ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಪ್ರಕಟನೆ 1:1-20

1  ಯೇಸು ಕ್ರಿಸ್ತನಿಂದ ಒಂದು ಪ್ರಕಟನೆ; ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸಲಿಕ್ಕಾಗಿ ದೇವರು ಈ ಪ್ರಕಟನೆಯನ್ನು ಅವನಿಗೆ ಕೊಟ್ಟನು. ಅವನು ತನ್ನ ದೂತನನ್ನು ಕಳುಹಿಸಿ ಅವನ ಮೂಲಕ ಅದನ್ನು ತನ್ನ ದಾಸನಾದ ಯೋಹಾನನಿಗೆ ಸಂಕೇತಗಳಲ್ಲಿ ಪ್ರಸ್ತುತಪಡಿಸಿದನು.  ಇವನು ದೇವರು ಕೊಟ್ಟ ವಾಕ್ಯಕ್ಕೂ ಯೇಸು ಕ್ರಿಸ್ತನು ಕೊಟ್ಟ ಸಾಕ್ಷಿಗೂ ತಾನು ನೋಡಿದ ಎಲ್ಲ ವಿಷಯಗಳಿಗೂ ಸಾಕ್ಷಿಯನ್ನು ನೀಡಿದನು.  ಈ ಪ್ರವಾದನ ವಾಕ್ಯಗಳನ್ನು ಗಟ್ಟಿಯಾಗಿ ಓದುವವನೂ ಕೇಳುವವರೂ ಅದರಲ್ಲಿ ಬರೆದಿರುವ ವಿಷಯಗಳನ್ನು ಕೈಕೊಂಡು ನಡೆಯುವವರೂ ಸಂತೋಷಿತರು; ಏಕೆಂದರೆ ನೇಮಿತ ಸಮಯವು ಸಮೀಪವಿದೆ.  ಏಷ್ಯಾ ಸೀಮೆಯಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನೆಂದರೆ, “ಇರುವಾತನು, ಇದ್ದಾತನು ಮತ್ತು ಬರುವಾತನಿಂದಲೂ” ಆತನ ಸಿಂಹಾಸನದ ಮುಂದೆ ಇರುವ ಏಳು ಆತ್ಮಗಳಿಂದಲೂ *  “ನಂಬಿಗಸ್ತ ಸಾಕ್ಷಿ,” “ಸತ್ತವರೊಳಗಿಂದ ಮೊದಲು ಎಬ್ಬಿಸಲ್ಪಟ್ಟವನು” ಮತ್ತು “ಭೂರಾಜರ ಪ್ರಭು” ಆಗಿರುವ ಯೇಸು ಕ್ರಿಸ್ತನಿಂದಲೂ ನಿಮಗೆ ಅಪಾತ್ರ ದಯೆಯೂ * ಶಾಂತಿಯೂ ಉಂಟಾಗಲಿ. ನಮ್ಮನ್ನು ಪ್ರೀತಿಸುವವನಿಗೆ ಮತ್ತು ತನ್ನ ಸ್ವಂತ ರಕ್ತದ ಮೂಲಕ ನಮ್ಮನ್ನು ನಮ್ಮ ಪಾಪಗಳಿಂದ ಬಿಡಿಸಿದವನಿಗೆ —⁠  ಅವನು ನಮ್ಮನ್ನು ಒಂದು ರಾಜ್ಯವನ್ನಾಗಿಯೂ ತನ್ನ ದೇವರು ಮತ್ತು ತಂದೆಗೆ ಯಾಜಕರನ್ನಾಗಿಯೂ ಮಾಡಿದನು —⁠ಹೌದು, ಅವನಿಗೆ ಸದಾಕಾಲಕ್ಕೂ ಮಹಿಮೆಯೂ ಬಲವೂ ಇರಲಿ. ಆಮೆನ್‌.  