ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅ. ಕಾರ್ಯಗಳು 25:1-27

25  ಆದುದರಿಂದ ಫೆಸ್ತನು ಪ್ರಾಂತದ ಅಧಿಕಾರವನ್ನು ವಹಿಸಿಕೊಂಡ ಮೂರು ದಿವಸಗಳ ಬಳಿಕ ಕೈಸರೈಯದಿಂದ ಯೆರೂಸಲೇಮಿಗೆ ಹೋದನು;  ಅಲ್ಲಿ ಮುಖ್ಯ ಯಾಜಕರೂ ಯೆಹೂದ್ಯರ ಪ್ರಮುಖ ಪುರುಷರೂ ಪೌಲನ ವಿರುದ್ಧ ಅವನಿಗೆ ದೂರಿತ್ತರು.  ತಮಗೆ ದಯೆತೋರಿಸುತ್ತಾ ತಮ್ಮ ಪರವಾಗಿ ಅವನನ್ನು ಯೆರೂಸಲೇಮಿಗೆ ಕರೆಸುವಂತೆ ಬೇಡಿಕೊಂಡರು; ಏಕೆಂದರೆ ಅವನು ಅಲ್ಲಿಗೆ ಬರುವಾಗ ದಾರಿಯಲ್ಲಿಯೇ ಅವನನ್ನು ಕೊಲ್ಲಲಿಕ್ಕಾಗಿ ಅವರು ಹೊಂಚು​ಹಾಕಿಕೊಂಡಿದ್ದರು.  ಆದರೆ ಫೆಸ್ತನು ಅವರಿಗೆ, ಪೌಲನನ್ನು ಕೈಸರೈಯದ ಕಾವಲಿನಲ್ಲಿಯೇ ಇರಿಸಲಾಗುವುದು ಮತ್ತು ಬೇಗನೆ ತಾನು ಸಹ ಅಲ್ಲಿಗೆ ಹಿಂದಿರುಗಲಿದ್ದೇನೆ ಎಂದು ಉತ್ತರಿಸಿದನು.  ಮಾತ್ರವಲ್ಲದೆ, “ನಿಮ್ಮಲ್ಲಿ ಅಧಿಕಾರದಲ್ಲಿರುವವರು ನನ್ನೊಂದಿಗೆ ಅಲ್ಲಿಗೆ ಬಂದು ಆ ಮನುಷ್ಯನ ವಿಷಯದಲ್ಲಿ ಏನಾದರೂ ತಪ್ಪಿದ್ದರೆ ಅವನ ಮೇಲೆ ದೋಷಾರೋಪಣೆ ಹೊರಿಸಲಿ” ಎಂದು ಹೇಳಿದನು.  ಅವನು ಅವರೊಂದಿಗೆ ​ಎಂಟರಿಂದ ಹತ್ತು ದಿವಸಗಳನ್ನು ಕಳೆದ ಬಳಿಕ ಕೈಸರೈಯಕ್ಕೆ ಹಿಂದಿರುಗಿದನು; ಮರುದಿನ ನ್ಯಾಯಸ್ಥಾನದಲ್ಲಿ ಕುಳಿತುಕೊಂಡು ಪೌಲನನ್ನು ಕರೆತರುವಂತೆ ಆಜ್ಞಾಪಿಸಿದನು.  ಅವನು ಅಲ್ಲಿಗೆ ಬಂದಾಗ, ಯೆರೂಸಲೇಮಿನಿಂದ ಬಂದಿದ್ದ ಯೆಹೂದ್ಯರು ಅವನ ಸುತ್ತಲೂ ಎದ್ದುನಿಂತು ಅವನ ವಿರುದ್ಧ ಗಂಭೀರವಾದ ಅನೇಕ ಆಪಾದನೆಗಳನ್ನು ಹೊರಿಸಲಾರಂಭಿಸಿದರು. ಆದರೆ ಅವರು ಅವುಗಳನ್ನು ರುಜುಪಡಿಸಲು ಅಸಮರ್ಥರಾಗಿದ್ದರು.  