ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಅ. ಕಾರ್ಯಗಳು 28:1-31

28  ನಾವು ಸುರಕ್ಷಿತವಾಗಿ ತೀರವನ್ನು ಸೇರಿದ ಬಳಿಕ ಆ ದ್ವೀಪದ ಹೆಸರು ಮಾಲ್ಟ ಎಂಬುದು ನಮಗೆ ತಿಳಿಯಿತು.  ಅನ್ಯಭಾಷೆ ಮಾತಾಡುವ ಅಲ್ಲಿನ ಜನರು ನಮಗೆ ಅಸಾಧಾರಣವಾದ ಮಾನವ ದಯೆಯನ್ನು ತೋರಿಸಿದರು; ಮಳೆಯು ಸುರಿಯುತ್ತಿದ್ದು ತುಂಬ ಚಳಿಯಿದ್ದುದರಿಂದ ಅವರು ಬೆಂಕಿಯನ್ನು ಹೊತ್ತಿಸಿ ನಮ್ಮೆಲ್ಲರನ್ನು ಸೇರಿಸಿಕೊಂಡರು.  ಆದರೆ ಪೌಲನು ಕಟ್ಟಿಗೆಯ ಒಂದು ಹೊರೆಯನ್ನು ಕೂಡಿಸಿ ಅದನ್ನು ಬೆಂಕಿಯ ಮೇಲೆ ಹಾಕಿದಾಗ ಆ ಕಾವಿನ ದೆಸೆಯಿಂದ ಒಂದು ಹಾವು * ಹೊರಗೆ ಬಂದು ಅವನ ಕೈಗೆ ಬಿಗಿಯಾಗಿ ಸುತ್ತಿಕೊಂಡಿತು.  ಅನ್ಯಭಾಷೆ ಮಾತಾಡುವ ಆ ಜನರು ಅವನ ಕೈಯಿಂದ ಜೋತಾಡುತ್ತಿದ್ದ ವಿಷಜಂತುವನ್ನು ನೋಡಿ, “ಖಂಡಿತವಾಗಿಯೂ ಈ ಮನುಷ್ಯನು ಕೊಲೆಪಾತಕನೇ; ಇವನು ಸಮುದ್ರದಿಂದ ಬದುಕಿ ಉಳಿದರೂ ಪ್ರತೀಕಾರದ ನ್ಯಾಯವು ಇವನನ್ನು ಬದುಕಲು ಬಿಡುವುದಿಲ್ಲ” ಎಂದು ಪರಸ್ಪರ ಮಾತಾಡಿಕೊಳ್ಳತೊಡಗಿದರು.  ಆದರೆ ಅವನು ಆ ವಿಷಜಂತುವನ್ನು ಬೆಂಕಿಗೆ ಝಾಡಿಸಿಬಿಟ್ಟನು ಮತ್ತು ಅವನಿಗೆ ಏನೂ ಹಾನಿಯಾಗಲಿಲ್ಲ.  ಅವನು ಉರಿಯೂತದಿಂದ ಬಾತುಹೋಗುತ್ತಾನೆ ಅಥವಾ ಥಟ್ಟನೆ ಸತ್ತುಬೀಳುತ್ತಾನೆ ಎಂದು ಅವರು ನಿರೀಕ್ಷಿಸುತ್ತಿದ್ದರು. ಅವರು ಬಹಳ ಸಮಯ ಕಾದಿದ್ದು ಅವನಿಗೆ ಕೇಡೇನೂ ಸಂಭವಿಸದಿರುವುದನ್ನು ಕಂಡು ತಮ್ಮ ಮನಸ್ಸನ್ನು ಬದಲಾಯಿಸಿ ‘ಇವನೊಬ್ಬ ದೇವನು’ ಎಂದು ಹೇಳತೊಡಗಿದರು.  ಈ ಸ್ಥಳದ ನೆರೆಹೊರೆಯಲ್ಲೇ ದ್ವೀಪದ ಮುಖ್ಯಸ್ಥನಾದ ಪೊಪ್ಲಿಯನೆಂಬವನ ಜಮೀನು ಇತ್ತು; ಅವನು ನಮ್ಮನ್ನು ಉದಾರಭಾವದಿಂದ ಬರಮಾಡಿಕೊಂಡು ಮೂರು ದಿವಸ ಆದರದಿಂದ ಸತ್ಕರಿಸಿದನು.  ಆದರೆ ಪೊಪ್ಲಿಯನ ತಂದೆಯು ಜ್ವರದಿಂದಲೂ ರಕ್ತಭೇದಿಯಿಂದಲೂ ಅಸ್ವಸ್ಥನಾಗಿ ಮಲಗಿದ್ದನು; ಪೌಲನು ಅವನ ಬಳಿಗೆ ಹೋಗಿ ಪ್ರಾರ್ಥನೆಮಾಡಿ ಅವನ ಮೇಲೆ ಕೈಗಳನ್ನಿಟ್ಟು ಅವನನ್ನು ಗುಣಪಡಿಸಿದನು.  