ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಅ. ಕಾರ್ಯಗಳು 20:1-38

20  ಗಲಭೆಯು ಶಾಂತವಾದ ಬಳಿಕ ಪೌಲನು ಶಿಷ್ಯರನ್ನು ಕರೆಸಿ ಅವರನ್ನು ಉತ್ತೇಜಿಸಿ ಅವರಿಗೆ ವಿದಾಯ ಹೇಳಿ ಮಕೆದೋನ್ಯಕ್ಕೆ ಹೊರಟನು.  ಆ ಪ್ರದೇಶದಾದ್ಯಂತ ಸಂಚರಿಸಿ ಅಲ್ಲಿದ್ದವರನ್ನು ಅನೇಕ ಮಾತುಗಳಿಂದ ಉತ್ತೇಜಿಸಿದ ಮೇಲೆ ಗ್ರೀಸ್‌ ದೇಶಕ್ಕೆ ಬಂದನು.  ಅಲ್ಲಿ ಮೂರು ತಿಂಗಳು ಕಳೆದ ಬಳಿಕ, ಅವನು ಸಮುದ್ರ ಮಾರ್ಗವಾಗಿ ಸಿರಿಯಕ್ಕೆ ಹೋಗಬೇಕೆಂದಿದ್ದನು. ಆದರೆ ಯೆಹೂದ್ಯರು ಅವನ ವಿರುದ್ಧ ಒಳಸಂಚು ನಡೆಸಿದ್ದರಿಂದ ಅವನು ಮಕೆದೋನ್ಯದ ಮಾರ್ಗವಾಗಿ ಹಿಂದಿರುಗಲು ಮನಸ್ಸುಮಾಡಿದನು.  ಬೆರೋಯಪಟ್ಟಣದ ಪುರ್‍ರನ ಮಗನಾದ ಸೋಪತ್ರನೂ ಥೆಸಲೊನೀಕದವರಲ್ಲಿ ಅರಿಸ್ತಾರ್ಕನೂ ಸೆಕುಂದನೂ ದೆರ್ಬೆಪಟ್ಟಣದ ಗಾಯನೂ ತಿಮೊಥೆಯನೂ ಏಷ್ಯಾ ಪ್ರಾಂತದವರಲ್ಲಿ ತುಖಿಕನೂ ತ್ರೊಫಿಮನೂ ಅವನ ಜೊತೆಯಲ್ಲಿ ಹೋದರು.  ಇವರು ಮುಂಚಿತವಾಗಿಯೇ ಹೋಗಿ ತ್ರೋವದಲ್ಲಿ ನಮಗಾಗಿ ಕಾಯುತ್ತಿದ್ದರು;  ಆದರೆ ನಾವು ಹುಳಿಯಿಲ್ಲದ ರೊಟ್ಟಿಗಳ ಹಬ್ಬದ ದಿವಸಗಳು ಕಳೆದ ಬಳಿಕ ಫಿಲಿಪ್ಪಿಯಿಂದ ಸಮುದ್ರಮಾರ್ಗವಾಗಿ ಪ್ರಯಾಣಿಸಿ ಐದು ದಿವಸಗಳೊಳಗೆ ತ್ರೋವಕ್ಕೆ ಬಂದು ಅವರನ್ನು ಸೇರಿದೆವು; ಅಲ್ಲಿ ನಾವು ಏಳು ದಿವಸಗಳಿದ್ದೆವು.  ವಾರದ ಮೊದಲನೆಯ ದಿವಸ ನಾವು ಊಟಮಾಡಲಿಕ್ಕಾಗಿ * ಒಟ್ಟುಗೂಡಿಬಂದಿದ್ದಾಗ, ಮರುದಿನ ಅಲ್ಲಿಂದ ಹೊರಡಲಿಕ್ಕಿದ್ದ ಪೌಲನು ಅವರಿಗೆ ಭಾಷಣ ನೀಡಲಾರಂಭಿಸಿದನು; ಅವನು ಮಧ್ಯರಾತ್ರಿಯ ವರೆಗೂ ತನ್ನ ಭಾಷಣವನ್ನು ಮುಂದುವರಿಸಿದನು.  