ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಎಫೆಸ 5:1-33

5  ಆದುದರಿಂದ ಪ್ರಿಯ ಮಕ್ಕಳಂತೆ ದೇವರನ್ನು ಅನುಕರಿಸುವವರಾಗಿರಿ.  ಕ್ರಿಸ್ತನು ನಿಮ್ಮನ್ನು ಪ್ರೀತಿಸಿ ನಿಮಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯನ್ನು ಬೀರುವ ಕಾಣಿಕೆಯಾಗಿಯೂ ಯಜ್ಞವಾಗಿಯೂ ಒಪ್ಪಿಸಿಕೊಟ್ಟ ಪ್ರಕಾರವೇ ನೀವೂ ಪ್ರೀತಿಯಲ್ಲಿ ನಡೆಯುತ್ತಾ ಇರಿ.  ಜಾರತ್ವ ಮತ್ತು ಪ್ರತಿಯೊಂದು ರೀತಿಯ ಅಶುದ್ಧತೆ ಅಥವಾ ಲೋಭ ಇವುಗಳ ಪ್ರಸ್ತಾಪವೂ ನಿಮ್ಮಲ್ಲಿರಬಾರದು. ಇವುಗಳಿಂದ ದೂರವಿರುವುದು ಪವಿತ್ರ ಜನರಿಗೆ ಯೋಗ್ಯವಾದದ್ದಾಗಿದೆ.  ನಾಚಿಕೆಗೆಟ್ಟ ನಡತೆ, ಹುಚ್ಚುಮಾತು, ಅಶ್ಲೀಲವಾದ ತಮಾಷೆ ಇವು ಅಯುಕ್ತವಾಗಿವೆ; ಇವುಗಳಿಗೆ ಬದಲಾಗಿ ದೇವರಿಗೆ ಕೃತಜ್ಞತಾಸ್ತುತಿಮಾಡುವುದು ಒಳ್ಳೇದು.  ಜಾರನಾಗಲಿ ಅಶುದ್ಧ ವ್ಯಕ್ತಿಯಾಗಲಿ ವಿಗ್ರಹಾರಾಧಕನಂತಿರುವ ಲೋಭಿಯಾಗಲಿ ಇವರಲ್ಲಿ ಯಾರಿಗೂ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಯಾವುದೇ ಬಾಧ್ಯತೆಯಿಲ್ಲ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ ಮತ್ತು ಮನದಟ್ಟುಮಾಡಿಕೊಂಡಿದ್ದೀರಿ.  ಹುರುಳಿಲ್ಲದ ಮಾತುಗಳಿಂದ ಯಾವನೂ ನಿಮ್ಮನ್ನು ಮೋಸಗೊಳಿಸದಿರಲಿ, ಏಕೆಂದರೆ ಈ ಮೇಲೆ ತಿಳಿಸಲ್ಪಟ್ಟ ವಿಷಯಗಳಿಂದ ಅವಿಧೇಯತೆಯ ಪುತ್ರರ ಮೇಲೆ ದೇವರ ಕ್ರೋಧವು ಬರುತ್ತದೆ.  ಆದುದರಿಂದ ಅವರೊಂದಿಗೆ ಪಾಲುಗಾರರಾಗಬೇಡಿರಿ;  ಹಿಂದೊಮ್ಮೆ ನೀವು ಕತ್ತಲೆಯಾಗಿದ್ದಿರಿ, ಆದರೆ ಈಗ ಕರ್ತನ ಸಂಬಂಧದಲ್ಲಿ ಬೆಳಕಾಗಿದ್ದೀರಿ. ಬೆಳಕಿನ ಮಕ್ಕಳಾಗಿ ನಡೆಯುತ್ತಾ ಇರಿ;  ಏಕೆಂದರೆ ಬೆಳಕಿನ ಫಲವು ಎಲ್ಲ ರೀತಿಯ ಒಳ್ಳೇತನವನ್ನೂ ನೀತಿಯನ್ನೂ ಸತ್ಯವನ್ನೂ ಒಳಗೂಡಿದೆ. 10  ಕರ್ತನಿಗೆ ಯಾವುದು ಅಂಗೀಕಾರಾರ್ಹವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾ ಇರಿ. 11  ಕತ್ತಲೆಗೆ ಸಂಬಂಧಿಸಿದ ನಿಷ್ಫಲ ಕಾರ್ಯಗಳಲ್ಲಿ ಅವರೊಂದಿಗೆ ಪಾಲ್ಗೊಳ್ಳುವುದನ್ನು ಬಿಟ್ಟುಬಿಡಿರಿ, ಬದಲಾಗಿ ಅವುಗಳನ್ನು ಖಂಡಿಸಿರಿ. 12  ಏಕೆಂದರೆ ಅವರಿಂದ ಗುಪ್ತವಾಗಿ ನಡೆಸಲ್ಪಡುವ ಕೃತ್ಯಗಳ ಕುರಿತು ತಿಳಿಸುವುದು ಸಹ ಲಜ್ಜಾಸ್ಪದವಾಗಿದೆ. 13  ಖಂಡಿಸಲಾಗುವ ಎಲ್ಲ ಸಂಗತಿಗಳು ಬೆಳಕಿನಿಂದ ಪ್ರಕಟಗೊಳಿಸಲ್ಪಡುತ್ತವೆ; ಪ್ರಕಟಗೊಳಿಸಲ್ಪಡುತ್ತಿರುವಂಥ ಪ್ರತಿಯೊಂದು ವಿಷಯವು ಬೆಳಕಾಗಿದೆ. 14  ಆದುದರಿಂದ ಆತನು ಹೇಳುವುದು: “ನಿದ್ರೆಮಾಡುವವನೇ, ಎಚ್ಚರವಾಗು ಮತ್ತು ಸತ್ತವರಿಂದ ಎದ್ದೇಳು; ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.” 15  ಆದಕಾರಣ, ನೀವು ನಡೆದುಕೊಳ್ಳುವ ರೀತಿಯನ್ನು ಕಟ್ಟುನಿಟ್ಟಾಗಿ ನೋಡಿಕೊಳ್ಳಿರಿ. ಅವಿವೇಕಿಗಳಂತೆ ನಡೆದುಕೊಳ್ಳದೆ ವಿವೇಕಿಗಳಂತೆ ನಡೆದುಕೊಳ್ಳಿರಿ. 16  ದಿನಗಳು ಕೆಟ್ಟವುಗಳಾಗಿರುವುದರಿಂದ ನಿಮಗೋಸ್ಕರ ಸುಸಮಯವನ್ನು ಖರೀದಿಸಿಕೊಳ್ಳಿರಿ. 17  ಈ ಕಾರಣದಿಂದ ವಿಚಾರಹೀನರಾಗಿರದೆ ಯೆಹೋವನ ಚಿತ್ತವೇನೆಂಬುದನ್ನು ಗ್ರಹಿಸುತ್ತಾ ಇರಿ. 18  ಮಾತ್ರವಲ್ಲದೆ, ದ್ರಾಕ್ಷಾಮದ್ಯವನ್ನು ಕುಡಿದು ಮತ್ತರಾಗಬೇಡಿ; ಅದರಿಂದ ಪಟಿಂಗತನವು ಉಂಟಾಗುತ್ತದೆ. ಆದರೆ ಪವಿತ್ರಾತ್ಮಭರಿತರಾಗಿದ್ದು 19  ದೇವರಿಗೆ ಕೀರ್ತನೆಗಳಿಂದಲೂ ಸ್ತುತಿಗೀತೆಗಳಿಂದಲೂ ಆಧ್ಯಾತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ಇರಿ ಮತ್ತು ನಿಮ್ಮ ಹೃದಯಗಳಲ್ಲಿ ಯೆಹೋವನಿಗೆ ಗೀತೆಗಳೊಂದಿಗೂ ಸಂಗೀತದೊಂದಿಗೂ ಹಾಡಿರಿ. 20  ಯಾವಾಗಲೂ ಎಲ್ಲ ಕಾರ್ಯಗಳಿಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಮ್ಮ ದೇವರೂ ತಂದೆಯೂ ಆಗಿರುವಾತನಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಇರಿ. 21  ಕ್ರಿಸ್ತನ ಭಯದಲ್ಲಿ ಒಬ್ಬರಿಗೊಬ್ಬರು ಅಧೀನರಾಗಿ ನಡೆದುಕೊಳ್ಳಿರಿ. 