ಇದಾದ ಮೇಲೆ ಆ ದ್ವೀಪದಲ್ಲಿ ಅಸ್ವಸ್ಥರಾಗಿದ್ದ ಇತರರೂ ಪೌಲನ ಬಳಿಗೆ ಬಂದು ಸ್ವಸ್ಥರಾದರು. 10  ಅವರು ಅನೇಕ ಉಡುಗೊರೆಗಳಿಂದ ನಮ್ಮನ್ನು ಗೌರವಿಸಿ ನಾವು ನಮ್ಮ ಪ್ರಯಾಣವನ್ನು ಮುಂದುವರಿಸಿದಾಗ ನಮಗೆ ಆವಶ್ಯಕವಾದ ವಸ್ತುಗಳನ್ನು ತಂದು ಹಡಗಿನಲ್ಲಿಟ್ಟರು. 11  ಮೂರು ತಿಂಗಳಾದ ಮೇಲೆ ಅಲೆಕ್ಸಾಂದ್ರಿಯದಿಂದ ಬಂದು ಆ ದ್ವೀಪದಲ್ಲಿ ಚಳಿಗಾಲವನ್ನು ಕಳೆದಿದ್ದ “ಸ್ಯೂಸ್‌ ಪುತ್ರರು” ಎಂಬ ಚಿಹ್ನೆಯಿದ್ದ ಒಂದು ಹಡಗಿನಲ್ಲಿ ಪ್ರಯಾಣವನ್ನು ಆರಂಭಿಸಿದೆವು. 12  ನಾವು ಸುರಕೂಸ್‌ ಬಂದರನ್ನು ತಲಪಿ ಅಲ್ಲಿ ಮೂರು ದಿವಸ ಉಳಿದೆವು; 13  ಅಲ್ಲಿಂದ ಸುತ್ತಿಕೊಂಡು ಹೋಗಿ ರೇಗಿಯಕ್ಕೆ ತಲಪಿದೆವು. ಒಂದು ದಿವಸದ ಬಳಿಕ ದಕ್ಷಿಣ ಗಾಳಿಯು ಬೀಸಲಾರಂಭಿಸಿದ್ದರಿಂದ ನಾವು ಎರಡನೆಯ ದಿವಸ ಪೊತಿಯೋಲಕ್ಕೆ ಬಂದೆವು. 14  ಅಲ್ಲಿ ನಮಗೆ ಸಹೋದರರು ಸಿಕ್ಕಿದರು ಮತ್ತು ಏಳು ದಿವಸ ತಮ್ಮೊಂದಿಗೆ ಉಳಿಯುವಂತೆ ಬೇಡಿಕೊಂಡರು; ಹೀಗೆ ನಾವು ರೋಮ್‌ ಪಟ್ಟಣದ ಕಡೆಗೆ ಬಂದೆವು. 15  ಅಲ್ಲಿನ ಸಹೋದರರು ನಮ್ಮ ಸುದ್ದಿಯನ್ನು ಕೇಳಿಸಿಕೊಂಡಾಗ ನಮ್ಮನ್ನು ಸಂಧಿಸಲಿಕ್ಕಾಗಿ ಅಪ್ಪಿಯ ಪೇಟೆಯ ವರೆಗೂ ತ್ರಿಛತ್ರವೆಂಬ ಸ್ಥಳದ ವರೆಗೂ ಬಂದರು; ಅವರನ್ನು ನೋಡಿದಾಗ ಪೌಲನು ದೇವರಿಗೆ ಕೃತಜ್ಞತೆ ಸಲ್ಲಿಸಿ ಧೈರ್ಯಗೊಂಡನು. 16  ಕೊನೆಗೆ ನಾವು ರೋಮ್‌ ಪಟ್ಟಣವನ್ನು ಪ್ರವೇಶಿಸಿದಾಗ ಪೌಲನಿಗೆ, ಸೈನಿಕ ಕಾವಲಿದ್ದವನಾಗಿ ತಾನಾಗಿಯೇ ಉಳಿಯಲು ಅನುಮತಿ ಸಿಕ್ಕಿತು. 17  ಆದರೆ ಮೂರು ದಿವಸಗಳ ನಂತರ ಅವನು ಯೆಹೂದ್ಯರ ಪ್ರಮುಖ ಪುರುಷರನ್ನು ಕರೆಸಿದನು. ಅವರು ಕೂಡಿಬಂದಾಗ ಅವನು ಅವರಿಗೆ, “ಜನರೇ, ಸಹೋದರರೇ, ನಾನು ನಮ್ಮ ಜನರಿಗೂ ನಮ್ಮ ಪೂರ್ವಜರ ಆಚಾರಗಳಿಗೂ ವಿರುದ್ಧವಾಗಿ ಏನನ್ನೂ ಮಾಡಿಲ್ಲವಾದರೂ ಯೆರೂಸಲೇಮಿನಿಂದ ರೋಮನರ ಕೈಗೆ ಒಬ್ಬ ಸೆರೆಯಾಳಾಗಿ ಒಪ್ಪಿಸಲ್ಪಟ್ಟೆ. 