ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಅ. ಕಾರ್ಯಗಳು 15:1-41

15  ಯೂದಾಯದಿಂದ ಕೆಲವರು ಬಂದು, “ಮೋಶೆಯ ಪದ್ಧತಿಗನುಸಾರ ಸುನ್ನತಿಮಾಡಿಸಿಕೊಳ್ಳದಿದ್ದರೆ ನೀವು ರಕ್ಷಣೆಯನ್ನು ಹೊಂದಲಾರಿರಿ” ಎಂದು ಸಹೋದರರಿಗೆ ಬೋಧಿಸಲಾರಂಭಿಸಿದರು.  ಆಗ ಅವರೊಂದಿಗೆ ಪೌಲ ಬಾರ್ನಬರಿಗೆ ಮಹಾ ಭಿನ್ನಾಭಿಪ್ರಾಯ ಮತ್ತು ವಾಗ್ವಾದ ನಡೆದುದರಿಂದ ಅವರು ಈ ವಾಗ್ವಾದದ ಕುರಿತು ತಿಳಿಸಲಿಕ್ಕಾಗಿ ಪೌಲ ಬಾರ್ನಬರೂ ತಮ್ಮಲ್ಲಿ ಬೇರೆ ಕೆಲವರೂ ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಹಿರೀಪುರುಷರ ಬಳಿಗೆ ಹೋಗುವಂತೆ ಏರ್ಪಡಿಸಿದರು.  ಸಭೆಯವರು ಅವರನ್ನು ಸ್ವಲ್ಪ ದೂರ ಸಾಗಕಳುಹಿಸಿದ ಬಳಿಕ ಈ ಮನುಷ್ಯರು ಫೊಯಿನಿಕೆ ಮತ್ತು ಸಮಾರ್ಯ ಪ್ರಾಂತಗಳ ಮೂಲಕ ಹಾದುಹೋಗುತ್ತಿರುವಾಗ ಅನ್ಯಜನಾಂಗಗಳ ಜನರು ದೇವರ ಕಡೆಗೆ ತಿರುಗಿಕೊಂಡದ್ದರ ಕುರಿತು ಎಲ್ಲ ಸಹೋದರರಿಗೆ ವಿವರವಾಗಿ ತಿಳಿಸುತ್ತಾ ಅವರಿಗೆ ಬಹಳ ಸಂತೋಷವನ್ನು ಉಂಟುಮಾಡಿದರು.  ಅವರು ಯೆರೂಸಲೇಮಿಗೆ ಬಂದ ಮೇಲೆ ಸಭೆಯವರೂ ಅಪೊಸ್ತಲರೂ ಹಿರೀಪುರುಷರೂ ಅವರನ್ನು ಆದರದಿಂದ ಬರಮಾಡಿಕೊಂಡಾಗ ದೇವರು ತಮ್ಮ ಮೂಲಕ ನಡಿಸಿದ ಅನೇಕ ಕಾರ್ಯಗಳನ್ನು ಅವರಿಗೆ ತಿಳಿಸಿದರು.  ಆದರೂ ಫರಿಸಾಯರ ಪಂಥಕ್ಕೆ ಸೇರಿದವರಲ್ಲಿ ವಿಶ್ವಾಸಿಗಳಾಗಿದ್ದ ಕೆಲವರು ಎದ್ದು, “ಅವರಿಗೆ ಸುನ್ನತಿಮಾಡಿಸಿ ಮೋಶೆಯ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುವಂತೆ ಅಪ್ಪಣೆಕೊಡುವುದು ಅವಶ್ಯವಾಗಿದೆ” ಎಂದು ಹೇಳಿದರು.  ಅಪೊಸ್ತಲರೂ ಹಿರೀಪುರುಷರೂ ಈ ವಿಷಯದ ಕುರಿತು ಚರ್ಚಿಸಲಿಕ್ಕಾಗಿ ಒಟ್ಟುಗೂಡಿದರು.  