ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಅ. ಕಾರ್ಯಗಳು 26:1-32

26  ಆಗ ಅಗ್ರಿಪ್ಪನು ಪೌಲನಿಗೆ, “ನೀನು ನಿನ್ನ ಪರವಾಗಿ ಮಾತಾಡಬಹುದು” ಎಂದು ಹೇಳಿದಾಗ ಪೌಲನು ತನ್ನ ಕೈಚಾಚಿ ಪ್ರತಿವಾದಮಾಡುತ್ತಾ ಅಂದದ್ದು:  “ಅಗ್ರಿಪ್ಪ ರಾಜನೇ, ಯೆಹೂದ್ಯರು ನನ್ನ ಮೇಲೆ ಹೊರಿಸಿರುವ ಎಲ್ಲ ಆರೋಪಗಳ ವಿಷಯದಲ್ಲಿ ಇಂದು ನಿನ್ನ ಎದುರಿನಲ್ಲಿ ಪ್ರತಿವಾದವನ್ನು ಮಾಡಲಿಕ್ಕಿರುವುದಕ್ಕೆ ನಾನು ನನ್ನನ್ನು ಧನ್ಯನೆಂದು ಪರಿಗಣಿಸಿಕೊಳ್ಳುತ್ತೇನೆ.  ಏಕೆಂದರೆ ನೀನು ಯೆಹೂದ್ಯರ ಎಲ್ಲ ಆಚಾರಗಳಲ್ಲಿಯೂ ವಿವಾದಗಳಲ್ಲಿಯೂ ಪರಿಣತನಾಗಿದ್ದೀ. ಆದುದರಿಂದ ನನ್ನ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವಂತೆ ಬೇಡಿಕೊಳ್ಳುತ್ತೇನೆ.  “ನಾನು ಆರಂಭದಿಂದ ನನ್ನ ಸ್ವದೇಶದವರ ನಡುವೆಯೂ ಯೌವನದಿಂದ ಯೆರೂಸಲೇಮಿನಲ್ಲಿಯೂ ನಡೆಸಿಕೊಂಡು ಬಂದ ಜೀವನ ರೀತಿಯ ಬಗ್ಗೆ  ಮುಂಚಿನಿಂದಲೂ ನನ್ನ ಪರಿಚಯವಿರುವ ಎಲ್ಲ ಯೆಹೂದ್ಯರಿಗೆ ತಿಳಿದೇ ಇದೆ; ನಮ್ಮ ಧರ್ಮದ ಅತಿ ಕಟ್ಟುನಿಟ್ಟಾದ ಪಂಥಕ್ಕನುಸಾರ ನಾನು ಒಬ್ಬ ಫರಿಸಾಯನಾಗಿ ಜೀವಿಸಿದೆ ಎಂಬುದು ಆರಂಭದಿಂದಲೇ ಅವರಿಗೆ ತಿಳಿದಿದೆ. ಇದರ ಕುರಿತು ಅವರು ಬಯಸಿದರೆ ಸಾಕ್ಷಿಹೇಳಲಿ.  ಈಗಲೂ ನಾನು ನಮ್ಮ ಪೂರ್ವಜರಿಗೆ ದೇವರು ಮಾಡಿದ ವಾಗ್ದಾನದಲ್ಲಿ ನಿರೀಕ್ಷೆಯಿಟ್ಟಿದ್ದರಿಂದ ನ್ಯಾಯವಿಚಾರಣೆಗೆ ಕರೆಯಲ್ಪಟ್ಟಿದ್ದೇನೆ;  ಆದರೆ ನಮ್ಮ ಹನ್ನೆರಡು ಕುಲಗಳವರು ದೇವರಿಗೆ ಹಗಲಿರುಳು ಅತ್ಯಾಸಕ್ತಿಯಿಂದ ಪವಿತ್ರ ಸೇವೆಯನ್ನು ಸಲ್ಲಿಸುತ್ತಾ ಈ ವಾಗ್ದಾನದ ನೆರವೇರಿಕೆಯನ್ನು ಪಡೆಯಲು ನಿರೀಕ್ಷಿಸುತ್ತಾ ಇದ್ದಾರೆ. ರಾಜನೇ, ಈ ನಿರೀಕ್ಷೆಯ ವಿಷಯದಲ್ಲೇ ಯೆಹೂದ್ಯರು ನನ್ನ ಮೇಲೆ ದೋಷಾರೋಪ ಹೊರಿಸಿದ್ದಾರೆ.  “ದೇವರು ಮೃತರನ್ನು ಎಬ್ಬಿಸುತ್ತಾನೆ ಎಂಬುದನ್ನು ನಂಬುವುದು ಅಸಾಧ್ಯವೆಂದು ನೀವು ಏಕೆ ತೀರ್ಮಾನಿಸುತ್ತೀರಿ?  