ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಫೆಸ 3:1-21

3  ಈ ಕಾರಣದಿಂದ ಅನ್ಯಜನಾಂಗಗಳ ಜನರಾಗಿರುವ ನಿಮಗೋಸ್ಕರ ಕ್ರಿಸ್ತ ಯೇಸುವಿನ ಸೆರೆಯವನಾದ ಪೌಲನೆಂಬ ನಾನು ಹೇಳುವುದೇನೆಂದರೆ—⁠  ನಿಮ್ಮನ್ನು ಮನಸ್ಸಿನಲ್ಲಿಟ್ಟುಕೊಂಡು ದೇವರು ತನ್ನ ಅಪಾತ್ರ ದಯೆಯಿಂದ ನನಗೆ ಕೊಟ್ಟಿರುವ ಮನೆವಾರ್ತೆಯ ಕೆಲಸದ ಕುರಿತು ನೀವು ಕೇಳಿಸಿಕೊಂಡಿದ್ದೀರಷ್ಟೆ.  ಇದಲ್ಲದೆ, ಒಂದು ಪ್ರಕಟನೆಯ ಮೂಲಕ ನನಗೆ ಪವಿತ್ರ ರಹಸ್ಯವು ತಿಳಿಸಲ್ಪಟ್ಟಿತು; ಅದನ್ನು ನಾನು ನಿಮಗೆ ಈ ಮುಂಚೆ ಸಂಕ್ಷಿಪ್ತವಾಗಿ ಬರೆದಿದ್ದೇನೆ.  ಆದುದರಿಂದ ಇದನ್ನು ಓದಿದಾಗ ಕ್ರಿಸ್ತನ ಕುರಿತಾದ ಆ ಪವಿತ್ರ ರಹಸ್ಯದ ವಿಷಯದಲ್ಲಿ ನನಗಿರುವ ಗ್ರಹಿಕೆಯನ್ನು ನೀವು ತಿಳಿದುಕೊಳ್ಳಬಲ್ಲಿರಿ.  ಈ ರಹಸ್ಯವು ಆತನ ಪವಿತ್ರ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮದ ಮೂಲಕ ಈಗ ಪ್ರಕಟಿಸಲ್ಪಟ್ಟಿರುವಂತೆ ಬೇರೆ ಕಾಲದಲ್ಲಿದ್ದ ಮನುಷ್ಯ ಪುತ್ರರಿಗೆ ತಿಳಿಸಲ್ಪಡಲಿಲ್ಲ.  ಈ ರಹಸ್ಯವೇನೆಂದರೆ, ಅನ್ಯಜನಾಂಗಗಳ ಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿ ಜೊತೆ ಬಾಧ್ಯರೂ ಒಂದೇ ದೇಹದ ಅಂಗಗಳೂ ವಾಗ್ದಾನದಲ್ಲಿ ನಮ್ಮೊಂದಿಗೆ ಪಾಲುಗಾರರೂ ಆಗಿರಬೇಕೆಂಬುದೇ.  ದೇವರ ಶಕ್ತಿಯು ಕಾರ್ಯನಡಿಸುವ ವಿಧಕ್ಕನುಸಾರ ನನಗೆ ಕೊಡಲ್ಪಟ್ಟಿರುವ ಆತನ ಉಚಿತ ಉಡುಗೊರೆಯಾದ ಅಪಾತ್ರ ದಯೆಯಿಂದಾಗಿ ನಾನು ಅದರ ಶುಶ್ರೂಷಕನಾದೆನು.  ಪವಿತ್ರ ಜನರೆಲ್ಲರಲ್ಲಿ ಅತ್ಯಲ್ಪನಾದವನಿಗಿಂತಲೂ ಕಡಮೆಯವನಾದ ನನಗೆ, ಕ್ರಿಸ್ತನ ಅಗಾಧವಾದ ಐಶ್ವರ್ಯದ ಕುರಿತಾದ ಸುವಾರ್ತೆಯನ್ನು ಅನ್ಯಜನಾಂಗಗಳಿಗೆ ಪ್ರಕಟಿಸಲಿಕ್ಕಾಗಿಯೂ  ಸಮಸ್ತವನ್ನು ಸೃಷ್ಟಿಸಿದ ದೇವರಲ್ಲಿ ಅನಾದಿಕಾಲದಿಂದ ಮರೆಯಾಗಿಡಲ್ಪಟ್ಟಿದ್ದ ಪವಿತ್ರ ರಹಸ್ಯವು ಹೇಗೆ ನಿರ್ವಹಿಸಲ್ಪಡುತ್ತಿದೆ ಎಂಬುದನ್ನು ಜನರು ತಿಳಿಯುವಂತೆ ಮಾಡಲಿಕ್ಕಾಗಿಯೂ ಈ ಅಪಾತ್ರ ದಯೆಯು ಕೊಡಲ್ಪಟ್ಟಿತು. 10  ಹೀಗೆ ಸ್ವರ್ಗೀಯ ಸ್ಥಳಗಳಲ್ಲಿರುವ ಸರಕಾರಗಳಿಗೂ ಅಧಿಕಾರಗಳಿಗೂ ಈಗ ಸಭೆಯ ಮೂಲಕ ದೇವರ ಬಹುಪ್ರಕಾರವಾದ ವಿವೇಕವು ತಿಳಿದುಬರುವಂತಾಯಿತು. 