ಈ ವಿಷಯದಲ್ಲಿ ಬಹಳ ವಾಗ್ವಾದ ನಡೆದ ಬಳಿಕ ಪೇತ್ರನು ಎದ್ದುನಿಂತು ಅವರಿಗೆ, “ಜನರೇ, ಸಹೋದರರೇ, ಅನ್ಯಜನಾಂಗಗಳ ಜನರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬಬೇಕೆಂದು ಆರಂಭದ ದಿನಗಳಿಂದಲೇ ದೇವರು ನಿಮ್ಮೊಳಗಿಂದ ನನ್ನನ್ನು ಆಯ್ಕೆಮಾಡಿದ್ದು ನಿಮಗೆ ತಿಳಿದೇ ಇದೆ;  ಮತ್ತು ಹೃದಯವನ್ನು ಬಲ್ಲಾತನಾದ ದೇವರು ನಮಗೆ ನೀಡಿದಂತೆ ಅವರಿಗೂ ಪವಿತ್ರಾತ್ಮವನ್ನು ನೀಡುವ ಮೂಲಕ ಸಾಕ್ಷಿಕೊಟ್ಟನು.  ಆತನು ನಮ್ಮ ಮತ್ತು ಅವರ ಮಧ್ಯೆ ಸ್ವಲ್ಪವೂ ತಾರತಮ್ಯಮಾಡದೆ ನಂಬಿಕೆಯ ಮೂಲಕ ಅವರ ಹೃದಯಗಳನ್ನು ಶುದ್ಧೀಕರಿಸಿದನು. 10  ಆದುದರಿಂದ ನಮ್ಮ ಪೂರ್ವಜರಾಗಲಿ ನಾವಾಗಲಿ ಹೊರಲು ಅಸಮರ್ಥರಾಗಿದ್ದ ನೊಗವನ್ನು ಶಿಷ್ಯರ ಹೆಗಲಿನ ಮೇಲೆ ಹೊರಿಸುವ ಮೂಲಕ ನೀವು ದೇವರನ್ನು ಏಕೆ ಪರೀಕ್ಷಿಸುತ್ತಿದ್ದೀರಿ? 11  ನಾವಾದರೊ ಕರ್ತನಾದ ಯೇಸುವಿನ ಅಪಾತ್ರ ದಯೆಯಿಂದ ಅವರಂತೆಯೇ ರಕ್ಷಣೆಹೊಂದುವ ಭರವಸೆಯಿಂದಿದ್ದೇವೆ” ಎಂದು ಹೇಳಿದನು. 12  ಆಗ ಕೂಡಿಬಂದಿದ್ದವರೆಲ್ಲರು ಮೌನವಾದರು ಮತ್ತು ಅನ್ಯಜನಾಂಗಗಳ ನಡುವೆ ದೇವರು ತಮ್ಮ ಮೂಲಕ ಮಾಡಿದ ಅನೇಕ ಸೂಚಕಕಾರ್ಯಗಳನ್ನೂ ಆಶ್ಚರ್ಯಕಾರ್ಯಗಳನ್ನೂ ಬಾರ್ನಬ ಪೌಲರು ವಿವರಿಸುವುದನ್ನು ಕಿವಿಗೊಟ್ಟು ಕೇಳಲಾರಂಭಿಸಿದರು. 13  ಅವರು ಮಾತಾಡುವುದನ್ನು ನಿಲ್ಲಿಸಿದ ಬಳಿಕ ಯಾಕೋಬನು ಉತ್ತರಿಸುತ್ತಾ ಹೇಳಿದ್ದು: “ಜನರೇ, ಸಹೋದರರೇ, ಕೇಳಿಸಿಕೊಳ್ಳಿರಿ. 14  ದೇವರು ಅನ್ಯಜನಾಂಗಗಳೊಳಗಿಂದ ತನ್ನ ಹೆಸರಿಗಾಗಿ ಒಂದು ಪ್ರಜೆಯನ್ನು ಆರಿಸಿಕೊಳ್ಳಲು ಹೇಗೆ ಮೊದಲ ಬಾರಿಗೆ ಅವರ ಕಡೆಗೆ ಗಮನಹರಿಸಿದನು ಎಂಬುದನ್ನು ಸಿಮೆಯೋನನು ಸ್ಪಷ್ಟವಾಗಿ ವಿವರಿಸಿದ್ದಾನೆ. 