ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಬ್ರಿಯ 1:1-14

1  ಬಹಳ ಕಾಲದ ಹಿಂದೆ ಅನೇಕ ಸಂದರ್ಭಗಳಲ್ಲಿಯೂ ಅನೇಕ ವಿಧಗಳಲ್ಲಿಯೂ ಪ್ರವಾದಿಗಳ ಮುಖಾಂತರ ನಮ್ಮ ಪೂರ್ವಜರೊಂದಿಗೆ ಮಾತಾಡಿದ ದೇವರು  ಈ ದಿನಗಳ ಅಂತ್ಯದಲ್ಲಿ ನಮ್ಮೊಂದಿಗೆ ತನ್ನ ಮಗನ ಮುಖಾಂತರ ಮಾತಾಡಿದ್ದಾನೆ; ಆತನು ತನ್ನ ಮಗನನ್ನು ಎಲ್ಲಕ್ಕೂ ಬಾಧ್ಯಸ್ಥನನ್ನಾಗಿ ನೇಮಿಸಿದನು ಮತ್ತು ಅವನ ಮೂಲಕವೇ ವಿಷಯಗಳ ವ್ಯವಸ್ಥೆಗಳನ್ನು ಉಂಟುಮಾಡಿದನು.  ಅವನು ದೇವರ ಮಹಿಮೆಯ ಪ್ರತಿಬಿಂಬವೂ ಆತನ ವ್ಯಕ್ತಿತ್ವದ ನಿಖರ ಪ್ರತಿರೂಪವೂ ಆಗಿದ್ದಾನೆ ಮತ್ತು ಅವನು ತನ್ನ ಶಕ್ತಿಯ ವಾಕ್ಯದಿಂದ ಎಲ್ಲವನ್ನೂ ಪೋಷಿಸುತ್ತಾನೆ; ಅವನು ನಮ್ಮ ಪಾಪಗಳನ್ನು ಶುದ್ಧೀಕರಿಸಿದ ಬಳಿಕ ಅತ್ಯುನ್ನತ ಸ್ಥಳಗಳಲ್ಲಿ ಮಹೋನ್ನತನ ಬಲಗಡೆಯಲ್ಲಿ ಕುಳಿತುಕೊಂಡನು.  ಹೀಗೆ ಅವನು ದೇವದೂತರಿಗಿಂತಲೂ ಉತ್ತಮನಾದನು; ಎಷ್ಟೆಂದರೆ ಅವನು ಅವರ ಹೆಸರಿಗಿಂತಲೂ ಹೆಚ್ಚು ಶ್ರೇಷ್ಠವಾದ ಹೆಸರನ್ನು ಹೊಂದಿದನು.  ಉದಾಹರಣೆಗೆ, “ನೀನು ನನ್ನ ಮಗನು; ಇಂದು ನಾನು ನಿನಗೆ ತಂದೆಯಾದೆನು” ಎಂದೂ “ನಾನೇ ಅವನಿಗೆ ತಂದೆಯಾಗುವೆನು ಮತ್ತು ಅವನು ನನಗೆ ಮಗನಾಗುವನು” ಎಂದೂ ದೇವರು ತನ್ನ ದೂತರಲ್ಲಿ ಯಾವನಿಗಾದರೂ ಎಂದಾದರೂ ಹೇಳಿದನೊ?  ಇದಲ್ಲದೆ ಆತನು ತನ್ನ ಜ್ಯೇಷ್ಠಪುತ್ರನನ್ನು ನಿವಾಸಿತ ಭೂಮಿಗೆ ಪುನಃ ತರುವಾಗ, “ದೇವದೂತರೆಲ್ಲರೂ ಅವನಿಗೆ ಪ್ರಣಾಮಮಾಡಲಿ” ಎಂದು ಹೇಳುತ್ತಾನೆ.  