ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಅ. ಕಾರ್ಯಗಳು 18:1-28

18  ಇದಾದ ಬಳಿಕ ಅವನು ಅಥೆನ್ಸನ್ನು ಬಿಟ್ಟು ಕೊರಿಂಥಕ್ಕೆ ಬಂದನು.  ಅಲ್ಲಿ ಅವನು ಪೊಂತದ ನಿವಾಸಿಯಾಗಿದ್ದ ಅಕ್ವಿಲನೆಂಬ ಒಬ್ಬ ಯೆಹೂದ್ಯನನ್ನು ಕಂಡನು. ಎಲ್ಲ ಯೆಹೂದ್ಯರು ರೋಮ್‌ ಪಟ್ಟಣವನ್ನು ಬಿಟ್ಟುಹೋಗುವಂತೆ ಕ್ಲೌದಿಯ ಚಕ್ರವರ್ತಿಯು ಆಜ್ಞೆಯಿತ್ತ ಕಾರಣ ಅವನು ತನ್ನ ಪತ್ನಿಯಾದ ಪ್ರಿಸ್ಕಿಲ್ಲಳೊಂದಿಗೆ ಇತ್ತೀಚೆಗೆ ಇಟಲಿಯಿಂದ ಇಲ್ಲಿಗೆ ಬಂದಿದ್ದನು. ಪೌಲನು ಅವರ ಬಳಿಗೆ ಹೋದನು.  ಮತ್ತು ಅವರು ಒಂದೇ ವೃತ್ತಿಯವರಾಗಿದ್ದ ಕಾರಣ ಅವನು ಅವರ ಮನೆಯಲ್ಲೇ ಉಳಿದು ಅವರೊಂದಿಗೆ ಕೆಲಸಮಾಡುತ್ತಿದ್ದನು; ಅವರು ಡೇರೆಮಾಡುವ ವೃತ್ತಿಯವರಾಗಿದ್ದರು.  ಆದರೂ ಅವನು ಪ್ರತಿ ಸಬ್ಬತ್‌ ದಿನದಂದು ಸಭಾಮಂದಿರದಲ್ಲಿ ಭಾಷಣ ನೀಡಿ ಯೆಹೂದ್ಯರನ್ನೂ ಗ್ರೀಕರನ್ನೂ ಒಡಂಬಡಿಸುತ್ತಿದ್ದನು.  ಸೀಲನೂ ತಿಮೊಥೆಯನೂ ಮಕೆದೋನ್ಯದಿಂದ ಬಂದಾಗ ಯೇಸುವೇ ಕ್ರಿಸ್ತನೆಂದು ರುಜುಪಡಿಸಲಿಕ್ಕಾಗಿ ಯೆಹೂದ್ಯರಿಗೆ ಸಾಕ್ಷಿನೀಡುತ್ತಾ ವಾಕ್ಯವನ್ನು ಸಾರುವುದರಲ್ಲಿ ಪೌಲನು ತೀವ್ರಾಸಕ್ತಿಯಿಂದ ನಿರತನಾಗಿದ್ದನು.  ಅವರು ವಿರೋಧಿಸುತ್ತಾ ದೂಷಣೆಯ ಮಾತುಗಳನ್ನಾಡುತ್ತಾ ಇದ್ದಾಗ ಅವನು ತನ್ನ ವಸ್ತ್ರಗಳನ್ನು ಝಾಡಿಸಿ ಅವರಿಗೆ, “ನಿಮ್ಮ ರಕ್ತಾಪರಾಧವು ನಿಮ್ಮ ಮೇಲೆಯೇ ಇರಲಿ. ನಾನು ನಿರ್ದೋಷಿ. ಇಂದಿನಿಂದ ನಾನು ಅನ್ಯಜನಾಂಗಗಳ ಜನರ ಬಳಿಗೆ ಹೋಗುತ್ತೇನೆ” ಎಂದು ಹೇಳಿದನು.  ಹೀಗೆ ಅವನು ಅಲ್ಲಿಂದ ಹೊರಟು ದೇವರ ಆರಾಧಕನಾಗಿದ್ದ ತೀತ ಯುಸ್ತನೆಂಬವನ ಮನೆಗೆ ಹೋದನು. ಅವನ ಮನೆ ಸಭಾಮಂದಿರದ ಪಕ್ಕದಲ್ಲೇ ಇತ್ತು.  