ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಕಟನೆ 17:1-18

17  ಇದಲ್ಲದೆ ಏಳು ಬೋಗುಣಿಗಳನ್ನು ಹಿಡಿದುಕೊಂಡಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನೊಂದಿಗೆ ಮಾತಾಡುತ್ತಾ, “ಬಾ, ಅನೇಕ ನೀರುಗಳ ಮೇಲೆ ಕುಳಿತುಕೊಳ್ಳುವ ಮಹಾ ವೇಶ್ಯೆಯ ಮೇಲೆ ಬರುವ ನ್ಯಾಯತೀರ್ಪನ್ನು ನಿನಗೆ ತೋರಿಸುತ್ತೇನೆ.  ಅವಳೊಂದಿಗೆ ಭೂರಾಜರು ಜಾರತ್ವಮಾಡಿದರು ಮತ್ತು ಭೂನಿವಾಸಿಗಳು ಅವಳ ಜಾರತ್ವದ ದ್ರಾಕ್ಷಾಮದ್ಯವನ್ನು ಕುಡಿದು ಮತ್ತರಾಗುವಂತೆ ಮಾಡಲ್ಪಟ್ಟರು” ಎಂದು ಹೇಳಿದನು.  ಅವನು ಪವಿತ್ರಾತ್ಮದ ಶಕ್ತಿಯಿಂದ ನನ್ನನ್ನು ಒಂದು ಅರಣ್ಯಕ್ಕೆ ಕೊಂಡೊ​ಯ್ದನು. ಅಲ್ಲಿ ನಾನು ಕಡುಗೆಂಪು ಬಣ್ಣದ ಕಾಡುಮೃಗದ ಮೇಲೆ ಕುಳಿತುಕೊಂಡಿದ್ದ ಒಬ್ಬ ಸ್ತ್ರೀಯನ್ನು ನೋಡಿದೆನು; ಆ ಕಾಡುಮೃಗದ ಮೇಲೆಲ್ಲ ದೇವದೂಷಣೆಯ ಹೆಸರುಗಳಿದ್ದವು ಮತ್ತು ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು.  ಆ ಸ್ತ್ರೀಯು ನೇರಳೆ ಮತ್ತು ಕಡುಗೆಂಪು ಬಣ್ಣದ ವಸ್ತ್ರಗಳನ್ನು ಧರಿಸಿಕೊಂಡು ಚಿನ್ನ, ಅಮೂಲ್ಯವಾದ ರತ್ನ ಮತ್ತು ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳು; ಅವಳ ಕೈಯಲ್ಲಿ ಒಂದು ಚಿನ್ನದ ಬಟ್ಟಲು ಇತ್ತು. ಅದು ಅಸಹ್ಯಕರವಾದ ವಿಷಯಗಳಿಂದಲೂ ಅವಳ ಜಾರತ್ವದ ಅಶುದ್ಧ ವಿಷಯಗಳಿಂದಲೂ ತುಂಬಿತ್ತು.  ಅವಳ ಹಣೆಯ ಮೇಲೆ ಒಂದು ಹೆಸರು, ಒಂದು ರಹಸ್ಯವು ಬರೆಯಲ್ಪಟ್ಟಿತ್ತು. ಅದೇನೆಂದರೆ, “ಮಹಾ ಬಾಬೆಲ್‌, ವೇಶ್ಯೆಯರ ಮತ್ತು ಭೂಮಿಯ ಅಸಹ್ಯಕರವಾದ ವಿಷಯಗಳ ತಾಯಿ” ಎಂದಾಗಿತ್ತು.  