ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅ. ಕಾರ್ಯಗಳು 6:1-15

6  ಈ ದಿನಗಳಲ್ಲಿ ಶಿಷ್ಯರ ಸಂಖ್ಯೆಯು ಹೆಚ್ಚುತ್ತಾ ಬರುತ್ತಿದ್ದಾಗ, ಗ್ರೀಕ್‌ ಭಾಷೆಯ ಯೆಹೂದ್ಯರು ಹೀಬ್ರು ಭಾಷೆಯ ಯೆಹೂದ್ಯರ ವಿರುದ್ಧ ಗುಣುಗುಟ್ಟತೊಡಗಿದರು; ಏಕೆಂದರೆ ಅವರ ವಿಧವೆಯರನ್ನು ದೈನಂದಿನ ಆಹಾರದ ವಿತರಣೆಯಲ್ಲಿ ಅಲಕ್ಷಿಸಲಾಗುತ್ತಿತ್ತು.  ಆಗ ಹನ್ನೆರಡು ಮಂದಿ ಅಪೊಸ್ತಲರು ಶಿಷ್ಯರನ್ನೆಲ್ಲ ತಮ್ಮ ಬಳಿಗೆ ಕರೆದು, “ನಾವು ದೇವರ ವಾಕ್ಯವನ್ನು ಬೋಧಿಸುವುದನ್ನು ಬಿಟ್ಟು ಆಹಾರ ವಿತರಣೆಯಲ್ಲಿ ತೊಡಗುವುದು ನಮಗೆ ಹಿತ​ವೆನಿಸುವುದಿಲ್ಲ.  ಆದುದರಿಂದ ಸಹೋದರರೇ, ನಾವು ಈ ಆವಶ್ಯಕ ಕೆಲಸದ ಮೇಲೆ ನೇಮಿಸಲಿಕ್ಕಾಗಿ ಪವಿತ್ರಾತ್ಮಭರಿತರೂ ವಿವೇಕ​ಭರಿತರೂ ಆಗಿರುವ ಏಳು ಮಂದಿ ಒಳ್ಳೇ ಹೆಸರುಳ್ಳ ಅರ್ಹ ಪುರುಷರನ್ನು ನಿಮ್ಮೊಳ​ಗಿಂದ ಆರಿಸಿಕೊಳ್ಳಿರಿ;  ನಾವಾದರೋ ಪ್ರಾರ್ಥನೆಯಲ್ಲಿಯೂ ವಾಕ್ಯಕ್ಕೆ ಸಂಬಂಧಿಸಿದ ಶುಶ್ರೂಷಾ ಕಾರ್ಯದಲ್ಲಿಯೂ ನಿರತರಾಗಿರುವೆವು” ಎಂದು ಹೇಳಿದರು.  ಈ ಮಾತುಗಳು ಇಡೀ ಜನಸಮೂಹಕ್ಕೆ ಮೆಚ್ಚಿಕೆಯಾದವು; ಮತ್ತು ಅವರು ನಂಬಿಗಸ್ತನೂ ಪವಿತ್ರಾತ್ಮಭರಿತನೂ ಆದ ಸ್ತೆಫನ​ನನ್ನೂ ಫಿಲಿಪ್ಪ ಪ್ರೊಖೋರ ನಿಕನೋರ ತಿಮೋನ ಪರ್ಮೇನ ಯೆಹೂದಿ ಮತಾವಲಂಬಿಯಾದ ಅಂತಿಯೋಕ್ಯದ ನಿಕೊಲಾಯ ಎಂಬವರನ್ನೂ ಆರಿಸಿಕೊಂಡು,  ಅಪೊಸ್ತಲರ ಮುಂದೆ ತಂದು ನಿಲ್ಲಿಸಿದಾಗ ಅವರು ಪ್ರಾರ್ಥನೆಮಾಡಿ ಈ ಪುರುಷರ ಮೇಲೆ ತಮ್ಮ ಕೈಗಳನ್ನಿಟ್ಟರು.  ಪರಿಣಾಮವಾಗಿ ದೇವರ ವಾಕ್ಯವು ಅಭಿವೃದ್ಧಿಹೊಂದುತ್ತಾ ಮತ್ತು ಯೆರೂಸಲೇಮಿನಲ್ಲಿ ಶಿಷ್ಯರ ಸಂಖ್ಯೆಯು ಬಹಳವಾಗಿ ಹೆಚ್ಚುತ್ತಾ ಹೋಯಿತು; ಯಾಜಕರಲ್ಲಿಯೂ ಬಹು ಜನರು ಕ್ರಿಸ್ತನಂಬಿಕೆಗೆ ವಿಧೇಯರಾಗಲಾರಂಭಿಸಿದರು.  