ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಇಬ್ರಿಯ 13:1-25

13  ನಿಮ್ಮ ಸಹೋದರ ಪ್ರೀತಿಯು ಮುಂದುವರಿಯಲಿ.  ಅತಿಥಿಸತ್ಕಾರಮಾಡುವುದನ್ನು ಮರೆಯಬೇಡಿರಿ, ಏಕೆಂದರೆ ಅದನ್ನು ಮಾಡುವ ಮೂಲಕ ಕೆಲವರು ತಮಗೆ ತಿಳಿಯದೇ ದೇವದೂತರನ್ನು ಸತ್ಕರಿಸಿದರು.  ಸೆರೆಯ ಬೇಡಿಗಳಲ್ಲಿರುವವರೊಂದಿಗೆ ನೀವೂ ಬಂಧಿಸಲ್ಪಟ್ಟಿದ್ದೀರೋ ಎಂಬಂತೆ ಅವರನ್ನೂ ದುರುಪಚರಿಸಲ್ಪಡುತ್ತಿರುವವರನ್ನೂ ನೆನಪಿನಲ್ಲಿಟ್ಟುಕೊಳ್ಳಿರಿ, ಏಕೆಂದರೆ ನೀವು ಇನ್ನೂ ಶರೀರದಲ್ಲಿದ್ದೀರಿ.  ವಿವಾಹವು ಎಲ್ಲರಲ್ಲಿಯೂ ಗೌರವಾರ್ಹವಾಗಿರಲಿ ಮತ್ತು ದಾಂಪತ್ಯದ ಹಾಸಿಗೆಯು ಮಾಲಿನ್ಯವಿಲ್ಲದ್ದಾಗಿರಲಿ, ಏಕೆಂದರೆ ದೇವರು ಜಾರರಿಗೂ ವ್ಯಭಿಚಾರಿಗಳಿಗೂ ನ್ಯಾಯತೀರಿಸುವನು.  ನೀವು ನಿಮಗಿರುವವುಗಳಲ್ಲಿಯೇ ತೃಪ್ತರಾಗಿರುವಾಗ ನಿಮ್ಮ ಜೀವನ ರೀತಿಯು ಹಣದ ಪ್ರೇಮದಿಂದ ಮುಕ್ತವಾಗಿರಲಿ. ಏಕೆಂದರೆ “ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ಆತನು ಹೇಳಿದ್ದಾನೆ.  ಆದುದರಿಂದ ನಾವು “ಯೆಹೋವನು ನನ್ನ ಸಹಾಯಕನು; ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಬಲ್ಲನು?” ಎಂದು ಧೈರ್ಯವಾಗಿ ಹೇಳಬಹುದು.  ದೇವರ ವಾಕ್ಯದ ಕುರಿತು ನಿಮಗೆ ತಿಳಿಸಿ ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರನ್ನು ಜ್ಞಾಪಕಮಾಡಿಕೊಳ್ಳಿರಿ ಮತ್ತು ಅವರ ನಡತೆಯ ಪರಿಣಾಮವನ್ನು ಅವಲೋಕಿಸುವಾಗ ಅವರ ನಂಬಿಕೆಯನ್ನು ಅನುಕರಿಸಿರಿ.  ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೆ ಇಂದೂ ಇದ್ದಾನೆ ಮತ್ತು ಸದಾಕಾಲಕ್ಕೂ ಹಾಗೆಯೇ ಇರುವನು.  