ನಜರೇತಿನ ಯೇಸುವಿನ ಹೆಸರಿನ ವಿರುದ್ಧ ಅನೇಕ ಕೃತ್ಯಗಳನ್ನು ಮಾಡಬೇಕೆಂದು ನಾನು ನಿಜವಾಗಿಯೂ ಮನಸ್ಸಿನಲ್ಲಿ ಆಲೋಚಿಸಿಕೊಂಡಿದ್ದೆ. 10  ವಾಸ್ತವದಲ್ಲಿ ಯೆರೂಸಲೇಮಿನಲ್ಲಿ ಅದನ್ನೇ ಮಾಡಿದೆ ಮತ್ತು ಮುಖ್ಯ ಯಾಜಕರಿಂದ ಅಧಿಕಾರವನ್ನು ಪಡೆದವನಾಗಿ ಪವಿತ್ರ ಜನರಲ್ಲಿ ಅನೇಕರನ್ನು ಸೆರೆಮನೆಗಳಿಗೆ ಹಾಕಿಸಿದೆ; ಅವರಿಗೆ ಮರಣದಂಡನೆ ವಿಧಿಸಲ್ಪಟ್ಟಾಗ ನಾನು ಅದನ್ನೂ ಸಮ್ಮತಿಸಿದೆ. 11  ಎಲ್ಲ ಸಭಾಮಂದಿರಗಳಲ್ಲಿ ಅವರನ್ನು ಅನೇಕಬಾರಿ ದಂಡಿಸುವ ಮೂಲಕ ಅವರು ತಮ್ಮ ನಂಬಿಕೆಯನ್ನು ತೊರೆಯುವಂತೆ ಒತ್ತಾಯಿಸಲು ಪ್ರಯತ್ನಿಸಿದೆ; ನಾನು ಅವರ ಮೇಲೆ ತುಂಬ ಕೋಪಗೊಂಡವನಾಗಿ ಹೊರಪಟ್ಟಣಗಳ ತನಕ ಹೋಗಿ ಅವರನ್ನು ಹಿಂಸೆಪಡಿಸಿದೆ. 12  “ಈ ಪ್ರಯತ್ನಗಳ ಮಧ್ಯೆ ನಾನು ಮುಖ್ಯ ಯಾಜಕರಿಂದ ಅಧಿಕಾರವನ್ನೂ ಆಜ್ಞೆಯನ್ನೂ ಪಡೆದುಕೊಂಡು ದಮಸ್ಕಕ್ಕೆ ಪ್ರಯಾಣಿಸುತ್ತಿದ್ದಾಗ, 13  ರಾಜನೇ, ಮಧ್ಯಾಹ್ನದ ಹೊತ್ತಿನಲ್ಲಿ ದಾರಿಯಲ್ಲಿ ನಾನು ಸೂರ್ಯನ ಹೊಳಪಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿದ್ದ ಒಂದು ಬೆಳಕು ಆಕಾಶದಿಂದ ಮಿಂಚುವುದನ್ನು ಕಂಡೆ. ಅದು ನನ್ನ ಸುತ್ತಲೂ ನನ್ನೊಂದಿಗೆ ಪ್ರಯಾಣಿಸುತ್ತಿದ್ದವರ ಸುತ್ತಲೂ ಹೊಳೆಯಿತು. 14  ನಾವೆಲ್ಲರೂ ನೆಲಕ್ಕೆ ಬಿದ್ದಾಗ ಹೀಬ್ರು ಭಾಷೆಯಲ್ಲಿ ಒಂದು ವಾಣಿಯು ನನಗೆ, ‘ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತಿದ್ದೀ? ಮುಳ್ಳುಗೋಲನ್ನು ಒದೆಯುತ್ತಿರುವುದು ನಿನಗೆ ಕಷ್ಟಕರವಾಗಿರುತ್ತದೆ’ ಎಂದು ಹೇಳುವುದನ್ನು ಕೇಳಿಸಿಕೊಂಡೆ. 15  ಆಗ ನಾನು ‘ಸ್ವಾಮಿ, ನೀನು ಯಾರು?’ ಎಂದು ಕೇಳಿದೆ. ಅದಕ್ಕೆ ಕರ್ತನು ನನಗೆ, ‘ನೀನು ಹಿಂಸೆಪಡಿಸುತ್ತಿರುವ ಯೇಸುವೇ ನಾನು. 