ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಬ್ರಿಯ 12:1-29

12  ಆದಕಾರಣ ಸಾಕ್ಷಿಗಳ ಇಷ್ಟೊಂದು ದೊಡ್ಡ ಮೇಘವು ನಮ್ಮ ಸುತ್ತಲೂ ಇರುವುದರಿಂದ ನಾವು ಸಹ ಎಲ್ಲ ಭಾರವನ್ನೂ ಸುಲಭವಾಗಿ ಸುತ್ತಿಕೊಳ್ಳುವ ಪಾಪವನ್ನೂ ತೆಗೆದುಹಾಕಿ  ನಮ್ಮ ನಂಬಿಕೆಯ ಮುಖ್ಯ ನಿಯೋಗಿಯೂ ಪರಿಪೂರ್ಣಕನೂ ಆಗಿರುವ ಯೇಸುವಿನ ಮೇಲೆ ದೃಷ್ಟಿನೆಟ್ಟವರಾಗಿ ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ. ಅವನು ತನ್ನ ಮುಂದೆ ಇಡಲ್ಪಟ್ಟಿದ್ದ ಆನಂದಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಯಾತನಾ ಕಂಬವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ.  ನೀವು ಬಳಲಿದವರಾಗದಂತೆ ಮತ್ತು ನಿರುತ್ಸಾಹಗೊಳ್ಳದಂತೆ ತಮ್ಮನ್ನೇ ಖಂಡಿಸಿಕೊಳ್ಳುವಂಥ ಪಾಪಿಗಳಿಂದ ಅಂಥ ಪ್ರತಿಕೂಲ ಮಾತುಗಳನ್ನು ಸಹಿಸಿಕೊಂಡಿರುವವನನ್ನು ನಿಕಟವಾಗಿ ಪರಿಗಣಿಸಿರಿ.  ಆ ಪಾಪಕ್ಕೆ ವಿರುದ್ಧವಾದ ನಿಮ್ಮ ಹೋರಾಟದಲ್ಲಿ ನೀವು ಇನ್ನೂ ರಕ್ತವನ್ನು ಸುರಿಸುವ ಹಂತದ ವರೆಗೆ ಎಂದಿಗೂ ಅದನ್ನು ಎದುರಿಸಿರುವುದಿಲ್ಲ.  ಆದರೆ ನಿಮ್ಮನ್ನು ಪುತ್ರರೆಂದು ಸಂಬೋಧಿಸಿ ಹೇಳಿರುವ ಬುದ್ಧಿವಾದವನ್ನು ನೀವು ಸಂಪೂರ್ಣವಾಗಿ ಮರೆತುಬಿಟ್ಟಿದ್ದೀರಿ. ಅದೇನೆಂದರೆ, “ನನ್ನ ಮಗನೇ, ಯೆಹೋವನಿಂದ ಕೊಡಲ್ಪಡುವ ಶಿಸ್ತನ್ನು ತಾತ್ಸಾರಮಾಡಬೇಡ; ಆತನು ನಿನ್ನನ್ನು ತಿದ್ದುವಾಗ ಬಿದ್ದುಹೋಗಬೇಡ;  ಏಕೆಂದರೆ ಯೆಹೋವನು ಯಾರನ್ನು ಪ್ರೀತಿಸುತ್ತಾನೋ ಅವರಿಗೇ ಶಿಸ್ತನ್ನು ನೀಡುತ್ತಾನೆ; ವಾಸ್ತವದಲ್ಲಿ, ಆತನು ಮಗನಂತೆ ಸೇರಿಸಿಕೊಳ್ಳುವ ಪ್ರತಿಯೊಬ್ಬನನ್ನು ದಂಡಿಸುತ್ತಾನೆ.”  