ನಾನಾ ವಿಧವಾದ ಮತ್ತು ಅನ್ಯಬೋಧನೆಗಳ ಸೆಳೆತಕ್ಕೆ ಸಿಕ್ಕಿ ದಾರಿತಪ್ಪಿದವರಾಗಬೇಡಿ; ಏಕೆಂದರೆ ಅಪಾತ್ರ ದಯೆಯ ಮೂಲಕ ಹೃದಯವನ್ನು ದೃಢಪಡಿಸಿಕೊಳ್ಳುವುದು ಉತ್ತಮ; ಆದರೆ ಭೋಜನಪದಾರ್ಥಗಳಿಂದ ಅದು ಆಗುವುದಿಲ್ಲ. ಅವುಗಳಲ್ಲಿ ನಿರತರಾಗಿರುವವರು ಯಾವ ಪ್ರಯೋಜನವನ್ನೂ ಪಡೆದುಕೊಂಡಿಲ್ಲ. 10  ನಮಗೊಂದು ಯಜ್ಞವೇದಿ ಉಂಟು; ಗುಡಾರದಲ್ಲಿ ಪವಿತ್ರ ಸೇವೆಯನ್ನು ನಡಿಸುವವರಿಗೆ ಆ ಯಜ್ಞವೇದಿಯ ಪದಾರ್ಥಗಳನ್ನು ತಿನ್ನುವ ಅಧಿಕಾರವಿಲ್ಲ. 11  ಯಾವ ಪ್ರಾಣಿಗಳ ರಕ್ತವನ್ನು ಮಹಾ ಯಾಜಕನು ಪಾಪಪರಿಹಾರಕ್ಕಾಗಿ ಪವಿತ್ರ ಸ್ಥಳದೊಳಗೆ ತೆಗೆದುಕೊಂಡು ಹೋಗುತ್ತಾನೋ ಆ ಪ್ರಾಣಿಗಳ ದೇಹಗಳನ್ನು ಪಾಳೆಯದ ಹೊರಗೆ ಸುಟ್ಟುಬಿಡಲಾಗುತ್ತದೆ. 12  ಅದೇ ರೀತಿಯಲ್ಲಿ ಯೇಸು ಸಹ ತನ್ನ ಸ್ವಂತ ರಕ್ತದಿಂದ ಜನರನ್ನು ಪವಿತ್ರೀಕರಿಸಲಿಕ್ಕಾಗಿ ಪಟ್ಟಣದ ಹೊರಗೆ ಕಷ್ಟಾನುಭವಿಸಿದನು. 13  ಆದುದರಿಂದ ಅವನು ತಾಳಿಕೊಂಡ ನಿಂದೆಯನ್ನು ತಾಳಿಕೊಳ್ಳುವವರಾಗಿ ನಾವು ಪಾಳೆಯದ ಹೊರಗೆ ಅವನ ಬಳಿಗೆ ಹೋಗೋಣ. 14  ಏಕೆಂದರೆ ಇಲ್ಲಿ ನಿರಂತರವಾಗಿರುವ ಪಟ್ಟಣವು ನಮಗಿಲ್ಲ, ಆದರೆ ಬರಲಿರುವ ಒಂದು ಪಟ್ಟಣವನ್ನು ನಾವು ಶ್ರದ್ಧೆಯಿಂದ ಮುನ್ನೋಡುತ್ತಿದ್ದೇವೆ. 15  ಅವನ ಮೂಲಕವೇ ನಾವು ದೇವರಿಗೆ ಯಾವಾಗಲೂ, ಆತನ ಹೆಸರಿಗೆ ಬಹಿರಂಗ ಪ್ರಕಟನೆಯನ್ನು ಮಾಡುವ ಸ್ತೋತ್ರಯಜ್ಞವನ್ನು ಅಂದರೆ ತುಟಿಗಳ ಫಲವನ್ನು ಅರ್ಪಿಸೋಣ. 16  ಇದಲ್ಲದೆ ಒಳ್ಳೇದನ್ನು ಮಾಡುವುದನ್ನೂ ಇತರರೊಂದಿಗೆ ಹಂಚಿಕೊಳ್ಳುವುದನ್ನೂ ಮರೆಯಬೇಡಿರಿ, ಏಕೆಂದರೆ ಇಂಥ ಯಜ್ಞಗಳಲ್ಲಿ ದೇವರು ಸಂತೃಪ್ತನಾಗುತ್ತಾನೆ. 17  ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿರಿ ಮತ್ತು ಅವರಿಗೆ ಅಧೀನರಾಗಿರಿ; ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಪ್ರಾಣಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನದಿಂದಲ್ಲ ಆನಂದದಿಂದ ಇದನ್ನು ಮಾಡಲಿ, ಏಕೆಂದರೆ ಅವರು ವ್ಯಸನಪಡುವುದು ನಿಮಗೆ ಹಾನಿಕರವಾಗಿರುವುದು. 