ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅ. ಕಾರ್ಯಗಳು 8:1-40

8  ಸೌಲನಾದರೊ ಅವನ ಕೊಲೆಗೆ ಸಮ್ಮತಿ​ಸುವವನಾಗಿದ್ದನು. ಆ ದಿವಸದಲ್ಲಿ ಯೆರೂಸಲೇಮಿನಲ್ಲಿದ್ದ ಸಭೆಯ ವಿರುದ್ಧ ಮಹಾ ಹಿಂಸೆಯು ಆರಂಭವಾಯಿತು; ಅಪೊಸ್ತಲರನ್ನು ಬಿಟ್ಟು ಉಳಿದವರೆಲ್ಲರೂ ಯೂದಾಯ ಸಮಾರ್ಯಗಳಾದ್ಯಂತ ಚೆದರಿಹೋದರು.  ದೇವಭಕ್ತರಾದ ಪುರುಷರು ಸ್ತೆಫನನನ್ನು ಹೂಣಿಡಲು ಕೊಂಡೊಯ್ದು ಅವನಿಗಾಗಿ ಬಹಳ ಗೋಳಾಡಿದರು.  ಆದರೆ ಸೌಲನು ಸಭೆಯೊಂದಿಗೆ ಅತಿ ದೌರ್ಜನ್ಯದಿಂದ ವರ್ತಿಸಲಾರಂಭಿಸಿದನು. ಅವನು ಮನೆಮನೆಗಳಿಗೆ ನುಗ್ಗಿ ಗಂಡಸರನ್ನೂ ​ಹೆಂಗಸರನ್ನೂ ಹೊರಗೆಳೆದು ಅವರನ್ನು ಸೆರೆ​ಮನೆಗೆ ಹಾಕಿಸುತ್ತಿದ್ದನು.  ಹಾಗಿದ್ದರೂ, ಚೆದರಿಹೋದವರು ದೇಶದಾದ್ಯಂತ ದೇವರ ವಾಕ್ಯದ ಸುವಾರ್ತೆ​ಯನ್ನು ಸಾರುತ್ತಾ ಹೋದರು.  ಫಿಲಿಪ್ಪನು ಸಮಾರ್ಯ ಪಟ್ಟಣಕ್ಕೆ ಹೋಗಿ ಅಲ್ಲಿನ ಜನರಿಗೆ ಕ್ರಿಸ್ತನ ಕುರಿತು ಸಾರಲಾರಂಭಿಸಿದನು.  ಜನರ ಗುಂಪು ಫಿಲಿಪ್ಪನಿಗೆ ಕಿವಿಗೊಡುತ್ತಾ ಅವನು ಮಾಡುತ್ತಿದ್ದ ಸೂಚಕಕಾರ್ಯಗಳನ್ನು ನೋಡುತ್ತಾ ಅವನು ಹೇಳಿದ ವಿಷಯಗಳಿಗೆ ಏಕಮನಸ್ಸಿನಿಂದ ಲಕ್ಷ್ಯಕೊಡುತ್ತಾ ಇತ್ತು.  ಅಲ್ಲಿ ದೆವ್ವಹಿಡಿದಿದ್ದವರು ಅನೇಕ​ರಿದ್ದರು ಮತ್ತು ಅವರೊಳಗಿಂದ ಆ ದೆವ್ವಗಳು ದೊಡ್ಡ ಧ್ವನಿಯಿಂದ ಕೂಗಿ ಹೊರಗೆ ಬರುತ್ತಿದ್ದವು. ಮಾತ್ರವಲ್ಲದೆ, ಅನೇಕ ಪಾರ್ಶ್ವವಾಯು ರೋಗಿಗಳು ಮತ್ತು ಕುಂಟರು ಸ್ವಸ್ಥಮಾಡಲ್ಪಟ್ಟರು.  ಇದರಿಂದ ಆ ಪಟ್ಟಣದಲ್ಲಿ ಬಹಳ ಸಂತೋಷ ಉಂಟಾಯಿತು.  ಆ ಪಟ್ಟಣದಲ್ಲಿ ಸೀಮೋನನೆಂಬ ಮನುಷ್ಯನಿದ್ದನು. ಈ ಮುಂಚೆ ಅವನು ಮಂತ್ರವಿದ್ಯೆಯನ್ನು ನಡಿಸುತ್ತಾ, ತಾನೊಬ್ಬ ಮಹಾ ವ್ಯಕ್ತಿಯೆಂದು ಹೇಳಿಕೊಳ್ಳುತ್ತಾ ಸಮಾರ್ಯದ ಜನರನ್ನು ಬೆರಗುಗೊಳಿಸುತ್ತಿದ್ದನು. 