ನಾವು ಕೂಡಿಬಂದಿದ್ದ ಮೇಲಂತಸ್ತಿನ ಕೋಣೆಯಲ್ಲಿ ಅನೇಕ ದೀಪಗಳಿದ್ದವು.  ಪೌಲನು ಮಾತಾಡುತ್ತಾ ಹೋದಂತೆ ಕಿಟಕಿಯಲ್ಲಿ ಕುಳಿತಿದ್ದ ಯೂತಿಖನೆಂಬ ಒಬ್ಬ ಯೌವನಸ್ಥನಿಗೆ ಗಾಢನಿದ್ರೆ ಹತ್ತಿತು. ಅವನು ನಿದ್ರೆಯಿಂದ ತೂಕಡಿಸುತ್ತಾ ಮೂರನೆಯ ಅಂತಸ್ತಿನಿಂದ ಕೆಳಗೆ ಬಿದ್ದನು ಮತ್ತು ಅವನನ್ನು ಎತ್ತಿನೋಡಿದಾಗ ಸತ್ತಿದ್ದನು. 10  ಆದರೆ ಪೌಲನು ಕೆಳಗೆ ಹೋಗಿ ಅವನ ಮೇಲೆ ಬಿದ್ದು ಅವನನ್ನು ತಬ್ಬಿಕೊಂಡು, “ಗೋಳಾಡುವುದನ್ನು ನಿಲ್ಲಿಸಿ, ಅವನ ಪ್ರಾಣ ಅವನಲ್ಲಿದೆ” ಎಂದು ಹೇಳಿದನು. 11  ಬಳಿಕ ಅವನು ಮೇಲಂತಸ್ತಿಗೆ ಹೋಗಿ ರೊಟ್ಟಿಮುರಿದು ಊಟಮಾಡಿ ಬಹಳ ಸಮಯ ಬೆಳಗಾಗುವ ತನಕ ಅವರೊಂದಿಗೆ ಸಂಭಾಷಿಸಿ ಕೊನೆಗೆ ಅಲ್ಲಿಂದ ಹೊರಟುಹೋದನು. 12  ಅವರು ಜೀವಿತನಾದ ಆ ಹುಡುಗನನ್ನು ಕರೆದುಕೊಂಡು ಹೋದರು ಮತ್ತು ಅವರಿಗೆ ಅಪಾರವಾದ ಸಾಂತ್ವನ ದೊರಕಿತು. 13  ನಾವು ಮುಂದಾಗಿ ಹೋಗಿ ಹಡಗನ್ನು ಹತ್ತಿ ಅಸ್ಸೊಸಿನಲ್ಲಿ ಪೌಲನನ್ನು ಹತ್ತಿಸಿಕೊಳ್ಳಬೇಕೆಂದು ಅಲ್ಲಿಗೆ ಪ್ರಯಾಣಿಸಿದೆವು; ಏಕೆಂದರೆ ಪೌಲನು ಕಾಲುನಡಿಗೆಯಾಗಿ ಹೋಗಲು ಬಯಸಿದ್ದರಿಂದ ನಮಗೆ ಮುಂಚಿತವಾಗಿಯೇ ಈ ಸೂಚನೆಗಳನ್ನು ಕೊಟ್ಟಿದ್ದನು. 14  ಅಸ್ಸೊಸಿನಲ್ಲಿ ಅವನು ನಮ್ಮೊಂದಿಗೆ ಸೇರಿಕೊಂಡಾಗ ನಾವು ಅವನನ್ನು ಹಡಗಿಗೆ ಹತ್ತಿಸಿಕೊಂಡು ಮಿತಿಲೇನೆಗೆ ಹೋದೆವು; 15  ಮರುದಿನ ನಾವು ಅಲ್ಲಿಂದ ಸಮುದ್ರಮಾರ್ಗವಾಗಿ ಖೀಯೊಸ್‌ದ್ವೀಪದ ಎದುರುಗಡೆ ಬಂದು ಅದರ ಮರುದಿನ ಸಾಮೊಸಿನ ಹತ್ತಿರ ಬಂದೆವು. ಅದರ ಮರುದಿನ ಮಿಲೇತಕ್ಕೆ ಬಂದೆವು. 