ಆಗ ಪೌಲನು ಪ್ರತಿವಾದಿಸುತ್ತಾ, “ಯೆಹೂದ್ಯರ ಧರ್ಮಶಾಸ್ತ್ರದ ವಿರುದ್ಧವಾಗಲಿ ದೇವಾಲಯದ ವಿರುದ್ಧವಾಗಲಿ ಕೈಸರನ ವಿರುದ್ಧವಾಗಲಿ ನಾನು ಯಾವುದೇ ಪಾಪವನ್ನು ಮಾಡಿಲ್ಲ” ಎಂದನು.  ಆಗ ಯೆಹೂದ್ಯರ ಮೆಚ್ಚುಗೆಯನ್ನು ಪಡೆಯಲು ಬಯಸುತ್ತಿದ್ದ ಫೆಸ್ತನು ಪೌಲನಿಗೆ ಉತ್ತರಿಸುತ್ತಾ, “ನೀನು ಯೆರೂಸಲೇಮಿಗೆ ಹೋಗಿ ಈ ವಿಷಯಗಳ ಕುರಿತು ನನ್ನ ಮುಂದೆ ನ್ಯಾಯವಿಚಾರಣೆಯಾಗುವಂತೆ ಬಯಸುತ್ತೀಯೊ?” ಎಂದು ಕೇಳಿದನು. 10  ಅದಕ್ಕೆ ಪೌಲನು, “ನಾನು ಕೈಸರನ ನ್ಯಾಯಸ್ಥಾನದ ಮುಂದೆ ನಿಂತಿದ್ದೇನೆ; ಇಲ್ಲಿಯೇ ನನಗೆ ನ್ಯಾಯವಿಚಾರಣೆಯಾಗಬೇಕು. ನಿನಗೇ ಚೆನ್ನಾಗಿ ಗೊತ್ತಾಗುತ್ತಿರುವಂತೆ ನಾನು ಯೆಹೂದ್ಯರಿಗೆ ಯಾವ ತಪ್ಪನ್ನೂ ಮಾಡಿಲ್ಲ. 11  ಒಂದುವೇಳೆ ನಾನು ನಿಜವಾಗಿಯೂ ತಪ್ಪಿತಸ್ಥನಾಗಿದ್ದು ಮರಣಕ್ಕೆ ಅರ್ಹವಾದ ಯಾವುದೇ ತಪ್ಪನ್ನು ಮಾಡಿರುವುದಾದರೆ, ನಾನು ಮರಣದಂಡನೆಯನ್ನು ಬೇಡವೆನ್ನುವುದಿಲ್ಲ; ಆದರೆ ಈ ಜನರು ನನ್ನ ಮೇಲೆ ಹೊರಿಸುವ ತಪ್ಪುಗಳು ನಿಜವಲ್ಲದಿರುವಲ್ಲಿ ಅವರ ಮೇಲಿನ ದಯೆಯಿಂದ ಯಾವನೂ ನನ್ನನ್ನು ಅವರಿಗೆ ಒಪ್ಪಿಸಿಕೊಡಲು ಸಾಧ್ಯವಿಲ್ಲ. ನಾನು ಕೈಸರನಿಗೆ ಮನವಿಮಾಡಿಕೊಳ್ಳುತ್ತೇನೆ!” ಅಂದನು. 12  ಫೆಸ್ತನು ಸಲಹೆಗಾರರ ಕೂಟದೊಂದಿಗೆ ಮಾತಾಡಿದ ಬಳಿಕ, “ನೀನು ಕೈಸರನಿಗೆ ಮನವಿಮಾಡಿಕೊಂಡಿದ್ದೀ. ನೀನು ಕೈಸರನ ಬಳಿಗೇ ಹೋಗುವಿ” ಎಂದು ಉತ್ತರಿಸಿದನು. 13  ಕೆಲವು ದಿವಸಗಳು ಕಳೆದ ಬಳಿಕ ಅಗ್ರಿಪ್ಪ ರಾಜನೂ ಬೆರ್ನಿಕೆಯೂ ಫೆಸ್ತನನ್ನು ಭೇಟಿಯಾಗಿ ಅಭಿನಂದಿಸಲು ಕೈಸರೈಯಕ್ಕೆ ಬಂದರು. 14  ಅವರು ಅಲ್ಲಿ ಅನೇಕ ದಿವಸ ಉಳಿದಿದ್ದರಿಂದ ಫೆಸ್ತನು ಆ ರಾಜನ ಮುಂದೆ ಪೌಲನ ಕುರಿತಾದ ಸಂಗತಿಗಳನ್ನು ಪ್ರಸ್ತಾಪಿಸಿ ಹೇಳಿದ್ದು: “ಫೇಲಿಕ್ಸನು ಸೆರೆವಾಸಿಯಾಗಿ ಬಿಟ್ಟುಹೋದ ಒಬ್ಬ ಮನುಷ್ಯನಿದ್ದಾನೆ. 