16  ಹಾಗಿದ್ದರೂ, ನೀನು ಎದ್ದು ನಿಂತುಕೊ. ನನ್ನ ಕುರಿತು ನೀನು ನೋಡಿರುವ ಮತ್ತು ಮುಂದೆ ನಾನು ನಿನಗೆ ತೋರಿಸಲಿರುವ ಸಂಗತಿಗಳಿಗೆ ನಿನ್ನನ್ನು ಸೇವಕನಾಗಿಯೂ ಸಾಕ್ಷಿಯಾಗಿಯೂ ಆರಿಸಿಕೊಳ್ಳಲಿಕ್ಕಾಗಿ ನಿನಗೆ ಕಾಣಿಸಿಕೊಂಡಿದ್ದೇನೆ; 17  ನಾನು ನಿನ್ನನ್ನು ಈ ಜನರಿಂದಲೂ ಅನ್ಯಜನಾಂಗಗಳಿಂದಲೂ ಬಿಡಿಸಿ, 18  ನೀನು ಅವರ ಕಣ್ಣುಗಳನ್ನು ತೆರೆದು, ಅವರನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ತಿರುಗಿಸಿ, ಅವರು ಪಾಪಗಳಿಗಾಗಿ ಕ್ಷಮಾಪಣೆಯನ್ನೂ ನನ್ನಲ್ಲಿ ನಂಬಿಕೆಯಿಡುವ ಮೂಲಕ ಪವಿತ್ರೀಕರಿಸಲ್ಪಟ್ಟವರ ನಡುವೆ ಬಾಧ್ಯತೆಯನ್ನೂ ಹೊಂದಲಿಕ್ಕಾಗಿ ಸೈತಾನನ ಅಧಿಕಾರದಿಂದ ದೇವರ ಕಡೆಗೆ ತಿರುಗಿಸುವಂತೆ ಅವರ ಬಳಿಗೆ ಕಳುಹಿಸುತ್ತಿದ್ದೇನೆ’ ಎಂದನು. 19  “ಆದುದರಿಂದ ಅಗ್ರಿಪ್ಪ ರಾಜನೇ, ಸ್ವರ್ಗದ ಈ ದರ್ಶನಕ್ಕೆ ನಾನು ಅವಿಧೇಯನಾಗದೆ, 20  ಮೊದಲು ದಮಸ್ಕದವರಿಗೂ ಆ ಮೇಲೆ ಯೆರೂಸಲೇಮಿನವರಿಗೂ ಯೂದಾಯದಾದ್ಯಂತ ಇರುವ ಎಲ್ಲ ಸೀಮೆಗಳವರಿಗೂ ಅನ್ಯಜನಾಂಗಗಳವರಿಗೂ, ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಬೇಕೆಂಬ ಮತ್ತು ಪಶ್ಚಾತ್ತಾಪಕ್ಕೆ ಯೋಗ್ಯವಾದ ಕಾರ್ಯಗಳನ್ನು ಮಾಡಬೇಕೆಂಬ ಸಂದೇಶವನ್ನು ಸಾರುತ್ತಾ ಹೋದೆನು. 21  ಈ ಕಾರಣದಿಂದಲೇ ಯೆಹೂದ್ಯರು ದೇವಾಲಯದಲ್ಲಿ ನನ್ನನ್ನು ಹಿಡಿದು ಕೊಲ್ಲಲು ಪ್ರಯತ್ನಿಸಿದರು. 22  ಆದರೆ ನಾನು ದೇವರಿಂದ ಪಡೆದಿರುವ ಸಹಾಯದ ಕಾರಣ, ಈ ದಿನದ ವರೆಗೂ ಚಿಕ್ಕವರಿಗೂ ದೊಡ್ಡವರಿಗೂ ಸಾಕ್ಷಿನೀಡುತ್ತಾ ಇದ್ದೇನೆ; ಪ್ರವಾದಿಗಳೂ ಮೋಶೆಯೂ ಮುಂದೆ ಏನಾಗಲಿದೆಯೆಂದು ಹೇಳಿದರೊ ಅದನ್ನು ಹೊರತು ಬೇರೇನನ್ನೂ ನಾನು ಹೇಳುತ್ತಿಲ್ಲ. 23  ಏನೆಂದರೆ, ಕ್ರಿಸ್ತನು ಬಾಧೆಯನ್ನು ಅನುಭವಿಸಬೇಕಾಗಿತ್ತು ಮತ್ತು ಸತ್ತವರೊಳಗಿಂದ ಪ್ರಥಮವಾಗಿ ಪುನರುತ್ಥಾನ ಹೊಂದಿದ ಅವನು, ಈ ಜನರಿಗೂ ಅನ್ಯಜನಾಂಗಗಳವರಿಗೂ ಬೆಳಕನ್ನು ಪ್ರಕಟಿಸಬೇಕಾಗಿತ್ತು.” 