ಸೌಜನ್ಯದಿಂದಲೂ ಶಕ್ತಿಯಿಂದಲೂ ತುಂಬಿದ್ದ ಸ್ತೆಫನನು ಜನರ ನಡುವೆ ಅನೇಕ ಸೂಚಕಕಾರ್ಯಗಳನ್ನೂ ಆಶ್ಚರ್ಯಕಾರ್ಯಗಳನ್ನೂ ಮಾಡುತ್ತಾ ಇದ್ದನು.  ಆದರೆ ‘ಮುಕ್ತ ಗುಲಾಮರ’ * ಸಭಾಮಂದಿರದವರಲ್ಲಿಯೂ * ಕುರೇನ್ಯ ಮತ್ತು ಅಲೆಕ್ಸಾಂದ್ರಿಯದವರಲ್ಲಿಯೂ ಕಿಲಿಕ್ಯ ಮತ್ತು ಏಷ್ಯಾದಿಂದ ಬಂದಿದ್ದವರಲ್ಲಿಯೂ ಕೆಲವರು ಸ್ತೆಫನನೊಂದಿಗೆ ವಾಗ್ವಾದ ಮಾಡಲು ಎದ್ದರು; 10  ಆದರೂ ಅವನು ವಿವೇಕದಿಂದಲೂ ಪವಿತ್ರಾತ್ಮದಿಂದಲೂ ಮಾತಾಡುತ್ತಿದ್ದುದರಿಂದ ಅವರು ತಮ್ಮ ವಾದವನ್ನು ಸ್ಥಾಪಿಸಲಾರದೆ ಹೋದರು. 11  ಆಗ ಅವರು, “ಇವನು ಮೋಶೆಗೆ ಮತ್ತು ದೇವರಿಗೆ ವಿರುದ್ಧವಾಗಿ ದೂಷಣೆಯ ಮಾತುಗಳನ್ನಾಡುವುದನ್ನು ನಾವು ಕೇಳಿಸಿಕೊಂಡಿದ್ದೇವೆ” ಎಂದು ಜನರು ಹೇಳು​ವಂತೆ ರಹಸ್ಯವಾಗಿ ಒಡಂಬಡಿಸಿದರು. 12  ಮತ್ತು ಅವರು ಜನರನ್ನೂ ಹಿರೀ​ಪುರುಷರನ್ನೂ ಶಾಸ್ತ್ರಿಗಳನ್ನೂ ಕೆರಳಿಸಿ ಥಟ್ಟನೆ ಅವನ ಮೇಲೆ ಬಿದ್ದು ಅವನನ್ನು ಬಲಾತ್ಕಾರ​ದಿಂದ ಹಿಡಿದು ಹಿರೀಸಭೆಯ ಮುಂದೆ ತಂದು ನಿಲ್ಲಿಸಿದರು. 13  ಮತ್ತು ಅವರು ಸುಳ್ಳುಸಾಕ್ಷಿಗಳನ್ನು ಹಾಜರುಪಡಿಸಿದಾಗ ಆ ಸಾಕ್ಷಿಗಳು, “ಈ ಮನುಷ್ಯನು ಈ ಪವಿತ್ರ ಸ್ಥಳಕ್ಕೆ ಹಾಗೂ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಮಾತಾಡುವುದನ್ನು ನಿಲ್ಲಿಸುವುದೇ ಇಲ್ಲ. 14  ನಜರೇತಿನವನಾದ ಈ ಯೇಸು ಈ ಸ್ಥಳವನ್ನು ಕೆಡವಿಹಾಕಿ ಮೋಶೆಯು ನಮಗೆ ಒಪ್ಪಿಸಿರುವ ಪದ್ಧತಿ​ಗಳನ್ನು ಬದಲಾಯಿಸುವನು ಎಂದು ಇವನು ಹೇಳುವುದನ್ನು ನಾವು ಕೇಳಿಸಿಕೊಂಡಿದ್ದೇವೆ” ಎಂದರು. 15  ಹಿರೀಸಭೆಯಲ್ಲಿ ಕುಳಿತುಕೊಂಡಿದ್ದವರೆಲ್ಲರೂ ಅವನನ್ನು ದಿಟ್ಟಿಸಿ ನೋಡಿದಾಗ, ಅವನ ಮುಖವು ಒಬ್ಬ ದೇವದೂತನ ಮುಖದಂತೆ ಇರುವುದನ್ನು ಕಂಡರು.

ಪಾದಟಿಪ್ಪಣಿ

ಅಕಾ 6:9  ಅಕ್ಷರಾರ್ಥವಾಗಿ, “ಲಿಬೆರ್ತೀನರು.”
ಅಕಾ 6:9  ಮತ್ತಾ 4:23 ರ ಪಾದಟಿಪ್ಪಣಿಯನ್ನು ನೋಡಿ.