ಸಭಾಮಂದಿರದ ಸಭಾಪತಿಯಾದ ಕ್ರಿಸ್ಪನೂ ಅವನ ಮನೆಯವರೆಲ್ಲರೂ ಕರ್ತನಲ್ಲಿ ನಂಬಿಕೆಯಿಡುವವರಾದರು. ಮತ್ತು ಸಾರಲ್ಪಡುತ್ತಿದ್ದ ಸಂದೇಶವನ್ನು ಕೇಳಿದ ಕೊರಿಂಥದವರಲ್ಲಿ ಅನೇಕರು ನಂಬಿ ದೀಕ್ಷಾಸ್ನಾನ ಪಡೆದುಕೊಂಡರು.  ಇದಲ್ಲದೆ ರಾತ್ರಿವೇಳೆಯಲ್ಲಿ ಕರ್ತನು ಪೌಲನಿಗೆ ಒಂದು ದರ್ಶನದ ಮೂಲಕ, “ಭಯಪಡಬೇಡ, ಮಾತಾಡುತ್ತಲೇ ಇರು, ಸುಮ್ಮನಿರಬೇಡ; 10  ನಾನು ನಿನ್ನೊಂದಿಗಿದ್ದೇನೆ; ಯಾರೊಬ್ಬನೂ ನಿನ್ನ ಮೇಲೆ ಬಿದ್ದು ನಿನಗೆ ಕೇಡು ಮಾಡುವುದಿಲ್ಲ; ಏಕೆಂದರೆ ಈ ಪಟ್ಟಣದಲ್ಲಿ ನನಗೆ ಅನೇಕ ಜನರಿದ್ದಾರೆ” ಎಂದು ಹೇಳಿದನು. 11  ಆದುದರಿಂದ ಅವನು ಒಂದು ವರ್ಷ ಆರು ತಿಂಗಳು ಅಲ್ಲೇ ಇದ್ದು ಅವರಿಗೆ ದೇವರ ವಾಕ್ಯವನ್ನು ಬೋಧಿಸುತ್ತಿದ್ದನು. 12  ಗಲ್ಲಿಯೋನನು ಅಖಾಯದ ಪ್ರಾಂತಾಧಿಪತಿಯಾಗಿದ್ದಾಗ ಯೆಹೂದ್ಯರು ಒಟ್ಟುಗೂಡಿ ಪೌಲನ ವಿರುದ್ಧ ಎದ್ದು ಅವನನ್ನು ನ್ಯಾಯಸ್ಥಾನದ ಮುಂದೆ ತಂದು, 13  “ಈ ವ್ಯಕ್ತಿಯು ಕಾನೂನಿಗೆ ವಿರುದ್ಧವಾಗಿ ದೇವರನ್ನು ಆರಾಧಿಸುವಂತೆ ಜನರನ್ನು ಒಡಂಬಡಿಸುತ್ತಿದ್ದಾನೆ” ಎಂದು ಹೇಳಿದರು. 14  ಪೌಲನು ಪ್ರತಿಯಾಗಿ ಮಾತಾಡಬೇಕೆಂದಿದ್ದಾಗ ಗಲ್ಲಿಯೋನನು ಯೆಹೂದ್ಯರಿಗೆ, “ಯೆಹೂದ್ಯರೇ, ಅಪರಾಧ ಇಲ್ಲವೆ ದುಷ್ಕಾರ್ಯವೇನಾದರೂ ಸಂಭವಿಸಿದ್ದ ಪಕ್ಷದಲ್ಲಿ ನಾನು ನಿಮ್ಮ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದೆ. 15  ಆದರೆ ನಿಮ್ಮ ವಿವಾದಗಳು ಬರೇ ಮಾತು, ಹೆಸರುಗಳು ಮತ್ತು ನಿಮ್ಮ ಧರ್ಮಶಾಸ್ತ್ರದ ಕುರಿತಾಗಿರುವಲ್ಲಿ ಅವುಗಳನ್ನು ನೀವೇ ನೋಡಿಕೊಳ್ಳಬೇಕು. ಈ ವಿಷಯಗಳಲ್ಲಿ ನಾನು ನ್ಯಾಯತೀರಿಸಲು ಬಯಸುವುದಿಲ್ಲ” ಎಂದನು. 