15  ನಾನು ಯೆರೂಸಲೇಮಿನಲ್ಲಿದ್ದಾಗ ಮುಖ್ಯ ಯಾಜಕರೂ ಯೆಹೂದ್ಯರ ಹಿರೀಪುರುಷರೂ ಅವನ ಕುರಿತು ದೂರು​ಗಳನ್ನು ಹೇಳಿ ಅವನಿಗೆ ವಿರುದ್ಧವಾಗಿ ದಂಡನೆಯ ನ್ಯಾಯತೀರ್ಪನ್ನು ನೀಡುವಂತೆ ಕೇಳಿಕೊಂಡರು. 16  ಆದರೆ ಪ್ರತಿವಾದಿಯು ತನ್ನ ವಾದಿಗಳನ್ನು ಮುಖಾಮುಖಿಯಾಗಿ ಸಂಧಿಸಿ, ಮಾಡಲ್ಪಟ್ಟ ಆಪಾದನೆಯ ವಿಷಯದಲ್ಲಿ ಪ್ರತಿವಾದಿಸುವುದಕ್ಕೆ ಅವಕಾಶವನ್ನು ಕೊಡದೆ ಅವನನ್ನು ಒಪ್ಪಿಸಿಕೊಡುವುದು ರೋಮ್‌ ರಾಜ್ಯದ ಪದ್ಧತಿಯಲ್ಲ ಎಂದು ನಾನು ಅವರಿಗೆ ಹೇಳಿದೆ. 17  ಆದುದರಿಂದ ಅವರು ಒಟ್ಟುಗೂಡಿ ಇಲ್ಲಿಗೆ ಬಂದಾಗ ನಾನು ತಡಮಾಡದೆ ಮರುದಿನವೇ ನ್ಯಾಯಸ್ಥಾನದಲ್ಲಿ ಕುಳಿತುಕೊಂಡು ಆ ಮನುಷ್ಯನನ್ನು ನನ್ನ ಬಳಿಗೆ ಕರೆತರುವಂತೆ ಆಜ್ಞಾಪಿಸಿದೆ. 18  ಆಪಾದ​ಕರು ನಿಂತುಕೊಂಡು ನಾನು ಅವನ ಕುರಿತು ಊಹಿಸಿದ ಯಾವುದೇ ಕೆಟ್ಟ ಆಪಾದನೆ​ಗಳನ್ನು ಅವನ ಮೇಲೆ ಹೊರಿಸಲಿಲ್ಲ. 19  ಬದಲಾಗಿ ಅವರು ತಮ್ಮ ಸ್ವಂತ ಆರಾಧನೆಯ ವಿಷಯದಲ್ಲಿಯೂ ಸತ್ತು​ಹೋಗಿದ್ದ ಆದರೆ ಜೀವಿತನಾಗಿದ್ದಾನೆ ಎಂದು ಪೌಲನು ಪ್ರತಿಪಾದಿಸುತ್ತಿದ್ದಂಥ ಯೇಸು ಎಂಬ ಒಬ್ಬ ವ್ಯಕ್ತಿಯ ವಿಷಯದಲ್ಲಿಯೂ ವಿವಾದ ಮಾಡಿಕೊಳ್ಳುತ್ತಿದ್ದರು. 20  ಈ ವಿಷಯಗಳ ಕುರಿತಾದ ವಿವಾದವನ್ನು ಹೇಗೆ ಬಗೆಹರಿಸಬೇಕೆಂದು ತೋಚದೆ, ಅವನು ಯೆರೂಸಲೇಮಿಗೆ ಹೋಗಿ ಅಲ್ಲಿ ಈ ವಿಷಯಗಳ ಕುರಿತು ನ್ಯಾಯನಿರ್ಣಯ ಹೊಂದಲು ಬಯಸುತ್ತಾನೋ ಎಂದು ನಾನು ಅವನನ್ನು ಕೇಳಿದೆ. 21  ಆದರೆ ಪೌಲನು ಚಕ್ರವರ್ತಿಯಿಂದ ಮಾಡಲ್ಪಡುವ ತೀರ್ಮಾನಕ್ಕಾಗಿ ಕಾಯುವಂತೆ ಮನವಿಮಾಡಿಕೊಂಡಾಗ, ನಾನು ಕೈಸರನ ಬಳಿಗೆ ಕಳುಹಿಸುವ ತನಕ ಅವನನ್ನು ಕಾವಲಿನಲ್ಲಿಡುವಂತೆ ಆಜ್ಞಾಪಿಸಿದೆ.” 