18  ನಮಗೋಸ್ಕರ ಪ್ರಾರ್ಥಿಸುತ್ತಾ ಇರಿ; ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸುವುದರಿಂದ ನಮಗೆ ಪ್ರಾಮಾಣಿಕವಾದ ಮನಸ್ಸಾಕ್ಷಿಯಿದೆ ಎಂದು ನಾವು ನಂಬುತ್ತೇವೆ. 19  ನಾನು ಹೆಚ್ಚು ಶೀಘ್ರವಾಗಿ ನಿಮ್ಮ ಬಳಿಗೆ ಬರಲಾಗುವಂತೆ ನೀವು ಇದನ್ನು ಹೆಚ್ಚು ವಿಶೇಷ ರೀತಿಯಲ್ಲಿ ಮಾಡಬೇಕೆಂದು ಪ್ರೋತ್ಸಾಹಿಸುತ್ತೇನೆ. 20  ನಿತ್ಯವಾದ ಒಡಂಬಡಿಕೆಯ ರಕ್ತದ ಮೂಲಕ ಕುರಿಗಳ ಮಹಾ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ಶಾಂತಿಯ ದೇವರು 21  ತನ್ನ ಚಿತ್ತವನ್ನು ನೆರವೇರಿಸಲಿಕ್ಕಾಗಿ ಸಕಲ ಒಳ್ಳೇ ವಿಷಯಗಳಿಂದ ನಿಮ್ಮನ್ನು ಸಜ್ಜುಗೊಳಿಸಲಿ; ಆತನು ತನ್ನ ದೃಷ್ಟಿಯಲ್ಲಿ ಬಹು ಮೆಚ್ಚಿಕೆಯಾದದ್ದನ್ನು ಯೇಸು ಕ್ರಿಸ್ತನ ಮೂಲಕ ನಮ್ಮಲ್ಲಿ ನಡೆಸುವನು. ಆತನಿಗೆ ಸದಾಕಾಲಕ್ಕೂ ಮಹಿಮೆಯು ಸಲ್ಲುತ್ತಾ ಇರಲಿ. ಆಮೆನ್‌. 22  ಸಹೋದರರೇ, ಈ ಉತ್ತೇಜನದ ಮಾತನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ನಾನು ಕೆಲವೇ ಮಾತುಗಳಲ್ಲಿ ಈ ಪತ್ರವನ್ನು ರಚಿಸಿದ್ದೇನೆ. 23  ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಗಿದೆ ಎಂಬುದು ನಿಮಗೆ ತಿಳಿದಿರಲಿ; ಅವನು ಬೇಗನೆ ಬರುವುದಾದರೆ ನಾನು ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು. 24  ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರೆಲ್ಲರಿಗೆ ಮತ್ತು ಪವಿತ್ರ ಜನರೆಲ್ಲರಿಗೆ ನನ್ನ ವಂದನೆಗಳನ್ನು ತಿಳಿಸಿರಿ. ಇಟಲಿಯಲ್ಲಿರುವವರು ನಿಮಗೆ ತಮ್ಮ ವಂದನೆಗಳನ್ನು ಕಳುಹಿಸುತ್ತಾರೆ. 25  ದೇವರ ಅಪಾತ್ರ ದಯೆಯು ನಿಮ್ಮೆಲ್ಲರೊಂದಿಗಿರಲಿ.

ಪಾದಟಿಪ್ಪಣಿ