16  ಹೀಗೆ ಹೇಳಿದ ಬಳಿಕ ಅವನು ಅವರನ್ನು ನ್ಯಾಯಸ್ಥಾನದ ಎದುರಿನಿಂದ ಹೊರಡಿಸಿಬಿಟ್ಟನು. 17  ಆದುದರಿಂದ ಜನರೆಲ್ಲರು ಸಭಾಮಂದಿರದ ಸಭಾಪತಿಯಾದ ಸೋಸ್ಥೆನನನ್ನು ಹಿಡಿದು ನ್ಯಾಯಸ್ಥಾನದ ಮುಂದೆಯೇ ಹೊಡೆದರು. ಆದರೆ ಗಲ್ಲಿಯೋನನು ಈ ಎಲ್ಲ ವಿಷಯಗಳಿಗೆ ಸ್ವಲ್ಪವೂ ಲಕ್ಷ್ಯಕೊಡಲಿಲ್ಲ. 18  ಆದರೆ ಪೌಲನು ಅನೇಕ ದಿವಸ ಅಲ್ಲಿದ್ದ ಬಳಿಕ ಸಹೋದರರಿಗೆ ವಿದಾಯ ಹೇಳಿ, ತಾನು ಹರಕೆ ಮಾಡಿಕೊಂಡದ್ದರಿಂದ ಕೆಂಖ್ರೆಯಲ್ಲಿ ತನ್ನ ತಲೇ ಕೂದಲನ್ನು ಕ್ಷೌರಮಾಡಿಸಿಕೊಂಡು ಪ್ರಿಸ್ಕಿಲ್ಲ ಅಕ್ವಿಲರೊಂದಿಗೆ ಸಿರಿಯಕ್ಕೆ ಸಮುದ್ರಪ್ರಯಾಣ ಮಾಡಿದನು. 19  ಅವರು ಎಫೆಸಕ್ಕೆ ಬಂದಾಗ ಪೌಲನು ಅವರನ್ನು ಅಲ್ಲೇ ಬಿಟ್ಟು ತಾನೊಬ್ಬನೇ ಸಭಾಮಂದಿರವನ್ನು ಪ್ರವೇಶಿಸಿ ಯೆಹೂದ್ಯರೊಂದಿಗೆ ತರ್ಕಿಸಿದನು. 20  ಇನ್ನೂ ಹೆಚ್ಚು ಕಾಲ ಅಲ್ಲಿ ಉಳಿಯುವಂತೆ ಅವರು ಕೇಳಿಕೊಂಡರೂ ಅವನು ಒಪ್ಪದೆ, 21  “ಯೆಹೋವನ ಚಿತ್ತವಿರುವುದಾದರೆ ನಾನು ಪುನಃ ನಿಮ್ಮ ಬಳಿಗೆ ಬರುವೆ” ಎನ್ನುತ್ತಾ ಅವರಿಗೆ ವಿದಾಯ ಹೇಳಿ ಅಲ್ಲಿಂದ ಹೊರಟನು. ಆ ಬಳಿಕ ಅವನು ಎಫೆಸದಿಂದ ಸಮುದ್ರಪ್ರಯಾಣ ಮಾಡಿ 22  ಕೈಸರೈಯಕ್ಕೆ ಬಂದನು. ಅವನು ಯೆರೂಸಲೇಮಿಗೆ ಹೋಗಿ ಸಭೆಯವರನ್ನು ವಂದಿಸಿ ಅಂತಿಯೋಕ್ಯಕ್ಕೆ ಬಂದನು. 23  ಅವನು ಅಲ್ಲಿ ಸ್ವಲ್ಪಕಾಲ ಇದ್ದ ಬಳಿಕ ಅಲ್ಲಿಂದ ಹೊರಟು ಗಲಾತ್ಯ ಮತ್ತು ಫ್ರುಗ್ಯ ಸೀಮೆಗಳ ಮೂಲಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸುತ್ತಾ ಎಲ್ಲ ಶಿಷ್ಯರನ್ನು ಬಲಪಡಿಸಿದನು. 24  ಆಗ ಅಲೆಕ್ಸಾಂದ್ರಿಯದ ನಿವಾಸಿಯೂ ವಾಕ್ಚಾತುರ್ಯವುಳ್ಳವನೂ ಆಗಿದ್ದ ಅಪೊಲ್ಲೋಸನೆಂಬ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದನು; ಅವನು ಶಾಸ್ತ್ರಗ್ರಂಥದಲ್ಲಿ ಪ್ರವೀಣನಾಗಿದ್ದನು. 25  ಈ ಮನುಷ್ಯನು ಯೆಹೋವನ ಮಾರ್ಗದ ಕುರಿತು ಮೌಖಿಕ ಉಪದೇಶ ಹೊಂದಿದವನಾಗಿದ್ದನು ಮತ್ತು ಪವಿತ್ರಾತ್ಮದಿಂದ ಪ್ರಜ್ವಲಿತನಾಗಿದ್ದುದರಿಂದ ಯೇಸುವಿನ ಕುರಿತಾದ ವಿಷಯಗಳನ್ನು ಸರಿಯಾಗಿ ತಿಳಿಸುತ್ತಾ ಬೋಧಿಸುತ್ತಾ ಇದ್ದನು; ಆದರೆ ಅವನಿಗೆ ಯೋಹಾನನು ಮಾಡಿಸುತ್ತಿದ್ದ ದೀಕ್ಷಾಸ್ನಾನದ ಪರಿಚಯ ಮಾತ್ರ ಇತ್ತು. 26  ಈ ಮನುಷ್ಯನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತಾಡಲಾರಂಭಿಸಿದನು. ಪ್ರಿಸ್ಕಿಲ್ಲ ಅಕ್ವಿಲರು ಅವನ ಮಾತುಗಳನ್ನು ಕೇಳಿಸಿಕೊಂಡಾಗ ಅವನನ್ನು ತಮ್ಮೊಂದಿಗೆ ಕರೆದುಕೊಂಡುಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸರಿಯಾದ ರೀತಿಯಲ್ಲಿ ವಿವರಿಸಿದರು. 27  ಅವನು ಸಮುದ್ರವನ್ನು ದಾಟಿ ಅಖಾಯಕ್ಕೆ ಹೋಗಲು ಬಯಸಿದ್ದರಿಂದ ಸಹೋದರರು ಅಲ್ಲಿದ್ದ ಶಿಷ್ಯರಿಗೆ ಪತ್ರಬರೆದು ಅವನನ್ನು ಆದರದಿಂದ ಬರಮಾಡಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಅವನು ಅಲ್ಲಿಗೆ ತಲಪಿದ ಬಳಿಕ, ದೇವರ ಅಪಾತ್ರ ದಯೆಯಿಂದಾಗಿ ನಂಬಿಕೆಯಿಟ್ಟಿದ್ದವರಿಗೆ ಬಹಳವಾಗಿ ಸಹಾಯಮಾಡಿದನು; 28  ಮತ್ತು ಯೇಸುವೇ ಕ್ರಿಸ್ತನೆಂದು ಶಾಸ್ತ್ರಗ್ರಂಥದಿಂದ ತೋರಿಸಿಕೊಡುತ್ತಾ ಯೆಹೂದ್ಯರು ಮಾಡುತ್ತಿರುವುದು ತಪ್ಪೆಂದು ಎಲ್ಲರ ಮುಂದೆ ಬಲವಾದ ಮಾತುಗಳಲ್ಲಿ ಅವನು ಸಂಪೂರ್ಣವಾಗಿ ರುಜುಪಡಿಸಿದನು.

ಪಾದಟಿಪ್ಪಣಿ