24  ಪೌಲನು ಪ್ರತಿವಾದವಾಗಿ ಈ ವಿಷಯಗಳನ್ನು ಹೇಳುತ್ತಿದ್ದಾಗ ಫೆಸ್ತನು ಮಹಾಧ್ವನಿಯಿಂದ, “ಪೌಲನೇ ನಿನಗೆ ಹುಚ್ಚುಹಿಡಿಯುತ್ತಿದೆ! ಅತಿಯಾದ ಪಾಂಡಿತ್ಯವು ನಿನ್ನನ್ನು ಹುಚ್ಚನನ್ನಾಗಿ ಮಾಡುತ್ತಿದೆ!” ಎಂದನು. 25  ಅದಕ್ಕೆ ಪೌಲನು, “ಮಹಾಪ್ರಭುವಾದ ಫೆಸ್ತನೇ, ನನಗೆ ಹುಚ್ಚುಹಿಡಿದಿಲ್ಲ, ನಾನು ಸತ್ಯದ ಮಾತುಗಳನ್ನು ಸ್ವಸ್ಥಬುದ್ಧಿಯಿಂದ ನುಡಿಯುತ್ತಿದ್ದೇನೆ. 26  ವಾಸ್ತವದಲ್ಲಿ ನಾನು ಯಾರೊಂದಿಗೆ ವಾಕ್ಸರಳತೆಯಿಂದ ಮಾತಾಡುತ್ತಿದ್ದೇನೋ ಆ ರಾಜನಿಗೆ ಈ ವಿಷಯಗಳು ಚೆನ್ನಾಗಿ ತಿಳಿದಿವೆ; ಈ ವಿಷಯಗಳಲ್ಲಿ ಒಂದೂ ಅವನ ಗಮನಕ್ಕೆ ಮರೆಯಾಗುತ್ತಿಲ್ಲ ಎಂಬ ಭರವಸೆ ನನಗಿದೆ, ಏಕೆಂದರೆ ಈ ವಿಷಯವು ಒಂದು ಮೂಲೆಯಲ್ಲಿ ನಡೆಯಲಿಲ್ಲ. 27  ಅಗ್ರಿಪ್ಪ ರಾಜನೇ, ನೀನು ಪ್ರವಾದಿಗಳನ್ನು ನಂಬುತ್ತೀಯೊ? ನೀನು ನಂಬುತ್ತೀ ಎಂಬುದು ನನಗೆ ಗೊತ್ತು” ಎಂದು ಹೇಳಿದನು. 28  ಆಗ ಅಗ್ರಿಪ್ಪನು ಪೌಲನಿಗೆ, “ಅಲ್ಪಕಾಲದಲ್ಲೇ ನೀನು ನನ್ನನ್ನು ಕ್ರೈಸ್ತನಾಗುವಂತೆ ಒಡಂಬಡಿಸಿಬಿಡುವೆ” ಎಂದನು. 29  ಅದಕ್ಕೆ ಪೌಲನು, “ಅಲ್ಪಕಾಲದಲ್ಲಾಗಲಿ ದೀರ್ಘಕಾಲದಲ್ಲಾಗಲಿ ನೀನು ಮಾತ್ರವಲ್ಲದೆ ಇಂದು ನನ್ನ ಮಾತುಗಳನ್ನು ಕೇಳಿಸಿಕೊಳ್ಳುವ ಪ್ರತಿಯೊಬ್ಬರೂ ಈ ಬೇಡಿಗಳ ಹೊರತು ನನ್ನಂತೆಯೇ ಆಗಬೇಕೆಂದು ನಾನು ದೇವರನ್ನು ಬೇಡಿಕೊಳ್ಳುತ್ತೇನೆ” ಎಂದನು. 30  ಆಗ ರಾಜನು ಎದ್ದನು ಮತ್ತು ರಾಜ್ಯಪಾಲನೂ ಬೆರ್ನಿಕೆಯೂ ಅವರೊಂದಿಗೆ ಕುಳಿತಿದ್ದವರೂ ಎದ್ದರು. 31  ಆದರೆ ಅವರು ಅಲ್ಲಿಂದ ಹೋಗುವಾಗ, “ಈ ಮನುಷ್ಯನು ಮರಣದಂಡನೆಗೆ ಅಥವಾ ಬೇಡಿಗಳಿಗೆ ಅರ್ಹವಾದ ಏನನ್ನೂ ಮಾಡುತ್ತಿಲ್ಲ” ಎಂದು ಒಬ್ಬರೊಂದಿಗೊಬ್ಬರು ಮಾತಾಡಿಕೊಂಡರು. 32  ಇದಲ್ಲದೆ ಅಗ್ರಿಪ್ಪನು ಫೆಸ್ತನಿಗೆ, “ಈ ಮನುಷ್ಯನು ಕೈಸರನಿಗೆ ಮನವಿಮಾಡಿಕೊಳ್ಳದೇ ಹೋಗಿದ್ದರೆ ಇವನನ್ನು ಬಿಡುಗಡೆಮಾಡಬಹುದಿತ್ತು” ಎಂದನು.

ಪಾದಟಿಪ್ಪಣಿ