ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಇಬ್ರಿಯ 9:1-28

9  ಹೀಗಿದ್ದರೂ ಮೊದಲನೆಯ ಒಡಂಬಡಿಕೆಯಲ್ಲಿ ಪವಿತ್ರ ಸೇವೆಗೆ ಸಂಬಂಧಿಸಿದ ಆದೇಶಗಳಿದ್ದವು ಮತ್ತು ಅದಕ್ಕೆ ಭೂಸಂಬಂಧವಾದ ಪವಿತ್ರ ಸ್ಥಳವಿತ್ತು.  ಗುಡಾರದ ಮೊದಲ ಭಾಗವು ಕಟ್ಟಲ್ಪಟ್ಟಿತು; ಅದರಲ್ಲಿ ದೀಪಸ್ತಂಭ, ಮೇಜು ಮತ್ತು ನೈವೇದ್ಯದ ರೊಟ್ಟಿಗಳು ಇದ್ದವು; ಅದನ್ನು “ಪವಿತ್ರ ಸ್ಥಳ” ಎಂದು ಕರೆಯಲಾಗುತ್ತದೆ.  ಆದರೆ ಎರಡನೆಯ ತೆರೆಯ ಹಿಂದೆ “ಅತಿ ಪವಿತ್ರ” ಎಂದು ಕರೆಯಲ್ಪಡುವ ಇನ್ನೊಂದು ಭಾಗವಿತ್ತು.  ಅದರಲ್ಲಿ ಚಿನ್ನದ ಧೂಪಾರತಿ ಮತ್ತು ಚಿನ್ನದಿಂದ ಪೂರ್ಣವಾಗಿ ಹೊದಿಸಲ್ಪಟ್ಟಿದ್ದ ಒಡಂಬಡಿಕೆಯ ಮಂಜೂಷವಿತ್ತು; ಆ ಮಂಜೂಷದೊಳಗೆ ಮನ್ನಾ ಇಟ್ಟಿದ್ದ ಚಿನ್ನದ ಪಾತ್ರೆ, ಆರೋನನ ಚಿಗುರಿದ ಕೋಲು ಮತ್ತು ಒಡಂಬಡಿಕೆಯ ಕಲ್ಲಿನ ಹಲಗೆಗಳು ಇದ್ದವು;  ಅದರ ಮೇಲೆ ಮಹಿಮಾಭರಿತ ಕೆರೂಬಿಗಳಿದ್ದು ಅವು ಪಾಪನಿವಾರಣಾರ್ಥಕ ಮುಚ್ಚಳವನ್ನು ಆವರಿಸಿದ್ದವು. ಆದರೆ ಈ ವಿಷಯಗಳನ್ನು ಸವಿವರವಾಗಿ ಮಾತಾಡಲು ಇದು ತಕ್ಕ ಸಮಯವಲ್ಲ.  ಇವುಗಳು ಹೀಗೆ ಕಟ್ಟಲ್ಪಟ್ಟ ಬಳಿಕ, ಪವಿತ್ರ ಸೇವೆಗಳನ್ನು ಸಲ್ಲಿಸುವುದಕ್ಕೋಸ್ಕರ ಯಾಜಕರು ಎಲ್ಲ ಸಮಯಗಳಲ್ಲಿ ಗುಡಾರದ ಮೊದಲನೆಯ ಭಾಗವನ್ನು ಪ್ರವೇಶಿಸುತ್ತಾರೆ;  ಆದರೆ ಎರಡನೆಯ ಭಾಗದೊಳಗೆ ಮಹಾ ಯಾಜಕನೊಬ್ಬನೇ ವರ್ಷಕ್ಕೆ ಒಂದೇ ಸಾರಿ ಪ್ರವೇಶಿಸುತ್ತಾನೆ; ಅವನು ತನ್ನೊಂದಿಗೆ ರಕ್ತವನ್ನು ತೆಗೆದುಕೊಳ್ಳದೆ ಅದರೊಳಗೆ ಪ್ರವೇಶಿಸುವುದಿಲ್ಲ. ಆ ರಕ್ತವನ್ನು ಅವನು ತನಗೋಸ್ಕರವೂ ಜನರು ಅಜ್ಞಾನದಿಂದ ಮಾಡಿದ ಪಾಪಗಳಿಗೋಸ್ಕರವೂ ಅರ್ಪಿಸುತ್ತಾನೆ.  