10  ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಅವನಿಗೆ ಲಕ್ಷ್ಯಕೊಡುತ್ತಾ, “ಮಹಾ ಶಕ್ತಿಯೆಂದು ಕರೆಯಸಾಧ್ಯವಿರುವ ದೇವರ ಶಕ್ತಿಯೇ ಇವನು” ಎಂದು ಹೇಳುತ್ತಿದ್ದರು. 11  ಬಹಳ ಸಮಯ​ದಿಂದಲೂ ಅವನು ತನ್ನ ಮಂತ್ರವಿದ್ಯೆಯಿಂದ ಅವರನ್ನು ಬೆರಗುಗೊಳಿಸಿದ್ದರಿಂದ ಅವರು ಅವನಿಗೆ ಲಕ್ಷ್ಯಕೊಡುತ್ತಿದ್ದರು. 12  ಆದರೆ ಫಿಲಿಪ್ಪನು ದೇವರ ರಾಜ್ಯದ ಸುವಾರ್ತೆಯನ್ನು ಮತ್ತು ಯೇಸು ಕ್ರಿಸ್ತನ ಹೆಸರನ್ನು ಸಾರಿದಾಗ ಗಂಡಸರೂ ​ಹೆಂಗಸರೂ ನಂಬಿ ದೀಕ್ಷಾಸ್ನಾನ ಪಡೆದುಕೊಂಡರು. 13  ಸೀಮೋನನು ಸಹ ವಿಶ್ವಾಸಿಯಾದನು ಮತ್ತು ದೀಕ್ಷಾಸ್ನಾನ ಪಡೆದುಕೊಂಡ ಬಳಿಕ ಯಾವಾಗಲೂ ಫಿಲಿಪ್ಪನ ಸಂಗಡ ಇರುತ್ತಿದ್ದನು; ಮತ್ತು ನಡೆಸಲ್ಪಡುತ್ತಿದ್ದ ಸೂಚಕಕಾರ್ಯಗಳನ್ನೂ ದೊಡ್ಡ ಮಹತ್ಕಾರ್ಯಗಳನ್ನೂ ನೋಡಿ ಅವನು ಬೆರಗುಗೊಂಡನು. 14  ಸಮಾರ್ಯದವರು ದೇವರ ವಾಕ್ಯವನ್ನು ಸ್ವೀಕರಿಸಿದ ಸುದ್ದಿಯನ್ನು ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಕೇಳಿಸಿ​ಕೊಂಡಾಗ ಪೇತ್ರ ಯೋಹಾನರನ್ನು ಅಲ್ಲಿಗೆ ಕಳುಹಿಸಿದರು. 15  ಇವರು ಅಲ್ಲಿಗೆ ಹೋಗಿ ಆ ಜನರು ಪವಿತ್ರಾತ್ಮವನ್ನು ಹೊಂದುವಂತೆ ಅವರಿಗೋಸ್ಕರ ಪ್ರಾರ್ಥಿಸಿದರು. 16  ಏಕೆಂದರೆ ಅಷ್ಟರ ತನಕ ​ಅವರಲ್ಲಿ ಯಾರ ಮೇಲೆಯೂ ಪವಿತ್ರಾತ್ಮ ಬಂದಿರಲಿಲ್ಲ; ಅವರು ಕರ್ತನಾದ ಯೇಸುವಿನ ಹೆಸರಿನಲ್ಲಿ ಮಾತ್ರ ದೀಕ್ಷಾಸ್ನಾನವನ್ನು ಪಡೆದು​ಕೊಂಡಿದ್ದರು. 17  ಅಪೊ​ಸ್ತಲರು ಅವರ ಮೇಲೆ ಕೈಗಳನ್ನು ಇಟ್ಟಾಗ, ಅವರು ಪವಿತ್ರಾತ್ಮವನ್ನು ಪಡೆದುಕೊಂಡರು. 