ಮಾತ್ರವಲ್ಲದೆ, “ಆತನು ತನ್ನ ದೂತರನ್ನು ಶಕ್ತಿಶಾಲಿ ಆತ್ಮಜೀವಿಗಳನ್ನಾಗಿಯೂ ತನ್ನ ಸಾರ್ವಜನಿಕ ಸೇವಕರನ್ನು ಬೆಂಕಿಯ ಜ್ವಾಲೆಯನ್ನಾಗಿಯೂ ಮಾಡುತ್ತಾನೆ” ಎಂದು ಆತನು ದೇವದೂತರ ಕುರಿತಾಗಿ ಹೇಳುತ್ತಾನೆ.  ಮಗನ ವಿಷಯದಲ್ಲಾದರೋ, “ಸದಾಕಾಲಕ್ಕೂ ದೇವರೇ ನಿನ್ನ ಸಿಂಹಾಸನ ಮತ್ತು ನಿನ್ನ ರಾಜದಂಡವು ನೀತಿಯ ದಂಡವೇ.  ನೀನು ನೀತಿಯನ್ನು ಪ್ರೀತಿಸಿದಿ ಮತ್ತು ಅಧರ್ಮವನ್ನು ದ್ವೇಷಿಸಿದಿ. ಆದುದರಿಂದಲೇ ದೇವರು, ನಿನ್ನ ದೇವರು, ನಿನ್ನನ್ನು ನಿನ್ನ ಜೊತೆಗಾರರಿಗಿಂತ ಹೆಚ್ಚಾಗಿ ಪರಮಾನಂದತೈಲದಿಂದ ಅಭಿಷೇಕಿಸಿದ್ದಾನೆ” ಎಂದು ಹೇಳುತ್ತಾನೆ. 10  ಇದಲ್ಲದೆ “ಕರ್ತನೇ, ಆದಿಯಲ್ಲಿ ನೀನು ಭೂಮಿಯ ಅಸ್ತಿವಾರವನ್ನು ಹಾಕಿದಿ ಮತ್ತು ಆಕಾಶವು ನಿನ್ನ ಕೈಕೆಲಸವಾಗಿದೆ. 11  ಅವು ತಮ್ಮಲ್ಲಿ ತಾವೇ ನಾಶವಾಗುವವು, ಆದರೆ ನೀನು ಸದಾಕಾಲ ಉಳಿಯುವಿ; ಅವೆಲ್ಲವೂ ಮೇಲಂಗಿಯಂತೆ ಹಳೆಯದಾಗುವವು. 12  ನೀನು ಹೊದಿಕೆಯಂತೆ, ಮೇಲಂಗಿಯಂತೆ ಅವುಗಳನ್ನು ಮಡಿಸುವಿ ಮತ್ತು ಅವು ಬದಲಾಗುವವು; ನೀನಾದರೋ ಬದಲಾಗುವುದೇ ಇಲ್ಲ, ನಿನ್ನ ವರ್ಷಗಳು ಎಂದಿಗೂ ಮುಗಿದುಹೋಗುವುದೇ ಇಲ್ಲ.” 13  ಆತನು ದೇವದೂತರಲ್ಲಿ ಯಾವನ ವಿಷಯದಲ್ಲಿಯಾದರೂ, “ನಾನು ನಿನ್ನ ವೈರಿಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂಬುದಾಗಿ ಎಂದಾದರೂ ಹೇಳಿದ್ದಾನೊ? 14  ಅವರೆಲ್ಲರೂ ರಕ್ಷಣೆಯನ್ನು ಹೊಂದಲಿಕ್ಕಿರುವವರ ಶುಶ್ರೂಷೆಗಾಗಿ ಕಳುಹಿಸಲ್ಪಡುವ ಸಾರ್ವಜನಿಕ ಸೇವೆಗಾಗಿರುವ ಶಕ್ತಿಶಾಲಿ ಆತ್ಮಜೀವಿಗಳಲ್ಲವೆ?

ಪಾದಟಿಪ್ಪಣಿ