ಗುಡಾರದ ಮೊದಲನೆಯ ಭಾಗವು ಇರುವ ವರೆಗೆ ಪವಿತ್ರ ಸ್ಥಳಕ್ಕೆ ಹೋಗುವ ಮಾರ್ಗವು ಇನ್ನೂ ಪ್ರಕಟವಾಗಲಿಲ್ಲ ಎಂಬುದನ್ನು ಪವಿತ್ರಾತ್ಮವು ಸ್ಪಷ್ಟಪಡಿಸುತ್ತದೆ.  ಈ ಗುಡಾರವು ಈಗ ಬಂದಿರುವ ನೇಮಿತ ಕಾಲಕ್ಕೆ ಒಂದು ನಿದರ್ಶನವಾಗಿದೆ. ಇದಕ್ಕನುಸಾರ ಕಾಣಿಕೆಗಳೂ ಯಜ್ಞಗಳೂ ಅರ್ಪಿಸಲ್ಪಡುತ್ತಾ ಇವೆ. ಆದರೆ ಇವು ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವ ಮನುಷ್ಯನ ಮನಸ್ಸಾಕ್ಷಿಯನ್ನು ಪರಿಪೂರ್ಣಗೊಳಿಸಲು ಶಕ್ತವಾಗಿಲ್ಲ. 10  ಆದರೆ ಇವು ಕೇವಲ ಆಹಾರ, ಪಾನೀಯ ಮತ್ತು ವಿವಿಧ ದೀಕ್ಷಾಸ್ನಾನಗಳಿಗೆ ಸಂಬಂಧಿಸಿದವುಗಳಾಗಿವೆ. ಇವು ಶರೀರಕ್ಕೆ ಸಂಬಂಧಿಸಿದ ಕಾನೂನುಬದ್ಧ ಆವಶ್ಯಕತೆಗಳಾಗಿದ್ದವು ಮತ್ತು ವಿಷಯಗಳನ್ನು ಸರಿಪಡಿಸುವ ನೇಮಿತ ಕಾಲದ ವರೆಗೆ ಮಾತ್ರ ಜಾರಿಗೆ ತರಲ್ಪಟ್ಟಿದ್ದವು. 11  ಆದರೆ ಕ್ರಿಸ್ತನು ಕೈಗಳಿಂದ ಕಟ್ಟಲ್ಪಟ್ಟಿರದ, ಅಂದರೆ ಈ ಸೃಷ್ಟಿಗೆ ಸಂಬಂಧಪಟ್ಟಿರದಂಥ ಅತಿ ಶ್ರೇಷ್ಠವೂ ಹೆಚ್ಚು ಪರಿಪೂರ್ಣವೂ ಆಗಿರುವ ಗುಡಾರದ ಮೂಲಕ ನಾವು ಈಗ ಅನುಭವಿಸುತ್ತಿರುವ ಒಳ್ಳೇ ವಿಷಯಗಳ ಮಹಾ ಯಾಜಕನಾಗಿ ಬಂದಾಗ 12  ಆಡುಗಳ ಮತ್ತು ಹೋರಿಕರುಗಳ ರಕ್ತದೊಂದಿಗಲ್ಲ, ತನ್ನ ಸ್ವಂತ ರಕ್ತದೊಂದಿಗೆ ಎಲ್ಲ ಕಾಲಕ್ಕಾಗಿ ಒಂದೇ ಸಾರಿ ಅತಿ ಪವಿತ್ರ ಸ್ಥಳವನ್ನು ಪ್ರವೇಶಿಸಿ ನಮಗೋಸ್ಕರ ನಿತ್ಯಬಿಡುಗಡೆಯನ್ನು ಪಡೆದುಕೊಂಡನು. 13  ಆಡುಗಳ ಮತ್ತು ಹೋರಿಗಳ ರಕ್ತವೂ ಮಲಿನರಾದವರ ಮೇಲೆ ಪ್ರೋಕ್ಷಿಸಲ್ಪಡುವ ಕಡಸಿನ ಬೂದಿಯೂ ಶರೀರವನ್ನು ಶುದ್ಧಗೊಳಿಸುವಷ್ಟರ ಮಟ್ಟಿಗೆ ಪವಿತ್ರೀಕರಿಸುವುದಾದರೆ, 14  ನಿತ್ಯವಾಗಿ ಕ್ರಿಯೆಗೈಯುವ ಆತ್ಮದ* ಮೂಲಕ ಯಾವುದೇ ದೋಷವಿಲ್ಲದೆ ತನ್ನನ್ನು ತಾನೇ ದೇವರಿಗೆ ಅರ್ಪಿಸಿಕೊಂಡ ಕ್ರಿಸ್ತನ ರಕ್ತವು ಜೀವವುಳ್ಳ ದೇವರಿಗೆ ನಾವು ಪವಿತ್ರ ಸೇವೆಯನ್ನು ಸಲ್ಲಿಸಸಾಧ್ಯವಾಗುವಂತೆ ನಮ್ಮ ಮನಸ್ಸಾಕ್ಷಿಗಳನ್ನು ನಿರ್ಜೀವ ಕಾರ್ಯಗಳಿಂದ ಎಷ್ಟೋ ಹೆಚ್ಚಾಗಿ ಶುದ್ಧೀಕರಿಸುತ್ತದಲ್ಲವೆ? 