18  ಅಪೊಸ್ತಲರು ತಮ್ಮ ಕೈಗಳನ್ನು ಇಟ್ಟಾಗ ಪವಿತ್ರಾತ್ಮವು ಕೊಡಲ್ಪಟ್ಟದ್ದನ್ನು ಸೀಮೋನನು ಕಂಡು ಅವರಿಗೆ ಹಣವನ್ನು ನೀಡುತ್ತಾ, 19  “ನಾನು ಯಾರ ಮೇಲೆ ಕೈಗಳನ್ನು ಇಡುತ್ತೇನೊ ಅವರು ಪವಿತ್ರಾತ್ಮವನ್ನು ಪಡೆಯುವಂತೆ ನನಗೂ ಅಧಿಕಾರವನ್ನು ಕೊಡಿ” ಎಂದು ಹೇಳಿದನು. 20  ಆದರೆ ಪೇತ್ರನು ಅವನಿಗೆ, “ನಿನ್ನ ಬೆಳ್ಳಿಯು ನಿನ್ನೊಂದಿಗೆ ಹಾಳಾಗಿಹೋಗಲಿ. ಏಕೆಂದರೆ ದೇವರ ಉಚಿತ ವರವನ್ನು ಹಣದಿಂದ ಕೊಂಡುಕೊಳ್ಳಬಹುದೆಂದು ನೀನು ಭಾವಿಸಿದ್ದೀ. 21  ನಿನ್ನ ಹೃದಯವು ದೇವರ ದೃಷ್ಟಿಯಲ್ಲಿ ಸರಿಯಾಗಿಲ್ಲದ ಕಾರಣ ಈ ವಿಷಯದಲ್ಲಿ ನಿನಗೆ ಭಾಗವೂ ಇಲ್ಲ, ಪಾಲೂ ಇಲ್ಲ. 22  ಆದುದರಿಂದ, ನಿನ್ನ ಈ ಕೆಟ್ಟತನಕ್ಕಾಗಿ ಪಶ್ಚಾತ್ತಾಪಪಡು ಮತ್ತು ಸಾಧ್ಯವಿರುವಲ್ಲಿ, ನಿನ್ನ ಹೃದಯದ ದುರುದ್ದೇಶವು ಕ್ಷಮಿಸಲ್ಪಡುವಂತೆ ಯೆಹೋವನನ್ನು ಬೇಡಿಕೊ; 23  ನೀನು ವಿಷಕರವಾದ ಕಡುಕಹಿಯೂ ಅನೀತಿಯ ಬಂಧವೂ ಆಗಿದ್ದೀ ಎಂದು ನನ್ನ ಅಭಿಪ್ರಾಯ” ಎಂದು ಹೇಳಿದನು. 24  ಅದಕ್ಕೆ ಸೀಮೋನನು, “ನೀವು ಹೇಳಿದ ಯಾವುದೇ ವಿಷಯಗಳು ನನಗೆ ಸಂಭವಿಸದಂತೆ ನನಗೋಸ್ಕರ ಯೆಹೋವನಲ್ಲಿ ಯಾಚಿಸಿರಿ” ಎಂದನು. 25  ಅವರು ಕೂಲಂಕಷವಾಗಿ ಸಾಕ್ಷಿಕೊಟ್ಟು ಯೆಹೋವನ ವಾಕ್ಯವನ್ನು ತಿಳಿಸಿದ ಬಳಿಕ ಯೆರೂಸಲೇಮಿಗೆ ಹಿಂದಿರುಗಿ ಹೋಗುವಾಗ ಸಮಾರ್ಯದವರ ಅನೇಕ ಹಳ್ಳಿಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಹೋದರು. 26  ಆಗ ಯೆಹೋವನ ದೂತನು ಫಿಲಿಪ್ಪನಿಗೆ, “ನೀನೆದ್ದು ದಕ್ಷಿಣದ ಕಡೆಗೆ ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ದಾರಿಗೆ ಹೋಗು” ಎಂದು ಹೇಳಿದನು. (ಇದು ಮರಳುಗಾಡಿನ ಮಾರ್ಗವಾಗಿದೆ.) 27  ಆಗ ಅವನು ಹೊರಟುಹೋಗಿ, ಇಥಿಯೋಪ್ಯದ ರಾಣಿಯಾದ ಕಂದಾಕೆಯ ಕೆಳಗೆ ಅಧಿಕಾರದಲ್ಲಿದ್ದ ಮತ್ತು ಅವಳ ಕೋಶಾಗಾರವೆಲ್ಲದರ ಮುಖ್ಯ ಅಧಿಕಾರಿಯಾಗಿದ್ದ ಇಥಿಯೋಪ್ಯದ ಕಂಚುಕಿಯನ್ನು ಕಂಡನು. ಅವನು ಆರಾಧನೆ​ಗಾಗಿ ಯೆರೂಸಲೇಮಿಗೆ ಹೋಗಿದ್ದನು. 28  ಅವನು ಅಲ್ಲಿಂದ ಹಿಂದಿರುಗುತ್ತಿದ್ದಾಗ ತನ್ನ ರಥದಲ್ಲಿ ಕುಳಿತುಕೊಂಡು ಯೆಶಾಯ ಪ್ರವಾದಿಯ ಗ್ರಂಥವನ್ನು ಗಟ್ಟಿಯಾಗಿ ಓದು​ತ್ತಿದ್ದನು. 29  ಆಗ ದೇವರಾತ್ಮವು ಫಿಲಿಪ್ಪನಿಗೆ, “ನೀನು ರಥವನ್ನು ಸಮೀಪಿಸಿ ಅದರೊಂದಿಗೆ ಹೋಗು” ಎಂದು ಹೇಳಿತು. 30  ಫಿಲಿಪ್ಪನು ರಥದ ಮಗ್ಗುಲಲ್ಲಿ ಓಡಿ ಕಂಚುಕಿಯು ಯೆಶಾಯ ಪ್ರವಾದಿಯ ಗ್ರಂಥವನ್ನು ಗಟ್ಟಿಯಾಗಿ ಓದುತ್ತಿರುವುದನ್ನು ಕೇಳಿಸಿಕೊಂಡು, “ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೊ?” ಎಂದು ಅವನನ್ನು ಕೇಳಿದನು. 31  ಅದಕ್ಕೆ ಅವನು, “ಯಾವನಾದರೂ ಮಾರ್ಗದರ್ಶನ ನೀಡದಿದ್ದರೆ ನನಗೆ ಹೇಗೆ ಅರ್ಥವಾದೀತು?” ಎಂದು ಹೇಳಿ, ರಥವನ್ನು ಹತ್ತಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಫಿಲಿಪ್ಪನನ್ನು ಕೇಳಿಕೊಂಡನು. 32  ಅವನು ಗಟ್ಟಿಯಾಗಿ ಓದುತ್ತಿದ್ದ ಶಾಸ್ತ್ರ​ಗ್ರಂಥದ ಭಾಗವು ಇದಾಗಿತ್ತು: “ಒಂದು ಕುರಿಯಂತೆ ಅವನು ವಧ್ಯಸ್ಥಾನಕ್ಕೆ ತರಲ್ಪಟ್ಟನು; ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವ ಒಂದು ಕುರಿಮರಿಯಂತೆ ಅವನು ತನ್ನ ಬಾಯಿಯನ್ನು ತೆರೆಯುವುದೇ ಇಲ್ಲ. 33  ಅವನನ್ನು ಅವಮಾನಿಸಿದಾಗ ಅವನಿಗೆ ನ್ಯಾಯವು ಸಿಗದೆಹೋಯಿತು. ಅವನ ಜೀವವು ಭೂಮಿಯಿಂದ ತೆಗೆಯಲ್ಪಟ್ಟಿರುವುದರಿಂದ ಅವನ ಸಂತತಿಯ ವಿವರಗಳನ್ನು ಯಾರು ತಿಳಿಸುವರು?” 