆಗಿವೆ. ತನ್ನ ಜಾರತ್ವದಿಂದ ಭೂಮಿಯನ್ನು ಭ್ರಷ್ಟಗೊಳಿಸಿದ ಆ ಮಹಾ ವೇಶ್ಯೆಯ ಮೇಲೆ ಆತನು ನ್ಯಾಯತೀರ್ಪನ್ನು ಜಾರಿಗೆ ತಂದಿದ್ದಾನೆ ಮತ್ತು ಅವಳ ಕೈ ಸುರಿಸಿದ ತನ್ನ ದಾಸರ ರಕ್ತಕ್ಕೆ ಪ್ರತಿಯಾಗಿ ಸೇಡುತೀರಿಸಿದ್ದಾನೆ” ಎಂದು ಹೇಳಿದರು.  ಆ ಕೂಡಲೆ ಎರಡನೆಯ ಬಾರಿ ಅವರು, “ಜನರೇ, ಯಾಹುವನ್ನು ಸ್ತುತಿಸಿರಿ! ಅವಳ ದಹನದಿಂದ ಉಂಟಾಗುವ ಹೊಗೆಯು ಸದಾಸರ್ವದಾ ಏರಿಹೋಗುತ್ತಾ ಇರುವುದು” ಎಂದು ಹೇಳಿದರು.  ಆಗ ಇಪ್ಪತ್ತನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ ಸಿಂಹಾಸನದ ಮೇಲೆ ಕುಳಿತುಕೊಂಡಿರುವ ದೇವರಿಗೆ ಪ್ರಣಾಮಮಾಡಿ ಆತನನ್ನು ಆರಾಧಿಸುತ್ತಾ, “ಆಮೆನ್‌! ಜನರೇ, ಯಾಹುವನ್ನು ಸ್ತುತಿಸಿರಿ!” ಎಂದು ಹೇಳಿದರು.  ಇದಲ್ಲದೆ, ಸಿಂಹಾಸನದ ಕಡೆಯಿಂದ ಬಂದ ಒಂದು ಧ್ವನಿಯು, “ದೇವರಿಗೆ ಭಯಪಡುವ ಚಿಕ್ಕವರೇ, ದೊಡ್ಡವರೇ, ಆತನ ಎಲ್ಲ ದಾಸರೇ, ಆತನನ್ನು ಸ್ತುತಿಸುತ್ತಾ ಇರಿ” ಎಂದು ಹೇಳಿತು.  ಜನರ ಮಹಾ ಸಮೂಹದ ಧ್ವನಿಯಂತೆಯೂ ಅನೇಕ ನೀರುಗಳ ಘೋಷದಂತೆಯೂ ಗಟ್ಟಿಯಾದ ಗುಡುಗುಗಳ ಶಬ್ದದಂತೆಯೂ ಇದ್ದ ಒಂದು ಶಬ್ದವನ್ನು ನಾನು ಕೇಳಿಸಿಕೊಂಡೆನು. ಅವರು “ಜನರೇ, ಯಾಹುವನ್ನು ಸ್ತುತಿಸಿರಿ, ಏಕೆಂದರೆ ಸರ್ವಶಕ್ತನಾದ ನಮ್ಮ ದೇವರಾದ ಯೆಹೋವನು ರಾಜನಾಗಿ ಆಳಲು ಆರಂಭಿಸಿದ್ದಾನೆ.  ಹರ್ಷಿಸೋಣ, ಆನಂದಿಸೋಣ ಮತ್ತು ಆತನಿಗೆ ಮಹಿಮೆಯನ್ನು ಸಲ್ಲಿಸೋಣ, ಏಕೆಂದರೆ ಕುರಿಮರಿಯ ವಿವಾಹವು ಸಮೀಪಿಸಿದೆ ಹಾಗೂ ಅವನ ಪತ್ನಿಯು ತನ್ನನ್ನು ಸಿದ್ಧಪಡಿಸಿಕೊಂಡಿದ್ದಾಳೆ.  ಹೌದು, ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳಲು ಅವಳಿಗೆ ಅನುಗ್ರಹಿಸಲ್ಪಟ್ಟಿದೆ, ಏಕೆಂದರೆ ಆ ನಯವಾದ ನಾರುಮಡಿಯು ಪವಿತ್ರ ಜನರ ನೀತಿಯ ಕಾರ್ಯಗಳನ್ನು ಸೂಚಿಸುತ್ತದೆ” ಎಂದು ಹೇಳಿದರು.  