15  ಈ ಕಾರಣದಿಂದಲೇ ಕರೆಯಲ್ಪಟ್ಟವರು ನಿತ್ಯಬಾಧ್ಯತೆಯ ವಾಗ್ದಾನವನ್ನು ಹೊಂದಲಾಗುವಂತೆ ಅವನು ಒಂದು ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿದ್ದಾನೆ. ಮೊದಲನೆಯ ಒಡಂಬಡಿಕೆಯ ಕೆಳಗೆ ನಡೆಸಲ್ಪಟ್ಟ ಅಪರಾಧಗಳಿಂದ ಅವರನ್ನು ಬಿಡಿಸಲಿಕ್ಕಾಗಿ ವಿಮೋಚನಾ ಮೌಲ್ಯವಾಗಿ ಅವನು ಮರಣವನ್ನು ಅನುಭವಿಸಿದನು. 16  ಒಡಂಬಡಿಕೆಯು ಇರಬೇಕಾಗಿರುವಲ್ಲಿ ಒಡಂಬಡಿಕೆಯನ್ನು ಮಾಡಿಕೊಂಡಂಥ ಮಾನವನ ಮರಣದ ನಿದರ್ಶನೆಯು ಒದಗಿಸಲ್ಪಡಬೇಕು. 17  ಬಲಿಯನ್ನು ಅರ್ಪಿಸಿದಾಗಲೇ ಒಂದು ಒಡಂಬಡಿಕೆಯು ವಿಧಿಬದ್ಧವಾಗುತ್ತದೆ, ಏಕೆಂದರೆ ಒಡಂಬಡಿಕೆಯನ್ನು ಮಾಡಿದವನು ಜೀವದಿಂದಿರುವ ವರೆಗೆ ಅದು ಜಾರಿಗೆ ಬರುವುದಿಲ್ಲ. 18  ಆದುದರಿಂದ ಮೊದಲನೆಯ ಒಡಂಬಡಿಕೆಯು ಸಹ ರಕ್ತವಿಲ್ಲದೆ ಸ್ಥಾಪಿತವಾಗಲಿಲ್ಲ. 19  ಮೋಶೆಯು ಜನರೆಲ್ಲರಿಗೆ ಧರ್ಮಶಾಸ್ತ್ರಕ್ಕನುಸಾರ ಪ್ರತಿಯೊಂದು ಆಜ್ಞೆಯನ್ನು ತಿಳಿಸಿದ ಬಳಿಕ ನೀರು, ಕೆಂಪು ಉಣ್ಣೆ ಹಾಗೂ ಹಿಸ್ಸೋಪುಕಡ್ಡಿಗಳೊಂದಿಗೆ ಹೋರಿಕರುಗಳ ಮತ್ತು ಆಡುಗಳ ರಕ್ತವನ್ನು ತೆಗೆದುಕೊಂಡು ಗ್ರಂಥದ ಮೇಲೆಯೂ ಎಲ್ಲ ಜನರ ಮೇಲೆಯೂ ಪ್ರೋಕ್ಷಿಸಿ, 20  “ಇದು ದೇವರು ನಿಮ್ಮ ಮೇಲೆ ವಿಧಿಸಿದ ಒಡಂಬಡಿಕೆಯ ರಕ್ತವಾಗಿದೆ” ಎಂದು ಹೇಳಿದನು. 21  ಅದೇ ರೀತಿಯಲ್ಲಿ ಅವನು ಗುಡಾರದ ಮೇಲೆಯೂ ಸಾರ್ವಜನಿಕ ಸೇವೆಗಾಗಿದ್ದ ಎಲ್ಲ ಪಾತ್ರೆಗಳ ಮೇಲೆಯೂ ರಕ್ತವನ್ನು ಪ್ರೋಕ್ಷಿಸಿದನು. 