ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಗಲಾತ್ಯ 2:1-21

2  ಹದಿನಾಲ್ಕು ವರ್ಷಗಳ ನಂತರ ನಾನು ಬಾರ್ನಬನೊಂದಿಗೆ ತೀತನನ್ನು ಸಹ ಕರೆದುಕೊಂಡು ಪುನಃ ಯೆರೂಸಲೇಮಿಗೆ ಹೋದೆನು.  ಒಂದು ಪ್ರಕಟನೆಯ ಪರಿಣಾಮವಾಗಿ ನಾನು ಅಲ್ಲಿಗೆ ಹೋದೆನು. ಅನ್ಯಜನಾಂಗಗಳ ಮಧ್ಯೆ ನಾನು ಸಾರುತ್ತಿದ್ದ ಸುವಾರ್ತೆಯನ್ನು ಅವರಿಗೆ ತಿಳಿಸಿದೆನು; ಆದರೆ ನಾನು ಒಂದುವೇಳೆ ವ್ಯರ್ಥವಾಗಿ ಓಡುತ್ತಿದ್ದೇನೋ ಅಥವಾ ಓಡಿದ್ದೇನೋ ಎಂಬ ಭಯದಿಂದ ನಾನು ಪ್ರಮುಖರಾದ ವ್ಯಕ್ತಿಗಳ ಮುಂದೆ ಏಕಾಂತದಲ್ಲಿ ಇದನ್ನು ತಿಳಿಸಿದೆನು.  ಆದರೂ ನನ್ನ ಜೊತೆಯಲ್ಲಿದ್ದ ತೀತನು ಗ್ರೀಕನಾಗಿದ್ದರೂ ಅವನಿಗೆ ಸಹ ಸುನ್ನತಿಯಾಗಬೇಕೆಂದು ಯಾರೂ ಒತ್ತಾಯಪಡಿಸಲಿಲ್ಲ.  ಆದರೆ ನಮ್ಮನ್ನು ಸಂಪೂರ್ಣವಾಗಿ ದಾಸತ್ವದಲ್ಲಿ ಸಿಕ್ಕಿಸಲಿಕ್ಕಾಗಿ ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿ ನಮಗಿರುವ ಸ್ವಾತಂತ್ರ್ಯದ ಮೇಲೆ ಗೂಢಚಾರಿಕೆ ನಡಿಸಲಿಕ್ಕಾಗಿ ಗುಪ್ತವಾಗಿ ಒಳಗೆ ತರಲ್ಪಟ್ಟ ಸುಳ್ಳು ಸಹೋದರರ ಕಾರಣ—⁠  ಸುವಾರ್ತೆಯ ಸತ್ಯವು ನಿಮ್ಮಲ್ಲಿ ನೆಲೆನಿಲ್ಲುವಂತಾಗಲು ನಾವು ಅಂಥವರಿಗೆ ಅಧೀನರಾಗಲಿಲ್ಲ, ಒಂದು ಗಳಿಗೆಯಾದರೂ ನಾವು ಅವರಿಗೆ ಮಣಿಯಲಿಲ್ಲ.  ಆದರೆ ಪ್ರಮುಖ ವ್ಯಕ್ತಿಗಳೆಂದು ಮಾನ್ಯಮಾಡಲ್ಪಡುತ್ತಿದ್ದವರು—⁠ಈ ಮುಂಚೆ ಅವರು ಎಂಥವರಾಗಿದ್ದರು ಎಂಬುದು ನನಗೆ ಮುಖ್ಯವಲ್ಲ; ಏಕೆಂದರೆ ದೇವರು ಮನುಷ್ಯನ ಹೊರತೋರಿಕೆಯ ಮೇರೆಗೆ ನಿರ್ಣಯಿಸುವವನಲ್ಲ—⁠ನನಗೆ ಯಾವುದೇ ಹೊಸ ವಿಚಾರಗಳನ್ನು ಕಲಿಸಲಿಲ್ಲ.  ಆದರೆ ಅದಕ್ಕೆ ವ್ಯತಿರಿಕ್ತವಾಗಿ, ಸುನ್ನತಿಯಾದವರಿಗೆ ಸಾರಲು ಪೇತ್ರನಿಗೆ ಸುವಾರ್ತೆಯು ಒಪ್ಪಿಸಲ್ಪಟ್ಟಿರುವಂತೆ ಸುನ್ನತಿಯಾಗದವರಿಗೆ ಸಾರಲು ನನಗೆ ಸುವಾರ್ತೆಯು ಒಪ್ಪಿಸಲ್ಪಟ್ಟಿದೆ ಎಂಬುದನ್ನು ಅವರು ನೋಡಿದಾಗ—⁠  ಸುನ್ನತಿಯಾದವರಲ್ಲಿ ಅಪೊಸ್ತಲತನವನ್ನು ನಡಿಸಲು ಬೇಕಾದ ಶಕ್ತಿಯನ್ನು ಪೇತ್ರನಿಗೆ ಕೊಟ್ಟಾತನೇ ಅನ್ಯಜನಾಂಗಗಳವರಲ್ಲಿ ಅಪೊಸ್ತಲತನವನ್ನು ನಡಿಸಲು ಬೇಕಾದ ಶಕ್ತಿಯನ್ನು ನನಗೂ ಕೊಟ್ಟಿದ್ದಾನೆ;  ಹೌದು, ನನಗೆ ದೇವರ ಅಪಾತ್ರ ದಯೆಯು ಕೊಡಲ್ಪಟ್ಟಿದೆ ಎಂಬುದನ್ನು ಸಭೆಯ ಸ್ತಂಭಗಳಾಗಿ ಹೆಸರುಗೊಂಡಿದ್ದ ಯಾಕೋಬ, ಕೇಫ ಮತ್ತು ಯೋಹಾನರು ತಿಳಿದುಕೊಂಡಾಗ, ನಾವು ಅನ್ಯಜನಾಂಗಗಳವರ ಬಳಿಗೆ ಹೋಗುವಂತೆ, ಆದರೆ ಅವರು ಸುನ್ನತಿಯಾದವರ ಬಳಿಗೆ ಹೋಗುವಂತೆ ತಿಳಿಸಿ ನನಗೂ ಬಾರ್ನಬನಿಗೂ ಸಹಭಾಗಿಗಳಾಗಿರುವ ಸೂಚನೆಯಾಗಿ ಬಲಗೈಯನ್ನು ಕೊಟ್ಟರು. 10  ಆದರೆ ನಾವು ಬಡವರನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕೆಂಬ ವಿಷಯವನ್ನು ಮಾತ್ರ ತಿಳಿಸಿದರು. ಇದನ್ನೇ ಮಾಡಲು ನಾನು ಸಹ ಆಸಕ್ತಿಯಿಂದ ಪ್ರಯತ್ನಿಸಿದ್ದೇನೆ. 11  ಆದರೂ ಕೇಫನು ಅಂತಿಯೋಕ್ಯಕ್ಕೆ ಬಂದಾಗ ಖಂಡಿಸಲ್ಪಡಬೇಕಾದವನಾಗಿ ಕಂಡುಬಂದದ್ದರಿಂದ ನಾನು ಅವನನ್ನು ಮುಖಾಮುಖಿಯಾಗಿ ಎದುರಿಸಿದೆನು. 12  ಯಾಕೋಬನ ಕಡೆಯಿಂದ ಕೆಲವರು ಬರುವುದಕ್ಕಿಂತ ಮುಂಚೆ ಅವನು ಅನ್ಯಜನಾಂಗಗಳವರೊಂದಿಗೆ ಊಟಮಾಡುತ್ತಿದ್ದನು; ಆದರೆ ಅವರು ಬಂದಾಗ ಸುನ್ನತಿಯಾದವರ ವರ್ಗಕ್ಕೆ ಭಯಪಟ್ಟು ಅವರಿಂದ ದೂರಹೋಗಿ ತನ್ನನ್ನು ಪ್ರತ್ಯೇಕಿಸಿಕೊಂಡನು. 13  ಯೆಹೂದ್ಯರಲ್ಲಿ ಉಳಿದವರು ಸಹ ಈ ಸೋಗನ್ನು ಹಾಕಿಕೊಳ್ಳುವುದರಲ್ಲಿ ಅವನೊಂದಿಗೆ ಜೊತೆಗೂಡಿದರು; ಹೀಗೆ ಬಾರ್ನಬನೂ ಅವರೊಂದಿಗೆ ಈ ಸೋಗಿನಲ್ಲಿ ಸೇರಿಕೊಂಡನು. 14  ಅವರು ಸುವಾರ್ತೆಯ ಸತ್ಯಕ್ಕನುಸಾರ ನೇರವಾಗಿ ನಡೆಯುತ್ತಿಲ್ಲ ಎಂಬುದನ್ನು ನಾನು ನೋಡಿದಾಗ ಎಲ್ಲರ ಮುಂದೆ ಕೇಫನಿಗೆ, “ನೀನು ಒಬ್ಬ ಯೆಹೂದ್ಯನಾಗಿದ್ದರೂ ಯೆಹೂದ್ಯರಂತೆ ಜೀವಿಸದೆ ಅನ್ಯಜನರಂತೆ ಜೀವಿಸುವುದಾದರೆ, ಅನ್ಯಜನಾಂಗಗಳ ಜನರಿಗೆ ಯೆಹೂದಿ ಪದ್ಧತಿಯ ಪ್ರಕಾರ ಜೀವಿಸುವಂತೆ ನೀನು ಒತ್ತಾಯಮಾಡುವುದು ಹೇಗೆ?” ಎಂದು ಕೇಳಿದೆನು. 