ಅವನು ನನಗೆ, “ಬರೆ: ಕುರಿಮರಿಯ ವಿವಾಹದ ಸಂಧ್ಯಾ ಭೋಜನಕ್ಕೆ ಆಮಂತ್ರಿಸಲ್ಪಟ್ಟವರು ಸಂತೋಷಿತರು” ಎಂದು ಹೇಳಿದನು. ಇದಲ್ಲದೆ ಅವನು ನನಗೆ, “ಇವು ದೇವರ ಸತ್ಯ ವಚನಗಳಾಗಿವೆ” ಎಂದೂ ತಿಳಿಸಿದನು. 10  ಆಗ ನಾನು ಅವನನ್ನು ಆರಾಧಿಸಲಿಕ್ಕಾಗಿ ಅವನ ಪಾದಗಳ ಮುಂದೆ ಬಿದ್ದೆನು. ಆದರೆ ಅವನು ನನಗೆ, “ಜಾಗ್ರತೆ! ಹಾಗೆ ಮಾಡಬೇಡ! ನಾನು ನಿನಗೂ ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳುವ ಕೆಲಸವಿರುವ ನಿನ್ನ ಸಹೋದರರಿಗೂ ಜೊತೆ ದಾಸನಾಗಿದ್ದೇನೆ, ಅಷ್ಟೇ. ದೇವರನ್ನು ಆರಾಧಿಸು, ಏಕೆಂದರೆ ಯೇಸುವಿನ ವಿಷಯವಾಗಿ ಸಾಕ್ಷಿನೀಡುವುದೇ ಪ್ರವಾದಿಸುವುದನ್ನು ಪ್ರೇರಿಸುತ್ತದೆ” ಎಂದು ಹೇಳಿದನು. 11  ಸ್ವರ್ಗವು ತೆರೆದಿರುವುದನ್ನು ನಾನು ನೋಡಿದೆನು; ಇಗೋ, ಒಂದು ಬಿಳೀ ಕುದುರೆ. ಅದರ ಮೇಲೆ ಕುಳಿತುಕೊಂಡಿದ್ದವನು ನಂಬಿಗಸ್ತನೂ ಸತ್ಯವಂತನೂ ಎಂದು ಕರೆಯಲ್ಪಡುತ್ತಾನೆ; ಅವನು ನ್ಯಾಯತೀರಿಸುವುದು ಮತ್ತು ಯುದ್ಧವನ್ನು ಮುಂದುವರಿಸುವುದು ನೀತಿಯಿಂದಲೇ. 12  ಅವನ ಕಣ್ಣುಗಳು ಅಗ್ನಿಯ ಜ್ವಾಲೆಯಾಗಿವೆ ಮತ್ತು ಅವನ ತಲೆಯ ಮೇಲೆ ಅನೇಕ ಮುಕುಟಗಳಿವೆ. ಕೇವಲ ಅವನಿಗೇ ಹೊರತು ಮತ್ತಾರಿಗೂ ತಿಳಿಯದ ಒಂದು ಲಿಖಿತ ಹೆಸರು ಅವನಿಗಿದೆ. 13  ಅವನು ರಕ್ತದಿಂದ ಪ್ರೋಕ್ಷಿತವಾದ ಮೇಲಂಗಿಯನ್ನು ಧರಿಸಿಕೊಂಡಿದ್ದಾನೆ ಮತ್ತು ಅವನು ದೇವರ ವಾಕ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತಾನೆ. 14  ಇದಲ್ಲದೆ, ಸ್ವರ್ಗದಲ್ಲಿದ್ದ ಸೈನ್ಯಗಳು ಬಿಳೀ ಕುದುರೆಗಳ ಮೇಲೆ ಅವನನ್ನು ಹಿಂಬಾಲಿಸುತ್ತಿದ್ದವು; ಅವರು ಬಿಳಿಯ, ನಿರ್ಮಲವಾದ, ನಯವಾದ ನಾರುಮಡಿಯನ್ನು ಧರಿಸಿಕೊಂಡಿದ್ದರು. 15  ಜನಾಂಗಗಳನ್ನು ಹೊಡೆಯುವುದಕ್ಕಾಗಿ ಅವನ ಬಾಯೊಳಗಿಂದ ಹರಿತವಾದ ಒಂದು ಉದ್ದ ಕತ್ತಿಯು ಹೊರಚಾಚುತ್ತದೆ; ಅವನು ಅವರನ್ನು ಕಬ್ಬಿಣದ ಕೋಲಿನಿಂದ ನಡೆಸುವನು. ಅವನು ಸರ್ವಶಕ್ತನಾದ ದೇವರ ಉಗ್ರ ಕೋಪದ ದ್ರಾಕ್ಷಿಯ ತೊಟ್ಟಿಯಲ್ಲಿರುವುದನ್ನು ಸಹ ತುಳಿಯುತ್ತಾನೆ. 