34  ಕಂಚುಕಿಯು ಫಿಲಿಪ್ಪನಿಗೆ, “ಪ್ರವಾದಿಯು ಯಾರ ಕುರಿತಾಗಿ ಇದನ್ನು ಹೇಳಿದನು? ಸ್ವತಃ ತನ್ನ ಕುರಿತಾಗಿಯೊ ಅಥವಾ ಬೇರೊಬ್ಬನ ಕುರಿತಾಗಿಯೊ? ದಯಮಾಡಿ ತಿಳಿಸು” ಎಂದು ಹೇಳಿದನು. 35  ಫಿಲಿಪ್ಪನು ಮಾತಾಡುತ್ತಾ ಈ ಶಾಸ್ತ್ರವಚನದಿಂದ ಆರಂಭಿಸಿ ಯೇಸುವಿನ ವಿಷಯವಾದ ಸುವಾರ್ತೆಯನ್ನು ಅವನಿಗೆ ಪ್ರಕಟಿಸಿದನು. 36  ಅವರು ದಾರಿಯಲ್ಲಿ ಪ್ರಯಾಣವನ್ನು ಮುಂದುವರಿಸುತ್ತಿದ್ದಾಗ ಒಂದು ಜಲರಾಶಿಯ ಬಳಿಗೆ ಬಂದರು; ಆಗ ಕಂಚುಕಿಯು, “ಅಲ್ಲಿ ನೋಡು, ಜಲರಾಶಿ! ದೀಕ್ಷಾಸ್ನಾನ ಪಡೆದುಕೊಳ್ಳಲು ನನಗೆ ಅಡ್ಡಿ ಏನು?” ಎಂದು ಹೇಳಿದನು. 37  *​—⁠​—⁠ 38  ಅವನು ರಥವನ್ನು ನಿಲ್ಲಿಸಲು ಅಪ್ಪಣೆಕೊಟ್ಟ ಬಳಿಕ ಫಿಲಿಪ್ಪನು ಕಂಚುಕಿಯು ಇಬ್ಬರೂ ನೀರಿನೊಳಕ್ಕೆ ಇಳಿದುಹೋದರು; ಮತ್ತು ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು. 39  ಅವರು ನೀರಿನಿಂದ ಮೇಲೆ ಬಂದಾಗ ತಕ್ಷಣವೇ ಯೆಹೋವನ ಆತ್ಮವು * ಫಿಲಿಪ್ಪನನ್ನು ಅಲ್ಲಿಂದ ಬೇರೆ ಕಡೆಗೆ ಕೊಂಡೊ​ಯ್ಯಿತು; ಕಂಚುಕಿಯು ಸಂತೋಷಪಡುತ್ತಾ ತನ್ನ ದಾರಿಯಲ್ಲಿ ಹೊರಟು​ಹೋದುದರಿಂದ ಅವನು ಮುಂದೆಂದೂ ಫಿಲಿಪ್ಪನನ್ನು ಕಾಣಲೇ ಇಲ್ಲ. 40  ತರುವಾಯ ಫಿಲಿಪ್ಪನು ಅಷ್ಡೋದಿಗೆ ಹೋಗಿ ಅದರಾದ್ಯಂತ ಸಂಚರಿಸುತ್ತಾ ಕೈಸರೈಯವನ್ನು ತಲಪುವ ತನಕ ಎಲ್ಲ ಪಟ್ಟಣಗಳಲ್ಲಿ ಸುವಾರ್ತೆಯನ್ನು ಪ್ರಕಟಿಸುತ್ತಾ ಹೋದನು.

ಪಾದಟಿಪ್ಪಣಿ

ಅಕಾ 8:37  ಮತ್ತಾ 17:21 ರ ಪಾದಟಿಪ್ಪಣಿಯನ್ನು ನೋಡಿ.
ಅಕಾ 8:39  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.