22  ಆಗ ಅಗ್ರಿಪ್ಪನು ಫೆಸ್ತನಿಗೆ, “ನಾನು ಸಹ ಆ ಮನುಷ್ಯನು ಹೇಳುವುದನ್ನು ಕೇಳಿಸಿಕೊಳ್ಳಲು ಬಯಸುತ್ತೇನೆ” ಎಂದನು. ಅದಕ್ಕೆ ಫೆಸ್ತನು, “ನಾಳೆಯೇ ಅವನ ಮನವಿಯನ್ನು ಕೇಳಿಸಿಕೊಳ್ಳಬಹುದು” ಎಂದು ಹೇಳಿದನು. 23  ಆದುದರಿಂದ ಮರುದಿನ ಅಗ್ರಿಪ್ಪನೂ ಬೆರ್ನಿಕೆಯೂ ತುಂಬ ಆಡಂಬರದ ಪ್ರದರ್ಶನದೊಂದಿಗೆ ಬಂದು ಸಹಸ್ರಾಧಿಪತಿ​ಗಳೊಂದಿಗೂ ಪಟ್ಟಣದ ಗಣ್ಯರೊಂದಿಗೂ ಸಭಾಸ್ಥಾನದೊಳಗೆ ಪ್ರವೇಶಿಸಿದರು. ಫೆಸ್ತನು ಅಪ್ಪಣೆಕೊಟ್ಟಾಗ ಪೌಲನನ್ನು ಕರೆತರಲಾಯಿತು. 24  ಆಗ ಫೆಸ್ತನು, “ಅಗ್ರಿಪ್ಪ ರಾಜನೇ, ಇಲ್ಲಿ ನಮ್ಮೊಂದಿಗೆ ನೆರೆದಿರುವ ಎಲ್ಲ ಜನರೇ, ನೀವು ನೋಡುತ್ತಿರುವ ಈ ಮನುಷ್ಯನು ಇನ್ನೆಂದೂ ಜೀವಿಸಬಾರದೆಂದು ಕೂಗುತ್ತಾ ಯೆರೂಸಲೇಮಿನಲ್ಲಿಯೂ ಇಲ್ಲಿಯೂ ಎಲ್ಲ ಯೆಹೂದ್ಯರು ಒಟ್ಟುಗೂಡಿ ನನಗೆ ಮನವಿಮಾಡಿ​ಕೊಂಡಿದ್ದಾರೆ. 25  ಆದರೆ ಇವನು ಮರಣ​ದಂಡನೆಗೆ ಅರ್ಹವಾದ ಯಾವುದೇ ತಪ್ಪನ್ನು ಮಾಡಿಲ್ಲ ಎಂಬುದು ನನಗೆ ತಿಳಿದುಬಂದಿದೆ. ಆದುದರಿಂದ ಈ ಮನುಷ್ಯನು ತಾನೇ ಚಕ್ರವರ್ತಿಗೆ ಮನವಿಮಾಡಿಕೊಂಡಾಗ ನಾನು ಇವನನ್ನು ಕಳುಹಿಸಲು ತೀರ್ಮಾನಿಸಿದೆ. 26  ಇವನ ವಿಷಯದಲ್ಲಿ ನನ್ನ ಒಡೆಯನಿಗೆ ಬರೆದು ಕಳುಹಿಸಲು ನಿಶ್ಚಯವಾದದ್ದೇನೂ ಇಲ್ಲ. ಆದುದರಿಂದ ನಾನು ಇವನನ್ನು ನಿಮ್ಮ ಮುಂದೆ, ಮುಖ್ಯವಾಗಿ ಅಗ್ರಿಪ್ಪ ರಾಜನೇ ನಿನ್ನ ಮುಂದೆ ತಂದಿದ್ದೇನೆ; ಏಕೆಂದರೆ ಈ ನ್ಯಾಯವಿಚಾರಣೆಯು ನಡೆಸಲ್ಪಟ್ಟ ಬಳಿಕ ನನಗೆ ಬರೆಯಲು ಏನಾದರೂ ಸಿಗಬಹುದು. 27  ಒಬ್ಬ ಸೆರೆಯಾಳಿನ ವಿರುದ್ಧ ನಿಶ್ಚಿತ ಆರೋಪಗಳನ್ನು ಸೂಚಿಸದೆ ಅವನನ್ನು ಕಳುಹಿಸುವುದು ನ್ಯಾಯವೆಂದು ನನಗೆ ತೋರುವುದಿಲ್ಲ” ಎಂದು ಹೇಳಿದನು.

ಪಾದಟಿಪ್ಪಣಿ