22  ಹೌದು, ಧರ್ಮಶಾಸ್ತ್ರಕ್ಕನುಸಾರ ರಕ್ತದ ಮೂಲಕ ಬಹುಮಟ್ಟಿಗೆ ಎಲ್ಲವೂ ಶುದ್ಧೀಕರಿಸಲ್ಪಡುತ್ತದೆ ಮತ್ತು ರಕ್ತವು ಸುರಿಸಲ್ಪಡದೆ ಕ್ಷಮಾಪಣೆಯು ಉಂಟಾಗುವುದಿಲ್ಲ. 23  ಸ್ವರ್ಗದಲ್ಲಿರುವ ವಿಷಯಗಳಿಗೆ ಪ್ರತಿರೂಪವಾಗಿರುವ ವಿಷಯಗಳು ಈ ರೀತಿಯಲ್ಲಿ ಶುದ್ಧೀಕರಿಸಲ್ಪಡುವುದು ಅಗತ್ಯವಾಗಿತ್ತು, ಆದರೆ ಸ್ವರ್ಗೀಯ ವಿಷಯಗಳಿಗಾದರೋ ಇಂಥ ಯಜ್ಞಗಳಿಗಿಂತ ಉತ್ತಮವಾದ ಯಜ್ಞಗಳು ಬೇಕು. 24  ಕ್ರಿಸ್ತನು ನಿಜತ್ವದ ನಕಲಾಗಿರುವ ಕೈಗಳಿಂದ ಕಟ್ಟಲ್ಪಟ್ಟ ಪವಿತ್ರ ಸ್ಥಳವನ್ನು ಪ್ರವೇಶಿಸದೆ ನಮಗೋಸ್ಕರ ದೇವರ ಸಮ್ಮುಖದಲ್ಲಿ ಕಾಣಿಸಿಕೊಳ್ಳಲು ಸ್ವರ್ಗವನ್ನೇ ಪ್ರವೇಶಿಸಿದನು. 25  ಇದಲ್ಲದೆ ಮಹಾ ಯಾಜಕನು ತನ್ನ ಸ್ವಂತದ್ದಲ್ಲದ ರಕ್ತವನ್ನು ತೆಗೆದುಕೊಂಡು ಪ್ರತಿ ವರ್ಷ ಪವಿತ್ರ ಸ್ಥಳವನ್ನು ಪ್ರವೇಶಿಸುವಂತೆ ಕ್ರಿಸ್ತನು ತನ್ನನ್ನು ಅನೇಕ ಬಾರಿ ಅರ್ಪಿಸುವುದಕ್ಕೆ ಸ್ವರ್ಗವನ್ನು ಪ್ರವೇಶಿಸಲಿಲ್ಲ. 26  ಹಾಗಿದ್ದರೆ ಅವನು ಲೋಕದ ಆದಿಯಿಂದ ಅನೇಕ ಬಾರಿ ಕಷ್ಟಾನುಭವಿಸಬೇಕಾಗಿತ್ತು. ಆದರೆ ಈಗ ಎಲ್ಲ ಕಾಲಕ್ಕಾಗಿ ಒಂದೇ ಸಾರಿ ಅವನು ವಿಷಯಗಳ ವ್ಯವಸ್ಥೆಗಳ ಸಮಾಪ್ತಿಯಲ್ಲಿ ಪಾಪವನ್ನು ತೆಗೆದುಹಾಕುವುದಕ್ಕಾಗಿ ತನ್ನನ್ನು ಯಜ್ಞವಾಗಿ ಅರ್ಪಿಸಿಕೊಳ್ಳುವವನಾಗಿ ಪ್ರತ್ಯಕ್ಷನಾದನು. 27  ನ್ಯಾಯತೀರ್ಪನ್ನು ಹೊಂದುವುದಕ್ಕಾಗಿ ಮನುಷ್ಯರು ಹೇಗೆ ಎಲ್ಲ ಕಾಲಕ್ಕಾಗಿ ಒಂದೇ ಸಾರಿ ಸಾಯಬೇಕಾಗಿತ್ತೋ 28  ಹಾಗೆಯೇ ಕ್ರಿಸ್ತನು ಅನೇಕರ ಪಾಪಗಳನ್ನು ಹೊತ್ತುಕೊಳ್ಳಲಿಕ್ಕಾಗಿ ಎಲ್ಲ ಕಾಲಕ್ಕಾಗಿ ಒಂದೇ ಸಾರಿ ಅರ್ಪಿಸಲ್ಪಟ್ಟನು. ಎರಡನೆಯ ಬಾರಿ ಅವನು ಕಾಣಿಸಿಕೊಳ್ಳುವುದು ಪಾಪನಿವಾರಣೆಗಾಗಿ ಅಲ್ಲ, ತಮ್ಮ ರಕ್ಷಣೆಗಾಗಿ ಅವನ ಕಡೆಗೆ ಶ್ರದ್ಧಾಪೂರ್ವಕವಾಗಿ ಎದುರುನೋಡುತ್ತಿರುವ ಜನರಿಗಾಗಿಯೇ.

ಪಾದಟಿಪ್ಪಣಿ

ಇಬ್ರಿ 9:14 ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7ನ್ನು ನೋಡಿ.