16  ಸಾಧ್ಯವಾದರೆ ಪಂಚಾಶತ್ತಮ ದಿವಸದ ಹಬ್ಬಕ್ಕೆ ಯೆರೂಸಲೇಮನ್ನು ತಲಪಬೇಕೆಂದು ಪೌಲನು ಅವಸರಪಡುತ್ತಾ ಇದ್ದುದರಿಂದ ಅವನು ಏಷ್ಯಾ ಪ್ರಾಂತದಲ್ಲಿ ಕಾಲಕಳೆಯಲು ಮನಸ್ಸಿಲ್ಲದೆ ಎಫೆಸವನ್ನು ದಾಟಿಹೋಗಲು ನಿರ್ಧರಿಸಿದ್ದನು. 17  ಆದರೆ ಅವನು ಮಿಲೇತದಿಂದ ಎಫೆಸದಲ್ಲಿದ್ದ ಸಭೆಯ ಹಿರೀಪುರುಷರನ್ನು ಕರೆಸಿಕೊಂಡನು. 18  ಅವರು ಅವನ ಬಳಿಗೆ ಬಂದಾಗ ಅವನು ಅವರಿಗೆ ಹೇಳಿದ್ದು: “ನಾನು ಏಷ್ಯಾ ಪ್ರಾಂತದಲ್ಲಿ ಕಾಲಿಟ್ಟ ಮೊದಲ ದಿವಸದಿಂದ ಯಾವಾಗಲೂ ನಿಮ್ಮೊಂದಿಗಿದ್ದು 19  ಯೆಹೂದ್ಯರ ಒಳಸಂಚುಗಳಿಂದ ನನ್ನ ಮೇಲೆ ಪರೀಕ್ಷೆಗಳು ಬಂದರೂ ಅತಿ ದೀನಮನಸ್ಸಿನಿಂದಲೂ ಕಣ್ಣೀರಿನಿಂದಲೂ ಕರ್ತನಿಗೆ ಸೇವೆಮಾಡುತ್ತಾ ಇದ್ದೆನೆಂಬುದು ನಿಮಗೆ ಚೆನ್ನಾಗಿ ಗೊತ್ತಿದೆ; 20  ನಾನು ನಿಮಗೆ ಪ್ರಯೋಜನಕರವಾದ ಯಾವುದೇ ವಿಷಯಗಳನ್ನು ಹೇಳಲು ಅಥವಾ ಸಾರ್ವಜನಿಕವಾಗಿಯೂ ಮನೆಮನೆಯಲ್ಲಿಯೂ ನಿಮಗೆ ಬೋಧಿಸಲು ಹಿಂಜರಿಯಲಿಲ್ಲ. 21  ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವಂತೆ ಮತ್ತು ನಮ್ಮ ಕರ್ತನಾದ ಯೇಸುವಿನಲ್ಲಿ ನಂಬಿಕೆಯಿಡುವಂತೆ ನಾನು ಯೆಹೂದ್ಯರಿಗೂ ಗ್ರೀಕರಿಗೂ ಕೂಲಂಕಷವಾಗಿ ಸಾಕ್ಷಿನೀಡಿದ್ದೇನೆ. 22  ಆದರೆ ಈಗ ನಾನು ಪವಿತ್ರಾತ್ಮದಿಂದ ನಿರ್ಬಂಧಿಸಲ್ಪಟ್ಟವನಾಗಿ ಯೆರೂಸಲೇಮಿಗೆ ಪ್ರಯಾಣಿಸುತ್ತಿದ್ದೇನೆ. ಆದರೆ ಅಲ್ಲಿ ನನಗೆ ಏನು ಸಂಭವಿಸುವುದೋ ತಿಳಿದಿಲ್ಲ; 23  ಬೇಡಿಗಳೂ ಸಂಕಟಗಳೂ ನನಗಾಗಿ ಕಾದಿವೆ ಎಂದು ಹೇಳುವ ಮೂಲಕ ಎಲ್ಲ ಪಟ್ಟಣಗಳಲ್ಲಿ ಪವಿತ್ರಾತ್ಮವು ಪುನಃ ಪುನಃ ನನಗೆ ಸಾಕ್ಷಿನೀಡುತ್ತಿದೆ. 