15  ಪ್ರವಾದಿಗಳ ಮಾತುಗಳೂ ಇದಕ್ಕೆ ಹೊಂದಿಕೆಯಲ್ಲಿವೆ; 16  ‘ಇದಾದ ಬಳಿಕ ನಾನು ಹಿಂದಿರುಗಿ ಬಂದು ಬಿದ್ದುಹೋಗಿರುವ ದಾವೀದನ ಗುಡಾರವನ್ನು ಪುನಃ ಕಟ್ಟುವೆನು; ಅದರಲ್ಲಿ ಹಾಳಾಗಿರುವುದನ್ನು ಕಟ್ಟಿ ಅದನ್ನು ಪುನಃ ನೆಟ್ಟಗೆ ನಿಲ್ಲಿಸುವೆನು. 17  ಹೀಗೆ ಈ ಮನುಷ್ಯರಲ್ಲಿ ಉಳಿದವರು ನನ್ನ ಹೆಸರಿನಿಂದ ಕರೆಯಲ್ಪಡುವ ಜನರೊಂದಿಗೆ ಅಂದರೆ ಎಲ್ಲ ಜನಾಂಗಗಳ ಜನರೊಂದಿಗೆ ಸೇರಿ ಯೆಹೋವನನ್ನು ಅತ್ಯಾಸಕ್ತಿಯಿಂದ ಹುಡುಕುವರು ಎಂದು ಇದನ್ನೆಲ್ಲ ನಡಿಸುತ್ತಿರುವ ಯೆಹೋವನು ನುಡಿಯುತ್ತಾನೆ. 18  ಇವೆಲ್ಲ ವಿಷಯಗಳು ಆದಿಯಿಂದಲೇ ತಿಳಿದಿವೆ’ ಎಂದು ಬರೆದದೆ. 19  ಆದುದರಿಂದ ಅನ್ಯಜನಾಂಗಗಳಿಂದ ದೇವರ ಕಡೆಗೆ ತಿರುಗುತ್ತಿರುವವರನ್ನು ತೊಂದರೆಪಡಿಸಬಾರದು, 20  ಆದರೆ ವಿಗ್ರಹಗಳಿಂದ ಮಲಿನಗೊಳಿಸಲ್ಪಟ್ಟಿರುವ ವಸ್ತುಗಳನ್ನೂ ಹಾದರವನ್ನೂ ಕತ್ತು ಹಿಸುಕಿ ಕೊಂದದ್ದನ್ನೂ ರಕ್ತವನ್ನೂ ವರ್ಜಿಸಬೇಕೆಂದು ಅವರಿಗೆ ಬರೆದು ತಿಳಿಸಬೇಕೆಂಬುದು ನನ್ನ ನಿರ್ಧಾರ. 21  ಏಕೆಂದರೆ ಪುರಾತನ ಸಮಯಗಳಿಂದಲೂ ಪ್ರತಿಯೊಂದು ಪಟ್ಟಣದಲ್ಲಿಯೂ ಮೋಶೆಯ ಬರಹಗಳ ಕುರಿತು ಸಾರುವವರು ಇದ್ದರು; ಏಕೆಂದರೆ ಅವುಗಳನ್ನು ಪ್ರತಿ ಸಬ್ಬತ್‌ ದಿನವೂ ಸಭಾಮಂದಿರಗಳಲ್ಲಿ ಗಟ್ಟಿಯಾಗಿ ಓದಲಾಗುತ್ತದೆ.” 22  ಆಗ ಅಪೊಸ್ತಲರೂ ಹಿರೀಪುರುಷರೂ ಇಡೀ ಸಭೆಯೊಂದಿಗೆ ಸೇರಿ ತಮ್ಮಲ್ಲಿ ಕೆಲವರನ್ನು ಆರಿಸಿ ಪೌಲ ಬಾರ್ನಬರೊಂದಿಗೆ ಅಂತಿಯೋಕ್ಯಕ್ಕೆ ಕಳುಹಿಸಲು ಸಮ್ಮತಿಸಿದರು. ಅವರು ಸಹೋದರರಲ್ಲಿ ಮುಂದಾಳುತ್ವ ವಹಿಸುವವರಾಗಿದ್ದ ಬಾರ್ಸಬನೆಂದು ಕರೆಯಲ್ಪಟ್ಟ ಯೂದನನ್ನೂ ಸೀಲನನ್ನೂ ಆರಿಸಿಕೊಂಡು, 23  ತಮ್ಮ ಕೈಯಲ್ಲಿ ಹೀಗೆ ಬರೆದುಕೊಟ್ಟರು: “ಜನರೇ, ಸಹೋದರರಾದ ಅಪೊಸ್ತಲರು ಮತ್ತು ಹಿರೀಪುರುಷರು ಅಂತಿಯೋಕ್ಯ ಸಿರಿಯ ಕಿಲಿಕ್ಯದಲ್ಲಿರುವ ಅನ್ಯಜನಾಂಗಗಳಿಂದ ಬಂದವರಾದ ಸಹೋದರರಿಗೆ ಮಾಡುವ ವಂದನೆ. 