18  ಅವರು ವಿಚಾರಣೆಮಾಡಿ ನನ್ನಲ್ಲಿ ಮರಣದಂಡನೆಗೆ ಕಾರಣವೇನೂ ಇಲ್ಲದ್ದರಿಂದ ನನ್ನನ್ನು ಬಿಡುಗಡೆಮಾಡಬೇಕೆಂದಿದ್ದರು. 19  ಆದರೆ ಯೆಹೂದ್ಯರು ಅದಕ್ಕೆ ವಿರುದ್ಧವಾಗಿ ಮಾತಾಡುತ್ತಾ ಇದ್ದಾಗ ನಾನು ಕೈಸರನಿಗೆ ಮನವಿಮಾಡಿಕೊಳ್ಳುವ ನಿರ್ಬಂಧಕ್ಕೊಳಗಾದೆ; ಆದರೆ ನನ್ನ ಜನಾಂಗದವರ ಮೇಲೆ ಆರೋಪ ಹೊರಿಸಬೇಕೆಂಬ ಅಭಿಪ್ರಾಯದಿಂದ ಹಾಗೆ ಮಾಡಲಿಲ್ಲ. 20  ಈ ಕಾರಣದಿಂದಲೇ ನಾನು ನಿಮ್ಮನ್ನು ಕಂಡು ಮಾತಾಡಲು ಬಯಸಿದೆ; ಇಸ್ರಾಯೇಲ್‌ ಜನರ ನಿರೀಕ್ಷೆಯ ನಿಮಿತ್ತವಾಗಿಯೇ ನಾನು ಈ ಸರಪಣಿಯಿಂದ ಬಂಧಿಸಲ್ಪಟ್ಟಿದ್ದೇನೆ” ಎಂದು ಹೇಳಿದನು. 21  ಆಗ ಅವರು ಅವನಿಗೆ, “ನಿನ್ನ ಕುರಿತು ನಮಗೆ ಯೂದಾಯದಿಂದ ಯಾವ ಪತ್ರಗಳೂ ಬಂದಿಲ್ಲ, ಅಲ್ಲಿಂದ ಬಂದಿರುವ ಸಹೋದರರಲ್ಲಿ ಯಾರೂ ನಿನ್ನ ವಿರುದ್ಧ ಕೆಟ್ಟದ್ದೇನನ್ನೂ ವರದಿಮಾಡಿಲ್ಲ ಅಥವಾ ಮಾತಾಡಿಲ್ಲ. 22  ಆದರೆ ನಿನ್ನ ಅಭಿಪ್ರಾಯಗಳೇನು ಎಂಬುದನ್ನು ನಿನ್ನಿಂದಲೇ ಕೇಳಿಸಿಕೊಳ್ಳುವುದು ಯೋಗ್ಯವೆಂದು ನಮಗನಿಸುತ್ತದೆ; ಏಕೆಂದರೆ ನಿಜವಾಗಿಯೂ ಎಲ್ಲ ಕಡೆಗಳಲ್ಲಿ ಈ ಭಿನ್ನಪಂಥದ ವಿರುದ್ಧವಾಗಿ ಮಾತಾಡಲಾಗುತ್ತಿದೆ ಎಂಬುದು ನಮಗೆ ತಿಳಿದಿದೆ” ಎಂದು ಹೇಳಿದರು. 23  ಅವರು ಅವನೊಂದಿಗೆ ಒಂದು ದಿವಸವನ್ನು ನಿಗದಿಪಡಿಸಿ ಬಹು ಸಂಖ್ಯೆಯಲ್ಲಿ ಅವನು ಉಳುಕೊಂಡಿದ್ದ ಸ್ಥಳಕ್ಕೆ ಬಂದರು. ಅವನು ಬೆಳಗಿನಿಂದ ಸಾಯಂಕಾಲದ ವರೆಗೆ ದೇವರ ರಾಜ್ಯದ ಕುರಿತು ಕೂಲಂಕಷವಾಗಿ ಸಾಕ್ಷಿನೀಡುವ ಮೂಲಕ ಮತ್ತು ಮೋಶೆಯ ಧರ್ಮಶಾಸ್ತ್ರವನ್ನೂ ಪ್ರವಾದಿಗಳ ಗ್ರಂಥಗಳನ್ನೂ ಉಪಯೋಗಿಸಿ ಯೇಸುವಿನ ಕುರಿತಾಗಿ ಅವರನ್ನು ಒಡಂಬಡಿಸುವ ಮೂಲಕ ವಿಷಯವನ್ನು ವಿವರಿಸಿ ಹೇಳಿದನು. 24  ಅವನು ಹೇಳಿದ ವಿಷಯಗಳನ್ನು ಕೆಲವರು ನಂಬಲಾರಂಭಿಸಿದರು; ಇತರರು ನಂಬದೆ ಹೋದರು. 