16  ಅವನ ಮೇಲಂಗಿಯ ಮೇಲೆ, ಅಂದರೆ ಅವನ ತೊಡೆಯ ಮೇಲೆ ರಾಜರ ರಾಜನು ಮತ್ತು ಕರ್ತರ ಕರ್ತನು ಎಂಬ ಹೆಸರು ಬರೆಯಲ್ಪಟ್ಟಿದೆ. 17  ಇದಲ್ಲದೆ ಒಬ್ಬ ದೇವದೂತನು ಸೂರ್ಯನಲ್ಲಿ ನಿಂತುಕೊಂಡಿರುವುದನ್ನು ಸಹ ನಾನು ನೋಡಿದೆನು. ಅವನು ಗಟ್ಟಿಯಾದ ಧ್ವನಿಯಿಂದ ಕೂಗುತ್ತಾ ಆಕಾಶಮಧ್ಯದಲ್ಲಿ ಹಾರಾಡುವ ಎಲ್ಲ ಪಕ್ಷಿಗಳಿಗೆ, “ಇಲ್ಲಿ ಬನ್ನಿರಿ, ದೇವರ ಮಹಾ ಸಂಧ್ಯಾ ಭೋಜನಕ್ಕೆ ಒಟ್ಟುಗೂಡಿರಿ; 18  ರಾಜರ ಮಾಂಸಲ ಭಾಗಗಳನ್ನೂ ಮಿಲಿಟರಿ ಅಧಿಪತಿಗಳ ಮಾಂಸಲ ಭಾಗಗಳನ್ನೂ ಬಲಿಷ್ಠರ ಮಾಂಸಲ ಭಾಗಗಳನ್ನೂ ಕುದುರೆಗಳ ಮತ್ತು ಅವುಗಳ ಮೇಲೆ ಕುಳಿತುಕೊಂಡಿರುವವರ ಮಾಂಸಲ ಭಾಗಗಳನ್ನೂ ಸ್ವತಂತ್ರರೂ ದಾಸರೂ ಚಿಕ್ಕವರೂ ದೊಡ್ಡವರೂ ಇವರೆಲ್ಲರ ಮಾಂಸಲ ಭಾಗಗಳನ್ನೂ ತಿನ್ನುವುದಕ್ಕೆ ಬನ್ನಿರಿ” ಎಂದು ಹೇಳಿದನು. 19  ಆ ಕಾಡುಮೃಗವೂ ಭೂರಾಜರೂ ಅವರ ಸೈನ್ಯಗಳೂ ಆ ಕುದುರೆಯ ಮೇಲೆ ಕುಳಿತುಕೊಂಡಿದ್ದವನೊಂದಿಗೂ ಅವನ ಸೈನ್ಯದೊಂದಿಗೂ ಯುದ್ಧಮಾಡುವುದಕ್ಕಾಗಿ ಕೂಡಿಬಂದಿರುವುದನ್ನು ನಾನು ನೋಡಿದೆನು. 20  ಕಾಡುಮೃಗವು ಸೆರೆಹಿಡಿಯಲ್ಪಟ್ಟಿತು ಮತ್ತು ಕಾಡುಮೃಗದ ಮುಂದೆ ಸೂಚಕಕಾರ್ಯಗಳನ್ನು ಮಾಡಿ ಕಾಡುಮೃಗದ ಗುರುತನ್ನು ಹೊಂದಿದವರನ್ನೂ ಅದರ ವಿಗ್ರಹಕ್ಕೆ ಆರಾಧನೆ ಸಲ್ಲಿಸುವವರನ್ನೂ ಮರುಳುಗೊಳಿಸಿದ ಸುಳ್ಳು ಪ್ರವಾದಿಯೂ ಅದರೊಂದಿಗೆ ಹಿಡಿಯಲ್ಪಟ್ಟನು. ಅವರಿಬ್ಬರು ಜೀವದಿಂದಿರುವಾಗಲೇ ಗಂಧಕದಿಂದ ಉರಿಯುವ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟರು. 21  ಉಳಿದವರು ಕುದುರೆಯ ಮೇಲೆ ಕುಳಿತುಕೊಂಡಿದ್ದವನ ಬಾಯಿಂದ ಹೊರಟುಬಂದ ಉದ್ದವಾದ ಕತ್ತಿಯಿಂದ ಕೊಲ್ಲಲ್ಪಟ್ಟರು. ಎಲ್ಲ ಪಕ್ಷಿಗಳು ಅವರ ಮಾಂಸಲ ಭಾಗಗಳನ್ನು ಹೊಟ್ಟೆ ತುಂಬ ತಿಂದವು.

ಪಾದಟಿಪ್ಪಣಿ