24  ನಮ್ಮಲ್ಲಿ ಕೆಲವರು ನಾವು ಅವರಿಗೆ ಯಾವುದೇ ಸಲಹೆಗಳನ್ನು ನೀಡಲಿಲ್ಲವಾದರೂ ನಿಮ್ಮ ಬಳಿಗೆ ಬಂದು ತಮ್ಮ ಮಾತುಗಳಿಂದ ನಿಮ್ಮನ್ನು ತೊಂದರೆಪಡಿಸಿ ನಿಮ್ಮಲ್ಲಿ ಕಳವಳವನ್ನು ಉಂಟುಮಾಡಲು ಪ್ರಯತ್ನಿಸಿದ್ದಾರೆಂಬುದು ನಮಗೆ ತಿಳಿದುಬಂದಿದೆ; 25  ಆದುದರಿಂದ ನಾವು ಕೆಲವರನ್ನು ಆಯ್ಕೆಮಾಡಿ ನಿಮ್ಮ ಬಳಿಗೆ ಕಳುಹಿಸಲು ಒಮ್ಮತದಿಂದ ಸಮ್ಮತಿಸಿದ್ದೇವೆ; 26  ಅವರನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿಗಾಗಿ ತಮ್ಮ ಜೀವದ ಹಂಗನ್ನು ತೊರೆದವರಾದ ನಮ್ಮ ಪ್ರಿಯ ಬಾರ್ನಬ ಮತ್ತು ಪೌಲರೊಡನೆ ನಿಮ್ಮ ಬಳಿಗೆ ಕಳುಹಿಸುತ್ತಿದ್ದೇವೆ. 27  ಆದುದರಿಂದ ಯೂದ ಮತ್ತು ಸೀಲರು ಸಹ ಬಾಯಿಮಾತಿನಿಂದ ಈ ಸಂಗತಿಗಳನ್ನು ವರದಿಸುವಂತೆ ನಾವು ಅವರನ್ನು ಕಳುಹಿಸುತ್ತಿದ್ದೇವೆ. 28  ಪವಿತ್ರಾತ್ಮವೂ ನಾವೂ, ಈ ಆವಶ್ಯಕ ವಿಷಯಗಳಲ್ಲದೆ ಇನ್ನಾವ ಹೆಚ್ಚಿನ ಹೊರೆಯನ್ನೂ ನಿಮಗೆ ಕೂಡಿಸಬೇಕೆಂದು ಬಯಸಿರುವುದಿಲ್ಲ; 29  ವಿಗ್ರಹಗಳಿಗೆ ಯಜ್ಞಾರ್ಪಣೆಮಾಡಿದ ವಸ್ತುಗಳನ್ನು, ರಕ್ತವನ್ನು, ಕತ್ತು ಹಿಸುಕಿ ಕೊಂದವುಗಳನ್ನು ಮತ್ತು ಹಾದರವನ್ನು ವರ್ಜಿಸುತ್ತಾ ಹೋಗಿರಿ. ಜಾಗ್ರತೆವಹಿಸುತ್ತಾ ಈ ವಿಷಯಗಳಿಂದ ದೂರವಿರುವಲ್ಲಿ ನೀವು ಏಳಿಗೆ ಹೊಂದುವಿರಿ. ನಿಮಗೆ ಉತ್ತಮ ಆರೋಗ್ಯವಿರಲಿ!” 30  ಅಂತೆಯೇ ಈ ಜನರನ್ನು ಕಳುಹಿಸಿದಾಗ ಅವರು ಅಂತಿಯೋಕ್ಯಕ್ಕೆ ಹೋಗಿ ಜನಸಮೂಹವನ್ನು ಒಟ್ಟುಗೂಡಿಸಿ ಅವರಿಗೆ ಪತ್ರವನ್ನು ಕೊಟ್ಟರು. 31  ಅವರು ಅದನ್ನು ಓದಿದ ಬಳಿಕ ಕೊಡಲ್ಪಟ್ಟ ಉತ್ತೇಜನಕ್ಕಾಗಿ ಸಂತೋಷಪಟ್ಟರು. 32  ಯೂದ ಮತ್ತು ಸೀಲರು ತಾವೇ ಪ್ರವಾದಿಗಳಾಗಿದ್ದದರಿಂದ ಅನೇಕ ಮಾತುಗಳಿಂದ ಸಹೋದರರನ್ನು ಉತ್ತೇಜಿಸಿ ಅವರನ್ನು ಬಲಪಡಿಸಿದರು. 