25  ಅವರಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಉಂಟಾಗಲಾಗಿ ಅವರು ಅಲ್ಲಿಂದ ಹೊರಟುಹೋಗಲು ಆರಂಭಿಸಿದಾಗ ಪೌಲನು ಈ ಒಂದು ಹೇಳಿಕೆಯನ್ನು ಮಾಡಿದನು: “ಪ್ರವಾದಿಯಾದ ಯೆಶಾಯನ ಮೂಲಕ ಪವಿತ್ರಾತ್ಮವು ನಿಮ್ಮ ಪೂರ್ವಜರಿಗೆ ಸೂಕ್ತವಾಗಿಯೇ ತಿಳಿಸಿದ್ದು: 26  ‘ನೀನು ಈ ಜನರ ಬಳಿಗೆ ಹೋಗಿ, “ನೀವು ಕೇಳಿಸಿಕೊಳ್ಳುತ್ತಲೇ ಇರುವಿರಿ ಆದರೆ ಅರ್ಥಮಾಡಿಕೊಳ್ಳುವುದೇ ಇಲ್ಲ; ನೀವು ನೋಡುತ್ತಲೇ ಇರುವಿರಿ ಆದರೆ ಎಂದೂ ಕಾಣಲಾರಿರಿ. 27  ಈ ಜನರು ತಮ್ಮ ಕಣ್ಣುಗಳಿಂದ ಎಂದೂ ಕಾಣದಂತೆ, ಕಿವಿಗಳಿಂದ ಎಂದೂ ಕೇಳಿಸಿಕೊಳ್ಳದಂತೆ, ಹೃದಯದಿಂದ ಎಂದೂ ತಿಳಿದುಕೊಳ್ಳದಂತೆ ಮತ್ತು ನನ್ನ ಕಡೆಗೆ ತಿರುಗಿ ನನ್ನಿಂದ ಸ್ವಸ್ಥತೆಯನ್ನು ಎಂದೂ ಹೊಂದದಂತೆ ಅವರ ಹೃದಯವು ಕೊಬ್ಬಿದೆ, ಕಿವಿಗಳು ಮಂದವಾಗಿವೆ ಹಾಗೂ ಅವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ” ಎಂದು ತಿಳಿಸು.’ 28  ಆದುದರಿಂದ ರಕ್ಷಣೆಗಾಗಿ ದೇವರು ಮಾಡಿರುವ ಏರ್ಪಾಡಿನ ಕುರಿತಾದ ಸಂದೇಶವು ಅನ್ಯಜನಾಂಗಗಳವರಿಗೆ ಕಳುಹಿಸಲ್ಪಟ್ಟಿದೆ ಎಂಬುದು ನಿಮಗೆ ತಿಳಿದಿರಲಿ; ಅವರು ಖಂಡಿತವಾಗಿಯೂ ಇದಕ್ಕೆ ಕಿವಿಗೊಡುವರು.” 29  *—⁠—⁠ 30  ಹೀಗೆ ಅವನು ತಾನೇ ಬಾಡಿಗೆಗೆ ತೆಗೆದುಕೊಂಡ ಮನೆಯಲ್ಲಿ ಇಡೀ ಎರಡು ವರ್ಷವಿದ್ದು ತನ್ನ ಬಳಿಗೆ ಬರುವವರೆಲ್ಲರನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದನು; 31  ಯಾವ ಅಡ್ಡಿಯೂ ಇಲ್ಲದೆ ತುಂಬ ವಾಕ್ಸರಳತೆಯಿಂದ ಅವರಿಗೆ ದೇವರ ರಾಜ್ಯದ ಕುರಿತು ಸಾರುತ್ತಿದ್ದನು ಮತ್ತು ಕರ್ತನಾದ ಯೇಸು ಕ್ರಿಸ್ತನ ಕುರಿತು ಬೋಧಿಸುತ್ತಿದ್ದನು.

ಪಾದಟಿಪ್ಪಣಿ

ಅಕಾ 28:3  ಅಂದರೆ, ವೈಪರ್‌ ಹಾವು.
ಅಕಾ 28:29  ಮತ್ತಾ 17:21 ರ ಪಾದಟಿಪ್ಪಣಿಯನ್ನು ನೋಡಿ.