11  ಇದು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನ ಸಂಬಂಧದಲ್ಲಿ ದೇವರು ರೂಪಿಸಿದ ನಿತ್ಯ ಉದ್ದೇಶಕ್ಕನುಸಾರವಾಗಿತ್ತು. 12  ಅವನ ಮೂಲಕವೇ ನಮಗೆ ಈ ವಾಕ್ಸರಳತೆ ಇದೆ ಮತ್ತು ಅವನಲ್ಲಿ ನಾವಿಟ್ಟಿರುವ ನಂಬಿಕೆಯ ಮೂಲಕ ನಾವು ಭರವಸೆಯಿಂದ ದೇವರನ್ನು ಸಮೀಪಿಸುತ್ತೇವೆ. 13  ಆದುದರಿಂದ ನಿಮ್ಮ ಪರವಾಗಿ ನಾನು ಅನುಭವಿಸಿರುವ ಕಷ್ಟಗಳನ್ನು ನೋಡಿ ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ, ಏಕೆಂದರೆ ಅವು ನಿಮಗೆ ಮಹಿಮೆಯನ್ನು ಉಂಟುಮಾಡುತ್ತವೆ. 14  ಈ ಕಾರಣದಿಂದ ನಾನು ತಂದೆಯ ಮುಂದೆ ಮೊಣಕಾಲೂರುತ್ತೇನೆ; 15  ಆ ತಂದೆಯಿಂದಲೇ ಸ್ವರ್ಗದಲ್ಲಿರುವ ಮತ್ತು ಭೂಮಿಯಲ್ಲಿರುವ ಪ್ರತಿಯೊಂದು ಕುಟುಂಬವು ತನ್ನ ಹೆಸರನ್ನು ಹೊಂದಿದೆ. 16  ಆತನು ತನ್ನ ಮಹಿಮೆಯ ಐಶ್ವರ್ಯಕ್ಕನುಸಾರ ನಿಮಗೆ ತನ್ನ ಪವಿತ್ರಾತ್ಮದ ಮೂಲಕ ಶಕ್ತಿಯನ್ನು ಒದಗಿಸಿ ನಿಮ್ಮ ಆಂತರ್ಯದಲ್ಲಿ ನಿಮ್ಮನ್ನು ಬಲಪಡಿಸಲಿ. 17  ಮಾತ್ರವಲ್ಲದೆ, ನಿಮ್ಮ ನಂಬಿಕೆಯ ಮೂಲಕ ನಿಮ್ಮ ಹೃದಯಗಳಲ್ಲಿ ಕ್ರಿಸ್ತನು ಪ್ರೀತಿಯಿಂದ ವಾಸಿಸುವಂತಾಗಲಿ; ನೀವು ಅಸ್ತಿವಾರದ ಮೇಲೆ ಬೇರೂರಿ ಸ್ಥಿರವಾಗಿ ನೆಲೆಗೊಳ್ಳುವಂತೆ ಬೇಡಿಕೊಳ್ಳುತ್ತೇನೆ. 18  ಹೀಗೆ ನೀವು ಎಲ್ಲ ಪವಿತ್ರ ಜನರೊಂದಿಗೆ ಅಗಲ ಉದ್ದ ಎತ್ತರ ಮತ್ತು ಆಳವು ಎಷ್ಟೆಂಬುದನ್ನು ಕೂಲಂಕಷವಾಗಿ ಗ್ರಹಿಸಲು ಶಕ್ತರಾಗುವಂತಾಗುವುದು. 19  ಇದಲ್ಲದೆ, ದೇವರು ಕೊಡುವ ಸರ್ವ ಸಂಪೂರ್ಣತೆಯಿಂದ ನೀವು ತುಂಬಿಸಲ್ಪಡುವಂತೆ ಜ್ಞಾನಕ್ಕಿಂತ ಮಿಗಿಲಾದ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳುವಂತಾಗುವುದು. 20  ನಮ್ಮಲ್ಲಿ ಕಾರ್ಯನಡಿಸುತ್ತಿರುವ ತನ್ನ ಶಕ್ತಿಗನುಸಾರ ನಾವು ಬೇಡುವುದಕ್ಕಿಂತಲೂ ಗ್ರಹಿಸುವುದಕ್ಕಿಂತಲೂ ಎಷ್ಟೋ ಮಿಗಿಲಾದದ್ದನ್ನು ಅತ್ಯಧಿಕವಾಗಿ ಮಾಡಶಕ್ತನಾಗಿರುವಾತನಿಗೆ 21  ಸಭೆಯಿಂದಲೂ ಕ್ರಿಸ್ತ ಯೇಸುವಿನಿಂದಲೂ ಎಲ್ಲ ತಲೆಮಾರುಗಳಲ್ಲಿ ನಿರಂತರವಾಗಿ ಮಹಿಮೆಯು ಉಂಟಾಗಲಿ. ಆಮೆನ್‌.

ಪಾದಟಿಪ್ಪಣಿ