ಶಿಸ್ತಿಗಾಗಿಯೇ ನೀವು ತಾಳಿಕೊಳ್ಳುತ್ತಿದ್ದೀರಿ. ಪುತ್ರರೊಂದಿಗೆ ವ್ಯವಹರಿಸುವಂಥ ರೀತಿಯಲ್ಲಿ ದೇವರು ನಿಮ್ಮೊಂದಿಗೆ ವ್ಯವಹರಿಸುತ್ತಾನೆ. ತಂದೆಯಿಂದ ಶಿಸ್ತನ್ನು ಹೊಂದದಿರುವ ಮಗನಿದ್ದಾನೊ?  ಎಲ್ಲರು ಹೊಂದುವ ಶಿಸ್ತಿನಲ್ಲಿ ನೀವೂ ಪಾಲುಗಾರರಾಗದಿದ್ದರೆ ನೀವು ಹಾದರಕ್ಕೆ ಹುಟ್ಟಿರುವ ಮಕ್ಕಳಾಗಿದ್ದೀರೇ ಹೊರತು ಪುತ್ರರಲ್ಲ.  ಇದಲ್ಲದೆ, ನಮ್ಮನ್ನು ಶಿಸ್ತುಗೊಳಿಸಲು ಶರೀರ ಸಂಬಂಧವಾದ ತಂದೆಗಳು ನಮಗಿರುತ್ತಿದ್ದರು ಮತ್ತು ನಾವು ಅವರಿಗೆ ಗೌರವವನ್ನು ಸಲ್ಲಿಸುತ್ತಿದ್ದೆವು. ಹೀಗಿರುವಾಗ ನಮ್ಮ ಆಧ್ಯಾತ್ಮಿಕ ಜೀವದ ತಂದೆಯಾಗಿರುವಾತನಿಗೆ ನಾವು ನಮ್ಮನ್ನು ಇನ್ನಷ್ಟು ಅಧೀನಪಡಿಸಿಕೊಂಡು ಜೀವಿಸಬೇಕಲ್ಲವೆ? 10  ಆ ಶಾರೀರಿಕ ತಂದೆಗಳು ತಮಗೆ ಒಳ್ಳೆಯದೆಂದು ತೋರಿದ್ದಕ್ಕನುಸಾರ ಕೆಲವು ದಿವಸಗಳ ವರೆಗೆ ನಮಗೆ ಶಿಸ್ತನ್ನು ನೀಡುತ್ತಿದ್ದರು; ದೇವರಾದರೋ ನಾವು ತನ್ನ ಪವಿತ್ರತೆಯಲ್ಲಿ ಪಾಲುಗಾರರಾಗುವಂತೆ ನಮ್ಮ ಪ್ರಯೋಜನಕ್ಕಾಗಿ ಶಿಸ್ತನ್ನು ನೀಡುತ್ತಾನೆ. 11  ನಿಜ, ಯಾವ ಶಿಸ್ತು ಸಹ ತತ್ಕಾಲಕ್ಕೆ ಆನಂದಕರವಾಗಿ ತೋರದೆ ದುಃಖಕರವಾಗಿಯೇ ತೋರುತ್ತದೆ; ಆದರೆ ತರುವಾಯ ಅದರಿಂದ ತರಬೇತಿಹೊಂದಿದವರಿಗೆ ಸಮಾಧಾನಕರವಾದ ಫಲವನ್ನು ಅಂದರೆ ನೀತಿಯನ್ನು ಫಲಿಸುತ್ತದೆ. 12  ಆದುದರಿಂದ, ಜೋಲುಬಿದ್ದ ಕೈಗಳನ್ನೂ ನಿತ್ರಾಣಗೊಂಡಿರುವ ಮೊಣಕಾಲುಗಳನ್ನೂ ನೆಟ್ಟಗೆ ಮಾಡಿರಿ; 13  ನಿಮ್ಮ ಪಾದಗಳಿಗೆ ನೇರವಾದ ದಾರಿಗಳನ್ನು ಮಾಡುತ್ತಾ ಇರಿ; ಹೀಗೆ ಮಾಡಿದರೆ ಕುಂಟಾದದ್ದೂ ಕೀಲಿನಿಂದ ತಪ್ಪಿಹೋಗದೆ ವಾಸಿಯಾಗುವುದು. 14  ಎಲ್ಲ ಜನರೊಂದಿಗೆ ಶಾಂತಿಯನ್ನು ಮತ್ತು ಪವಿತ್ರೀಕರಣವನ್ನು ಬೆನ್ನಟ್ಟಿರಿ. ಇದಿಲ್ಲದೆ ಯಾವ ಮನುಷ್ಯನೂ ಕರ್ತನನ್ನು ನೋಡನು. 