15  ನಾವಂತೂ ಸ್ವಭಾವತಃ * ಯೆಹೂದ್ಯರಾಗಿದ್ದೇವೆ, ಪಾಪಿಗಳೆನಿಸಿಕೊಳ್ಳುವ ಅನ್ಯಜನಾಂಗಗಳವರಲ್ಲ. 16  ಒಬ್ಬ ಮನುಷ್ಯನು ಧರ್ಮಶಾಸ್ತ್ರದಲ್ಲಿ ತಿಳಿಸಿರುವ ಕಾರ್ಯಗಳ ಮೂಲಕವಾಗಿ ಅಲ್ಲ, ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡುವ ಮೂಲಕವೇ ನೀತಿವಂತನೆಂದು ನಿರ್ಣಯಿಸಲ್ಪಡುತ್ತಾನೆ ಎಂಬುದನ್ನು ನಾವು ತಿಳಿದಿದ್ದೇವೆ; ನಾವು ಸಹ ಧರ್ಮಶಾಸ್ತ್ರದಲ್ಲಿ ತಿಳಿಸಿರುವ ಕಾರ್ಯಗಳ ಮೂಲಕವಾಗಿ ಅಲ್ಲ, ಕ್ರಿಸ್ತನಲ್ಲಿ ನಂಬಿಕೆಯಿಡುವ ಮೂಲಕ ನೀತಿವಂತರೆಂದು ನಿರ್ಣಯಿಸಲ್ಪಡುವಂತೆ ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯನ್ನಿಟ್ಟಿದ್ದೇವೆ. ಏಕೆಂದರೆ ಧರ್ಮಶಾಸ್ತ್ರದಲ್ಲಿ ತಿಳಿಸಿರುವ ಕಾರ್ಯಗಳ ಮೂಲಕ ಯಾವನೂ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲ. 17  ಹಾಗಾದರೆ ಕ್ರಿಸ್ತನ ಮೂಲಕ ನೀತಿವಂತರೆಂದು ನಿರ್ಣಯಿಸಲ್ಪಡಲು ಬಯಸುವ ನಾವೂ ಪಾಪಿಗಳಾಗಿ ಕಂಡುಬಂದರೆ ಕ್ರಿಸ್ತನು ವಾಸ್ತವದಲ್ಲಿ ಪಾಪಕ್ಕೆ ಸಹಾಯಕನಾಗಿದ್ದಾನೊ? ಹಾಗೆ ಎಂದಿಗೂ ಆಗದಿರಲಿ! 18  ನಾನು ಈ ಮುಂಚೆ ಕೆಡವಿದವುಗಳನ್ನೇ ಪುನಃ ಕಟ್ಟುವುದಾದರೆ ನನ್ನನ್ನು ನಾನೇ ಅಪರಾಧಿಯಾಗಿ ತೋರಿಸಿಕೊಳ್ಳುವವನಾಗಿದ್ದೇನೆ. 19  ನಾನಾದರೋ ದೇವರಿಗಾಗಿ ಜೀವಿತನಾಗಲಿಕ್ಕಾಗಿ ಧರ್ಮಶಾಸ್ತ್ರದ ಮೂಲಕ ಧರ್ಮಶಾಸ್ತ್ರದ ಪಾಲಿಗೆ ಸತ್ತವನಾದೆನು. 20  ನಾನು ಕ್ರಿಸ್ತನೊಂದಿಗೆ ಶೂಲಕ್ಕೇರಿಸಲ್ಪಟ್ಟಿದ್ದೇನೆ. ಈಗ ಜೀವಿಸುತ್ತಿರುವವನು ನಾನಲ್ಲ, ನನ್ನಲ್ಲಿ ಐಕ್ಯದಿಂದಿರುವ ಕ್ರಿಸ್ತನೇ ನನ್ನಲ್ಲಿ ಜೀವಿಸುತ್ತಿದ್ದಾನೆ. ಈಗ ನಾನು ಶಾರೀರಿಕವಾಗಿ ಜೀವಿಸುವ ಜೀವಿತವು ದೇವರ ಮಗನ ಕಡೆಗಿನ ನಂಬಿಕೆಯಿಂದಲೇ. ಅವನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನೇ ಒಪ್ಪಿಸಿಬಿಟ್ಟನು. 21  ನಾನು ದೇವರ ಅಪಾತ್ರ ದಯೆಯನ್ನು ತಳ್ಳಿಬಿಡುವುದಿಲ್ಲ; ಏಕೆಂದರೆ ಧರ್ಮಶಾಸ್ತ್ರದ ಮೂಲಕ ನೀತಿಯು ದೊರಕುವುದಾದರೆ ಕ್ರಿಸ್ತನು ಸತ್ತದ್ದು ವ್ಯರ್ಥವಾಗಿದೆ.

ಪಾದಟಿಪ್ಪಣಿ

ಗಲಾ 2:15  ಅಂದರೆ, “ಹುಟ್ಟಿನಿಂದಲೇ.”