24  ಆದರೂ ನಾನು ನನ್ನ ಪ್ರಾಣವನ್ನು ಯಾವುದೇ ರೀತಿಯಲ್ಲಿ ಅಮೂಲ್ಯವೆಂದು ಎಣಿಸುವುದಿಲ್ಲ; ನಾನು ನನ್ನ ಓಟವನ್ನೂ ದೇವರ ಅಪಾತ್ರ ದಯೆಯ ಸುವಾರ್ತೆಗೆ ಕೂಲಂಕಷ ಸಾಕ್ಷಿಯನ್ನು ಕೊಡುವಂತೆ ಕರ್ತನಾದ ಯೇಸುವಿನಿಂದ ನಾನು ಪಡೆದ ಶುಶ್ರೂಷೆಯನ್ನೂ ಪೂರ್ಣಗೊಳಿಸುವುದೇ ನನ್ನ ಅಪೇಕ್ಷೆ. 25  “ಮತ್ತು ನಿಮ್ಮ ಮಧ್ಯೆ ರಾಜ್ಯದ ಕುರಿತು ಸಾರುತ್ತಿದ್ದ ನನ್ನ ಮುಖವನ್ನು ಇನ್ನು ಮುಂದೆ ನಿಮ್ಮಲ್ಲಿ ಒಬ್ಬರೂ ನೋಡುವುದಿಲ್ಲ ಎಂಬುದು ನನಗೆ ಗೊತ್ತು. 26  ಆದುದರಿಂದ ನಾನು ಎಲ್ಲ ಮನುಷ್ಯರ ರಕ್ತದ ಹೊಣೆಯಿಂದ ಶುದ್ಧನಾಗಿದ್ದೇನೆ ಎಂದು ಇಂದೇ ನಿಮ್ಮಿಂದ ಪ್ರಮಾಣವನ್ನು ಕೋರುತ್ತೇನೆ. 27  ಏಕೆಂದರೆ ನಾನು ದೇವರ ಸಂಕಲ್ಪವನ್ನೆಲ್ಲ ನಿಮಗೆ ತಿಳಿಯಪಡಿಸಲು ಸ್ವಲ್ಪವೂ ಹಿಂಜರಿಯಲಿಲ್ಲ. 28  ದೇವರು ತನ್ನ ಸ್ವಂತ ಪುತ್ರನ ರಕ್ತದಿಂದ ಕೊಂಡುಕೊಂಡ ಆತನ ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮವು ನಿಮ್ಮನ್ನು ಮೇಲ್ವಿಚಾರಕರನ್ನಾಗಿ ನೇಮಿಸಿರುವುದರಿಂದ ನಿಮಗೂ ಇಡೀ ಮಂದೆಗೂ ಗಮನಕೊಡಿರಿ. 29  ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮ ಮಧ್ಯೆ ಪ್ರವೇಶಿಸುವವು ಮತ್ತು ಮಂದೆಯನ್ನು ಕೋಮಲತೆಯಿಂದ ನೋಡಿಕೊಳ್ಳುವುದಿಲ್ಲ ಎಂಬುದನ್ನು ನಾನು ಬಲ್ಲೆ; 30  ನಿಮ್ಮೊಳಗಿಂದಲೇ ಕೆಲವರು ಎದ್ದು ವಕ್ರವಾದ ವಿಷಯಗಳನ್ನು ಮಾತಾಡಿ ಶಿಷ್ಯರನ್ನು ತಮ್ಮ ಹಿಂದೆ ಎಳೆದುಕೊಳ್ಳುವರು. 31  “ಆದುದರಿಂದ ಎಚ್ಚರವಾಗಿರಿ ಮತ್ತು ಮೂರು ವರ್ಷ ನಾನು ಹಗಲೂರಾತ್ರಿ ಕಣ್ಣೀರಿಡುತ್ತಾ ಪ್ರತಿಯೊಬ್ಬನಿಗೂ ಬುದ್ಧಿಹೇಳುತ್ತಾ ಇದ್ದೆನೆಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. 