15  ನಿಮ್ಮಲ್ಲಿ ಯಾವನೂ ದೇವರ ಅಪಾತ್ರ ದಯೆಯನ್ನು ಹೊಂದಲು ತಪ್ಪಿಹೋಗದಂತೆಯೂ ಯಾವ ವಿಷಕಾರಿ ಬೇರೂ ನಿಮ್ಮಲ್ಲಿ ಚಿಗುರಿ ತೊಂದರೆಯನ್ನು ಉಂಟುಮಾಡಿ ಅದರಿಂದ ಅನೇಕರು ಮಲಿನರಾಗದಂತೆಯೂ 16  ಯಾವ ಜಾರನಾಗಲಿ, ಒಂದು ಊಟಕ್ಕೋಸ್ಕರ ತನ್ನ ಚೊಚ್ಚಲತನದ ಹಕ್ಕನ್ನೇ ಕೊಟ್ಟುಬಿಟ್ಟ ಏಸಾವನಂತೆ ಪವಿತ್ರ ವಿಷಯಗಳನ್ನು ಗಣ್ಯಮಾಡದವನಾಗಲಿ ನಿಮ್ಮಲ್ಲಿ ಇರದಂತೆ ಜಾಗ್ರತೆಯಿಂದ ನೋಡಿಕೊಳ್ಳಿರಿ. 17  ಏಸಾವನು ತದನಂತರ ಆಶೀರ್ವಾದದಲ್ಲಿ ಬಾಧ್ಯನಾಗಲು ಬಯಸಿದಾಗ ನಿರಾಕರಿಸಲ್ಪಟ್ಟನು; ಏಕೆಂದರೆ ಅವನು ತಂದೆಯ ಮನಸ್ಸನ್ನು ಬದಲಾಯಿಸಲು ಕಣ್ಣೀರಿನೊಂದಿಗೆ ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಿದರೂ ಅದಕ್ಕೆ ಆಸ್ಪದ ಸಿಗಲಿಲ್ಲ ಎಂಬುದನ್ನು ನೀವು ಬಲ್ಲಿರಿ. 18  ನೀವು ಮುಟ್ಟಸಾಧ್ಯವಿರುವಂಥ ಮತ್ತು ಬೆಂಕಿಹೊತ್ತಿದಂಥ ಬೆಟ್ಟವನ್ನೂ ದಟ್ಟವಾದ ಮೋಡವನ್ನೂ ಗಾಢವಾದ ಕತ್ತಲೆಯನ್ನೂ ಬಿರುಗಾಳಿಯನ್ನೂ 19  ತುತೂರಿಯ ಧ್ವನಿಯನ್ನೂ ಮಾತುಗಳ ಶಬ್ದವನ್ನೂ ಸಮೀಪಿಸಲಿಲ್ಲ. ಆ ಶಬ್ದವನ್ನು ಕೇಳಿಸಿಕೊಂಡ ಜನರು ತಮಗೆ ಇನ್ನು ಯಾವ ಮಾತನ್ನೂ ಕೂಡಿಸಬಾರದೆಂದು ಬೇಡಿಕೊಂಡರು. 20  ಏಕೆಂದರೆ, “ಒಂದು ಮೃಗವು ಬೆಟ್ಟವನ್ನು ಮುಟ್ಟಿದರೆ ಅದನ್ನು ಕಲ್ಲೆಸೆದು ಕೊಲ್ಲಬೇಕು” ಎಂಬ ಆಜ್ಞೆಯು ಅವರಿಗೆ ಸಹನೀಯವಾಗಿರಲಿಲ್ಲ. 21  ಇದಲ್ಲದೆ, ಅಲ್ಲಿ ತೋರಿಬಂದದ್ದು ಎಷ್ಟು ಭಯಾನಕವಾಗಿತ್ತೆಂದರೆ, “ನನಗೆ ತುಂಬ ಭಯವಾಗುತ್ತದೆ ಮತ್ತು ನಡುಗುತ್ತಿದ್ದೇನೆ” ಎಂದು ಮೋಶೆಯು ಹೇಳಿದನು. 22  ಆದರೆ ನೀವು ಚೀಯೋನ್‌ ಪರ್ವತವನ್ನೂ ಜೀವವುಳ್ಳ ದೇವರ ಪಟ್ಟಣವಾಗಿರುವ ಸ್ವರ್ಗೀಯ ಯೆರೂಸಲೇಮನ್ನೂ ಸಾಮಾನ್ಯ ಸಮಾವೇಶದಲ್ಲಿ ಕೂಡಿಬಂದಿರುವ ಸಹಸ್ರಾರು ದೇವದೂತರನ್ನೂ ಸಮೀಪಿಸಿದ್ದೀರಿ; 23  ಸ್ವರ್ಗದಲ್ಲಿ ಹೆಸರು ಬರೆಸಿಕೊಂಡಿರುವ ಚೊಚ್ಚಲಮಕ್ಕಳ ಸಭೆಗೂ ಎಲ್ಲರ ನ್ಯಾಯಾಧಿಪತಿಯಾಗಿರುವ ದೇವರ ಬಳಿಗೂ ಪರಿಪೂರ್ಣಗೊಳಿಸಲ್ಪಟ್ಟಿರುವ ನೀತಿವಂತರ ಆಧ್ಯಾತ್ಮಿಕ ಜೀವಗಳ ಬಳಿಗೂ 24  ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಉತ್ತಮವಾದ ರೀತಿಯಲ್ಲಿ ಮಾತಾಡುವ ಪ್ರೋಕ್ಷಣೆಯ ರಕ್ತದ ಬಳಿಗೂ ಬಂದಿದ್ದೀರಿ. 25  ಮಾತಾಡುತ್ತಿರುವಾತನಿಗೆ ನೆವಹೇಳಿ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿರಿ. ಭೂಮಿಯ ಮೇಲೆ ದೈವಿಕ ಎಚ್ಚರಿಕೆಯನ್ನು ಕೊಡುತ್ತಿದ್ದವನಿಗೆ ನೆವಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರು ದಂಡನೆಯಿಂದ ತಪ್ಪಿಸಿಕೊಳ್ಳಲಿಲ್ಲವಾದರೆ, ಸ್ವರ್ಗದಿಂದ ಮಾತಾಡುವಾತನಿಂದ ನಾವು ತಿರುಗಿಕೊಳ್ಳುವುದಾದರೆ ತಪ್ಪಿಸಿಕೊಳ್ಳಲಾರೆವು ಎಂಬುದು ಇನ್ನಷ್ಟು ಹೆಚ್ಚು ನಿಶ್ಚಯ. 26  ಆ ಕಾಲದಲ್ಲಿ ಆತನ ಧ್ವನಿಯು ಭೂಮಿಯನ್ನು ಅಲುಗಾಡಿಸಿತು, ಈಗಲಾದರೋ ಆತನು “ಇನ್ನೊಂದು ಸಾರಿ ನಾನು ಭೂಮಿಯನ್ನು ಮಾತ್ರವಲ್ಲದೆ ಆಕಾಶವನ್ನು ಸಹ ನಡುಗಿಸುವೆನು” ಎಂದು ವಾಗ್ದಾನಮಾಡಿದ್ದಾನೆ. 27  “ಇನ್ನೊಂದು ಸಾರಿ” ಎಂಬ ಮಾತು ಅಲುಗಾಡಿಸಲ್ಪಟ್ಟಿರುವ ವಸ್ತುಗಳು ನಿರ್ಮಿತವಾದವುಗಳಾಗಿರುವುದರಿಂದ ಅವುಗಳು ತೆಗೆದುಹಾಕಲ್ಪಡುವುದನ್ನು ಸೂಚಿಸುತ್ತವೆ; ಆಗ ಅಲುಗಾಡಿಸಲ್ಪಡದೇ ಇರುವ ವಸ್ತುಗಳು ಉಳಿಯುವವು. 28  ಆದುದರಿಂದ ಯಾರೂ ಅಲುಗಾಡಿಸಲಾರದ ರಾಜ್ಯವನ್ನು ನಾವು ಹೊಂದಲಿಕ್ಕಿರುವುದರಿಂದ ಅಪಾತ್ರ ದಯೆಯುಳ್ಳವರಾಗಿಯೇ ಮುಂದುವರಿಯೋಣ; ಇದರ ಮೂಲಕ ನಾವು ದೇವರಿಗೆ ಸ್ವೀಕೃತವಾದ ರೀತಿಯಲ್ಲಿ ದೇವಭಯದಿಂದಲೂ ಭಕ್ತಿಯಿಂದಲೂ ಪವಿತ್ರ ಸೇವೆಯನ್ನು ಸಲ್ಲಿಸುವಂತಾಗುವುದು.  29  ಏಕೆಂದರೆ ನಮ್ಮ ದೇವರು ದಹಿಸುವ ಬೆಂಕಿಯೂ ಆಗಿದ್ದಾನೆ.

ಪಾದಟಿಪ್ಪಣಿ