33  ಹೀಗೆ ಅಲ್ಲಿ ಸ್ವಲ್ಪಕಾಲ ಉಳಿದ ಬಳಿಕ ತಮ್ಮನ್ನು ಕಳುಹಿಸಿದವರ ಬಳಿಗೆ ಅವರು ಹಿಂದಿರುಗುವಂತೆ ಸಹೋದರರು ಸಮಾಧಾನದಿಂದ ಬೀಳ್ಕೊಟ್ಟರು. 34  *—⁠—⁠⁠ 35  ಆದರೆ ಪೌಲ ಬಾರ್ನಬರು ಅಂತಿಯೋಕ್ಯದಲ್ಲಿಯೇ ಇದ್ದು ಇನ್ನೂ ಅನೇಕರೊಂದಿಗೆ ಬೋಧಿಸುವುದರಲ್ಲಿ ಮತ್ತು ಯೆಹೋವನ ವಾಕ್ಯದ ಕುರಿತು ಸಾರುವುದರಲ್ಲಿ ಸಮಯವನ್ನು ವ್ಯಯಿಸುತ್ತಾ ಇದ್ದರು. 36  ಕೆಲವು ದಿವಸಗಳಾದ ಮೇಲೆ ಪೌಲನು ಬಾರ್ನಬನಿಗೆ, “ನಾವು ಯೆಹೋವನ ವಾಕ್ಯವನ್ನು ಪ್ರಕಟಪಡಿಸಿದ ಪ್ರತಿಯೊಂದು ಊರಿಗೆ ಪುನಃ ಹೋಗಿ ಅಲ್ಲಿರುವ ಸಹೋದರರನ್ನು ಭೇಟಿಮಾಡಿ ಅವರು ಹೇಗಿದ್ದಾರೆಂದು ನೋಡೋಣ” ಎಂದು ಹೇಳಿದನು. 37  ಬಾರ್ನಬನು ಮಾರ್ಕನೆನಿಸಿಕೊಳ್ಳುವ ಯೋಹಾನನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಲು ನಿರ್ಧರಿಸಿದನು. 38  ಆದರೆ ಅವನು ತಮ್ಮೊಂದಿಗೆ ಕೆಲಸಕ್ಕೆ ಬಾರದೆ ಪಂಫುಲ್ಯದಲ್ಲಿ ತಮ್ಮನ್ನು ಬಿಟ್ಟುಹೋಗಿದ್ದ ಕಾರಣ ಅವನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಸೂಕ್ತವಲ್ಲವೆಂದು ಪೌಲನು ನೆನಸಿದನು. 39  ಈ ವಿಷಯದಲ್ಲಿ ತೀಕ್ಷ್ಣ ವಾಗ್ವಾದವುಂಟಾಗಿ ಒಬ್ಬರನ್ನೊಬ್ಬರು ಅಗಲಿದರು; ಬಾರ್ನಬನು ಮಾರ್ಕನನ್ನು ಕರೆದುಕೊಂಡು ಸಮುದ್ರಮಾರ್ಗವಾಗಿ ಸೈಪ್ರಸ್‌ಗೆ ಹೋದನು. 40  ಪೌಲನು ಸಹೋದರರಿಂದ ಯೆಹೋವನ ಅಪಾತ್ರ ದಯೆಗೆ ಒಪ್ಪಿಸಲ್ಪಟ್ಟವನಾಗಿ ಸೀಲನನ್ನು ಕರೆದುಕೊಂಡು ಅಲ್ಲಿಂದ ಹೊರಟನು. 41  ಅವನು ಸಿರಿಯ ಮತ್ತು ಕಿಲಿಕ್ಯ ಪ್ರಾಂತಗಳಲ್ಲಿ ಸಂಚರಿಸುತ್ತಾ ಸಭೆಗಳನ್ನು ಬಲಪಡಿಸುತ್ತಾ ಹೋದನು.

ಪಾದಟಿಪ್ಪಣಿ

ಅಕಾ 15:34  ಮತ್ತಾ 17:21 ರ ಪಾದಟಿಪ್ಪಣಿಯನ್ನು ನೋಡಿ.