ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಬ್ರಿಯ 5:1-14

5  ಮನುಷ್ಯರೊಳಗಿಂದ ಆರಿಸಲ್ಪಟ್ಟಿರುವ ಪ್ರತಿಯೊಬ್ಬ ಮಹಾ ಯಾಜಕನು ಕಾಣಿಕೆಗಳನ್ನೂ ಪಾಪಗಳಿಗಾಗಿ ಯಜ್ಞಗಳನ್ನೂ ಅರ್ಪಿಸುವಂತೆ ಮನುಷ್ಯರಿಗೋಸ್ಕರ ದೇವರಿಗೆ ಸಂಬಂಧಿಸಿದ ಕಾರ್ಯಗಳ ಮೇಲೆ ನೇಮಿಸಲ್ಪಟ್ಟಿದ್ದಾನೆ.  ಅವನು ಸಹ ತನ್ನ ಸ್ವಂತ ಬಲಹೀನತೆಗೆ ಅಧೀನನಾಗಿರುವುದರಿಂದ ಅಜ್ಞಾನಿಗಳೊಂದಿಗೆ ಮತ್ತು ತಪ್ಪುಮಾಡುವವರೊಂದಿಗೆ ಸೌಮ್ಯಭಾವದಿಂದ ವರ್ತಿಸಲು ಶಕ್ತನಾಗಿದ್ದಾನೆ.  ಈ ಬಲಹೀನತೆಯ ಕಾರಣದಿಂದ ಅವನು ಜನರ ಪಾಪಗಳಿಗೆ ಹೇಗೋ ಹಾಗೆಯೇ ತನ್ನ ಪಾಪಗಳಿಗಾಗಿಯೂ ಯಜ್ಞಗಳನ್ನು ಅರ್ಪಿಸುವ ಹಂಗಿಗೊಳಗಾಗಿದ್ದಾನೆ.  ಇದಲ್ಲದೆ ಒಬ್ಬ ಮನುಷ್ಯನು ತನ್ನ ಸ್ವಇಷ್ಟದಿಂದ ಈ ಗೌರವವನ್ನು ವಹಿಸಿಕೊಳ್ಳುವುದಿಲ್ಲ, ಆದರೆ ದೇವರಿಂದ ಕರೆಯಲ್ಪಟ್ಟಾಗ ಮಾತ್ರ ಅದನ್ನು ವಹಿಸಿಕೊಳ್ಳುತ್ತಾನೆ; ಆರೋನನು ಸಹ ದೇವರಿಂದಲೇ ಕರೆಯಲ್ಪಟ್ಟು ಆ ಗೌರವವನ್ನು ವಹಿಸಿಕೊಂಡನು.  ತದ್ರೀತಿಯಲ್ಲಿ ಕ್ರಿಸ್ತನು ಸಹ ಮಹಾ ಯಾಜಕನಾಗುವ ಮೂಲಕ ತನ್ನನ್ನೇ ಮಹಿಮೆಪಡಿಸಿಕೊಳ್ಳದೆ ಅವನ ವಿಷಯದಲ್ಲಿ, “ನೀನು ನನ್ನ ಮಗನು; ಇಂದು ನಾನು ನಿನಗೆ ತಂದೆಯಾದೆನು” ಎಂದು ಹೇಳಿದಾತನಿಂದ ಮಹಿಮೆಗೊಳಿಸಲ್ಪಟ್ಟನು.  ಆತನು ಇನ್ನೊಂದು ಸ್ಥಳದಲ್ಲಿ, “ನೀನು ಮೆಲ್ಕಿಜೆದೇಕನ ರೀತಿಗನುಸಾರ ಸದಾಕಾಲಕ್ಕೂ ಯಾಜಕನಾಗಿದ್ದೀ” ಎಂದು ಹೇಳುತ್ತಾನೆ.  ಕ್ರಿಸ್ತನು ಮನುಷ್ಯನಾಗಿದ್ದ ದಿನಗಳಲ್ಲಿ ತನ್ನನ್ನು ಮರಣದಿಂದ ಕಾಪಾಡಲು ಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರು ಸುರಿಸುತ್ತಾ ಯಾಚನೆಗಳನ್ನೂ ಬಿನ್ನಹಗಳನ್ನೂ ಸಲ್ಲಿಸಿದನು ಮತ್ತು ಅವನ ದೇವಭಯದ ನಿಮಿತ್ತ ಅನುಗ್ರಹಪೂರ್ವಕವಾಗಿ ಕೇಳಲ್ಪಟ್ಟನು.  ಅವನು ಮಗನಾಗಿದ್ದರೂ ತಾನು ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು;  ಅವನು ಪರಿಪೂರ್ಣಗೊಳಿಸಲ್ಪಟ್ಟ ಬಳಿಕ ತನಗೆ ವಿಧೇಯರಾಗಿರುವವರೆಲ್ಲರ ನಿತ್ಯ ರಕ್ಷಣೆಗೆ ಕಾರಣನಾದನು. 10  ಏಕೆಂದರೆ ಅವನು ಮೆಲ್ಕಿಜೆದೇಕನ ರೀತಿಗನುಸಾರವಾದ ಮಹಾ ಯಾಜಕನು ಎಂದು ದೇವರಿಂದ ನಿರ್ದಿಷ್ಟವಾಗಿ ಕರೆಯಲ್ಪಟ್ಟಿದ್ದಾನೆ. 11  ಅವನ ವಿಷಯದಲ್ಲಿ ನಾವು ಹೇಳಬೇಕಾಗಿರುವುದು ಎಷ್ಟೋ ಇದೆ, ಆದರೆ ನಿಮ್ಮ ಕಿವಿಗಳು ಮಂದವಾಗಿರುವುದರಿಂದ ಅದನ್ನು ವಿವರಿಸುವುದು ಕಷ್ಟಕರ. 12  ವಾಸ್ತವದಲ್ಲಿ ಕಾಲವನ್ನು ನೋಡಿದರೆ ನೀವು ಬೋಧಕರಾಗಿರಬೇಕಾಗಿತ್ತು, ಆದರೆ ನಿಮಗೆ ಪವಿತ್ರ ದೈವೋಕ್ತಿಗಳ ಪ್ರಾಥಮಿಕ ವಿಷಯಗಳನ್ನು ಪುನಃ ಆರಂಭದಿಂದ ಯಾರಾದರೂ ಕಲಿಸಿಕೊಡಬೇಕಾಗಿದೆ; ನೀವು ಹಾಲಿನ ಆವಶ್ಯಕತೆಯುಳ್ಳವರಂತೆ ಇದ್ದೀರೇ ಹೊರತು ಗಟ್ಟಿಯಾದ ಆಹಾರದ ಆವಶ್ಯಕತೆಯುಳ್ಳವರಂತೆ ಅಲ್ಲ. 13  ಹಾಲನ್ನು ಸೇವಿಸುವ ಪ್ರತಿಯೊಬ್ಬನೂ ಕೂಸಿನಂತಿರುವುದರಿಂದ ಅವನಿಗೆ ನೀತಿಯ ವಾಕ್ಯದ ಪರಿಚಯವಿರುವುದಿಲ್ಲ. 14  ಆದರೆ ಗಟ್ಟಿಯಾದ ಆಹಾರವು ಪ್ರೌಢರಿಗೆ ಅಂದರೆ ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ಉಪಯೋಗದ ಮೂಲಕ ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿಕೊಂಡವರಿಗೆ ಸೇರಿದ್ದಾಗಿದೆ.

ಪಾದಟಿಪ್ಪಣಿ