ಇದಲ್ಲದೆ ಆ ಸ್ತ್ರೀಯು ಪವಿತ್ರ ಜನರ ರಕ್ತವನ್ನೂ ಯೇಸುವಿನ ಸಾಕ್ಷಿಗಳ ರಕ್ತವನ್ನೂ ಕುಡಿದು ಮತ್ತಳಾಗಿರುವುದನ್ನು ನಾನು ಕಂಡೆನು. ನಾನು ಅವಳನ್ನು ನೋಡಿದಾಗ ಮಹಾ ಆಶ್ಚರ್ಯದಿಂದ ಚಕಿತನಾದೆ.  ಆಗ ದೇವದೂತನು ನನಗೆ ಹೇಳಿದ್ದು: “ನೀನು ಆಶ್ಚರ್ಯಪಡುವುದೇಕೆ? ಆ ಸ್ತ್ರೀಯ ಕುರಿತಾಗಿಯೂ ಏಳು ತಲೆಗಳೂ ಹತ್ತು ಕೊಂಬುಗಳೂ ಉಳ್ಳದ್ದಾಗಿದ್ದು ಅವಳನ್ನು ಹೊತ್ತುಕೊಂಡಿರುವ ಕಾಡುಮೃಗದ ಕುರಿತಾಗಿಯೂ ರಹಸ್ಯವನ್ನು ನಾನು ನಿನಗೆ ತಿಳಿಸುತ್ತೇನೆ.  ನೀನು ನೋಡಿದ ​ಕಾಡುಮೃಗವು ಮೊದಲು ಇತ್ತು, ಈಗ ಇಲ್ಲ, ಆದರೂ ಅಗಾಧ ಸ್ಥಳದಿಂದ ಇನ್ನೇನು ಏರಿಬರಲಿಕ್ಕಿದೆ; ಮತ್ತು ಅದು ನಾಶನಕ್ಕೆ ಹೋಗಲಿಕ್ಕಿದೆ. ಯಾವ ರೀತಿಯಲ್ಲಿ ಆ ಕಾಡು​ಮೃಗವು ಮೊದಲು ಇತ್ತು, ಈಗ ಇಲ್ಲ, ಆದರೂ ಭವಿಷ್ಯತ್ತಿನಲ್ಲಿ ಇರುವುದು ಎಂಬುದನ್ನು ನೋಡುವಾಗ ಭೂನಿವಾಸಿಗಳು ಮೆಚ್ಚುಗೆಯಿಂದ ಆಶ್ಚರ್ಯಪಡುವರು; ಆದರೆ ಲೋಕದ ಆದಿಯಿಂದ ಅವರ ಹೆಸರುಗಳು ಜೀವದ ಸುರುಳಿಯಲ್ಲಿ ಬರೆಯಲ್ಪಟ್ಟಿರುವುದಿಲ್ಲ.  “ವಿವೇಕವು ಒಳಗೂಡಿರುವ ಬುದ್ಧಿಶಕ್ತಿಯ ಅಗತ್ಯವಿರುವುದು ಇಲ್ಲಿಯೇ: ಆ ಏಳು ತಲೆಗಳೆಂದರೆ ಆ ಸ್ತ್ರೀಯು ಯಾವುದರ ಮೇಲೆ ಕುಳಿತುಕೊಂಡಿದ್ದಾಳೋ ಆ ಏಳು ಬೆಟ್ಟಗಳು. 10  ಇದಲ್ಲದೆ ಏಳು ಮಂದಿ ರಾಜರುಗಳಿದ್ದಾರೆ: ಐದು ಮಂದಿ ಬಿದ್ದು​ಹೋಗಿ​ದ್ದಾರೆ, ಒಬ್ಬನು ಇದ್ದಾನೆ, ಮತ್ತೊಬ್ಬನು ಇನ್ನೂ ಬಂದಿಲ್ಲ, ಆದರೆ ಅವನು ಬಂದ ಮೇಲೆ ಸ್ವಲ್ಪಕಾಲ ಉಳಿಯಬೇಕು. 11  ಮೊದಲು ಇದ್ದು ಈಗ ಇಲ್ಲದಿರುವ ಕಾಡುಮೃಗವು ತಾನೇ ಎಂಟನೆಯ ರಾಜನು; ಅದು ಆ ಏಳರಿಂದ ಉಗಮಿಸುತ್ತದೆ ಮತ್ತು ನಾಶನಕ್ಕೆ ಹೋಗುತ್ತದೆ. 