32  ನಾನೀಗ ನಿಮ್ಮನ್ನು ದೇವರಿಗೂ ಆತನ ಅಪಾತ್ರ ದಯೆಯ ವಾಕ್ಯಕ್ಕೂ ಒಪ್ಪಿಸಿಕೊಡುತ್ತೇನೆ; ಆ ವಾಕ್ಯವು ನಿಮ್ಮಲ್ಲಿ ಭಕ್ತಿವೃದ್ಧಿಮಾಡಿ ಪವಿತ್ರರೆಲ್ಲರ ನಡುವೆ ನಿಮಗೆ ಬಾಧ್ಯತೆಯನ್ನು ನೀಡಬಲ್ಲದು. 33  ನಾನು ಯಾರೊಬ್ಬನ ಬೆಳ್ಳಿಬಂಗಾರವನ್ನಾಗಲಿ ಬಟ್ಟೆಯನ್ನಾಗಲಿ ಆಶೆಪಟ್ಟಿಲ್ಲ. 34  ಈ ಕೈಗಳೇ ನನ್ನ ಆವಶ್ಯಕತೆಗಳನ್ನೂ ನನ್ನೊಂದಿಗಿದ್ದವರ ಆವಶ್ಯಕತೆಗಳನ್ನೂ ಪೂರೈಸಿವೆ ಎಂಬುದು ನಿಮಗೆ ತಿಳಿದಿದೆ. 35  ಹೀಗೆ ಕಷ್ಟಪಟ್ಟು ದುಡಿಯುವ ಮೂಲಕ ನೀವು ಬಲಹೀನರಿಗೆ ನೆರವು ನೀಡಬೇಕೆಂಬುದನ್ನು ನಾನು ಎಲ್ಲ ವಿಷಯಗಳಲ್ಲಿ ನಿಮಗೆ ತೋರಿಸಿಕೊಟ್ಟಿದ್ದೇನೆ; ‘ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ’ ಎಂದು ಕರ್ತನಾದ ಯೇಸುವೇ ಹೇಳಿದ ಮಾತುಗಳನ್ನು ನೀವು ಮನಸ್ಸಿನಲ್ಲಿಟ್ಟುಕೊಳ್ಳಬೇಕು.” 36  ಈ ವಿಷಯಗಳನ್ನು ಹೇಳಿದ ಬಳಿಕ ಅವನು ಅವರೆಲ್ಲರೊಂದಿಗೆ ಸೇರಿ ಮೊಣಕಾಲೂರಿ ಪ್ರಾರ್ಥಿಸಿದನು. 37  ಆಗ ಅವರೆಲ್ಲರೂ ಬಹಳವಾಗಿ ಅತ್ತು ಪೌಲನ ಕೊರಳನ್ನು ಅಪ್ಪಿಕೊಂಡು ಅವನಿಗೆ ಕೋಮಲವಾಗಿ ಮುದ್ದಿಟ್ಟರು; 38  ಏಕೆಂದರೆ ಇನ್ನು ಮುಂದೆ ತಾವು ಅವನ ಮುಖವನ್ನು ನೋಡುವುದಿಲ್ಲ ಎಂದು ಅವನು ಹೇಳಿದ ಮಾತಿನಿಂದ ಅವರು ವಿಶೇಷವಾಗಿ ನೊಂದುಕೊಂಡಿದ್ದರು. ಆ ಬಳಿಕ ಅವರು ಅವನನ್ನು ಹಡಗಿನ ತನಕ ಸಾಗಕಳುಹಿಸಿದರು.

ಪಾದಟಿಪ್ಪಣಿ

ಅಕಾ 20:7  ಅಕ್ಷರಾರ್ಥವಾಗಿ, “ರೊಟ್ಟಿಮುರಿಯಲಿಕ್ಕಾಗಿ.”