ಇಗೋ, ಅವನು ಮೇಘಗಳೊಂದಿಗೆ ಬರುತ್ತಾನೆ ಮತ್ತು ಪ್ರತಿಯೊಬ್ಬರ ಕಣ್ಣು ಅವನನ್ನು ಕಾಣುವುದು, ಅವನನ್ನು ಇರಿದವರು ಸಹ ಅವನನ್ನು ಕಾಣುವರು; ಭೂಮಿಯಲ್ಲಿರುವ ಎಲ್ಲ ಕುಲಗಳವರು ಅವನ ನಿಮಿತ್ತ ದುಃಖದಿಂದ ಎದೆಬಡಿದುಕೊಳ್ಳುವರು. ಹೌದು, ಆಮೆನ್‌.  “ನಾನು ಆಲ್ಫವೂ ಒಮೇಗವೂ * ಆಗಿದ್ದೇನೆ; ಇರುವಾತನು, ಇದ್ದಾತನು ಮತ್ತು ಬರುವಾತನೂ ಸರ್ವಶಕ್ತನೂ ಆಗಿದ್ದೇನೆ” ಎಂದು ಯೆಹೋವ ದೇವರು ಹೇಳುತ್ತಾನೆ.  ನಿಮ್ಮ ಸಹೋದರನೂ ಯೇಸುವಿನ ಸಂಗಡ ಸಂಕಟದಲ್ಲಿಯೂ ರಾಜ್ಯದಲ್ಲಿಯೂ ತಾಳ್ಮೆಯಲ್ಲಿಯೂ ನಿಮ್ಮೊಂದಿಗೆ ಪಾಲಿಗನಾಗಿರುವ ಯೋಹಾನನೆಂಬ ನಾನು ದೇವರ ಕುರಿತು ಮಾತಾಡಿದ್ದಕ್ಕಾಗಿ ಮತ್ತು ಯೇಸುವಿನ ಕುರಿತು ಸಾಕ್ಷಿನೀಡಿದ್ದಕ್ಕಾಗಿ ಪತ್ಮೋಸ್‌ ಎಂದು ಕರೆಯಲ್ಪಡುವ ದ್ವೀಪದಲ್ಲಿ ಇರುವವನಾದೆನು. 10  ಪವಿತ್ರಾತ್ಮ * ಪ್ರೇರಿತನಾಗಿ ನಾನು ಕರ್ತನ ದಿನದಲ್ಲಿದ್ದೆನು ಮತ್ತು ನನ್ನ ಹಿಂದೆ ತುತೂರಿಯ ಶಬ್ದದಂತಿದ್ದ ಗಟ್ಟಿಯಾದ ಶಬ್ದವನ್ನು ಕೇಳಿದೆನು. 11  ಅದು, “ನೀನು ಏನನ್ನು ನೋಡುತ್ತೀಯೋ ಅದನ್ನು ಒಂದು ಸುರುಳಿಯಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್‌, ಫಿಲದೆಲ್ಫಿಯ ಮತ್ತು ಲವೊದಿಕೀಯದಲ್ಲಿರುವ ಏಳು ಸಭೆಗಳಿಗೆ ಕಳುಹಿಸು” ಎಂದು ಹೇಳಿತು. 12  ನನ್ನೊಂದಿಗೆ ಮಾತಾಡುತ್ತಿದ್ದ ಧ್ವನಿಯು ಯಾರದೆಂದು ನೋಡಲು ನಾನು ತಿರುಗಿದಾಗ ಚಿನ್ನದ ಏಳು ದೀಪಸ್ತಂಭಗಳನ್ನು ನೋಡಿದೆನು. 13  ಆ ದೀಪಸ್ತಂಭಗಳ ಮಧ್ಯೆ ಮನುಷ್ಯಕುಮಾರನಂತಿರುವ ಒಬ್ಬನು ಪಾದಗಳನ್ನು ಮುಟ್ಟುವ ನಿಲುವಂಗಿಯನ್ನು ಧರಿಸಿಕೊಂಡು ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. 14  ಮಾತ್ರವಲ್ಲದೆ, ಅವನ ತಲೆ ಮತ್ತು ಅವನ ಕೂದಲು ಬಿಳಿಯ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು; ಅವನ ಕಣ್ಣುಗಳು ಅಗ್ನಿಜ್ವಾಲೆಯಂತಿದ್ದವು. 