12  “ನೀನು ನೋಡಿದ ಆ ಹತ್ತು ಕೊಂಬುಗಳೆಂದರೆ ಇನ್ನೂ ರಾಜ್ಯವನ್ನು ಪಡೆದುಕೊಂಡಿರದ ಹತ್ತು ಮಂದಿ ರಾಜರು, ಆದರೆ ಅವರು ಒಂದು ತಾಸಿನ ವರೆಗೆ ಕಾಡುಮೃಗದೊಂದಿಗೆ ರಾಜರಾಗಿ ಆಳುವ ಅಧಿಕಾರವನ್ನು ಪಡೆದುಕೊಳ್ಳುತ್ತಾರೆ. 13  ಇವರು ಒಂದೇ ಯೋಚನೆಯುಳ್ಳವರಾಗಿದ್ದಾರೆ ಮತ್ತು ಇವರು ತಮ್ಮ ಶಕ್ತಿಯನ್ನೂ ಅಧಿಕಾರವನ್ನೂ ಕಾಡು​ಮೃಗಕ್ಕೆ ಕೊಡುತ್ತಾರೆ. 14  ಇವರು ಕುರಿ​ಮರಿಯೊಂದಿಗೆ ಯುದ್ಧಮಾಡುವರು, ಆದರೆ ಅವನು ಕರ್ತರ ಕರ್ತನೂ ರಾಜರ ರಾಜನೂ ಆಗಿರುವುದರಿಂದ ಕುರಿಮರಿಯು ಅವರನ್ನು ಜಯಿಸುವನು. ಮಾತ್ರವಲ್ಲದೆ, ಕರೆಯಲ್ಪಟ್ಟವರೂ ಆಯ್ದುಕೊಳ್ಳಲ್ಪಟ್ಟವರೂ ಅವನೊಂದಿಗೆ ನಂಬಿಗಸ್ತರಾಗಿರುವವರೂ ಜಯಿಸುವರು.” 15  ಅವನು ನನಗೆ, “ಆ ವೇಶ್ಯೆಯು ಕುಳಿತುಕೊಂಡಿರುವ ನೀನು ನೋಡಿದ ನೀರುಗಳೆಂದರೆ ಜನರು, ಸಮೂಹಗಳು, ಜನಾಂಗಗಳು ಮತ್ತು ಭಾಷೆಗಳು. 16  ನೀನು ನೋಡಿದ ಹತ್ತು ಕೊಂಬುಗಳು ಮತ್ತು ಕಾಡುಮೃಗವು ಆ ವೇಶ್ಯೆಯನ್ನು ದ್ವೇಷಿಸಿ ಅವಳನ್ನು ಗತಿಗೆಡಿಸಿ ನಗ್ನಳನ್ನಾಗಿ ಮಾಡಿ ಅವಳ ಮಾಂಸಲ ಭಾಗಗಳನ್ನು ತಿಂದು ಅವಳನ್ನು ಬೆಂಕಿಯಿಂದ ಪೂರ್ಣವಾಗಿ ಸುಟ್ಟುಬಿಡುವವು. 17  ಏಕೆಂದರೆ ದೇವರು ತನ್ನ ಯೋಚನೆಯನ್ನು ಮತ್ತು ಅವರ ಏಕ ಯೋಚನೆಯನ್ನು ಕಾರ್ಯ​ರೂಪಕ್ಕೆ ತರುವಂತೆ, ದೇವರ ಮಾತುಗಳು ನೆರವೇರಿಸಲ್ಪಟ್ಟದ್ದಾಗಿರುವ ತನಕ ಅವರು ತಮ್ಮ ರಾಜ್ಯವನ್ನು ಕಾಡುಮೃಗಕ್ಕೆ ಕೊಡುವಂತೆ ಇದನ್ನು ಅವರ ಹೃದಯಗಳಲ್ಲಿ ಹಾಕಿದನು. 18  ನೀನು ನೋಡಿದ ಆ ಸ್ತ್ರೀಯು ಭೂರಾಜರ ಮೇಲೆ ರಾಜ್ಯವನ್ನು ಹೊಂದಿರುವ ಒಂದು ಮಹಾ ನಗರವನ್ನು ಸೂಚಿಸುತ್ತಾಳೆ” ಎಂದು ಹೇಳಿದನು.

ಪಾದಟಿಪ್ಪಣಿ