22  ಕರ್ತನಿಗೆ ಹೇಗೋ ಹಾಗೆಯೇ ಹೆಂಡತಿಯರು ತಮ್ಮತಮ್ಮ ಗಂಡಂದಿರಿಗೆ ಅಧೀನರಾಗಿರಲಿ, 23  ಏಕೆಂದರೆ ಕ್ರಿಸ್ತನು ಸಭೆಯೆಂಬ ದೇಹದ ರಕ್ಷಕನಾಗಿದ್ದು ಅದರ ಶಿರಸ್ಸಾಗಿರುವಂತೆಯೇ ಗಂಡನು ತನ್ನ ಹೆಂಡತಿಗೆ ಶಿರಸ್ಸಾಗಿದ್ದಾನೆ. 24  ವಾಸ್ತವದಲ್ಲಿ, ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಹೆಂಡತಿಯರು ಸಹ ತಮ್ಮತಮ್ಮ ಗಂಡಂದಿರಿಗೆ ಎಲ್ಲ ವಿಷಯಗಳಲ್ಲಿ ಅಧೀನರಾಗಿರಲಿ. 25  ಗಂಡಂದಿರೇ, ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟಂತೆಯೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ. 26  ಅವನು ಸಭೆಯನ್ನು ವಾಕ್ಯದ ಮೂಲಕ ಜಲಸ್ನಾನದಿಂದ ಶುದ್ಧೀಕರಿಸುವ ಮುಖಾಂತರ ಅದನ್ನು ಪವಿತ್ರೀಕರಿಸಿ 27  ಕಳಂಕ, ಸುಕ್ಕು ಅಥವಾ ಇಂಥದ್ದು ಯಾವುದೂ ಇಲ್ಲದೆ ಪವಿತ್ರವೂ ದೋಷವಿಲ್ಲದ್ದೂ ಆಗಿರುವ ಸಭೆಯಾಗಿ ಅದರ ವೈಭವದಲ್ಲಿ ತನಗೇ ಅರ್ಪಿಸಿಕೊಳ್ಳುವಂತೆ ಹೀಗೆ ಮಾಡಿದನು. 28  ಇದೇ ರೀತಿಯಲ್ಲಿ ಗಂಡಂದಿರು ತಮ್ಮ ಸ್ವಂತ ದೇಹಗಳನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನಲ್ಲಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ; 29  ಯಾವನೂ ಎಂದೂ ಸ್ವಶರೀರವನ್ನು ದ್ವೇಷಿಸಿದ್ದಿಲ್ಲ, ಅವನು ಅದನ್ನು ಪೋಷಿಸಿ ಸಂರಕ್ಷಿಸುತ್ತಾನೆ; ಕ್ರಿಸ್ತನು ಸಹ ಸಭೆಯನ್ನು ಪೋಷಿಸಿ ಸಂರಕ್ಷಿಸುತ್ತಾನೆ, 30  ಏಕೆಂದರೆ ನಾವು ಅವನ ದೇಹದ ಅಂಗಗಳಾಗಿದ್ದೇವೆ. 31  “ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ಶರೀರವಾಗುವರು.” 32  ಈ ಪವಿತ್ರ ರಹಸ್ಯವು ಮಹತ್ವವಾದದ್ದಾಗಿದೆ. ಈಗ ನಾನು ಕ್ರಿಸ್ತನಿಗೆ ಮತ್ತು ಸಭೆಗೆ ಸಂಬಂಧಿಸಿ ಮಾತಾಡುತ್ತಿದ್ದೇನೆ. 33  ಆದರೂ ನಿಮ್ಮಲ್ಲಿ ಪ್ರತಿಯೊಬ್ಬನು ವೈಯಕ್ತಿಕವಾಗಿ ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಲಿ; ಅದೇ ಸಮಯದಲ್ಲಿ, ಹೆಂಡತಿಗೆ ತನ್ನ ಗಂಡನ ಕಡೆಗೆ ಆಳವಾದ ಗೌರವವಿರಬೇಕು.

ಪಾದಟಿಪ್ಪಣಿ