15  ಅವನ ಪಾದಗಳು ಕುಲುಮೆಯಲ್ಲಿ ಪ್ರಜ್ವಲಿಸುತ್ತಿರುವ ಶುದ್ಧ ತಾಮ್ರದಂತಿದ್ದವು; ಅವನ ಧ್ವನಿಯು ಜಲಸಮೂಹಗಳ ಘೋಷದಂತಿತ್ತು. 16  ಅವನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು ಮತ್ತು ಅವನ ಬಾಯಿಂದ ಹರಿತವಾದ ಉದ್ದ ಇಬ್ಬಾಯಿ ಕತ್ತಿಯು ಹೊರಚಾಚಿತ್ತು; ಅವನ ಮುಖವು ಪ್ರಬಲವಾಗಿ ಪ್ರಕಾಶಿಸುವ ಸೂರ್ಯನಂತಿತ್ತು. 17  ನಾನು ಅವನನ್ನು ನೋಡಿದಾಗ ಸತ್ತವನಂತೆ ಅವನ ಪಾದಗಳ ಬಳಿ ಬಿದ್ದೆನು. ಅವನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು ಹೇಳಿದ್ದು: “ಹೆದರಬೇಡ. ನಾನು ಮೊದಲನೆಯವನೂ ಕೊನೆಯವನೂ 18  ಜೀವಿಸುತ್ತಿರುವವನೂ ಆಗಿದ್ದೇನೆ; ನಾನು ಸತ್ತವನಾದೆನು, ಆದರೆ ನೋಡು! ಸದಾಕಾಲಕ್ಕೂ ಜೀವಿಸುತ್ತಿರುವವನಾಗಿದ್ದೇನೆ; ಮರಣದ ಮತ್ತು ಹೇಡೀಸ್‍ನ * ಬೀಗದ ಕೈಗಳು ನನ್ನ ಬಳಿ ಇವೆ. 19  ಆದುದರಿಂದ ನೀನು ನೋಡಿದ ಸಂಗತಿಗಳನ್ನೂ ನಡೆಯುತ್ತಿರುವ ಸಂಗತಿಗಳನ್ನೂ ಇವುಗಳ ಬಳಿಕ ಸಂಭವಿಸಲಿರುವ ಸಂಗತಿಗಳನ್ನೂ ಬರೆ. 20  ನನ್ನ ಬಲಗೈಯಲ್ಲಿ ನೀನು ನೋಡಿದ ಏಳು ನಕ್ಷತ್ರಗಳು ಮತ್ತು ಚಿನ್ನದ ಏಳು ದೀಪಸ್ತಂಭಗಳ ಪವಿತ್ರ ರಹಸ್ಯವೇನೆಂದರೆ, ಆ ಏಳು ನಕ್ಷತ್ರಗಳ ಅರ್ಥ ಏಳು ಸಭೆಗಳ ದೂತರು ಮತ್ತು ಆ ಏಳು ದೀಪಸ್ತಂಭಗಳ ಅರ್ಥ ಏಳು ಸಭೆಗಳು.

ಪಾದಟಿಪ್ಪಣಿ

ಪ್ರಕ 1:4  ಅಂದರೆ, ಪವಿತ್ರಾತ್ಮ ಶಕ್ತಿಯ ಪೂರ್ಣತೆ. ಪರಿಶಿಷ್ಟ 7 ನ್ನು ನೋಡಿ.
ಪ್ರಕ 1:5  ಅಥವಾ, “ಅಪಾರ ದಯೆಯೂ.”
ಪ್ರಕ 1:8  ಅಂದರೆ, “ಆದಿಯೂ ಅಂತ್ಯವೂ.”
ಪ್ರಕ 1:10  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.
ಪ್ರಕ 1:18  ಮತ್ತಾ 11:23 ರ ಪಾದಟಿಪ್ಪಣಿಯನ್ನು ನೋಡಿ.